Karnataka News: ವಿಮಾನ ನಿಲ್ದಾಣ ನಿರ್ವಹಣೆಗೆ ರಾಜ್ಯ ಸರ್ಕಾರದ ಒಲವು; ಕೇಂದ್ರದ ಜತೆಗೆ ಮಾತುಕತೆ ನಡೆಸುವುದಾಗಿ ಹೇಳಿದ ಸಚಿವ ಎಂ.ಬಿ.ಪಾಟೀಲ್
Karnataka News: ರಾಜ್ಯದಲ್ಲಿ ಮುಂದೆ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣಗಳ ವೈಮಾನಿಕ ಸೇವೆ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರ ಒಲವು ತೋರಿದೆ. ಈ ಸಂಬಂಧ ಕೇಂದ್ರದ ಜತೆಗೆ ಮಾತುಕತೆ ನಡೆಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಸುಳಿವು ನೀಡಿದ್ದಾರೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದ ಹೊಸ ವಿಮಾನ ನಿಲ್ದಾಣ (Airport) ಗಳಲ್ಲಿ ವೈಮಾನಿಕ ಸೇವೆ, ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಕರ್ನಾಟಕ ಸರ್ಕಾರ (Karnataka Govt) ಚಿಂತನೆ ನಡೆಸಿದೆ. ಅದು ಆದಾಯದ ಮೂಲವಾದ ಕಾರಣ ಈ ಬಗ್ಗೆ ರಾಜ್ಯ ಸರ್ಕಾರ (State Govt) ಹೆಚ್ಚಿನ ಒಲವು ವ್ಯಕ್ತಪಡಿಸಿದೆ. ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ (Minister MB Patil) ಅವರು ಮಂಗಳವಾರ ಈ ಕುರಿತು ಸುಳಿವು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳ ವೈಮಾನಿಕ ಸೇವೆ ಮತ್ತು ನಿರ್ವಹಣೆಯನ್ನು ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ತೆಗೆದುಕೊಳ್ಳುವ ಇರಾದೆ ಇದೆ. ಈ ನಿಗವಮು ಭಾರೀ ಕೈಗಾರಿಕಾ ಇಲಾಖೆ ಅಧೀನ ಇರುವಂಥದ್ದು. ಈ ಬಗ್ಗೆ ಗಂಭೀರ ಆಲೋಚನೆ ಇದ್ದು, ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧ
ರಾಜ್ಯದಲ್ಲಿ ಸದ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಿದೆ. ಇದರ ನಿರ್ವಹಣೆಗೆ ಕೇಂದ್ರ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಅದೇ ರೀತಿ ನಿರ್ಮಾಣ ಹಂತದಲ್ಲಿ ಇರುವ ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣಗಳನ್ನೂ ಆಪರೇಟ್ ಮಾಡುವ ಉದ್ದೇಶ ಇದೆ. ರಾಜ್ಯದಲ್ಲಿ ಇನ್ನು ಮುಂದಿನ ದಿನಗಳಲ್ಲಿ ನಿರ್ಮಿಸುವ ಎಲ್ಲ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುವುದು ಒಳ್ಳೆಯದು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಲಾಭವಾಗಲಿದೆ. ಸರ್ಕಾರಕ್ಕೆ ಆದಾಯದ ಮೂಲವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿವರಿಸಿದರು.
ಕಲಬುರಗಿಯಲ್ಲಿ ರಾಜ್ಯ ಸರಕಾರವು 1,000 ಕೋಟಿ ರೂ. ಖರ್ಚು ಮಾಡಿ ವಿಮಾನ ನಿಲ್ದಾಣ ನಿರ್ಮಿಸಿದೆ. ಆದರೆ, ಅದನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಬಿಟ್ಟು ಕೊಟ್ಟಿದ್ದೇವೆ. ಇದರ ಬದಲು ನಾವೇ ಅಂತಹ ವಿಮಾನ ನಿಲ್ದಾಣಗಳ ವೈಮಾನಿಕ ಸೇವೆ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರೆ ಅದರಿಂದ ಪ್ರಯೋಜನವಾಗಲಿದೆ. ಇಂತಹ ಚಿಂತನೆ ಈಗ ದೇಶದ ಹಲವು ರಾಜ್ಯಗಳಲ್ಲಿ ಮುನ್ನೆಲೆಗೆ ಬಂದಿದೆ. ಇದರಿಂದ ಸ್ಥಳೀಯವಾಗಿ ಪ್ರಾದೇಶಿಕ ಅರ್ಥವ್ಯವಸ್ಥೆಗೆ ಹೆಚ್ಚು ಲಾಭವಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಮಾದರಿ ಅನುಸರಣೆಗೆ ಒಲವು
ಮಹಾರಾಷ್ಟ್ರದ ಶಿರಡಿಯಲ್ಲಿರುವ ವಿಮಾನ ನಿಲ್ದಾಣವನ್ನು ಅಲ್ಲಿನ ಸರಕಾರವೇ ನಿರ್ವಹಿಸುತ್ತಿದೆ. ಹಾಗೆಯೇ, 2-3 ರಾಜ್ಯಗಳು ಈ ಮಾದರಿಯನ್ನು ಅನುಸರಿಸುತ್ತಿವೆ. ರಾಜ್ಯದಲ್ಲಿ ಕೊನೆಪಕ್ಷ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸಿದರೆ ಆಗುವ ಲಾಭ-ನಷ್ಟಗಳನ್ನು ಕುರಿತು ಚರ್ಚಿಸಲಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.
ಗಮನಿಸಬಹುದಾದ ಇತರ ಸುದ್ದಿಗಳು
ಹೊಸ ಪಿಂಚಣಿ ಯೋಜನೆ ರದ್ದು ತೀರ್ಮಾನ ಶೀಘ್ರ
ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸಬೇಕು ಎಂಬ ನೌಕರರ ಆಗ್ರಹಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಮಂಗಳವಾರ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಿಯೋಗದ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು. ಈ ಕುರಿತ ವಿವರ ವರದಿ ಇಲ್ಲಿದೆ.