ಕನ್ನಡ ಸುದ್ದಿ  /  Karnataka  /  Karnataka News Lok Sabha Election 2024 Sumalatha Continues Trying To Get Bjp Ticket From Mandya Jds Rmy

ಜೆಡಿಎಸ್‌ಗೆ ಮೀಸಲಾಗಿದ್ದರೂ ಮಂಡ್ಯ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ಮುಂದುವರೆಸಿದ ಸಂಸದೆ ಸುಮಲತಾ; ಏನಿದರ ಗುಟ್ಟು -LS Election 2024

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕೇಸರಿ ನಾಯಕರು ಮನಸ್ಸು ಮಾಡಿದ್ದಂತಿದೆ. ಆದರೂ ಸುಮಲತಾ ತಮ್ಮ ಪ್ರಯತ್ನವನ್ನ ಮುಂದುವರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಫೆಬ್ರವರಿ 8 ರಂದು ದೆಹಲಿಯಲ್ಲಿ ಭೇಟಿ ಮಾಡಿದ್ದ ಸಂಸದೆ ಸುಮಲತಾ ರಾಜಕೀಯವಾಗಿ ಚರ್ಚೆ ನಡೆಸಿದ್ದಾರೆ. ಸದ್ಯ ಸುಮಲತಾ ಮಂಡ್ಯ ಕ್ಷೇತ್ರದ ಬಿಜೆಪಿಗೆ ಟಿಕೆಟ್‌ಗೆ ಕಸರತ್ತು ಮುಂದುವರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಫೆಬ್ರವರಿ 8 ರಂದು ದೆಹಲಿಯಲ್ಲಿ ಭೇಟಿ ಮಾಡಿದ್ದ ಸಂಸದೆ ಸುಮಲತಾ ರಾಜಕೀಯವಾಗಿ ಚರ್ಚೆ ನಡೆಸಿದ್ದಾರೆ. ಸದ್ಯ ಸುಮಲತಾ ಮಂಡ್ಯ ಕ್ಷೇತ್ರದ ಬಿಜೆಪಿಗೆ ಟಿಕೆಟ್‌ಗೆ ಕಸರತ್ತು ಮುಂದುವರಿಸಿದ್ದಾರೆ. (PTI)

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಂತೆಯೇ ಈ ಬಾರಿಯೂ ತೀವ್ರ ಕುತೂಹಲ ಉಳಿಸಿಕೊಂಡಿರುವ ಕ್ಷೇತ್ರ ಮಂಡ್ಯ. ಹಿಂದೆ ಮಂಡ್ಯ ಎಂದರೆ ಇಂಡಿಯಾ ಎಂಬ ಮಾತೊಂದಿತ್ತು. ಇದೀಗ ಅದು ಮತ್ತೆ ಸಾಬೀತಾಗುತ್ತಿದೆ. ಮಂಡ್ಯದ ಹೈಕಳಿಂದ ಹಿಡಿದು ಇಂಡಿಯಾ ಪ್ರಧಾನಿ ಮೋದಿವರೆಗೂ ಚರ್ಚೆಯಲ್ಲಿರುವ ಕ್ಷೇತ್ರವಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ ಆಯ್ಕೆ ಮಾಡಿರುವ ನಾಲ್ಕೈದು ಕ್ಷೇತ್ರಗಳಲ್ಲಿ ಮಂಡ್ಯವೂ ಒಂದಾಗಿದೆ. ಜೆಡಿಎಸ್ ಗೆ ಈ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿಯ ತಕರಾರು ಇಲ್ಲ. ಭದ್ರ ನೆಲೆ ಮತ್ತು ತಳಮಟ್ಟದ ಕಾರ್ಯಕರ್ತರಿಲ್ಲ. ಬಿಜೆಪಿಯಿಂದ ಒಬ್ಬನೇ ಒಬ್ಬ ಶಾಸಕನೂ ಇದುವರೆಗೂ ಆಯ್ಕೆಯಾಗಿಲ್ಲ. ಇಲ್ಲಿ ನೆಲೆಯೂರಲು ಉರಿಗೌಡ ನಂಜೇಗೌಡ ಎಂಬ ಕಟ್ಟುಕತೆಗಳು ಹನುಮಧ್ವಜ ಮೊದಲಾದ ಎಲ್ಲ ಪ್ರಯೋಗಗಳನ್ನು ಇಲ್ಲಿನ ಜನತೆ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹಾಗಾಗಿ ಈ ಕ್ಷೇತ್ರವನ್ನು ಬಿಟ್ಟುಕೊಡಲು ರಾಜ್ಯ ಮಟ್ಟದ ಬಿಜೆಪಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಯಾರ ಆಕ್ಷೇಪವೂ ಇಲ್ಲ.

2019 ರಲ್ಲಿ ಇಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇವರಿಗೆ ಬಿಜೆಪಿ ಪ್ರತ್ಯಕ್ಷ ಮತ್ತು ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಈ ಕ್ಷೇತ್ರ ಸಹಜವಾಗಿಯೇ ಜೆಡಿಎಸ್ ಪಾಲಾಗಿತ್ತು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸೋಲು ಕಂಡಿದ್ದರು. ಅಂಬರೀಷ್ ಸಾವು, ಜೆಡಿಎಸ್ ಮುಖಂಡರ ಕೀಳು ಮಟ್ಟದ ಮಾತುಗಳು, ಕಾಂಗ್ರೆಸ್ ಬೆಂಬಲ ಸುಮಲತಾ ಅವರನ್ನು ಗೆಲುವಿನ ದಡ ಮುಟ್ಟಿಸಲು ಸಹಕಾರಿಯಾಗಿದ್ದವು.

ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಜೆಡಿಎಸ್ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಆಗಲೇ ಹೇಳಿದಂತೆ ಜೆಡಿಎಸ್ ಯಾವುದೇ ಕಾರಣಕ್ಕೂ ಈ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ. ಜೆಡಿಎಸ್ ನಿಂದ ಯಾರು ಅಭ್ಯರ್ಥಿ ಎನ್ನುವುದಷ್ಟೇ ನಿರ್ಧಾರವಾಗಬೇಕಿದೆ.

ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಭವಿಷ್ಯ ಏನಾಗಲಿದೆ?

ಚಿತ್ರನಟಿಯೂ ಆಗಿರುವ ಸುಮಲತಾ ಅಂಬರೀಷ್ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದೆ. ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಪದೇ ಪದೆ ದಿಲ್ಲಿಗೆ ಎಡತಾಕುತ್ತಲೇ ಇದ್ದಾರೆ. ಈ ಕ್ಷೇತ್ರಕ್ಕೆ ಬದಲಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಒಂದು ವೇಳೆ ಚುನಾವಣಾ ರಾಜಕೀಯದಿಂದ ದೂರವುಳಿದರೆ ಕೇಂದ್ರ ಸರಕಾರದಲ್ಲಿ ಉನ್ನತ ಹುದ್ದೆ ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಆದರೆ ಸುಮಲತಾ ಅವರಿಗೆ ಮಂಡ್ಯ ಬಿಟ್ಟು ಬರಲು ಇಷ್ಟವಿದ್ದಂತೆ ಕಾಣುತ್ತಿಲ್ಲ.

ಜೊತೆಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಆಸೆಯನ್ನು ಇನ್ನೂ ಬಿಟ್ಟಿಲ್ಲ. ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿ ಬಿಜೆಪಿ ಟಿಕೆಟ್ ಸಿಗದೆ ಹೋದರೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ. ಒಂದು ಹಂತದಲ್ಲಿ ಸುಮಲತಾ ಕಾಂಗ್ರೆಸ್ ಸೇರುವ ಮನಸ್ಸು ಮಾಡಿದ್ದರಾದರೂ ಕೈಗೂಡಲಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಂಭೀರವಾಗಿ ಪರಿಗಣಿಸಲಿಲ್ಲ. ಮಂಡ್ಯ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರ. ಒಮ್ಮೆ ಆಕಸ್ಮಿಕವಾಗಿ ಗೆದ್ದ ಮಾತ್ರಕ್ಕೆ ಈ ಬಾರಿಯೂ ಸುಮಲತಾ ಗೆಲ್ಲುತ್ತಾರೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಇಲ್ಲಿ ಈಗಾಗಲೇ ಒಕ್ಕಲಿಗ ಅಭ್ಯರ್ಥಿಯನ್ನು ಅಯ್ಕೆ ಮಾಡಿದ್ದು ಅಂತಿಮ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಸಚಿವ ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮಿ, ಮಾಜಿ ಸಂಸದೆ ಚಿತ್ರನಟಿ ರಮ್ಯಾ ಅವರ ಹೆಸರುಗಳನ್ನು ತೇಲಿಬಿಡಲಾಯಿತಾದರೂ ಅವರು ಮನಸ್ಸು ಮಾಡಲಿಲ್ಲ. ಸ್ಟಾರ್ ಚಂದ್ರು ಎಂದೇ ಖ್ಯಾತಿ ಪಡೆದಿರುವ ಉದ್ಯಮಿ ವೆಂಕಟರಮಣೇಗೌಡ ಅವರು ಈಗಾಗಲೇ ಕ್ಷೇತ್ರ ಪರ್ಯಟನೆ ನಡೆಸಿದ್ದಾರೆ. ಇವರ ಸಹೋದರ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ.

ಒಟ್ಟಿನಲ್ಲಿ ಈ ಕ್ಷೇತ್ರ ಸುಮಲತಾ ಅವರ ಕೈ ತಪ್ಪುವುದು ಖಚಿತ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಇಲ್ಲವೇ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿಯಬೇಕು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಬೆಂಬಲ ಮಾತ್ರ ಸಿಗುವುದಿಲ್ಲ ಎನ್ನುವುದು ಖಚಿತ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಡಲು ಕೊನೆಯ ಕ್ಷಣದವರೆಗೂ ಹೋರಾಡುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಈಗ ಹರಿದಾಡುತ್ತಿರುವ ಅಂತೆಕಂತೆ ಸುದ್ದಿಗಳಿಗೆ ಮಹತ್ವ ನೀಡಬೇಕಿಲ್ಲ. ಏನೇ ಆದರೂ ನಾನು ಸ್ಪರ್ಧಿಸುವುದು ಖಚಿತ. ಬಿಜೆಪಿ ನನಗೆ ಮಂಡ್ಯದಿಂದ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point