ಎನ್‌ಕೌಂಟರ್ ತಪ್ಪು, ನ್ಯಾಯವಿಳಂಬವೂ ತಪ್ಪು: ಇನ್ನೊಂದು ದಾರಿ ಇದೆ, ಅದೇಕೆ ಕಾಣುತ್ತಿಲ್ಲ?- ನಾಗೇಶ್ ಹೆಗಡೆ ಬರಹ
ನಾಗೇಶ್ ಹೆಗಡೆ ಬರಹ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಂದ ವ್ಯಕ್ತಿಯನ್ನು ಎನ್‌ಕೌಂಟರ್ ಮಾಡಲಾಗಿದೆ. ಈ ಕುರಿತು ಪರ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು ಸೋಷಿಯಲ್ ಮೀಡಿಯಾದಲ್ಲಿ ಬರೆದ ಲೇಖನ ಗಮನ ಸೆಳೆದಿದೆ.

ನಾಗೇಶ್ ಹೆಗಡೆ ಬರಹ: ಅತ್ಯಾಚಾರಿಯನ್ನು ಎನ್‌ಕೌಂಟರ್ ಮಾಡಿ ಕೊಂದ ಬಗ್ಗೆ ಭಾರೀ ಉಘೇ ಉಘೇ ವ್ಯಕ್ತವಾಗುತ್ತಿದೆ. ಆದರೆ ಇದು ತಪ್ಪೆಂದೂ ಪೊಲೀಸರ ಈ ವಿಧಾನಕ್ಕೆ ಜೈಕಾರ ಹಾಕುತ್ತಿದ್ದರೆ (ಬುಲ್ಡೋಝರ್ ನ್ಯಾಯದ ಹಾಗೆ) ನಾಳೆ ಅಮಾಯಕರೂ ಬಲಿ ಆದಾರೆಂದೂ ಹೇಳಲಾಗುತ್ತಿದೆ. ಪತ್ರಿಕೆಗಳಲ್ಲಿ ಹೀಗೇ ವಿವೇಕದ ಸಂಪಾದಕೀಯ ಪ್ರಕಟವಾಗುತ್ತದೆ.
ಆದರೆ ನ್ಯಾಯಾಂಗ ತೀರ ನಿಧಾನದ್ದೆಂದೂ ಅತ್ಯಾಚಾರಿ ಆರಾಮಾಗಿ ತೆರಿಗೆದಾರರ ಖರ್ಚಿನಲ್ಲಿ ಜೈಲಲ್ಲಿ ತಿಂದುಣ್ಣುತ್ತ ಇನ್ನೂ ಅದೆಷ್ಟೋ ವರ್ಷ ಹಾಯಾಗಿರುತ್ತಾನೆಂದೂ ಹಾಗಾಗಿ ಎನ್‌ಕೌಂಟರೇ ಸರಳ ವಿಧಾನವೆಂದೂ ಇನ್ನು ಕೆಲವರು ವಾದಿಸುತ್ತಾರೆ.
ಇವೆರಡಕ್ಕೂ ಪರಿಹಾರವಾಗಿ ಮೂರನೆಯ ಒಂದು ಉಪಾಯ ಇದೆ:
ನಮ್ಮ ಸಮಾಜದಲ್ಲಿ ಅಪರಾಧ ಏಕೆ ಹೆಚ್ಚುತ್ತಿದೆ ಎಂದರೆ ತಮ್ಮ ಅಪರಾಧಕ್ಕೆ ಎಂಥ ಶಿಕ್ಷೆ ಕಾದಿದೆ ಎಂಬುದರ ಅರಿವು ಬಹಳಷ್ಟು ಜನರಿಗೆ ಇರುವುದಿಲ್ಲ. ಏಕೆಂದರೆ ಜೈಲಿನೊಳಗಿನ ಜಗತ್ತನ್ನು ನಾವು ಅವರಿಗೆ ತೋರಿಸುವುದೇ ಇಲ್ಲ. ಪಠ್ಯಪುಸ್ತಕಗಳಲ್ಲಿ ಹೀರೋಗಳ ಬಗ್ಗೆ ಪಾಠ ಇರುತ್ತದೆಯೇ ವಿನಾ ನೀಚಕೃತ್ಯಗಳ ಬಗ್ಗೆ ಮತ್ತು ಅದಕ್ಕಾಗುವ ಶಿಕ್ಷೆಗಳ ಬಗ್ಗೆ ಎಂಥದ್ದೂ ಇರುವುದಿಲ್ಲ. ನೈತಿಕ ಮೌಲ್ಯಗಳನ್ನು ಎಳೆತನದಲ್ಲೇ ಮನದಟ್ಟು ಮಾಡಿಸುವ ಪಾಠಗಳೇ ಇಲ್ಲವಲ್ಲ!
ನನ್ನ ಈ ಕ್ಷಣದ ಸಲಹೆ ಏನೆಂದರೆ-
ಯಾವ ಅಪರಾಧಕ್ಕೆ ಎಂತೆಂಥ ಶಿಕ್ಷೆ ಆಗಿದೆ, ಆಗುತ್ತಿದೆ ಎಂಬ ಪ್ರತ್ಯಕ್ಷ ಚಿತ್ರಣವನ್ನು ಆಗಾಗ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿರಬೇಕು. ಶಿಕ್ಷೆ ಅನುಭವಿಸುತ್ತಿರುವವನ ಮಾತುಗಳೂ ಅದರಲ್ಲಿರಬೇಕು. ಪ್ರತಿ ತಿಂಗಳೂ ಒಂದೊಂದು ಜೈಲಿನಲ್ಲಿ ತೀರ ಕ್ರೂರ ಅಪರಾಧಿ ಅನುಭವಿಸುತ್ತಿರುವ ಚಿತ್ರಣವನ್ನು (ಆತನ ಅಪರಾಧದ ಹಾಗೂ ಆಗಿನ ಜನರ ಆಕ್ರೋಶದ ಚರಿತ್ರೆಯೊಂದಿಗೆ) ಇಂದಿನ ಜನರಿಗೆ ತೋರಿಸುತ್ತಿರಬೇಕು. ಅರ್ಧ ಗಂಟೆಯ ಅಂಥ ಕಥನವನ್ನು ಎಲ್ಲ ಚಾನೆಲ್‌ಗಳೂ ಖುಷಿಯಿಂದ ಬಿತ್ತರಿಸಬಹುದು. ಅದನ್ನೇ ಸಾಮಾಜಿಕ ಮಾಧ್ಯಮಗಳೂ ಪಿಕಪ್ ಮಾಡಿ ವೈರಲ್ ಮಾಡಬಹುದು.
[ಶಿಕ್ಷೆ ಅನುಭವಿಸುತ್ತಿರುವ ಬಹಳಷ್ಟು ಕೈದಿಗಳು ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಸತ್ಯ ನಮಗೆ ಗೊತ್ತಿದೆ. ಅದನ್ನು ಮರೆಮಾಚಿ, ಜೈಲಿನ ಆ ಒಂದು ದಿನದ ಶೂಟಿಂಗ್ ಸಮಯದಲ್ಲಾದರೂ ಆತ ಅಸಲೀ ಶಿಕ್ಷೆಯನ್ನು ಅನುಭವಿಸುವ ನಟನೆ ಮಾಡಬಹುದು. ಜೈಲಿನ ಸಿಬ್ಬಂದಿಗೂ ತಮ್ಮ ಅಸಲೀ ಕರ್ತವ್ಯ ಏನೆಂಬುದನ್ನು ನೆನಪಿಸಲಿಕ್ಕೂ ಇದು ಸಹಾಯವಾಗುತ್ತದೆ].
ಶಿಕ್ಷೆಯ ತೀರ್ಮಾನವನ್ನು ಪ್ರಕಟಿಸುವ ಸಂದರ್ಭದಲ್ಲೇ ಅಪರಾಧಿಯ ಜೈಲಿನ ದಿನಗಳನ್ನು ಅಥವಾ ನೇಣಿನ ಕ್ಷಣಗಳನ್ನು ಆಗೀಗ ಬಹಿರಂಗಗೊಳಿಸುವಂತೆ ನ್ಯಾಯಾಂಗದಲ್ಲಿ ತಿದ್ದುಪಡಿ ತರಬೇಕು.
ಇಷ್ಟಕ್ಕೂ ಸಮಾಜ ಪಾಠ ಕಲಿಯಲಿ ಎಂಬ ಉದ್ದೇಶದಿಂದಲೇ ತಾನೆ, ಅಪರಾಧಿಗೆ ಶಿಕ್ಷೆ ಕೊಡುವುದು? ಆದರೂ ಯಾಕೆ ಇದು ಸಾಧ್ಯವಾಗುತ್ತಿಲ್ಲವೊ ತುಸು ಮುಂದೆ ಚರ್ಚಿಸೋಣ.
ಸದ್ಯದ ಪ್ರಶ್ನೆ ಇಷ್ಟು:
ಜೈಲಿನ ಭದ್ರ ಗೋಡೆಗಳ ಹಿಂದೆ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲದೇ ಇದ್ದರೆ ಸಮಾಜ ಪಾಠ ಕಲಿಯುವುದು ಹೇಗೆ?
ಇಂಥದೊಂದು ಬದಲಾವಣೆಯನ್ನು ನ್ಯಾಯ ಸಂಹಿತೆಯಲ್ಲಿ ಅಳವಡಿಸಿಕೊಳ್ಳಲು ನಮ್ಮ ದೇಶದಲ್ಲಿ ಯುಗವೇ ಹಿಡಿದೀತು, ನಿಜ. ಆದರೆ ಕೆಲವು ದೇಶಗಳಲ್ಲಿ ಎಲ್ಲರಿಗೂ ಕಾಣುವಂತೆ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತಾರೆ. ಇರಾನ್, ಸೌದಿ ಅರೇಬಿಯಾ ಉದಾಹರಣೆ ಇಲ್ಲಿ ಬೇಡ. ಚೀನಾದಲ್ಲಿ ಕೂಡ ಬಹಿರಂಗ ನೇಣುಶಿಕ್ಷೆಯ ಪದ್ಧತಿ ಇತ್ತು (ಈಗ ಇಲ್ಲವಂತೆ); ಆದರೆ ಲಂಚಕೋರರಿಗೆ ಹಾಗೂ ಜನಕ್ಕೆ ಮೋಸ ಮಾಡಿದ ಅಧಿಕಾರಿಗೆ ಖಡಕ್ ಮತ್ತು ಶೀಘ್ರ ಮರಣದಂಡನೆಯನ್ನೇ ವಿಧಿಸುತ್ತದೆ. ಕೆಲ ವರ್ಷಗಳ ಹಿಂದೆ ಹಾಲಿಗೆ ಮೆಲನೈನ್ ಪುಡಿಯ ಕಲಬೆರಕೆ ಮಾಡಿ ಅನೇಕ ದೇಶಗಳ ಮಕ್ಕಳ ಮರಣಕ್ಕೆ ಕಾರಣವಾದ ಅಧಿಕಾರಿಗೆ ನೇಣು ಹಾಕಿದ್ದರ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದೆ.
ನಮ್ಮಲ್ಲಿ ಅಂಥ ಉಗ್ರ ಉದಾಹರಣೆಗಳೇ ಇಲ್ಲವೊ ಅಥವಾ ಉಗ್ರ ಶಿಕ್ಷೆಯಾದ ಉದಾಹರಣೆ ಇಲ್ಲವೊ! ಅಧಿಕಾರಿಗಳ ಎಲ್ಲ ತಪ್ಪನ್ನೂ ಮರೆಮಾಚುವ ಸಾಂಘಿಕ ವ್ಯವಸ್ಥೆ ನಮ್ಮಲ್ಲಿದೆ.
ಸಿಂಗಪುರದಲ್ಲಿ ತಪ್ಪಿತಸ್ಥರಿಗೆ ಬಹಿರಂಗ ಛಡಿ ಏಟು ಕೊಡುವ ವ್ಯವಸ್ಥೆ ಇತ್ತು. ಅಲ್ಲಿನ ಚಾಂಗಿ ವಿಮಾನ ನಿಲ್ದಾಣದಲ್ಲಿ ವೀಸಾ ತಪಾಸಣೆಗೆ ನಾನು ನಿಂತಿದ್ದಾಗ ಅಲ್ಲಿ ನೋಡಿದ ಪುಟ್ಟ ಖಡಕ್ ಬರಹ Death to the Drug Traffickers ಈಗಲೂ ನೆನಪಿನಲ್ಲಿದೆ. ಅಲ್ಲಿ ತಿಂಗಳಿಗೆ ಒಂದಿಬ್ಬರು ಮಾದಕದ್ರವ್ಯ ಸಾಗಣೆದಾರರಿಗೆ ನೇಣು ಹಾಕಿ, ಅದು ವ್ಯಾಪಕ ಸುದ್ದಿ ಆಗುವಂತೆ ಸರಕಾರ ನೋಡಿಕೊಳ್ಳುತ್ತಿದೆ. ಇತ್ತೀಚೆಗಷ್ಟೆ 78 ಗ್ರಾಮ್ ಮಾದಕ ಕೆಮಿಕಲ್ಲನ್ನು ಮಾರಲು ಹೊರಟಿದ್ದ 65ರ ವೃದ್ಧನಿಗೆ ಮರಣದಂಡನೆ ಅಗಿದೆ. ಡ್ರಗ್ ಬಗ್ಗೆ ಝೀರೊ ಟಾಲರನ್ಸ್ ಇರುವ ದೇಶ ಅದು.
ಅಮೆರಿಕದ ಕೆಲವು ರಾಜ್ಯಗಳಲ್ಲಿ ನೇಣು ಹಾಕುವುದನ್ನು ಪ್ರತ್ಯಕ್ಷ ನೋಡುವ ಅವಕಾಶವನ್ನು ಕೆಲವು ಆಯ್ದ ಜನಸಾಮಾನ್ಯರಿಗೆ ಕಲ್ಪಿಸಲಾಗುತ್ತದೆ. ಅದರ ವಿಡಿಯೊ ವರದಿಗೆ ಅವಕಾಶ ಇಲ್ಲ.
ಹೀಗೆ ನೇಣು, ಛಡಿಯೇಟು ಮುಂತಾದ ಶಿಕ್ಷೆಯನ್ನು ಪಬ್ಲಿಕ್ಕಾಗಿ ತೋರಿಸುವುದಕ್ಕೆ ಅನೇಕ ನೈತಿಕ ಹಾಗೂ ಮನೋವೈಜ್ಞಾನಿಕ ಅಡೆತಡೆಗಳಿವೆ. ಮಾನವ ಹಕ್ಕುಗಳ ಪ್ರತಿಪಾದಕರೂ ಅದನ್ನು ಒಪ್ಪುವುದಿಲ್ಲ. ಆದರೆ ಇತರ ಕಠಿಣ ಶಿಕ್ಷೆ ಅನುಭವಿಸುತ್ತಿರುವವರ ಪ್ರತ್ಯಕ್ಷ ಚಿತ್ರಣವನ್ನು ತೋರಿಸಿದರೆ ತಪ್ಪೇನು?
ನಮ್ಮಲ್ಲಿ ತೀರ ಕ್ರೂರ ಶಿಕ್ಷೆ ಎಂದರೆ ಬ್ರಿಟಿಷರ ಕಾಲದ ಅಂಡಮಾನ್ ಮಾದರಿಯ ಶಿಕ್ಷೆಯನ್ನೇನೂ ಈಗ ಕೊಡುವುದಿಲ್ಲ. ರಾಗಿ ಬೀಸೋದು, ಕಲ್ಲು ಕುಟ್ಟೋದು, ನೇಯ್ಗೆ ಮಾಡೋದು ಇಂಥದ್ದೇ ಇದ್ದೀತು. ಅಂಥ ದುಡಿಮೆಯ ದೃಶ್ಯಗಳನ್ನು ನಮ್ಮ ಸಮಾಜದಲ್ಲೇ ಎಷ್ಟೊಂದು ಕಡೆ ನಾವು ನೋಡುತ್ತಿರುವ ಕಾರಣ ಅದರಿಂದ ಯಾರೂ ಪಾಠ ಕಲಿಯಲಿಕ್ಕಿಲ್ಲ ಎಂದಿರಾ?
ಹಾಗಿದ್ದರೆ ಈ ಮುಂದಿನ ವಿಷಯದ ಬಗ್ಗೆ ಏನಂತೀರಿ?
2012ರಲ್ಲಿ ಗುಜರಾತಿನಲ್ಲಿ ಮೋದಿ ಸಂಪುಟದಲ್ಲಿ ಮಹಿಳಾ ಕಲ್ಯಾಣ ಸಚಿವೆಯಾಗಿದ್ದ ಮಾಯಾ ಕೊಡ್ನಾನಿ ಎಂಬ ಡಾಕ್ಟರ್‌ಗೆ ಅಂದರೆ, ಪ್ರಸೂತಿ ತಜ್ಞೆಗೆ 2002ರ ದಂಗೆಯನ್ನು ಪ್ರಚೋದಿಸಿದ್ದಕ್ಕೆ (ಆಗ 92 ಜನರು ಅಸುನೀಗಿದ್ದರು) 28 ವರ್ಷಗಳ ಕಾರಾಗೃಹ ಶಿಕ್ಷೆ ಆಗಿತ್ತು. ಅವರು ಎರಡೇ ವರ್ಷ ಜೈಲಲ್ಲಿದ್ದರು; ನಂತರ ಹೃದಯದ ಕಾಯಿಲೆ ಬಂತೆಂದು ಜಾಮೀನಿನ ಮೇಲೆ ಹೊರಬಂದರು. ಆಮೇಲೆ ಅವರ ವಿರುದ್ಧ ಗಟ್ಟಿ ಸಾಕ್ಷ್ಯಗಳಿಲ್ಲವೆಂದು 2018ರಲ್ಲಿ ಉಚ್ಚನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು. ಜೈಲಲ್ಲಿದ್ದ ಆ ಎರಡು ವರ್ಷಗಳಲ್ಲಿ ಅವರ ದಿನಚರಿಯನ್ನು ವಿಡಿಯೊ ಮಾಡಿ ಪ್ರದರ್ಶನ ಮಾಡಬಹದಿತ್ತು.
ನಮ್ಮ ಲೀಗಲ್ ಸಿಸ್ಟಮ್ಮಿನಲ್ಲಿ ಅದೂ ಸಾಧ್ಯವಿಲ್ಲ. ಅಕಸ್ಮಾತ್ ಸಾಧ್ಯ ಆಗಿದ್ದರೂ ಆ ದೃಶ್ಯವನ್ನು ನೋಡಿ ಯಾವ ರಾಜಕಾರಣಿಯಾದರೂ ಪಾಠ ಕಲಿಯುತ್ತಿದ್ದನೆ? ಹೆಚ್ಚೆಂದರೆ ಸಾಕ್ಷ್ಯ ಸಿಗದ ಹಾಗೆ ತಪ್ಪು ಕೆಲಸ ಮಾಡುವುದು ಹೇಗೆ ಎಂತಲೇ ಯೋಚಿಸಬಹುದು.
ಅದು, ಮೀನಿಗೆ ಈಜು ಕಲಿಸಲು ಹೋದಂತೆ!
ಇನ್ನು ಜಯಲಲಿತಾ, ಶಶಿಕಲಾರ ಅಪರಾಧಕ್ಕೆ ಅವರಿಗೆ ಸಿಕ್ಕ ಶಿಕ್ಷೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿಲ್ಲ. ವೆಸ್ಟರ್ನ್ ಟಾಯ್ಲೆಟ್ಟನ್ನೂ ತರಿಸಿಕೊಳ್ಳುವಷ್ಟು ಸಶಕ್ತರಾಗಿದ್ದರು ಅವರು.
ಇದಕ್ಕೆ ತದ್ವಿರುದ್ಧವಾದ 80ರ ವೃದ್ಧ ಸ್ಟ್ಯಾನ್ ಸ್ವಾಮಿಯ ಪ್ರಕರಣವನ್ನು ನೆನಪಿಸಿಕೊಳ್ಳಿ ಇನ್ನೂ ವಿಚಾರಣೆ ಹಂತಕ್ಕೆ ಬಂದಿರದ ಪ್ರಕರಣದಲ್ಲಿ ಬಂಧಿತರಾದ ಅವರು ಕೈನಡುಕದ ಕಾಯಿಲೆಯಿಂದ ಬಳಲುತ್ತಿದ್ದರೂ ದ್ರವಾಹಾರ ಸೇವನೆಗೆ ಒಂದು ಹೀರುಕೊಳವೆಯೂ ಸಿಗದಂತೆ ಮಾಡಿದ ನ್ಯಾಯವಾದಿಗಳು ನಮ್ಮಲ್ಲಿದ್ದಾರೆಂಬುದನ್ನು ನೆನಪಿಸಿಕೊಂಡರೆ ಇಡೀ ವ್ಯವಸ್ಥೆಯ ಬಗ್ಗೆ, ಮಾನವ ಹಕ್ಕುಗಳ ಪ್ರತಿಪಾದಕರ ನಿಷ್ಕಿಯತೆಯ ಬಗ್ಗೆ ನಾವು ಇನ್ನಷ್ಟು ಸಿನಿಕರಾಗುತ್ತೇವೆ.
ಹಾಗಿದ್ದರೆ ಅಪರಾಧಿಗಳು ಅನುಭವಿಸುತ್ತಿರುವ ಶಿಕ್ಷೆಯನ್ನು ಆಗಾಗ ಬಹಿರಂಗಗೊಳಿಸಿ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕೆಂಬುದು ಬರೀ ಹಗಲುಗನಸು ಆದೀತಲ್ಲವೆ?
ಅದು ನಿಜ. ಆದರೆ ಇನ್ನೂ ಒಂದು ಮಾರ್ಗವಿದೆ. ನಮ್ಮ ಮಾಧ್ಯಮಗಳು ಮನಸ್ಸು ಮಾಡಿದರೆ ಹೀಗೂ ಮಾಡಬಹುದು:
ಮಾರ್ಚ್ 20ರಂದು (2020) ದಿಲ್ಲಿಯ ತಿಹಾರ್ ಜೈಲಿನಲ್ಲಿ ನಾಲ್ವರು ನಿರ್ದಯಿಗಳಿಗೆ ನೇಣು ಹಾಕಲಾಯಿತು. ನಿರ್ಭಯಾ ಎಂಬ ಯುವತಿಯ ಮೇಲೆ ಅತ್ಯಂತ ಕ್ರೂರ ಅತ್ಯಾಚಾರ ನಡೆಸಿ ಜೀವ ತೆಗೆದ ಖೂಳರು ಇವರು. ಪ್ರತಿ ವರ್ಷ ಆ ದಿನವನ್ನು ʻಕರಾಳ ಶಿಕ್ಷೆಯ ದಿನʼ ಎಂದು ಮಾಧ್ಯಮಗಳು ನೆನಪಿಸಬಾರದೇಕೆ? 2012ರಂದು ನಡೆದ ಆ ಭೀಕರ ಘಟನೆಯನ್ನು ಆದಷ್ಟೂ ಮೈನವಿರೇಳುವಂತೆ ಮತ್ತೊಮ್ಮೆ ವರ್ಣಿಸಿ, ಆ ಅಪರಾಧಿಗಳು ನೇಣಿಗೆ ಏರುವ ಮುಂಚಿನ ಅತ್ತಿದ್ದು, ಬದುಕಿಸುವಂತೆ ಬೇಡಿಕೊಂಡಿದ್ದು, ಉಚ್ಚೆ ಹೊಯ್ದುಕೊಂಡಿದ್ದು ಎಲ್ಲವನ್ನೂ (ಉತ್ಪ್ರೇಕ್ಷೆ ಇಲ್ಲದಂತೆ) ಜನರಿಗೆ ಅಂದು ತೋರಿಸಬೇಕು.
ಅಂಥ ಕ್ರೂರ ಉದಾಹರಣೆಗಳ ಸಂತೆಯೇ ನಮ್ಮಲ್ಲಿದೆ. ಗುಜರಾತಿನ ಬಿಲ್ಕಿಸ್ ಬಾನೊ ಪ್ರಕರಣವನ್ನು ನೆನಪಿಸಿಕೊಳ್ಳಿ. ಐದು ತಿಂಗಳು ಗರ್ಭಿಣಿಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ, ಅವಳ ಕುಟುಂಬದ ಮೂರು ವರ್ಷದ ಮಗುವೂ ಸೇರಿದಂತೆ ಒಟ್ಟು ಏಳು ಮಂದಿಯನ್ನು ಕೊಂದಿದ್ದು? ಆ ಘಟನೆ ನಡೆದ ಮಾರ್ಚ್ 3ನ್ನು ʻಕರಾಳ ಅಪರಾಧದ ದಿನʼ ಎಂದು ಮಾಧ್ಯಮಗಳು ನೆನಪಿಸಿ ಅಂದಿನ ಹೃದಯವಿದ್ರಾವಕ ವರ್ಣನೆಯನ್ನು ಪ್ರತಿ ವರ್ಷ ನೀಡಬಹುದು. ಜೊತೆಗೇ ಅಪರಾಧಿಗಳು ಶಿಕ್ಷೆ ತೀರುವ ಮುನ್ನವೇ ಹೊರಬಂದು ಹೂಮಾಲೆ ಹಾಕಿಸಿಕೊಂಡು ಸಂಭ್ರಮಿಸಿದ್ದನ್ನೂ ನೆನಪಿಸಬಹುದು.
ಅಥವಾ-
ಇಂದು ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುವ ಸಂದರ್ಭದಲ್ಲೇ ಭೀಮಾ ಕೋರೆಗಾಂವ್ ಪ್ರಕರಣದ ಕರಾಳತೆಯನ್ನು (ಜನವರಿ 1), ಸ್ಟ್ಯಾನ್ ಸ್ವಾಮಿಯ ಸಾವನ್ನು (ಜುಲೈ 5) ನೆನಪಿಸಬಹುದು.
ಅಂಥ ಕರಾಳ ಘಟನೆಗಳ -ವಿಶೇಷವಾಗಿ ಎಳೆ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ- ಅದಕ್ಕೆ ಸಂಬಂಧಿಸಿದ ಶಿಕ್ಷೆಯ ವಿಚಾರಗಳನ್ನು ನೆನಪಿಸಿ ಅಂಥ ಸುದ್ದಿಗಳು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿರುವಂತೆ ಮಾಡಲು ಸಾಧ್ಯವಿದೆ.
ಸಾಧ್ಯ ಇದೆ ತಾನೆ? ನಾನಾ ಬಗೆಯ ಲೈಂಗಿಕ ಕ್ರಿಯೆಗಳನ್ನು ಎಗ್ಗಿಲ್ಲದೆ ಬಿತ್ತರಿಸುತ್ತಿರುವ ಇಂದಿನ ಮಾಧ್ಯಮಗಳಲ್ಲಿ ಒಂದು ಬಗೆಯ ಸಮತೋಲವನ್ನಾದರೂ ನಾವು ಕಾಣಬಹುದು.
ಆಗ ನಮ್ಮದು ನಿಜಕ್ಕೂ ʻನೇರ, ದಿಟ್ಟ, ನಿರಂತರʼದ ಮಾಧ್ಯಮ ಆಗಲು ಸಾಧ್ಯವಿದೆ.
- ಲೇಖನ: ನಾಗೇಶ್ ಹೆಗಡೆ
