Yuva Nidhi Scheme: ಏನಿದು ಯುವನಿಧಿ ಯೋಜನೆ? ಭಾರತದ ಯಾವೆಲ್ಲಾ ರಾಜ್ಯಗಳಲ್ಲಿ ಇಂಥ ಯೋಜನೆ ಜಾರಿಯಲ್ಲಿದೆ?
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ 4 ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು, 5ನೇ ಯೋಜನೆಯಾದ ಯುವನಿಧಿಗೆ ಇಂದು ಚಾಲನೆ ದೊರೆತಿದೆ. ಹಾಗಾದರೆ ಏನಿದು ಯುವನಿಧಿ ಯೋಚನೆ, ಯಾವೆಲ್ಲಾ ರಾಜ್ಯಗಳಲ್ಲಿ ಇಂತಹ ಯೋಜನೆಗಳು ಚಾಲ್ತಿಯಲ್ಲಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅಲ್ಲದೆ ಸರ್ಕಾರ ನಿರ್ಮಾಣವಾದ ಮೇಲೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಈಗಾಗಲೇ 4 ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಂಡಿದ್ದು, 5ನೇ ಯೋಜನೆಯಾದ ಯುವನಿಧಿ ಯೋಜನೆಗೆ ಇಂದು (ಡಿ. 26) ಚಾಲನೆ ದೊರೆತಿದೆ.
ಏನಿದು ಯುವನಿಧಿ ಯೋಜನೆ, ಇದರಿಂದ ಯಾರಿಗೆ ಲಾಭ ಸಿಗಲಿದೆ, ಈ ಯೋಜನೆಯ ಉದ್ದೇಶವೇನು, ಇಂತಹ ಯೋಜನೆಗಳು ಬೇರೆ ಯಾವೆಲ್ಲಾ ರಾಜ್ಯದಲ್ಲಿ ಅನುಷ್ಠಾನದಲ್ಲಿದೆ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಏನಿದು ಯುವನಿಧಿ ಯೋಜನೆ?
ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಉದ್ದೇಶದಿಂದ ಆರಂಭಿಸಿದ ಯೋಜನೆಯೇ ಯುವನಿಧಿ ಯೋಜನೆ. ಇದು ಕಾಂಗ್ರೆಸ್‌ನ 5ನೇ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಈ ಯೋಜನೆಯ ಪ್ರಕಾರ 2022-23 ಸಾಲಿನಲ್ಲಿ ಪದವಿ ಮುಗಿಸಿದವರಿಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ತಿಂಗಳಿಗೆ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. ಈ ಯೋಜನೆಗೆ ಉದ್ಯೋಗ ದೊರೆತವರು ಹಾಗೂ ಸ್ವಂತ ಉದ್ಯಮ ಆರಂಭಿಸುವವರು ಫಲಾನುಭವಿಗಳಾಗುವುದು ಸಾಧ್ಯವಿಲ್ಲ. ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರು ಪ್ರತಿ ತಿಂಗಳ 25ನೇ ತಾರೀಕಿನ ಒಳಗೆ ಭತ್ಯೆಯನ್ನು ಪಡೆಯುತ್ತಾರೆ. ಸುಮಾರು 5.29 ಲಕ್ಷ ಮಂದಿ ಈ ಯೋಜನೆಯ ಅರ್ಹತೆ ಪಡೆಯುವ ಸಾಧ್ಯತೆ ಇದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.
ಅರ್ಜಿ ಸಲ್ಲಿಸುವುದು ಹೇಗೆ?
20222-23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಮುಗಿಸಿ 180 ದಿನಗಳು ಕಳೆದರೂ ಉದ್ಯೋಗ ದೊರೆಯದೇ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವವರು ಸೇವಾಸಿಂಧು ವೆಬ್‌ಸೈಟ್ ಮೂಲಕ ಸಲ್ಲಿಕೆ ಮಾಡಬಹುದು. ಇದಲ್ಲದೇ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಧಾರ ನಂಬರ್ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ನೀಡುವುದು ಕಡ್ಡಾಯವಾಗಿದೆ. ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಮೊತ್ತ ಜಮಾ ಆಗುತ್ತದೆ. ಅರ್ಜಿ ಸಲ್ಲಿಸ ಬಯಸುವವರು https://sevasindhuservices.karnataka.gov.in/ ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
ಯುವನಿಧಿಗೆ ಅರ್ಜಿ ಸಲ್ಲಿಸಲು ಅವಶ್ಯ ಮಾನದಂಡಗಳು
* ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಅಥವಾ ಡಿಪ್ಲೋಮಾ ಮುಗಿಸಿರಬೇಕು.
* ಪದವಿ ಮುಗಿಸಿ 180 ದಿನಗಳವರೆಗೆ ಯಾವುದೇ ಉದ್ಯೋಗ ದೊರೆತಿರಬಾರದು ಹಾಗೂ ಸ್ವಂತ ಉದ್ಯೋಗ ಮಾಡಿರಬಾರದು.
* ಉನ್ನತ ಶಿಕ್ಷಣ ಮಾಡಲು ದಾಖಲಾತಿ ಮಾಡಿರುವವರು, ಅಪ್ರೆಂಟಿಸ್ ಆಗಿ ಸಂಬಳ ಪಡೆಯುವವರು ಹಾಗೂ ಖಾಸಗಿ ಅಥವಾ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.
ಅಗತ್ಯ ದಾಖಲೆಗಳು
* ಆಧಾರ್ ಕಾರ್ಡ್
* ವಿಳಾಸ ದೃಢೀಕರಣ ಪತ್ರ
* ಆದಾಯ ದೃಢೀಕರಣ ಪತ್ರ
* ಶೈಕ್ಷಣಿಕ ಅರ್ಹತೆಯ ದಾಖಲೆಗಳು
* ಬ್ಯಾಂಕ್ ಖಾತೆಯ ವಿವರ
ಯುವನಿಧಿಯಂತಹ ಯೋಜನೆ ಯಾವೆಲ್ಲಾ ರಾಜ್ಯದಲ್ಲಿ ಜಾರಿಯಲ್ಲಿದೆ?
ನಿರುದ್ಯೋಗ ಭತ್ಯೆ ಒದಗಿಸುವ ಯುವನಿಧಿಯಂತಹ ಯೋಜನೆ ಜಾರಿಯಲ್ಲಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ. ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿವೆ.
ಕೇರಳದಲ್ಲಿ ಮೊದಲ ಬಾರಿಗೆ ಅಂದರೆ 1982ರಲ್ಲೇ ಈ ರೀತಿಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದು ಆ ಕಾಲದಲ್ಲಿ ನಿರುದ್ಯೋಗಿಗಳಿಗೆ ತಿಂಗಳಿಗೆ 120 ರೂ. ನೀಡುವ ಯೋಜನೆಯನ್ನು ಜಾರಿಗೊಳಿಸಿತ್ತು. ರಾಜಸ್ಥಾನದಲ್ಲೂ ಈ ಯೋಜನೆ ಜಾರಿಯಲ್ಲಿದೆ. ಇದು ನಿರುದ್ಯೋಗಿ ಪುರುಷರಿಗೆ 3000 ರೂ ಹಾಗೂ ಮಹಿಳೆಯರಿಗೆ 3500 ರೂ ನೀಡುವ ಯೋಜನೆಯಾಗಿದೆ.
ಪಂಜಾಬ್‌ನಲ್ಲೂ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದೆ. ಆದರೆ ಕೆಲವು ನಿಯಮಗಳು ಕಡ್ಡಾಯವಾಗಿದೆ. ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗಿ ಭತ್ಯೆ ಎಂದು ತಿಂಗಳಿಗೆ 1000 ರೂ ನೀಡಲಾಗುತ್ತಿದೆ. ಇದು ಶೇ 50 ರಷ್ಟು ಅಂಗವೈಕಲ್ಯ ಹೊಂದಿರುವವರು ಹಾಗೂ ಶಾಶ್ವತ ಅಂಗವೈಕಲ್ಯ ಹೊಂದಿರುವವರಿಗೆ ಮಾತ್ರ ಅರ್ಹತೆ ಪಡೆದಿರುವ ಯೋಜನೆಯಾಗಿದೆ. ತಮಿಳುನಾಡು ಸರ್ಕಾರವು ಕೂಡ 2006 ರಲ್ಲಿ ನಿರುದ್ಯೋಗ ಭತ್ಯೆ ಯೋಜನೆಯನ್ನು ಜಾರಿಗೊಳಿಸಿತು. ಜಾಖಂರ್ಡ್ ಹಾಗೂ ಛತ್ತೀಸ್‌ಗಢದಲ್ಲೂ ನಿರುದ್ಯೋಗ ಭತ್ಯೆ ನೀಡುವ ಯೋಜನೆಗಳು ಜಾರಿಯಲ್ಲಿವೆ.