Price Rise: ವಿದ್ಯುತ್ ದರ ಏರಿಕೆ ಆಯಿತು, ಇನ್ನು ಅಕ್ಕಿ ಮತ್ತು ನೀರಿನ ದರ ಏರಿಕೆ; ಅಕ್ಕಿ ಮಾರುಕಟ್ಟೆ, ಬೆಂಗಳೂರು ಜಲಮಂಡಳಿ ಸುಳಿವು
Price Rise: ಕರ್ನಾಟಕದ ಜನರಿಗೆ ಇನ್ನು ಬೆಲೆ ಏರಿಕೆಯ ಬಿಸಿ ಅನುಭವಿಸುವ ಕಾಲ. ವಿದ್ಯುತ್ ದರ ಏರಿಕೆಯ ಬೆನ್ನಿಗೆ, ಅಕ್ಕಿ ದರ ಏರಿಕೆ, ನೀರಿನ ದರ ಪರಿಷ್ಕರಣೆ ಹೀಗೆ ಒಂದೊಂದಾಗಿ ದರ ಏರಿಕೆಯ ಸುಳಿವು ಸಿಗಲಾರಂಭಿಸಿದೆ. ಇದರ ವಿವರ ಇಲ್ಲಿದೆ.
ಕರ್ನಾಟಕ (Karnataka)ದ ಜನತೆ ವಿದ್ಯುತ್ ದರ ಏರಿಕೆ (Power Tariff Hike) ಯ ಬಿಸಿ ಅರಗಿಸಿಕೊಳ್ಳುವ ಮೊದಲೇ, ಅಕ್ಕಿ ದರ (Rice Price) ಕಿಲೋಗೆ ಮೂರರಿಂದ ನಾಲ್ಕು ರೂಪಾಯಿ ಏರಿಕೆಯ ಸುಳಿವು ಸಿಕ್ಕಿದೆ. ಅದೇ ರೀತಿ, ಬೆಂಗಳೂರಿಗರು ಕುಡಿಯುವ ನೀರಿನ ದರ (Drinking Water Price) ಏರಿಕೆಯ ವಿಚಾರವನ್ನು ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ / BWSSB) ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ.
ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘ (ಕೆಎಸ್‌ಆರ್‌ಎಂಎ) ರಾಜ್ಯದಲ್ಲಿ ಅಕ್ಕಿ ದರವನ್ನು ಕೆಜಿಗೆ ಮೂರರಿಂದ ನಾಲ್ಕು ರೂಪಾಯಿಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದೆ.
“ಬೆಲೆ ಹೆಚ್ಚಿಸುತ್ತಿರುವುದು ನಾವಲ್ಲ. ವಿದ್ಯುತ್ ದರ ಮತ್ತು ಭತ್ತದ ಬೆಲೆ ಏರಿಕೆಯಾಗಿದೆ. ಉತ್ತಮ ಭತ್ತದ ತಳಿಗಳಲ್ಲಿ ಪ್ರತಿ ಕೆಜಿಗೆ ಮೂರರಿಂದ ನಾಲ್ಕು ರೂಪಾಯಿಯಷ್ಟು ಹೆಚ್ಚಳವಾಗಲಿದೆ ಎಂದು ಕೆಎಸ್ಆರ್‌ಎಂಎ ಪ್ರಧಾನ ಕಾರ್ಯದರ್ಶಿ ಎಸ್ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿಗರಿಗೆ ನೀರಿನ ದರ ಏರಿಕೆಯ ಆತಂಕ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ಸರಬರಾಜು ಶುಲ್ಕವನ್ನು ಪರಿಷ್ಕರಿಸಲು ಯೋಜಿಸುತ್ತಿದೆ ಎಂಬ ಊಹಾಪೋಹಗಳ ಮಧ್ಯೆ, ಬಿಡಬ್ಲ್ಯುಎಸ್‌ಎಸ್‌ಬಿ ತಂಡವು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ನೀರು ಪೂರೈಕೆ ಶುಲ್ಕ ಪರಿಷ್ಕರಣೆ ವಿಚಾರ ಮನವರಿಕೆ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಳೆದ 10 ವರ್ಷಗಳಿಂದ ನಾವು ನೀರು ಸರಬರಾಜು ಶುಲ್ಕವನ್ನು ಪರಿಷ್ಕರಿಸಿಲ್ಲ ಮತ್ತು ಇನ್‌ಪುಟ್ ವೆಚ್ಚದಲ್ಲಿ ಹೆಚ್ಚಳವಾದ ದರವನ್ನು ಹೆಚ್ಚಿಸುವ ಸಮಯ ಬಂದಿದೆ. ಇದನ್ನು ನಾವು ಡಿಸಿಎಂಗೆ ತಿಳಿಸಿದ್ದೇವೆ. ಇನ್ನೂ ನಿರ್ಧಾರ ಕೈಗೊಂಡಿಲ್ಲ. ವಿಷಯ ಪರಿಗಣನೆಯಲ್ಲಿದೆ' ಎಂದು ಆ ಅಧಿಕಾರಿ ತಿಳಿಸಿದ್ಧಾರೆ.
ವಿದ್ಯುತ್ ದರ ಏರಿಕೆ ವಿರೋಧಿಸಿ ಕೈಗಾರಿಕೋದ್ಯಮಿ, ವ್ಯಾಪಾರಿಗಳ ಪ್ರತಿಭಟನೆ
ಇತ್ತೀಚಿನ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಸ್ಥರು ಕರ್ನಾಟಕದ ಹಲವು ಭಾಗಗಳಲ್ಲಿ ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದರು ಮತ್ತು ಗುರುವಾರ ಒಂದು ದಿನದ ಮುಷ್ಕರವನ್ನು ಆಚರಿಸಿದರು.
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಕೆಸಿಸಿಐ) ನೀಡಿದ ‘ಬಂದ್’ ಕರೆ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ವಸತಿ ಸಂಪರ್ಕಗಳಿಗಾಗಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆಗಾಗಿ ರಾಜ್ಯ ಸರ್ಕಾರವು ಈ ವಾರದ ಆರಂಭದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ವ್ಯಾಪಾರಿ, ಕೈಗಾರಿಕೋದ್ಯಮಿಗಳ ಪ್ರತಿಭಟನೆ ವ್ಯಕ್ತವಾಗಿದ್ದವು.
ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಕೊಪ್ಪಳ ಸೇರಿ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬ್ಯಾನರ್, ಭಿತ್ತಿಪತ್ರ, ಫಲಕಗಳನ್ನು ಹಿಡಿದು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಮೆರವಣಿಗೆ ನಡೆಸಿದರು. ಸರಕಾರ ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯ ವರ್ತಕರು ಮತ್ತು ಸಣ್ಣ-ಸಣ್ಣ ಕೈಗಾರಿಕೆಗಳ ಮಾಲೀಕರು ತಮ್ಮ ಬ್ಯಾನರ್ ಮತ್ತು ಫಲಕಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ವಿದ್ಯುತ್ ದರ ಏರಿಕೆ: ಕೆಸಿಸಿಐ ಮತ್ತು ಸರ್ಕಾರದ ಹೇಳಿಕೆ ಏನು?
ಕೆಸಿಸಿಐನ ಹಂಗಾಮಿ ಅಧ್ಯಕ್ಷ ಸಂದೀಪ್ ಬಿಡಸಾರಿಯಾ ಅವರು, ವಿದ್ಯುತ್ ದರದ ಹೆಚ್ಚಳವು 50 ರಿಂದ 70 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ಸಣ್ಣ ಉದ್ಯಮಗಳ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯಲ್ಲಿ ಪ್ರತಿಭಟನಾಕಾರರು, ಸುಂಕದ ತೀವ್ರ ಹೆಚ್ಚಳದಿಂದಾಗಿ ಅನೇಕ ಕೈಗಾರಿಕೆಗಳು ನೆರೆಯ ರಾಜ್ಯಕ್ಕೆ ತೆರಳಲು ಯೋಜಿಸುತ್ತಿವೆ ಎಂದು ಆರೋಪಿಸಿದರು.
ಆದರೆ ರಾಜ್ಯದ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಅವರು ರಾಜ್ಯ ಸರ್ಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ದರವನ್ನು ಹೆಚ್ಚಿಸಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಅವರು ಪ್ರತಿಪಾದಿಸಿದರು. ಆದರೆ, ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಚರ್ಚಿಸುವುದಾಗಿ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
“ದಯವಿಟ್ಟು ಸಹಕರಿಸುವಂತೆ ನಾನು ಕೈಗಾರಿಕೆಗಳು ಮತ್ತು ಇತರರಿಗೆ ಎಲ್ಲರಿಗೂ ಮನವಿ ಮಾಡುತ್ತೇನೆ. ಕೆಇಆರ್‌ಸಿ ಕಾಲಕಾಲಕ್ಕೆ ಬೆಲೆ ಪರಿಷ್ಕರಿಸುತ್ತದೆ. ಇದು ಒಂದು ವಿಧಾನವನ್ನು ಅನುಸರಿಸುತ್ತದೆ. ಅದನ್ನು ಸರಕಾರ ಮಾಡಿಲ್ಲ. ಇದೀಗ ಸುಂಕವನ್ನು ಪರಿಷ್ಕರಿಸಿದ್ದು, ಮುಂದೆಯೂ ಪರಿಷ್ಕರಿಸಲಾಗುವುದು ಎಂದು ಸಚಿವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿದ್ಯುತ್ ದರ ಏರಿಕೆಯನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.