Karnataka Politics: ಐದು ದಿನಗಳ ಅಂತರದಲ್ಲಿ ಸಿಎಂ, ಡಿಸಿಎಂ ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘ, ಸರ್ಕಾರದ ಮುಂದೆ ಇಟ್ಟ ಬೇಡಿಕೆಗಳೇನು?
Karntaka Political News: ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಶೇ. 40ರಷ್ಟು ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (ಕೆಎಸ್‌ಸಿಎ) ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು: ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (ಕೆಎಸ್‌ಸಿಎ) ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ನಿಯೋಗ ಇದೇ ತಿಂಗಳ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು 6ರಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದೆ.
ಟ್ರೆಂಡಿಂಗ್ ಸುದ್ದಿ
ಇಬ್ಬರಿಗೂ ನೀಡಿರುವ ಮನವಿ ಪತ್ರ ಲಭ್ಯವಾಗಿದ್ದು, ಕಾಮಗಾರಿಗಳ ಬಾಕಿ ಮೊತ್ತ ಬಿಡುಗಡೆಗೆ ತಡೆಯೊಡ್ಡಬಾರದು, ಬಿಬಿಎಂಪಿಯಲ್ಲಿ ತಡೆ ಹಿಡಿದಿರುವ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಪಡಿಸಿದೆ. ಅಲ್ಲದೆ ಗುತ್ತಿಗೆದಾರರ ಸಮಸ್ಯೆ, ಬೇಡಿಕೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆಯುವಂತೆ ಗುತ್ತಿಗೆದಾರರು ಮನವಿ ಮಾಡಿಕೊಂಡಿದ್ದಾರೆ.
ಈ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದು ಡಿ.ಕೆಂಪಣ್ಣ ತಿಳಿಸಿದ್ದಾರೆ.
ಹಿಂದುಸ್ಥಾನ್ ಟೈಮ್ಸ್ ಕನ್ನಡದ ಜತೆ ಮಾತನಾಡಿದ ಡಿ.ಕೆಂಪಣ್ಣ, ಸಿಎಂ ಮತ್ತು ಡಿಸಿಎಂ ಜತೆ ಯಾವುದೇ ಮಹತ್ವದ ಚರ್ಚೆ ನಡೆಸಿಲ್ಲ. ಕೇವಲ ಶುಭ ಕೋರಲು ಮಾತ್ರ ಭೇಟಿ ಮಾಡಲಾಗಿತ್ತು. ಸರ್ಕಾರ ಸಮಯ ನೀಡಿದಾಗ ಚರ್ಚೆ ನಡೆಸುತ್ತೇವೆ ಎಂದರು.
ನಮ್ಮ ಸಮಸ್ಯೆಗಳು ಬೆಟ್ಟದಷ್ಟಿವೆ. ಮುಖ್ಯಮಂತ್ರಿಗಳು ಯಾವುದೇ ದಾಖಲೆ ಕೇಳಿದರೂ ಸಿದ್ಧರಾಗಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ಎರಡು ಮೂರು ತಿಂಗಳಲ್ಲಿ ಗುತ್ತಿಗೆದಾರರ ರಾಜ್ಯಮಟ್ಟದ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದೆ. ಅಲ್ಲಿ ಗುತ್ತಿಗೆದಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಕೆಂಪಣ್ಣ ತಿಳಿಸಿದರು.
ಏನಿದು ಶೇ. 40ರಷ್ಟು ಕಮಿಷನ್ ಆರೋಪ?
ಗುತ್ತಿಗೆದಾರರ ಸಂಘ, ಬಿ. ಎಸ್. ಯಡಿಯೂರಪ್ಪ ಅವರ ಅವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಗುತ್ತಿಗೆದಾರರ ಸಂಘವು ಪ್ರಧಾನಿಗೆ ಬರೆದಿದ್ದ ಪತ್ರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೇರಲು ಮೆಟ್ಟಿಲು ಮಾಡಿಕೊಂಡು ಯಶಸ್ವಿಯಾಯಿತು. ಈ ಅರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪೇ ಸಿಎಂ ಅಭಿಯಾನ ನಡೆಸಿತು. ಇದು ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡುಮಾಡಿತ್ತು.
ಜಲಸಂಪನ್ಮೂಲ, ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಕಮೀಷನ್ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ರಾಜ್ಯಾದ್ಯಂತ ಹೋರಾಟ ನಡೆಸಿತ್ತು.
ಈ ಆರೋಪದ ಆಧಾರದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದಲ್ಲಿ ಕೈಗೊಂಡಿದ್ದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬಾರದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು.
ಪತ್ರದಲ್ಲಿ ಏನಿದೆ?
ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳ ಕಾಮಗಾರಿಗಳನ್ನು ತಡೆಹಿಡಿಯುವಂತೆ ಸುತ್ತೋಲೆ ಹೊರಡಿಸಲಾಗಿರುತ್ತದೆ. ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಮೊತ್ತವನ್ನೂ ಬಿಡುಗಡೆ ಮಾಡದಂತೆಯೂ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದರಿಂದ ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗುವುದರ ಜತೆಗೆ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕಾಮಗಾರಿಗಳನ್ನು ನಿಲ್ಲಿಸಿದರೆ ಗುಣಮಟ್ಟ ಕಾಪಾಡಿಕೊಳ್ಳಲು ಅಸಾಧ್ಯವಾಗುತ್ತದೆ. ಅಲ್ಲದೇ ರಾಜ್ಯದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತದೆ. ಕಾನೂನುಬದ್ಧವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಲು ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಮೊತ್ತವನ್ನು ಬಿಡುಗಡೆ ಮಾಡಲು ಯಾವುದೇ ತಡೆಯೊಡ್ಡಬಾರದು. ಆದ್ದರಿಂದ ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಗುತ್ತಿಗೆದಾರರ ಸಂಘ ಕೋರಿದೆ.