Yuvanidhi Guarantee: ಯುವನಿಧಿಗೆ ಕಾಯಬೇಕು ಆರು ತಿಂಗಳು,ಯೋಜನೆಗೆ ಬೇಕು ವಾರ್ಷಿಕ 1500 ಕೋಟಿ ರೂ.: ಬಜೆಟ್‌ನಲ್ಲಿ ನೆರವಿನ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Yuvanidhi Guarantee: ಯುವನಿಧಿಗೆ ಕಾಯಬೇಕು ಆರು ತಿಂಗಳು,ಯೋಜನೆಗೆ ಬೇಕು ವಾರ್ಷಿಕ 1500 ಕೋಟಿ ರೂ.: ಬಜೆಟ್‌ನಲ್ಲಿ ನೆರವಿನ ನಿರೀಕ್ಷೆ

Yuvanidhi Guarantee: ಯುವನಿಧಿಗೆ ಕಾಯಬೇಕು ಆರು ತಿಂಗಳು,ಯೋಜನೆಗೆ ಬೇಕು ವಾರ್ಷಿಕ 1500 ಕೋಟಿ ರೂ.: ಬಜೆಟ್‌ನಲ್ಲಿ ನೆರವಿನ ನಿರೀಕ್ಷೆ

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆ ವೇಳೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಯುವನಿಧಿಯೂ ಒಂದು. ಅಂದರೆ ಪದವಿ ಮುಗಿಸಿದವರಿಗೆ ಉದ್ಯೋಗ ಸಿಗುವವರೆಗೂ ಆರ್ಥಿಕವಾಗಿ ಬೆಂಬಲ ನೀಡುವ ಯೋಜನೆ ಇದು. ಯೋಜನೆ ಹೇಗಿದೆ, ಆರ್ಥಿಕ ಹೊಂದಾಣಿಕೆ ಹೇಗಿದೆ, ಯಾವಾಗ ಆರಂಭವಾಗಬಹುದು, ಬೇರೆ ಕಡೆ ಎಲ್ಲಿ ಜಾರಿಯಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರು ಘೋಷಿಸಿದ್ದ ಯುವನಿಧಿ ಯೋಜನೆ,
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕರು ಘೋಷಿಸಿದ್ದ ಯುವನಿಧಿ ಯೋಜನೆ,

ದೇಶದಲ್ಲೇ ಕರ್ನಾಟಕ ಬಿಟ್ಟರೆ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯನ್ನು ಬೇರಾವ ರಾಜ್ಯದಲ್ಲೂ ಪ್ರಕಟಿಸಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂತಹದೊಂದು ಯೋಜನೆಯನ್ನು ಘೋಷಿಸಿಲಾಗಿದ್ದು,ಜಾರಿಗೊಳಿಸುವ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಾಗಿದೆ.

ಈ ಬಾರಿಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಯುವನಿಧಿಯೂ ಒಂದು. ಪದವಿ ಮುಗಿಸಿದ ತಕ್ಷಣವೇ ಕೆಲಸ ಸಿಗದವರು ಉದ್ಯೋಗ ಹುಡುಕಾಟಕ್ಕೆ ಬೇಕಾದ ಖರ್ಚು ವೆಚ್ಚ ನಿಭಾಯಿಸಲು ಎರಡು ವರ್ಷದವರೆಗೆ ಪಡೆಯಬಹುದಾದ ನೆರವು ಇದೆ.

ಈ ವರ್ಷದಿಂದಲೇ ಯುವನಿಧಿ ಜಾರಿಗೊಳಿಸಲು ತೀರ್ಮಾನವಾಗಿದೆ. ಬಿಬಿಎಂ ಬಿಬಿಎ, ಬಿಎಸ್ಸಿ, ಬಿಕಾಂ., ಬಿಎ, ಎಂಎ. ಎಂಕಾಂ. ಎಂಎಸ್ಸಿ ಸೇರಿ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ. ಬಿಇ ಪದವೀಧರರೂ ಯುವನಿಧಿ ಭತ್ಯೆ ಪಡೆಯಲು ಅರ್ಹರು. ಇದಕ್ಕಾಗಿ ಅರ್ಜಿ ಹಾಕಬೇಕು. ಯುವನಿಧಿ ಪಡೆಯಲು ಯಾವುದೇ ಜಾತಿ, ಧರ್ಮ, ಲಿಂಗದ ತಾರತಮ್ಯವಿಲ್ಲ. ತೃತೀಯ ಲಿಂಗಿಗಳಿಗೂ ಅವಕಾಶವಿದೆ. ಇನ್ನೂ ಕೆಲವು ಕಡೆ ಪರೀಕ್ಷೆ ನಡೆಯುತ್ತಿರುವುದರಿಂದ ಪದವಿ ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಫಲಿತಾಂಶ ಪ್ರಕ್ರಿಯೆ ಮುಗಿದ ತಕ್ಷಣ ಯೋಜನೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವನಿಧಿ ಸ್ವರೂಪವನ್ನು ಬಿಡಿಸಿಟ್ಟಿದ್ದರು.

ಭತ್ಯೆ ಪಡೆಯುವುದು ಹೇಗೆ

ರಾಜ್ಯ ಸರ್ಕಾರ ಕಳೆದ ತಿಂಗಳು ಘೋಷಿಸಿರುವ ಯುವ ನಿಧಿ ಯೋಜನೆ ಭತ್ಯೆ ಪ್ರಕಾರ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ., ಡಿಪ್ಲೊಮಾ ಪಾಸ್ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ನೀಡಲಾಗುತ್ತದೆ. 2023 ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಯುವ ನಿಧಿ ಯೋಜನೆಗೆ ಅರ್ಜಿ ಹಾಕಲು ಅವಕಾಶ ಇರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ದಿನಾಂಕದಿಂದ ತಾವು ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಎರಡು ವರ್ಷ ಗರಿಷ್ಠ ಅವಧಿಯ ವರೆಗೆ ಮಾತ್ರ ಯುವ ನಿಧಿ ಭತ್ಯೆ ಪಡೆಯಬಹುದು.

ಕರ್ನಾಟಕದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಯುವ ನಿಧಿ ಯೋಜನೆ ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಧಿಕೃತವಾಗಿ ಪ್ರಕಟಣೆ ದಿನಾಂಕ ಘೋಷಣೆಯಾಗಬೇಕಿದೆ.

ಇನ್ನೂ ಆರು ತಿಂಗಳು ಬೇಕು

ಅಭ್ಯರ್ಥಿಗಳು ಅರ್ಜಿ ಹಾಕುವ ವೇಳೆ ತಾವು ಉತ್ತೀರ್ಣರಾದ ದಿನಾಂಕದಿಂದ 6 ತಿಂಗಳ ವರೆಗೆ ತಮ್ಮ ಅಧಿಕೃತ ಬ್ಯಾಂಕ್‌ ಖಾತೆಗಳ ವಹಿವಾಟು ಸ್ಟೇಟ್‌ಮೆಂಟ್‌ ಪ್ರತಿ ನೀಡುವುದೂ ಸೇರಿ ಹಲವು ಮಾನದಂಡಗಳನ್ನು ರೂಪಿಸಲಾಗುತ್ತಿದೆ.

ಪದವಿ ಮುಗಿಸಿ ಆರು ತಿಂಗಳ ನಂತರ ಉದ್ಯೋಗ ಸಿಗದೇ ಇದ್ದರೆ ಯುವನಿಧಿ ಅನ್ವಯವಾಗುವುದರಿಂದ 2024ರ ಜನವರಿಯಿಂದ ಯುವನಿಧಿ ಪಡೆಯುವ ಪ್ರಕ್ರಿಯೆ ಜಾರಿಗೆ ಬರಲಿದೆ. ಸಾಮಾನ್ಯವಾಗಿ ಪದವಿ ಪರೀಕ್ಷೆಗಳು ಜುಲೈ ಆಗಷ್ಟ್‌ನಲ್ಲಿ ಮುಗಿಯುವುದರಿಂದ ಪರೀಕ್ಷಾ ಫಲಿತಾಂಶ ಬಂದ ನಂತರ ಪ್ರಕ್ರಿಯೆ ಆರಂಭಿಸುವ ಯೋಚನೆಯಿದೆ. ಆಗಸ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಬಹುದು. ಮುಂದಿನ ವರ್ಷದ ಜನವರಿಯಿಂದ ಯುವನಿಧಿ ಅಧಿಕೃತವಾಗಿ ಜಾರಿಗೆ ಬರಬಹುದು.ಜತೆಗೆ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಅಥವಾ ಕಾರ್ಮಿಕ ಇಲ್ಲವೇ ಉದ್ಯೋಗ ಮತ್ತು ತರಬೇತಿ ಇಲಾಖೆಯಡಿ ಜಾರಿಗೊಳಿಸುತ್ತಾರೆಯೇ ಎನ್ನುವುದನ್ನೂ ಕಾಯಲಾಗುತ್ತಿದೆ ಎಂಬುದು ಅಧಿಕಾರಿಯೊಬ್ಬರ ವಿವರಣೆ.

ಆರ್ಥಿಕ ಲೆಕ್ಕಾಚಾರ

ರಾಜ್ಯ ಸರ್ಕಾರದ ಬಳಿ ಇರುವ ಸದ್ಯದ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಪದವಿ ಮುಗಿಸಿ ಬರುವವರ ಸಂಖ್ಯೆ 4 ಲಕ್ಷ. ಇದರಲ್ಲಿ ಎಷ್ಟು ಮಂದಿ ಉದ್ಯೋಗ ಪಡೆಯುತ್ತಾರೆ ಎನ್ನುವ ನಿಖರ ವಿವರವೂ ಸರ್ಕಾರದ ಬಳಿ ಇಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸುವ ಪ್ರಯತ್ನ ಈಗ ಶುರುವಾಗಿದೆ.

ಮೊದಲನೇ ವರ್ಷವೇ ಉದ್ಯೋಗ ಸಿಗಲಿಲ್ಲ ಅಂದರೂ 4 ಲಕ್ಷ ಮಂದಿಗೆ ತಲಾ 3000 ಭತ್ಯೆ ನೀಡಿದರೂ ತಿಂಗಳಿಗೆ 120 ಕೋಟಿ ರೂ. ಬೇಕಾಗಬಹುದು. ಅಂದರೆ ವರ್ಷಕ್ಕೆ ಇದು 1440 ಕೋಟಿ ರೂ. ವರ್ಷ ಡಿಪ್ಲೊಮಾ ಮುಗಿಸಿದ 10,000 ಮಂದಿ ಹೊರ ಬಂದು ಅವರಿಗೆ ತಲಾ 1500 ರೂ.ನಂತೆ ಭತ್ಯೆ ಕೊಟ್ಟರೂ ಪ್ರತಿ ತಿಂಗಳೂ ಒಂದೂವರೆ ಕೋಟಿ ರೂ. ಆಗಲಿದೆ. ವರ್ಷಕ್ಕೆ 15 ಕೋಟಿ ಯಾಗಬಹುದು. ಅಂದರೆ ಸುಮಾರು 1500 ಕೋಟಿ ರೂ. ಮೊದಲ ವರ್ಷಕ್ಕೆ ಬೇಕಾಗುತ್ತದೆ. ಎರಡನೇ ವರ್ಷಕ್ಕೆ ಇದು ದುಪ್ಪಟ್ಟು ಆಗುವುದರಿಂದ ನಂತರದ ವರ್ಷದಿಂದ 3000 ಕೋಟಿ ರೂ. ವಾರ್ಷಿಕ ಖರ್ಚು ಆಗಬಹುದು ಎನ್ನುವ ಲೆಕ್ಕಾಚಾರವಿದೆ.

ಉದ್ಯೋಗ ಪಡೆದವರಲ್ಲಿ ಕೆಲವರ ಸಂಖ್ಯೆ ಕಡಿಮೆಯಾದರೆ ಈ ಮೊತ್ತದಲ್ಲಿ ಇನ್ನೂ ಕಡಿಮೆಯಾಗಬಹುದು. ಇಷ್ಟು ಮೊತ್ತವನ್ನು ಯುವನಿಧಿಯಡಿ ಬಜೆಟ್‌ನಲ್ಲಿ ತೆಗೆದಿರಿಸಬೇಕಾಗುತ್ತದೆ. ಮುಂದಿನ ವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸಿದ್ದರಾಮಯ್ಯ ಎಷ್ಟು ಮೊತ್ತ ಮೀಸಲಿಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಬೇರೆ ಕಡೆ ಹೇಗಿದೆ

ಭಾರತದಲ್ಲಿ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ ಆಂಧ್ರಪ್ರದೇಶ ಸೇರಿದಂತೆ ಎಲ್ಲಿಯೂ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಗಳಿಲ್ಲ. ಕೇಂದ್ರ ಸರ್ಕಾರವೇ ಕೆಲ ವರ್ಷದ ಹಿಂದೆ ಭತ್ಯೆ ನೀಡುವ ಕುರಿತ ಯೋಚನೆ ಹೊಂದಿತ್ತಾದರೂ ಜಾರಿಗೆ ಬರಲಿಲ್ಲ. ಕರ್ನಾಟಕದಲ್ಲಿ ಇದು ಯಶಸ್ವಿಯಾಗಿ ಜಾರಿಯಾದರೆ ಇತರೆ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಬಹುದು.

ವಿದೇಶಗಳಲ್ಲಿ ಕೆಲವು ದೇಶಗಳಲ್ಲಿ ಭತ್ಯೆ ನೀಡುವ ಪದ್ದತಿಯಿದೆ. ಫಿನೆಲೆಂಡ್‌ ದೇಶದಲ್ಲಿ ಪ್ರತಿ ತಿಂಗಳು 560 ಯೂರೋವನ್ನು ಭತ್ಯೆ ರೂಪದಲ್ಲಿ ಪದವೀಧರರಿಗೆ ನೀಡಲಾಗುತ್ತಿದೆ. ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದ ವೇಳೆ ಸಾಮಾಜಿಕ ಭದ್ರತೆಯಡಿ ಇಂತಿಷ್ಟು ಮೊತ್ತ ತೆಗೆದಿಟ್ಟರೆ ಕೆಲಸ ಕಳೆದುಕೊಂಡಾಗ ಭತ್ಯೆ ರೂಪದಲ್ಲಿ ನೀಡುವ ವ್ಯವಸ್ಥೆ ಇದೆ.

ಯುವನಿಧಿ ಮೂಲಕ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಕ್ರಮ ಒಳ್ಳೆಯದೇ. ಕರ್ನಾಟಕ ಇದನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಅಮೆರಿಕಾ, ಯುರೋಪ್‌ನ ಬಹಳಷ್ಟು ದೇಶಗಳಲ್ಲಿ ಈ ರೀತಿ ನಿರುದ್ಯೋಗಿ ಭತ್ಯೆ ಮೂರು ವರ್ಷಕ್ಕೆ ನೀಡಲಾಗುತ್ತದೆ. ಅಲ್ಲಿ ಪ್ರತಿ ತಿಂಗಳು ನಿರುದ್ಯೋಗ ಪ್ರಮಾಣ, ಭತ್ಯೆ ಪಡೆದವರ ವಿವರವನ್ನು ಪ್ರಕಟಿಸಲಾಗುತ್ತದೆ. ನಮ್ಮಲ್ಲೂ ಯುವನಿಧಿ ಉಪಯೋಗ ಅರ್ಹರಿಗೆ ಸಿಗುವಂತೆ ಮಾಡಬೇಕು. ಉಪಯೋಗ ಪಡೆದವರ ತಿಂಗಳ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎನ್ನುತ್ತಾರೆ ಮೈಸೂರಿನ ಕ್ರೆಡಿಟ್‌ ಐ ಸಂಸ್ಥೆಯ ಡಾ.ಎಂ.ಪಿ.ವರ್ಷ.

ಹೊಸದಾಗಿ ಪದವಿ ಮುಗಿಸಿದವರಿಗೆ ಒಂದೆರಡು ವರ್ಷ ಕಾಯುವ ಚೈತನ್ಯ ಇರುತ್ತದೆ. ಆದರೆ ಎರಡು ಮೂರು ವರ್ಷದ ಹಿಂದೆ ಪದವಿ ಮುಗಿಸಿ ಇನ್ನೂ ಕೆಲಸ ಸಿಗದವರಿಗೆ ಭತ್ಯೆ ನೀಡುವಂತಾಗಬೇಕು ಎಂದು ಕೃಷ್ಣರಾಜನಗರದ ಉಪನ್ಯಾಸಕ ಕೆ.ಎಲ್‌.ರಮೇಶ್‌ ಸಲಹೆ ನೀಡುತ್ತಾರೆ.

Whats_app_banner