ಕನ್ನಡ ಸುದ್ದಿ  /  ಕರ್ನಾಟಕ  /  Kamala Hampana Death: ಖ್ಯಾತ ಲೇಖಕಿ ಕಮಲಾ ಹಂಪನ ಇನ್ನಿಲ್ಲ; ಕಂಬನಿ ಮಿಡಿದ ಕನ್ನಡ ಸಾಹಿತ್ಯ ಲೋಕ

Kamala Hampana Death: ಖ್ಯಾತ ಲೇಖಕಿ ಕಮಲಾ ಹಂಪನ ಇನ್ನಿಲ್ಲ; ಕಂಬನಿ ಮಿಡಿದ ಕನ್ನಡ ಸಾಹಿತ್ಯ ಲೋಕ

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಖ್ಯಾತ ಲೇಖಕಿ ಕಮಲಾ ಹಂಪನ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಮಲಾ ಹಂಪನ ನಿಧನಕ್ಕೆ ಸಾಹಿತ್ಯ ಲೋಕದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಖ್ಯಾತ ಲೇಖಕಿ ಕಮಲಾ ಹಂಪನ ಇನ್ನಿಲ್ಲ; ಕಂಬನಿ ಮಿಡಿದ ಕನ್ನಡ ಸಾಹಿತ್ಯ ಲೋಕ
ಖ್ಯಾತ ಲೇಖಕಿ ಕಮಲಾ ಹಂಪನ ಇನ್ನಿಲ್ಲ; ಕಂಬನಿ ಮಿಡಿದ ಕನ್ನಡ ಸಾಹಿತ್ಯ ಲೋಕ (PC: M Khaseem Malligemaduvu, Yogesh Meshtru Facebook)

ಬೆಂಗಳೂರು: ಕನ್ನಡದ ಖ್ಯಾತ ಲೇಖಕಿ ಕಮಲಾ ಹಂಪನ ವಿಧಿವಶರಾಗಿದ್ಧಾರೆ. ಇಂದು ( ಜೂನ್‌ 22) ಬೆಳಗ್ಗೆ ಹೃದಯಾಘಾತದಿಂದ ಕಮಲಾ ಹಂಪನಾ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕಮಲಾ ಹಂಪನಾ ತಮ್ಮ ಮಗಳ ಮನೆಯಲ್ಲಿದ್ದರು. ಪತಿ ಪ್ರೊ ಹಂಪ ನಾಗರಾಜಯ್ಯ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಕಮಲಾ ಹಂಪನ ಅಗಲಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ಕಮಲಾ ಹಂಪನ

ಕನ್ನಡ ಸಾಹಿತ್ಯ ಲೋಕದಲ್ಲಿ ಕಮಲಾ ಹಂಪನ ಲೇಖಕಿಯಾಗಿ ಹೆಸರು ಮಾಡಿದ್ದಾರೆ. ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನ ಅವರು ನೀಡಿರುವ ಕೊಡುಗೆ ಬಹಳ ಮಹತ್ವವಾದದ್ದು.

ಟ್ರೆಂಡಿಂಗ್​ ಸುದ್ದಿ

1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಕಮಲಾ ಹಂಪನ, ತುಮಕೂರು, ಮೈಸೂರು ಸೇರಿದಂತೆ ವಿವಿಧೆಡೆ ವಿದ್ಯಾಭ್ಯಾಸ ಮಾಡಿದರು. 1959ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಮೈಸೂರು, ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಅವರು ನಂತರ ಬೆಂಗಳೂರಿನ ವಿಜಯನಗರ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕೆಲಸದಿಂದ ನಿವೃತ್ತರಾದ ನಂತರ ಮೈಸೂರು ವಿವಿ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ

ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ ಕಥಾ ಸಂಕಲನ. ಬುಗುಡಿ, ಬಿಂದಲಿ ವಚನ ಸಂಕಲನ. ಅಕ್ಕ ಮಹಾದೇವಿ, ಹೆಳವನಕಟ್ಟೆ ಗಿರಿಯಮ್ಮ, ವೀರವನಿಗೆ ಓಬವ್ವ, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗಾ, ಡಾ.ಬಿ.ಆರ್. ಅಂಬೇಡ್ಕರ್‌, ಮಳಬಾಗಿಲು, ಮಕ್ಕಳೊಡನೆ ಮಾತುಕತೆ ಶಿಶು ಸಾಹಿತ್ಯ. ಶರ್ಮಿಳಾ ಕಾದಂಬರಿ. ಬಕುಳ, ಬಾನಾಡಿ, ಬೆಳ್ಳಕ್ಕಿ ಆಕಾಶವಾಣಿ ನಾಟಕ ರೂಪಕಗಳು. ಸೇರಿದಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇತರ ಭಾಷೆಗಳಿಂದ ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು, ಏಷಿಯಾದ ಹಣತೆಗಳು, ಜಾತಿ ಮೀಮಾಂಸೆ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನ ನೀಡಿರುವ ಕೊಡುಗೆಗಾಗಿ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಟೊರೆಂಟೋ, ವ್ಯಾಂಕೊವರ್, ಲಾಸ್ ಏಂಜಲಿಸ್, ಬ್ರಿಟನ್ ಮುಂತಾದ ವಿದೇಶಿ ಪುರಸ್ಕಾರ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಒಲಿದುಬಂದಿವೆ.

2003 ಡಿಸೆಂಬರ್‌ನಲ್ಲಿ ಚಿಕ್ಕಮಗಳೂರಿನ ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಮಲಾ ಹಂಪನ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ.