ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಢೀರ್ ಬೆಳವಣಿಗೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇದು ರಾಜಕೀಯ ಪ್ರೇರಿತವೇ ಎಂಬ ಚರ್ಚೆಯೂ ರಾಜಕೀಯ ಪಡಶಾಲೆಯಲ್ಲಿ ನಡೆಯುತ್ತಿದೆ.
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಮುಖಂಡ ಬಿಎಸ್ ಯಡಿಯೂರಪ್ಪ ಅವರನ್ನು ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು ಮಂಗಳವಾರ ದಿಢೀರ್ ನೋಟಿಸ್ ನೀಡಿ, ಬುಧವಾರ ಹಾಜರಾಗುವಂತೆ ಸೂಚಿಸಿದ್ದರು. ಇನ್ನೊಂದೆಡೆ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡುವಂತೆ ಹೈಕೋರ್ಟ್‌ನಲ್ಲಿ ಸಂತ್ರಸ್ತೆ ಕುಟುಂಬ ಮನವಿ ಮಾಡಿದೆ.
ಏನಿದು ಪ್ರಕರಣ?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮಾರ್ಚ್ 14ರಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ನಮ್ಮ 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲಾಗಿತ್ತು. ಫೆಬ್ರವರಿ 2ರಂದು ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಇದರ ಪ್ರಕಾರ, ಮಾಜಿ ಮುಖ್ಯಮಂತ್ರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣವನ್ನು ಸಿಐಡಿ ತನಿಖೆ ಮಾಡಲು ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದರು. ಈ ರೀತಿ ಮಹಿಳೆ ಸುಮಾರು 53 ಗಣ್ಯರ ವಿರುದ್ಧ ದೂರು ನೀಡಿದ್ದರು. ಹೀಗಾಗಿ, ಇದು ಸುಳ್ಳು ದೂರು ಆಗಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ಈ ಪ್ರಕರಣವನ್ನು ಬಿಎಸ್ ಯಡಿಯೂರಪ್ಪ ಕಡೆಗಣಿಸಿದ್ದರು.
ಆರೋಪ ಮಾಡಿದ ಮಹಿಳೆ ಸಾವು
81 ವರ್ಷದ ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮಹಿಳೆ ಇತ್ತೀಚೆಗೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಈ ಮಹಿಳೆ ಬೆಂಗಳೂರಿನ ಹುಳಿಮಾವಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಲ್ಲಿಗೆ ಈ ಪ್ರಕರಣ ಕ್ಲೋಸ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಡಿಢೀರ್ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರಿಗೆ ಸಿಐಡಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಇದೀಗ ಇವರ ಬಂಧನಕ್ಕೆ ಸಿದ್ಧತೆ ನಡೆದಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ.
ಇದು ರಾಜಕೀಯ ಪ್ರೇರಿತವೇ?
ಚುನಾವಣೆಯ ಫಲಿತಾಂಶದ ನಂತರ ಈ ದಿಢೀರ್ ಬೆಳವಣಿಗೆ ನಡೆದಿದ್ದು, ಇದು ರಾಜಕೀಯ ಪ್ರೇರಿತವಾಗಿರಬಹುದು ಎಂಬ ವಾದ ಕೇಳಿಬರುತ್ತಿದೆ. ದೂರು ನೀಡಿದ ಇಷ್ಟು ಸಮಯದ ಬಳಿಕ ಯಾಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಮೂರು ತಿಂಗಳು ಏಕೆ ಸುಮ್ಮನಿದ್ದರು? ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಹಿನ್ನಡೆಯ ಬಳಿಕ ಈ ರೀತಿ ಯಾಕೆ ಮಾಡಲಾಗುತ್ತಿದೆ? ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ. ಸಂತ್ರಸ್ತೆಯ ತಾಯಿಯನ್ನು ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕೊಟ್ಟಿದ್ದರು. ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಯಡಿಯೂರಪ್ಪ ಜಾಮೀನು ಪಡೆಯುವ ಗೋಜಿಗೂ ಹೋಗಿಲ್ಲ. ಒಟ್ಟಾರೆ, ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಕೇಸ್ ಮತ್ತೆ ಸಂಚಲನ ಉಂಟು ಮಾಡುವ ಸೂಚನೆಯಿದೆ.