ಕನ್ನಡ ಸುದ್ದಿ  /  ಕರ್ನಾಟಕ  /  ಡಿಸೆಂಬರ್ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ: ನಿತಿನ್ ಗಡ್ಕರಿ ಮಾಹಿತಿ

ಡಿಸೆಂಬರ್ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ: ನಿತಿನ್ ಗಡ್ಕರಿ ಮಾಹಿತಿ

ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ತಮಿಳುನಾಡು ರಾಜಧಾನಿ ಚೆನ್ನೈ ಜನತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ವಿಚಾರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಭ ಸುದ್ದಿಯನ್ನು ನೀಡಿದ್ದಾರೆ. ಡಿಸೆಂಬರ್ ಅಂತ್ಯದ ಒಳಗಾಗಿ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ (Sanjay Sharma)

ಬೆಂಗಳೂರು: ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ನಿವಾಸಿಗಳಿಗೆ ಸಿಹಿಸುದ್ದಿಯೊಂದು ದೊರಕಿದೆ. ಈ ವರ್ಷದ ಡಿಸೆಂಬರ್‌ಗೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ - ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಎಕ್ಸ್‌ಪ್ರೆಸ್‌ವೇ ಕಾರ್ಯಾರಂಭ ಮಾಡಿದರೆ ಪ್ರಯಾಣಿಕರು ಕೇವಲ 2 ಗಂಟೆಗಳ ಒಳಗಾಗಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಬಹುದಾಗಿದೆ. ಇದು ಪ್ರಯಾಣಿಕರ ಸಮಯ ಉಳಿತಾಯ ಮಾಡುತ್ತದೆ ಹಾಗೂ ಸುಖಕರ ಪ್ರಯಾಣದ ಅನುಭವ ನೀಡುತ್ತದೆ ಎಂದು ಕೇಂದ್ರ ಸಚಿವ ಗಡ್ಕರಿ ತಿಳಿಸಿದರು.

ಸದ್ಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದೆ. ಇದು ನಾಲ್ಕು ಲೇನ್ ಬ್ರೌನ್‌ಶೀಲ್ಡ್ ಯೋಜನೆಯಾಗಿದ್ದು, ಸುಮಾರು 7 ಜಿಲ್ಲೆಗಳನ್ನು ಹಾಯ್ದು ಹೋಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ವೆಲ್ಲೂರು, ಕಾಂಚಿಪುರಂ ಹಾಗೂ ತಿರುವಳ್ಳೂರಿನಾದ್ಯಂತ ಒಟ್ಟೂ 258 ಕಿಮೀವರೆಗೆ ವ್ಯಾಪಿಸಿದೆ.

ಬೆಂಗಳೂರು ನಿವಾಸಿಗಳನ್ನು ಸದಾ ಕಾಡುವ ಟ್ರಾಫಿಕ್ ದಟ್ಟಣೆಯ ಸಮಸ್ಯೆ ಬಗೆಹರಿಸುವ ವಿಚಾರವಾಗಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳೊಳಗಾಗಿ ಸ್ಯಾಟಲೈಟ್ ಟೌನ್‌ಶಿಪ್ ರಿಂಗ್‌ರೋಡ್ ಯೋಜನೆಯನ್ನು ಪೂರ್ಣಗೊಳಿಸುವ ಸಲುವಾಗಿ ಕಾಮಗಾರಿ ತ್ವರಿತಗೊಳಿಸಲು ಸಕಲ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು. ಸುಮಾರು 17 ಸಾವಿರ ಕೋಟಿ ರೂಪಾಯಿ ವೆಚ್ಚದ ವರ್ತುಲ ರಸ್ತೆಯನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲು ಯತ್ನಿಸುತ್ತೇವೆ ಎಂದು ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾರತಮಾಲಾ ಯೋಜನೆಯ ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಯೋಜನೆಯನ್ನು ಪ್ರಧಾನಿ ಮೋದಿಯವರು 2022ರ ಜೂನ್ ತಿಂಗಳಲ್ಲಿ ಉದ್ಘಾಟಿಸಿದ್ದರು. ಈ ಯೋಜನೆಯು ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಪರಿಹಾರವನ್ನು ಒದಗಿಸುವ ಭರವಸೆ ನೀಡಿದೆ.