HD Kumaraswamy: ಕಾಸಿಗಾಗಿ ಪೋಸ್ಟಿಂಗ್ ಕಾಂಗ್ರೆಸ್ ಸರ್ಕಾರ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ; ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ಕಾಸಿಗಾಗಿ ಪೋಸ್ಟಿಂಗ್ ಕಾಂಗ್ರೆಸ್ ಸರ್ಕಾರ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ; ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ

HD Kumaraswamy: ಕಾಸಿಗಾಗಿ ಪೋಸ್ಟಿಂಗ್ ಕಾಂಗ್ರೆಸ್ ಸರ್ಕಾರ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ; ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ

ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (Ex CM HD Kumaraswamy) ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ಪಂಚ ಗ್ಯಾರಂಟಿಗಳ ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Govt) ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ. ಅದು ʼಕಾಸಿಗಾಗಿ ಪೋಸ್ಟಿಂಗ್. ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರ್ಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ ಎಂದು ಸುದ್ದಿಯೊಂದು ಹಂಚಿಕೊಂಡಿದ್ದಾರೆ.

4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ (!?) ಯಾವುದು? ಮೂರೊಪ್ಪತ್ತೂ ಶಿಫಾರಸು ಪತ್ರಗಳನ್ನು ಟೈಪಿಸಿ, ಸಿಎಂ ಸಾಹೇಬರ ಸಹಿ ಮಾಡಿಸುವುದರಲ್ಲಿಯೇ ಅಧಿಕಾರಿಗಳು ತಲ್ಲೀನರಾಗಿದ್ದಾರೆನ್ನುವುದು ಖಾತ್ರಿ. ವರ್ಗಾವರ್ಗಿಯ ಪೇಮೆಂಟ್‌ ಕೋಟಾ ನಿಯಂತ್ರಣ ಮಾಡುತ್ತಿರುವ ಆ ʼರಿಮೋಟ್‌ ಕಂಟ್ರೋಲ್‌ʼ ಬಗ್ಗೆ ಜನಕ್ಕೆ ಅರ್ಥವಾಗುತ್ತಿದೆ.

ಕಾಂಗ್ರಸ್ ಸರ್ಕಾರ ಬಂದ ಮೊದಲ ದಿನದಿಂದಲೇ ʼಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ ಶುರುವಾಗಿದೆ. ʼಸರ್ಕಾರದ ಕೆಲಸ ದೇವರ ಕೆಲಸʼ ಎನ್ನುವುದರ ಬದಲು ʼಬಂದಿದ್ದನ್ನು ಬಿಡದೇ ಬಾಚಿಕೋ..ʼ ಎಂಬುದು ಈ ಸರ್ಕಾರದ ಧ್ಯೇಯನೀತಿ ಆಗಿದೆ. ಜನರ ಹಣೆಗೆ ಗ್ಯಾರಂಟಿ ತುಪ್ಪ ಸವರಿ, ಬಿಟ್ಟಿಭಾಗ್ಯದ ಬೆಲ್ಲದ ಆಮಿಷವೊಡ್ಡಿ ʼಲೂಟಿಪರ್ವʼಕ್ಕೆ ʼಹುಂಡಿʼ ಇಡಲಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ ಹೇಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಕ್ಕಿ ಗ್ಯಾರಂಟಿ ಬಗ್ಗೆ ಇವರೇನು ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿದ್ರಾ? ಪೊಳ್ಳು ಭರವಸೆ ಕೊಟ್ಟು ಗ್ಯಾರಂಟಿ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ. ತಪ್ಪು ಎನ್ನುವುದನ್ನು ನಾವು ಮಾಡಬೇಕಲ್ಲವೇ ಎಂದು ಅಭಿಪ್ರಾಯಪಟ್ಟಿದ್ದರು.

ಕೇಂದ್ರ ಸರ್ಕಾರ ಯಾಕೆ ಅಕ್ಕಿ ಕೊಡಬೇಕು ನಿಮಗೆ? ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ರಾ ನೀವು? ಯಾವನೋ ಬಂದು ಎಲೆಕ್ಷನ್ ಸ್ಟ್ರಾಟೆಜಿಸ್ಟ್ ಐಡಿಯಾ ಕೊಟ್ಟ ಅಂತ ನೀವು ಫ್ರೀ ಫ್ರೀ ಅಂದ್ರಿ. ಸಚಿವರ ಹೆಂಡ್ತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದು ಹೇಳಿ ಎಲ್ಲರೂ ಅರ್ಜಿ ಹಾಕಿಕೊಳ್ಳಬಹುದು ಎಂದ್ರಿ.

ಈಗ ನೋಡಿದರೆ ಬೇರೆ ವರಸೆ ಶುರು ಮಾಡಿಕೊಂಡಿದ್ದೀರಿ. ಗೃಹಜ್ಯೋತಿ ಕತ್ತಲಾಗಿ ಪರಿಣಮಿಸಿದೆ. ವಿದ್ಯುತ್ ಉಚಿತ ಕೊಡ್ತೀವಿ ಅಂತ ಹೇಳಿದವರು ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ವಿಟಿಯು ಉಪ ಕುಲಪತಿ ಬಾಯಿ ಬಡ್ಕೊತಿದ್ದಾರೆ. ವಿದ್ಯುತ್ ಬಿಲ್ ನೋಡಿ ಅವರು ಶಾಕ್ ಆಗಿದ್ದಾರೆ. ಬಾಕಿ ಮೊತ್ತ ಕಂಡು ಬೆಸ್ತು ಬಿದ್ದಿದ್ದಾರೆ. ಇನ್ನೆಷ್ಟು ಶಾಕ್ ಕೊಡುತ್ತೀರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

Whats_app_banner