ಬಡವರಿಗಾಗಿ ನೀಡಲಾಗುತ್ತಿರುವ ಪಡಿತರ ಆಹಾರ ಪದಾರ್ಥಗಳು ಉಳ್ಳವರ ಪಾಲು: ರಾಜ್ಯದಲ್ಲಿವೆ 14 ಲಕ್ಷ ನಕಲಿ ಬಿಪಿಎಲ್ ಕಾರ್ಡ್‌ಗಳು
ಇತ್ತೀಚಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ14ಲಕ್ಷ ಅಂದರೆ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ.12.4ರಷ್ಟು ಅನರ್ಹ ಎನ್ನುವುದು ಕಂಡು ಬಂದಿದೆ. ಸರ್ಕಾರ ಇಂತಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ. ಇಷ್ಟೂ ಸಂಖ್ಯೆಯ ಪಡಿತರ ಚೀಟಿಗಳು ರದ್ದಾದರೆ ಸರ್ಕಾರಕ್ಕೆ ಭಾರಿ ಉಳಿತಾಯವಾಗಲಿದೆ. (ವರದಿ:ಎಚ್.ಮಾರುತಿ,ಬೆಂಗಳೂರು)
ಬೆಂಗಳೂರು: ರಾಜ್ಯದ ಒಟ್ಟು ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರ ಪೈಕಿ ಸುಮಾರು 14 ಲಕ್ಷ ಪಡಿತರದಾರರು ಬಿಪಿಎಲ್ ಕಾರ್ಡ್‌ಗೆ ಅನರ್ಹರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇತ್ತೀಚಿನ ಸರ್ಕಾರದ ಅಂಕಿ ಅಂಶಗಳ ಪ್ರಕಾರ 14 ಲಕ್ಷ ಅಂದರೆ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ.12.4ರಷ್ಟು ಅನರ್ಹ ಎನ್ನುವುದು ಕಂಡು ಬಂದಿದೆ. ಸರ್ಕಾರ ಇಂತಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿದೆ. ಇಷ್ಟೂ ಸಂಖ್ಯೆಯ ಪಡಿತರ ಚೀಟಿಗಳು ರದ್ದಾದರೆ ಸರ್ಕಾರಕ್ಕೆ ಭಾರಿ ಉಳಿತಾಯವಾಗಲಿದೆ.
ಈ ಬಿಪಿಎಲ್ ಕಾರ್ಡ್‌ಗಳ ಪೈಕಿ 1.2 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಆದಾಯ ಹೊಂದಿರುವ 12.79 ಲಕ್ಷ ಕುಟುಂಬಗಳು, 24 ಸಾವಿರ ಸರ್ಕಾರಿ ನೌಕರರು ಸೇರಿದ್ದಾರೆ. ಜೊತೆಗೆ 1.37 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಕಳೆದ 6 ತಿಂಗಳಿಂದ ಪಡಿತರವನ್ನು ಪಡೆದುಕೊಂಡಿಲ್ಲ. ಇಷ್ಟೇ ಅಲ್ಲ, ತೆರಿಗೆ ಪಾವತಿಸುವವರು ಮತ್ತು ಜಿಎಸ್‌ಟಿ ಪಾವತಿ ಮಾಡುವವರೂ ಬಿಪಿಎಲ್ ಚೀಟಿಗಳನ್ನು ಪಡೆದುಕೊಂಡಿದ್ದರು. ಈಗಾಗಲೇ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಖಡಕ್ ಆದೇಶ ನೀಡಿದ್ದಾರೆ. ಬಡವರಿಗಾಗಿ ನೀಡಲಾಗುತ್ತಿರುವ ಪಡಿತರ ಆಹಾರ ಪದಾರ್ಥಗಳು ಉಳ್ಳವರ ಪಾಲಾಗಬಾರದು ಎನ್ನುವುದು ಅವರ
ಕಾಳಜಿಯಾಗಿದೆ.
ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯವೂ ಒಂದು. ಈ ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿಯ ಜೊತೆಗೆ ಉಳಿದ ಕೆಜಿ ಅಕ್ಕಿಗೆ ಬದಲಾಗಿ 170 ರೂ.ಗಳನ್ನು ಬ್ಯಾಕ್ ಖಾತೆಗೆ ವರ್ಗಾಯಿಸುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೀಡುತ್ತಿರುವ ಮಾಸಿಕ 2000 ರೂ.ಗಳನ್ನು ಕೂಡ ಬಿಪಿಎಲ್ ಕಾರ್ಡ್ ಆಧಾರದಲ್ಲಿಯೇ ನೀಡಲಾಗುತ್ತಿದೆ. ಈ ಎರಡೂ ಯೋಜನೆಗಳಿಗೆ ಸರ್ಕಾರ ವಾರ್ಷಿಕ 35,000 ದಿಂದ 40,000 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಐದು ಗ್ಯಾರಂಟಿಗಳಿಗೆ ಸರ್ಕಾರ ವಾರ್ಷಿಕ 53 ಸಾವಿರ ಕೋಟಿ ರೂ.ಗಳನ್ನು ಬಜೆಟ್ ನಲ್ಲಿಯೇ ಮೀಸಲಿಟ್ಟಿದೆ.
ಆರ್ಥಿಕ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 1.47 ಕೋಟಿ ಕುಟುಂಬಗಳಿದ್ದು, ಇದರಲ್ಲಿ 1.13 ಕೋಟಿ ಬಿಪಿಎಲ್ ಚೀಟಿ ಹೊಂದಿವೆ. ಅಂದರೆ ಒಟ್ಟು ಕುಟುಂಬಗಳ ಪೈಕಿ ಶೇ.85 ರಷ್ಟು ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಆದರೆ ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಶೇ.5.67ರಷ್ಟು ಕುಟುಂಬಗಳು ಮಾತ್ರ ಬಿಪಿಎಲ್ ವ್ಯಾಪ್ತಿಗೆ ಸೇರಬೇಕಾಗಿದೆ. ಬಿಪಿಎಲ್ ವ್ಯಾಪ್ತಿಗಿಂತ ಮೇಲಿದ್ದೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಎರಡು ರೀತಿಯ ಆದಾಯ ಪ್ರಮಾಣ ಪತ್ರಗಳನ್ನು ಹೊಂದಿವೆ. ಬಿಪಿಎಲ್ ಕಾರ್ಡ್‌ಗಾಗಿ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪ್ರಮಾಣ ಪತ್ರ ಹೊಂದಿದ್ದರೆ, ಸಾಲ ಪಡೆಯಲು ರೂ. 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರಮಾಣ ಪತ್ರ ಹೊಂದಿವೆ.
ಬಹುತೇಕ ಕುಟುಂಬಗಳು ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿವೆ. ಆದರೆ, ಈ ಕುಟುಂಬಗಳು ಪಡಿತರವನ್ನು ಪಡೆಯುವುದಿಲ್ಲ. ಕಳೆದ ಆರು ತಿಂಗಳಿಂದ ಸುಮಾರು 1.37 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಪಡಿತರವನ್ನೇ ಪಡೆದುಕೊಂಡಿಲ್ಲ. ಈ ಕುಟುಂಬಗಳ ಪಡಿತರವನ್ನು ಮತ್ತಾರೋ ಪಡೆಯುತ್ತಿದ್ದಾರೆ ಇಲ್ಲವೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಆಯುಷ್ಮಾನ್ ಭಾರತ್
ಯೋಜನೆಗಾಗಿ ಸರ್ಕಾರ 1000 ಕೋಟಿಯಿಂದ 1500 ಕೋಟಿ ರೂ.ವರಗೆ ವೆಚ್ಚ ಮಾಡುತ್ತಿದೆ. ಚುನಾವಣೆಗಳು ಹತ್ತಿರ ಬಂದಾಗ ಸರ್ಕಾರಗಳು ಮುಕ್ತವಾಗಿ ಬಿಪಿಎಲ್ ಕಾರ್ಡ್ ಹಂಚುತ್ತವೆ. ಚುನಾವಣೆ ಮುಗಿದ ನಂತರ ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಸೂಚಿಸುತ್ತವೆ. ಇದು ಅಧಿಕಾರಿಗಳ ಶ್ರಮವನ್ನು ವ್ಯರ್ಥ ಮಾಡುತ್ತಿದೆ.