ಶಾಸಕ ಮುನಿರತ್ನ ಸೆ 30ರವರೆಗೆ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್; ನಾಳೆ ಜಾಮೀನು ಅರ್ಜಿ ವಿಚಾರಣೆ
ಜಾತಿ ನಿಂದನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುನಿರತ್ನ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಲಾಗಿದೆ. ಆದರೆ ಜಾಮೀನು ಅರ್ಜಿ ವಿಚಾರಣೆ ನಾಳೆಗೆ (ಸೆಪ್ಟೆಂಬರ್ 18) ಮುಂದೂಡಲಾಗಿದೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಜಾತಿ ನಿಂದನೆ ಮತ್ತು ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಸೆಪ್ಟೆಂಬರ್ 30 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಇಂದು (ಸೆಪ್ಟೆಂಬರ್ 17) ಮುನಿರತ್ನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕಳೆದ ಶನಿವಾರ ಮುನಿರತ್ನರನ್ನು ಕೋಲಾರ ಸಮೀಪ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಮುಂದೆ ವೈಯಾಲಿಕಾವಲ್ ಪೊಲೀಸ್ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಮತ್ತಷ್ಟು ವಿಸ್ತೃತ ತನಿಖೆಗಾಗಿ ಪೊಲೀಸರು ವಶಕ್ಕೆ ಕೋರಿದ್ದರು. ಮುನಿರತ್ನ ಪರ ವಕೀಲರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿ ವಾದ ಮಂಡಿಸಲು ಅವಕಾಶ ನೀಡುವಂತೆ ಕೋರಿದರು.
ಆದರೆ, ನ್ಯಾಯಾಧೀಶರು ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ (ಸೆ.18) ಬುಧವಾರಕ್ಕೆ ಮುಂದೂಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದರು. ಮುನಿರತ್ನ ಪರವಾಗಿ ಹಿರಿಯ ವಕೀಲ ಅಶೋಕ್ ಹಾರ್ನಳ್ಳಿ ವಾದ ಮಂಡಿಸಿದರು. ಗುತ್ತಿಗೆದಾರರಾದ ಚೆಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ದೂರುಗಳನ್ವಯ 2 ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು.
ನಂಗಲ್ಲಿ ಎಂಬಲ್ಲಿ ಬಂಧನ
ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ಶನಿವಾರ ರಾತ್ರಿ ಮುಳಬಾಗಿಲು ಸಮೀಪ ನಂಗಲಿ ಎಂಬಲ್ಲಿ ವೈಯಾಲಿಕಾವಲ್ ಠಾಣೆ ಪೊಲೀಸರು ಮತ್ತು ಕೋಲಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಧೀಶರ ಎದುರು ಆರೋಪಿಯನ್ನು ಭಾನುವಾರ ಬೆಳಗಿನ ಜಾವ ಪೊಲೀಸರು ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ವಶಕ್ಕೆ ನೀಡುವಂತೆ ಪೊಲೀಸರು ಕೋರಿದ್ದರು. ಆದರೆ ನ್ಯಾಯಾಧೀಶರು 2 ದಿನ ವಶಕ್ಕೆ ನೀಡಿ ಆದೇಶಿಸಿದ್ದರು.
ಗುತ್ತಿಗೆದಾರ ಚೆಲುವರಾಜು ಜೊತೆ ಮಾತನಾಡುವಾಗ ಶಾಸಕ ಮುನಿರತ್ನ ಅವರು ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರನ್ನು ಜಾತಿ ಆಧಾರದಲ್ಲಿ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ತುಣುಕನ್ನು ವೇಲು ನಾಯ್ಕರ್ ಪೊಲೀಸರಿಗೆ ಸಲ್ಲಿಸಿದ್ದರು. ತಮ್ಮನ್ನೇ ಉದ್ದೇಶಿಸಿ ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ವೇಲು ದೂರು ಸಲ್ಲಿಸಿದ್ದರು. ಆಡಿಯೋ ತುಣುಕು, ಮುನಿರತ್ನ ಮತ್ತು ಚೆಲುವರಾಜು ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ
ಶಾಸಕರ ಬೆಂಬಲಿಗರು ಚೆಲುವರಾಜು ಮತ್ತು ವೇಲು ನಾಯ್ಕರ್ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಮತ್ತೊಬ್ಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಮುನಿರತ್ನ ಬಂಧನದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸಹೋದರ ಡಿ.ಕೆ.ಸುರೇಶ್ ಮತ್ತು ಕುಸುಮಾ ಹನುಮಂತರಾಯಪ್ಪ ಕೈವಾಡವಿದೆ. ಆದ್ದರಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಕುಮಾರ್, ಮೊದಲಿಗೆ ನನ್ನನ್ನು ಬಲಿ ತೆಗೆದುಕೊಂಡರು. ನಂತರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಬಲಿ ಹಾಕಿದರು. ಈಗ ಮುನಿರತ್ನ ಅವರನ್ನು ಮಟ್ಟ ಹಾಕಲು ಸಂಚು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸಿಡಿಗಳು ಹೊರ ಬರಲಿವೆ ಎಂದು ಜಾರಕಿಹೊಳಿ ಭವಿಷ್ಯ ನುಡಿಡಿದ್ದಾರೆ.