ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಿಡದಿ ಬಳಿಯ ಒತ್ತುವರಿ ಜಾಗದ ತೆರವಿಗೆ ಸಿದ್ಧತೆ; ಹೈಕೋರ್ಟ್ ಆದೇಶ
HD Kumaraswamy Land Encroachment: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಬಿಡದಿ ಬಳಿ ಇರುವ ತೋಟದ ಮನೆ ಸುತ್ತಲಿನ ಒತ್ತುವರಿ ಜಾಗದ ತೆರವಿಗೆ ಸಿದ್ಧತೆ ನಡೆದಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಾಗವನ್ನು ತೆರವುಗೊಳಿಸಲಾಗುತ್ತಿದೆ.

ಬೆಂಗಳೂರು: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಇತರರು ರಾಮನಗರದ ಬಿಡದಿ ಬಳಿ ಇರುವ ಕೇತಗಾನಹಳ್ಳಿ ಗ್ರಾಮದಲ್ಲಿ ಭೂ ಒತ್ತುವರಿ ಮಾಡಿರುವ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಈ ಒತ್ತುವರಿ ಭೂಮಿಯ ತೆರವಿಗೆ ಸಿದ್ಧತೆ ನಡೆದಿದೆ. ಸುಮಾರು 15 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಕುಮಾರಸ್ವಾಮಿ ಅವರ ಬಿಡದಿ ಬಳಿಯ ಜಾಗಕ್ಕೆ ಕೋರ್ಟ್ ಆದೇಶ ಹಾಗೂ ಒತ್ತುವರಿ ಸರ್ವೆ ವರದಿಯೊಂದಿಗೆ ತೆರಳಿದ್ದಾರೆ ಜಿಲ್ಲಾಧಿಕಾರಿ ಯಶವಂಶ ವಿ. ಗುರುಕರ್. ಇವರೊಂದಿಗೆ ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ. ತಹಶೀಲ್ದಾರ್ ತೇಜಸ್ವಿನಿ, ಸರ್ವೇ ಅಧಿಕಾರಿ ಹನುಮೇಗೌಡ ಹಾಗೂ ಪೊಲೀಸರು ತೆರಳಿದ್ದರು. ಒಟ್ಟು 12 ಸರ್ವೆ ನಂಬರ್‌ಗಳ 15 ಎಕರೆ ಒತ್ತುವರಿ ಭೂಮಿಯನ್ನು ತೆರವು ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕುಮಾರಸ್ವಾಮಿಯವರ ತೋಟದ ಮನೆಯ ಸುತ್ತಲಿನ ಒತ್ತುವರಿ ಜಾಗವನ್ನು ತೆರವು ಮಾಡಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಕಾರ್ಯಾಚರಣೆ ಜಾಗದಲ್ಲಿ 5 ಜೆಸಿಬಿ ಹಾಗೂ 2 ಟ್ರ್ಯಾಕರ್‌ಗಳು ಬಂದು ನಿಂತಿವೆ. ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಜಂಟಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಕುಮಾರಸ್ವಾಮಿ ಭೂ ಒತ್ತುವರಿ ಆರೋಪ ವಿಚಾರವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳವನ್ನು ನೇಮಿಸಿತ್ತು. ಇದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣ ಸಂಬಂಧ ಹೈಕೋರ್ಟಿನಲ್ಲಿ ಸೋಮವಾರ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಕೆ ಸೋಮಶೇಖರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
