ಕನ್ನಡ ಸುದ್ದಿ  /  Karnataka  /  Karnataka News Karnataka Board Exam For Classes 5 8 9 And 11 Kolar Taluk Teacher Narayana Swami Opinion Rst

ಕರ್ನಾಟಕ ಬೋರ್ಡ್ ಪರೀಕ್ಷೆ: ಆದಷ್ಟು ಬೇಗ ತೀರ್ಪು ಬಂದ್ರೆ ನಮ್ಗೂ ಖುಷಿ, ಮಕ್ಕಳಿಗೂ ನೆಮ್ಮದಿ; ಕೋಲಾರದ ಶಿಕ್ಷಕ ನಾರಾಯಣಸ್ವಾಮಿ ಅಭಿಪ್ರಾಯ

5,8,9 ಮತ್ತು 11ನೇ ತರಗತಿ ಮಕ್ಕಳಿಗೆ ಬೋರ್ಡ್ ಎಕ್ಸಾಂ ವಿಚಾರವಾಗಿ ಕೋರ್ಟ್‌ ತೀರ್ಪನ್ನು ತಡೆ ಹಿಡಿದಿದ್ದು, ಮಕ್ಕಳು ಹಾಗೂ ಪೋಷಕರ ಜೊತೆ ಶಿಕ್ಷಕರು ಕೂಡ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿಕ್ಷಕ ನಾರಾಯಣಸ್ವಾಮಿ ಅವರ ಮಾತುಗಳು ಇಲ್ಲಿವೆ.

ನಾರಾಯಣಸ್ವಾಮಿ ಎಸ್‌.ವಿ. (ಬಲಚಿತ್ರ)
ನಾರಾಯಣಸ್ವಾಮಿ ಎಸ್‌.ವಿ. (ಬಲಚಿತ್ರ)

ಬೆಂಗಳೂರು: ಕರ್ನಾಟಕ ಬೋರ್ಡ್‌ ಎಕ್ಸಾಂ ಕುರಿತು ಹೈಕೋರ್ಟ್‌ ನೀಡುವ ತೀರ್ಪಿಗಾಗಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಎದುರು ನೋಡುತ್ತಿದ್ದಾರೆ. 2023ರಲ್ಲಿ ಕರ್ನಾಟಕ ಸರ್ಕಾರವು 5,8,9 ಹಾಗೂ 11 ನೇ ತರಗತಿ ಮಕ್ಕಳಿಗೆ ಬೋರ್ಡ್‌ ಎಕ್ಸಾಂ ನಡೆಸುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' (ರುಪ್ಪಾ) ಹಾಗೂ ʼಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆʼ (ಅವರ್ ಸ್ಕೂಲ್) ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ 2024ರ ಮಾರ್ಚ್‌ 6 ರಂದು ಬೋರ್ಡ್ ಪರೀಕ್ಷೆಗೆ ಸಂಬಂಧಿಸಿ ಸರ್ಕಾರ ಹೊರಡಿಸಿದ್ದ ಎರಡೂ ಸುತ್ತೋಲೆಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿತು. ಇದರಿಂದಾಗಿ, ಮಾರ್ಚ್‌ 11ರಿಂದ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆಗಳು ರದ್ದುಗೊಂಡವು. ಇದೀಗ ಕೋರ್ಟ್‌ ತೀರ್ಪು ಬರುವ ಸಲುವಾಗಿ ಪೋಷಕರು, ಮಕ್ಕಳು ಹಾಗೂ ಶಿಕ್ಷಕರು ಕಾಯುವಂತಾಗಿದೆ. ಬೋರ್ಡ್‌ ಪರೀಕ್ಷೆ ರದ್ದಾಗುವುದೋ ಅಥವಾ ಮುಂದುವರೆಸುತ್ತಾರೋ ಎಂಬ ಗೊಂದಲದಲ್ಲಿ ಸಿಲುಕಿರುವ ಪೋಷಕರು, ಶಿಕ್ಷಕರು ಹಾಗೂ ಮಕ್ಕಳು ಆದಷ್ಟು ಬೇಗ ತೀರ್ಪು ಬರಲಿ ಎಂದು ಕಾಯುತ್ತಿದ್ದಾರೆ. ಈ ಬಗ್ಗೆ ಕೋಲಾರದ ಮಾಲೂರು ತಾಲ್ಲೂಕಿನ ಮಿರುಪನಹಳ್ಳಿ ಶಾಲೆಯ ಮುಖ್ಯಶಿಕ್ಷಕ ನಾರಾಯಣಸ್ವಾಮಿ ಎಸ್‌.ವಿ. ಅವರ ಅಭಿಪ್ರಾಯ ಇಲ್ಲಿದೆ. 

ʼ5,8,9, ಹಾಗೂ 11 ತರಗತಿ ಮಕ್ಕಳಿಗೆ ಬೋರ್ಡ್‌ ಎಕ್ಸಾಂ ನಡೆಸುವ ಸರ್ಕಾರ ಚಿಂತನೆ ಗಮನಾರ್ಹ. ಇದರಿಂದ ಮಕ್ಕಳಲ್ಲಿ ಪರೀಕ್ಷೆಗಳ ಬಗ್ಗೆ ಗಂಭೀರತೆ ಮೂಡುತ್ತದೆ. ಜೊತೆಗೆ ಶಾಲೆಯವರು ನೀಡುವ ಪ್ರಶ್ನೆಪತ್ರಿಕೆಗಳಿಗಿಂತ ಶಿಕ್ಷಣ ಇಲಾಖೆ ವತಿಯಿಂದ ಬರುವ ಪ್ರಶ್ನೆಪತ್ರಿಕೆಗಳು ಕೊಂಚ ಹಿಡಿತ ಹೆಚ್ಚಿರುತ್ತದೆ. ಇದು ಮಕ್ಕಳ ಹಿತದೃಷ್ಟಿಯಿಂದ ಅವಶ್ಯ. ಅಲ್ಲದೇ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಎದುರಿಸಲು ಇದು ಅಡಿಪಾಯವಾಗುತ್ತದೆ. ಆದರೆ ಇದೀಗ ಬೋರ್ಡ್‌ ಪರೀಕ್ಷೆ ನಡೆಸುವ ವಿಚಾರವಾಗಿ ಕೋರ್ಟ್‌ ತೀರ್ಪನ್ನು ತಡೆ ಹಿಡಿದಿದ್ದು, ಇದರಿಂದ ಮಕ್ಕಳು ಹಾಗೂ ಪೋಷಕರಿಗೆ ಸಾಕಷ್ಟು ತೊಂದರೆಯಾಗಿದೆ. ಜೊತೆಗೆ ಶಿಕ್ಷಕರು ಕೂಡ ತೊಂದರೆ ಎದುರಿಸುತ್ತಿದ್ದಾರೆ. ಮಕ್ಕಳು ಪ್ರತಿದಿನ ಶಾಲೆಗೆ ಬಂದು ಇವತ್ತು ಪರೀಕ್ಷೆ ಇದ್ಯಾ, ನಾಳೆ ಇರುತ್ತಾ ಅಂತೆಲ್ಲಾ ಪ್ರಶ್ನೆ ಕೇಳುವಾಗ ಏನು ಉತ್ತರಿಸಬೇಕು ತಿಳಿಯುವುದಿಲ್ಲ. ಅಲ್ಲದೇ ಒಂದು ವೇಳೆ ಬೋರ್ಡ್‌ ಪರೀಕ್ಷೆ ರದ್ಧತಿ ಮಾಡಿ ಆದೇಶ ಹೊರಡಿಸಿದ್ರೆ ಮತ್ತೆ ಪ್ರಶ್ನೆಪತ್ರಿಕೆಯನ್ನು ತಯಾರಿಸಬೇಕು. 5 ತರಗತಿ ಮಕ್ಕಳಿಗೆ 2 ಪರೀಕ್ಷೆ ಈಗಾಗಲೇ ಮುಗಿದಿದೆ. ಇನ್ನು 4 ಪರೀಕ್ಷೆಗಳು ಬಾಕಿ ಇವೆ. ಇದೊಂಥರ ಅತಂತ್ರದ ಪರಿಸ್ಥಿತಿ. ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಹೋಗಬಹುದು. ಮಕ್ಕಳ ಜೊತೆ ಪೋಷಕರೂ ಕೂಡ ಶಾಲೆಗೆ ಬಂದು ತೀರ್ಪು ಏನಾಗಬಹುದು, ಯಾವಾಗ ತೀರ್ಪು ಬರಬಹುದು ಎಂದು ವಿಚಾರಿಸುತ್ತಿದ್ದಾರೆ. ಮಕ್ಕಳು ಸ್ವಲ್ಪ ದಿನ ಕಳೆದ ಮೇಲೆ ಪರೀಕ್ಷೆ ಇಲ್ಲ, ಓದುವುದು ಬೇಡ ಎಂಬ ಮನೋಭಾವಕ್ಕೂ ಬರಬಹುದು. ಹಾಗಾಗಿ ಆದಷ್ಟು ಬೇಗ ತೀರ್ಪು ಬಂದು ಸಮಸ್ಯೆಯನ್ನು ಬಗೆಹರಿಸಬೇಕುʼ ಎಂದು ಅವರು ಹೇಳುತ್ತಾರೆ.

ಇದು ಕೇವಲ ನಾರಾಯಣ ಸ್ವಾಮಿ ಅವರೊಬ್ಬರು ಮಾತಲ್ಲ. ಬಹುತೇಕ ಶಿಕ್ಷಕರು ಕೋರ್ಟ್‌ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಮಕ್ಕಳ ಭವಿಷ್ಯ. ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಆದಷ್ಟು ಬೇಗ ಹೈಕೋರ್ಟ್‌ ತೀರ್ಪು ಹೊರ ಬರಲಿ ಎಂದು ಆಶಿಸೋಣ.

 

IPL_Entry_Point

ವಿಭಾಗ