ಕನ್ನಡ ಸುದ್ದಿ  /  Karnataka  /  Karnataka News Severe Drought In 194 Taluks Of Karnataka No Compensation From Central Government Cm Siddaramaiah Rst

ಕರ್ನಾಟಕದ 194 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ, ಪರಿಹಾರಕ್ಕೂ ಕೇಂದ್ರದಿಂದ ಅಸಹಕಾರ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಬರ ಪರಿಸ್ಥಿತಿ ಬಿಗಡಾಯಿಸಿದ್ದು, ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳೊಂದಿಗೆ ವಿಡಿಯೊ ಸಂವಾದ ನಡೆಸಿರುವ ಸಿಎಂ ಸಿದ್ಧರಾಮಯ್ಯ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ ಎಂದಿದ್ದಾರೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದಿದ್ದಾರೆ.

ಕರ್ನಾಟಕದ 194 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ, ಪರಿಹಾರಕ್ಕೂ ಕೇಂದ್ರದಿಂದ ಅಸಹಕಾರ: ಸಿಎಂ ಸಿದ್ದರಾಮಯ್ಯ
ಕರ್ನಾಟಕದ 194 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ, ಪರಿಹಾರಕ್ಕೂ ಕೇಂದ್ರದಿಂದ ಅಸಹಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೆಲವೆಡೆ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ʼರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ತೀವ್ರ ಬರಗಾಲವನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ, ಆದರೆ ರಾಜ್ಯಕ್ಕೆ ಕೇಂದ್ರದಿಂದ ಬಿಡಿಗಾಸು ಸಿಕ್ಕಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಿಲ್ಲಾಧಿಕಾರಿ ಹಾಗೂ ಸಿಇಓಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬರ ಎದುರಿಸಲು ರಾಜ್ಯದ ಸಿದ್ಧತೆ 

ʼಅನಿವಾರ್ಯವಾದಾಗ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಹೆಚ್ಚುವರಿಯಾಗಿ 140 ಕೋಟಿ ರೂ.ಗಳ ಜೊತೆಗೆ 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಇದು ಸರ್ಕಾರದಿಂದ ನೀಡುವ ಅನುದಾನವಾಗಿದೆʼ ಎಂದರು.

ʼಕರ್ನಾಟಕದಲ್ಲಿ ಈ ವರ್ಷ ಬರಗಾಲವಿದ್ದು, 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದು, 194 ತೀವ್ರ ಬರಗಾಲ ಪೀಡಿತವಾಗಿವೆ. ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆʼ ಎಂದಿದ್ದಾರೆ.

ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ ಕರೆದು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಈವರೆಗೆ 646 ಸಭೆಗಳನ್ನು ಇಲ್ಲಿಯವರೆಗೆ ನಡೆಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿದೆ ಎಂದಿದ್ದಾರೆ.

ಸಮಸ್ಯೆಯಿರುವ ಗ್ರಾಮ, ಜಿಲ್ಲೆಗಳಲ್ಲಿ ಅದಕ್ಕೆ ಮುಂಚಿತವಾಗಿ ಯೋಜನೆ ತಯಾರಿಸಬೇಕು. ಸದ್ಯ 98 ತಾಲ್ಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 204 ಟ್ಯಾಂಕರ್‌ಗಳಿಂದ 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದು ವಿವರಿಸಿದರು.

120 ಬಿಬಿಎಂಪಿ ಹಾಗೂ ಜಲಮಂಡಲಿಯಲ್ಲಿ 232 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಆಗುತ್ತಿದೆ. 96 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕೆಲವೆಡೆ ಸರ್ಕಾರದ ಕೊಳವೆಬಾವಿಗಳನ್ನು ಆಳ ಮಾಡುವುದು, ಫ್ಲ್ಯಾಶಿಂಗ್ ಮಾಡುವುದು, ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯುವುದು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಿದೆ ಎಂದರು.

ಬರ ಪರಿಹಾರ 

ಈವರೆಗೆ 33.25 ಲಕ್ಷ ರೈತರಿಗೆ 631 ಕೋಟಿ ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡಲಾಗಿದೆ. ಸರ್ಕಾರ 600 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ ಒದಗಿಸಿದೆ. ಇನ್ನೂ 800 ಕೋಟಿ ರೂ. ಪಾವತಿಯಾಗುವ ನಿರೀಕ್ಷೆ ಇದೆ.

ಮೇವಿಗೆ ಈವರೆಗೆ ತೊಂದರೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪಶುಸಂಗೋಪನೆ ಇಲಾಖೆಗೆ 40 ಕೋಟಿ ರೂಪಾಯಿ ಮೇವು ಬೆಳೆಯಲು ಒದಗಿಸಲಾಗಿದೆ.

ಗ್ಯಾರಂಟಿ ಯೋಜನೆಗಳಿಂದಾಗಿ ಪ್ರತಿ ಕುಟುಂಬಕ್ಕೆ 4- 5 ಸಾವಿರ ರೂ. 1 ಕೋಟಿ 20 ಲಕ್ಷ ಕುಟುಂಬಗಳಿಗೆ 4.50 ಕೋಟಿ ಜನರಿಗೆ ಇದರ ಲಾಭ ದೊರೆತಿದೆ. ಈ ಕಾರಣದಿಂದ ಜನ ಗುಳೇ ಹೋಗುತ್ತಿಲ್ಲ ಎಂದರು.

ಸುಮಾರು 7408 ಹಳ್ಳಿಗಳಲ್ಲಿ, 1115 ವಾರ್ಡುಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೂ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆ ಸಿದ್ಧವಾಗಿದೆ. ಖಾಸಗಿ ಕೊಳವೆಬಾವಿಗಳೊಂದಿಗೆ ಒಪ್ಪಂದವಾಗಿದೆ. ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿಲ್ಲ ನೆರವು

ಬರಗಾಲ ಬಂದರೆ 150 ದಿನಗಳಿಗೆ ಮಾನವ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಹೆಚ್ಚಿಸಿಲ್ಲ. ನರೇಗಾ ಯೋಜನೆಯಡಿ ಕೆಲಸದ ಹಣ ಪಾವತಿಯನ್ನೂ ಮಾಡಿಲ್ಲ ಎಂದರು. 18,172 ಕೋಟಿ ರೂ.ಗಳ ಪರಿಹಾರ ಕೋರಿದ್ದರೂ ಒಂದು ಬಿಡಿಗಾಸು ಸಹ ಕೇಂದ್ರ ಸರ್ಕಾರ ನೀಡಿಲ್ಲ.

ಬಿಜೆಪಿ ನೇತೃತ್ವದಲ್ಲಿಯೇ ನಿಯೋಗ ಹೋಗೋಣವೆಂದರೆ ಬಿಜೆಪಿ ನಾಯಕರ ಉತ್ತರವಿಲ್ಲ. ಕೇಂದ್ರ ಸರ್ಕಾರ ಜಪ್ಪಯ್ಯ ಅಂದರೂ ಒಂದು ರೂ.ನೀಡಿಲ್ಲ. ಪರಿಹಾರ ನೀಡಿಲ್ಲ ಎನ್ನಲೂ ನಮಗೆ ಸ್ವಾತಂತ್ರ್ಯವಿಲ್ಲವೇ? ಎಂದರು.

ಅಧಿಕಾರಿಗಳು ವಾಚಕರ ವಾಣಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿಯನ್ನು ಕಟ್ಟುನಿಟ್ಟಾಗಿ ಗಮನಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಸಹಾಯವಾಣಿ ಹಾಗೂ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ. ಹಣಕ್ಕೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಟ್ಯಾಂಕರ್ ಮಾಲೀಕರು ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೂ ನೋಂದಣಿ ಮಾಡಿಸಿಕೊಂಡು ದರಗಳನ್ನು ನಿಯಂತ್ರಣ ಮಾಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point