ಬೆಂಗಳೂರಲ್ಲಿ ನಡೆಯುವ ಲೇಖಕಿಯರ ಸಮ್ಮೇಳನದಲ್ಲಿ ಮೊಳಗಬೇಕಿದೆ ಸೌಜನ್ಯ ಪರ ಸಂಘಟಿತ ಧ್ವನಿ – ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ
ಮಾರ್ಚ್ 22, 23ರಂದು ಬೆಂಗಳೂರಿನಲ್ಲಿ ಲೇಖಕಿ ಡಾ ಎಚ್.ಎಸ್.ಶ್ರೀಮತಿ ಅವರ ಅಧ್ಯಕ್ಷತೆಯಲ್ಲಿ ಲೇಖಕಿಯರ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಸೌಜನ್ಯ ಪರ ಲೇಖಕಿಯರ ಸಂಘಟಿತ ದನಿ ಮೊಳಗುವಂತೆ ಆಗಲಿ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ದೂತ ಸಮೀರ್ ವಿಡಿಯೊ ಸದ್ದು ಮಾಡಿದ ನಂತರ ಹಲವರು ಸೌಜನ್ಯಾ ಪ್ರಕರಣದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಫೇಸ್‌ಬುಕ್ ಪೋಸ್ಟ್ ಹಲವರ ಗಮನ ಸೆಳೆದಿದೆ. ಮಾರ್ಚ್ 22, 23ರಂದು ಬೆಂಗಳೂರಿನಲ್ಲಿ ಲೇಖಕಿ ಡಾ ಎಚ್.ಎಸ್.ಶ್ರೀಮತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಲೇಖಕಿಯರ ಸಮ್ಮೇಳನದಲ್ಲಿ ಸೌಜನ್ಯಾ ಪರ ಲೇಖಕಿಯರ ಸಂಘಟಿತ ದನಿ ಮೊಳಗುವಂತೆ ಆಗಲಿ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಅವರ ಬರಹವನ್ನು ಇಲ್ಲಿ ಯಥಾವತ್ತಾಗಿ ಮರುಪ್ರಕಟಿಸಲಾಗಿದೆ. ಕೆಳಗಿರುವುದು ಅವರ ಬರಹ.
***
ಎಲ್ಲ ಕಾಲಗಳಲ್ಲಿಯೂ ಆಯಾ ಕಾಲಗಳು ನಾವು ಮನುಷ್ಯರೆಂದು ಸಾಬೀತುಪಡಿಸಲು ಅಗ್ನಿಪರೀಕ್ಷೆಗಳನ್ನು ಒಡ್ಡುತ್ತಲೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ಸೆಲೆಕ್ಟಿವ್ ಆಗಿ ಉಳಿಯುವ ಅವಕಾಶ ಇರುವುದಿಲ್ಲ. ನಾವು ಎಡವೂ ಅಲ್ಲ, ಬಲವೂ ಅಲ್ಲ, ನಾವು ನಿಷ್ಪಕ್ಷಪಾತಿಗಳು ಎಂದೆಲ್ಲ ಸ್ವಷ್ಟೀಕರಣ ಕೊಡುವ ಹಾಗಿಲ್ಲ.
ಅಂತಹದ್ದೊಂದು ಸಂದರ್ಭವನ್ನು ಸೋದರಿ ಸೌಜನ್ಯ ನಮ್ಮ ಮುಂದೆ ಸೃಷ್ಟಿಸಿದ್ದಾಳೆ. ವಾದ-ವಿವಾದಗಳೇನೇ ಇರಲಿ, ಆಕೆಯ ಅತ್ಯಾಚಾರ ಮತ್ತು ಹತ್ಯೆ ಎನ್ನುವುದು ಯಾರೂ ನಿರಾಕರಿಸಲಾಗದ ವಾಸ್ತವ. ಈ ಬಗ್ಗೆ ನಮ್ಮ ನಡುವಿನ ಅತ್ಯುಚ್ಛ ತನಿಖಾ ಸಂಸ್ಥೆ ಸಿಬಿಐ ತನಿಖೆ ನಡೆಸಿ ಆರೋಪಿಯನ್ನು ಖುಲಾಸೆಗೊಳಿಸಿದೆ. ಇಲ್ಲಿಗೆ ಈ ಪ್ರಕರಣ ಮುಗಿಯಿತು, ಇದರಿಂದ ತೃಪ್ತರಾಗದವರು ಸರ್ಕಾರ ಮೇಲ್ಮನವಿ ಸಲ್ಲಿಸಲು ಒತ್ತಾಯಿಸಲಿ ಎನ್ನುವುದು ಒಂದು ಗುಂಪಿನ ವಾದ.
ಸಿಬಿಐ ಯಾರನ್ನು ಆರೋಪಿ ಎಂದು ಪರಿಗಣಿಸಿ ತನಿಖೆ ನಡೆಸಿ ಖುಲಾಸೆಗೊಳಿಸಿತೋ, ಅವನು ಆರೋಪಿಯೇ ಅಲ್ಲ, ನಿಜವಾದ ಆರೋಪಿಗಳನ್ನು ರಕ್ಷಿಸಲು ಯಾರೋ ಪ್ರಭಾವಿಗಳು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಇಡೀ ಪ್ರಕರಣದ ಮರು ತನಿಖೆಗೆ ಸರ್ಕಾರ ಆದೇಶ ನೀಡಬೇಕು ಎನ್ನುವುದು ಇನ್ನೊಂದು ಗುಂಪಿನ ವಾದ.
ಈ ಎರಡು ಗುಂಪುಗಳ ವಾದಗಳ ನಡುವೆ ನಾವು ಮನುಷ್ಯರೆನಿಸಿಕೊಂಡವರು ಯಾರ ವಾದಕ್ಕೆ ಕಿವಿಗೊಡಬೇಕು ಮತ್ತು ಬೆಂಬಲಿಸಬೇಕು ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ಇದೇನು ಉತ್ತರಿಸಲು ತಡಕಾಡಬೇಕಾದ ಯಕ್ಷ ಪ್ರಶ್ನೆ ಅಲ್ಲ.
ಸೌಜನ್ಯಳ ತಂದೆ-ತಾಯಿ ಮತ್ತು ಕುಟುಂಬ ಯಾವ ವಾದದ ಪರವಾಗಿ ಇರುತ್ತಾರೆ ಅವರ ಪರವಾಗಿರುವುದು ನಮ್ಮೆಲ್ಲರ ಧರ್ಮ.
‘ಸೌಜನ್ಯಳ ಅತ್ಯಾಚಾರದ ತನಿಖೆಯಿಂದ ನಾವು ತೃಪ್ತರಾಗಿದ್ದೇವೆ ಎಂದೋ ಇಲ್ಲವೇ ಮರು ತನಿಖೆ ಬೇಡ, ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿ‘ ಎಂದು ಸೌಜನ್ಯಳ ತಾಯಿ ಸಾರ್ವಜನಿಕವಾಗಿ ಘೋಷಿಸಿದರೆ ನಾನು ಅವರ ನಿಲುವನ್ನು ಬೆಂಬಲಿಸುತ್ತೇನೆ. ಇದರ ನಂತರ ತಿಮರೋಡಿ ಶೆಟ್ರು, ಗಿರೀಶ್ ಮಟ್ಟೆಣ್ಣವರ್, ದೂತ ಸಮೀರ್, ಥರ್ಡ್ ಐ, ಕುಡ್ಲ ರ್ಯಾಂಪೇಜ್ ಇತ್ಯಾದಿ ಇತ್ಯಾದಿ ಯಾರು ಎಷ್ಟೇ ಅಬ್ಬರಿಸಿ ಬೊಬ್ಬಿರಿದರೂ ವೈಯಕ್ತಿಕವಾಗಿ ನಾನು ಅವರ ಪರ ಕೈ ಎತ್ತುವುದಿಲ್ಲ.
ಆದರೆ ಈ ಕ್ಷಣದವರೆಗೆ ಸೌಜನ್ಯಳ ತಾಯಿ ಮತ್ತು ಕುಟುಂಬ ‘ಸೌಜನ್ಯ ಅತ್ಯಾಚಾರ ಪ್ರಕರಣದ ಮರುತನಿಖೆ ನಡೆಸಬೇಕು ಮತ್ತು ತನಿಖೆಯಲ್ಲಿ ವಿಫಲರಾಗಿದ್ದಾರೆ ಎಂದು ಸಿಬಿಐ ಗುರುತಿಸಿರುವ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ತೀರ್ಮಾನ ಕೈಗೊಳ್ಳಲು ನಮ್ಮಲ್ಲಿ ಯಾವ ಗೊಂದಲವೂ ಇರಬಾರದು. ಆದರೆ ಇದೆ.
ಲೇಖಕಿಯರು ಮತ್ತು ಪತ್ರಕರ್ತೆಯರ ಧ್ವನಿ ಎತ್ತಬೇಕಿತ್ತು
ದೂತ ಸಮೀರನ ವಿಡಿಯೊ ಹುಟ್ಟಿಸಿದ ಸಂಚಲನದ ನಂತರ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯವಾಗಿ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ನಮ್ಮ ಲೇಖಕಿಯರು ಮತ್ತು ಪತ್ರಕರ್ತೆಯರ ವಾಲ್‌ಗಳನ್ನು ಗಮನಿಸುತ್ತಿದ್ದೇನೆ. ಕತೆ,ಕಾವ್ಯ, ಕಾದಂಬರಿ, ಪುಸ್ತಕಮೇಳ, ಪ್ರಕಾಶಕರ ಸಮಾವೇಶಗಳಿಂದ ಹಿಡಿದು ಕುಂಭಮೇಳದವರೆಗೆ, ನಟ್ಟು ಬೋಲ್ಟುಗಳಿಂದ ಹಿಡಿದು ಸುನೀತಾ ವಿಲಿಯಮ್ಸ್ ವರೆಗೆ ಎಲ್ಲದರ ಬಗ್ಗೆ ಆಸಕ್ತಿಕರವಾಗಿ ಅಭಿಪ್ರಾಯಗಳನ್ನು ಮಂಡಿಸುತ್ತಿರುವ ಇವರಲ್ಲಿ ಶೇ 90 ಮಂದಿ ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಮಾತ್ರ ಮೌನವಾಗಿದ್ದಾರೆ.
‘ಸೌಜನ್ಯಳಿಗೆ ನ್ಯಾಯ ಸಿಕ್ಕಿದೆ, ಇವೆಲ್ಲ ಸುಖಾ ಸುಮ್ಮನೆ ಊರಗೌಡರ ವಿರುದ್ದದ ಪಿತೂರಿ‘ ಎನ್ನುವುದು ಅವರ ಅಭಿಪ್ರಾಯವಾಗಿದ್ದರೆ ಅದನ್ನು ಖಂಡಿತ ಅವರು ಹೇಳಬಹುದು, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ನಮ್ಮ ಕರ್ತವ್ಯ. ಆದರೆ ಸೆಲೆಕ್ಟಿವ್ ಮೌನ ಇದೆಯಲ್ಲಾ, ಇದು ಅಪಾಯಕಾರಿ. ಪ್ರಜ್ವಲ್ ಲೈಂಗಿಕ ಹಗರಣದ ವಿರುದ್ದ ಹಾಸನ ಚಲೋಗೆ ಸಂಬಂಧಿಸಿದ ಪೂರ್ವಭಾವಿ ಸಭೆಗೆ ಬಂದು ಪೋಟೊ ತೆಗೆಸಿಕೊಂಡ ಅನೇಕ ಲೇಖಕಿಯರು ಹಾಸನದಲ್ಲಿ ಕಾಣಿಸಿಕೊಳ್ಳದೆ ಹೋದರಲ್ಲಾ ಹಾಗಾಗಬಾರದು.
ಅಕಾಡೆಮಿ, ಪ್ರಾಧಿಕಾರದ ಸದಸ್ಯರಾದವರು, ಪ್ರಶಸ್ತಿಗಳನ್ನು ಪಡೆದವರು ರಾಜ್ಯ ಸರ್ಕಾರದ ವಿರುದ್ದ ಮಾತನಾಡಬಾರದು, ಸಿದ್ದರಾಮಯ್ಯನವರು ಮೀನು ತಿಂದು ಧರ್ಮಸ್ಥಳಕ್ಕೆ ಹೋಗಬಾರದಿತ್ತು ಎಂದು ಹೇಳಬಾರದು ಎಂದು ನಾನು ಖಂಡಿತ ಹೇಳುವುದಿಲ್ಲ.
ಆದರೆ ಒಂದು ಹೆಣ್ಣಿನ ಅತ್ಯಾಚಾರ ನಡೆಸಿದ ದುರುಳರಿಗೆ ಶಿಕ್ಷೆ ಕೊಡಿಸಲು ಹದಿಮೂರು ವರ್ಷಗಳಿಂದ ಹೋರಾಡುತ್ತಿರುವ ತಾಯಿಯ ಪರವಾಗಿ ದನಿ ಎತ್ತದೆ ಇರಲು ಏನು ಕಾರಣ ಎಂದು ನಾನು ಖಂಡಿತ ತಿಳಿದುಕೊಳ್ಳ ಬಯಸುತ್ತೇನೆ. ‘ಇದೇನು ಲೇಖಕಿಯರು ಮತ್ತು ಮಹಿಳಾ ಆ್ಯಕ್ಟಿವಿಸ್ಟ್‌ಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಿರಲ್ಲಾ?’ ಎಂದು ಯಾರಾದರೂ ಕೇಳಿದರೆ, ‘ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಪರವಾಗಿ ಮೊದಲು ಹೆಣ್ಣುಗಳೇ ನಿಲ್ಲಬೇಕಾಗಿದೆ’ ಎಂದಷ್ಟೇ ಹೇಳಬಲ್ಲೆ. ಅದೂ ನಾನು ಇಲ್ಲಿ ಹೇಳುತ್ತಿರುವುದು ಮುಖ್ಯವಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಸೋದರಿಯರ ಬಗ್ಗೆ.
ಲೇಖಕಿಯರ ಸಮ್ಮೇಳನದಲ್ಲಿ ಸೌಜನ್ಯ ಪರ ಮಾತು ಕೇಳಲಿ
ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲ ಲೇಖಕಿಯರಿಗೆ ತಮ್ಮ ಅಭಿಪ್ರಾಯವನ್ನು ಸಂಘಟಿತವಾಗಿ ಮತ್ತು ಗಟ್ಟಿದನಿಯಲ್ಲಿ ಹೇಳಲು ಒಂದು ಅವಕಾಶ ಒದಗಿ ಬಂದಿದೆ. ಇದೇ ಮಾರ್ಚ್ 22, 23ರಂದು ಬೆಂಗಳೂರಿನಲ್ಲಿ ಲೇಖಕಿಯರ ಸಮ್ಮೇಳನ ನಾವೆಲ್ಲ ಗೌರವಿಸುವ ಲೇಖಕಿ ಡಾ ಎಚ್. ಎಸ್. ಶ್ರೀಮತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಆ ಸಮ್ಮೇಳನದಲ್ಲಿ ವೈಯಕ್ತಿಕವಾಗಿ ನಾನು ಗೌರವಿಸುವ ಅನೇಕ ಲೇಖಕಿಯರು ಮತ್ತು ಹೋರಾಟಗಾರರಿದ್ದಾರೆ. ಅದರಲ್ಲಿ ನಮ್ಮ ನಡುವಿನ ಅನೇಕ ಪುರುಷ ಸಾಹಿತಿಗಳು ಮತ್ತು ಹೋರಾಟಗಾರರೂ ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಿದ್ದಾರೆ.
ಇವರೆಲ್ಲರೂ ಈ ಸಮ್ಮೇಳನದಲ್ಲಿ ಸೌಜನ್ಯಳ ಪರವಾದ ಲೇಖಕಿಯರ ಸಂಘಟಿತ ದನಿ ಮೊಳಗುವಂತೆ ಮಾಡಲಿ, ಆ ಸೋದರಿಯ ತಾಯಿಯ ಹೋರಾಟಕ್ಕೆ ಬೆಂಬಲ ಘೋಷಿಸಲಿ, ಅರಿವು ಬಿಡುಗಡೆಯ ದಾರಿ ತೋರಲಿ ಎಂದು ಹಾರೈಸುತ್ತೇನೆ.
ಇದರ ಜೊತೆಗೆ ನಂಬಿದವರಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಆಯುಷ್ಯ, ಆರೋಗ್ಯ, ಸಕಲ ಸಂಪತ್ತನ್ನು ನೀಡಲಿ ಎಂದೂ ಪ್ರಾರ್ಥಿಸುತ್ತೇನೆ.
