Karnataka Next CM: ಸಿಎಂ ಆಯ್ಕೆ ನಿರ್ಧಾರದ ಅಧಿಕಾರ ಹೈಕಮಾಂಡ್‌ಗೆ ಬಿಟ್ಟುಕೊಟ್ಟ ಶಾಸಕರು; ಗ್ಯಾರಂಟಿ ಯೋಜನೆ ಜಾರಿಗೆ ನಿರ್ಣಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Next Cm: ಸಿಎಂ ಆಯ್ಕೆ ನಿರ್ಧಾರದ ಅಧಿಕಾರ ಹೈಕಮಾಂಡ್‌ಗೆ ಬಿಟ್ಟುಕೊಟ್ಟ ಶಾಸಕರು; ಗ್ಯಾರಂಟಿ ಯೋಜನೆ ಜಾರಿಗೆ ನಿರ್ಣಯ

Karnataka Next CM: ಸಿಎಂ ಆಯ್ಕೆ ನಿರ್ಧಾರದ ಅಧಿಕಾರ ಹೈಕಮಾಂಡ್‌ಗೆ ಬಿಟ್ಟುಕೊಟ್ಟ ಶಾಸಕರು; ಗ್ಯಾರಂಟಿ ಯೋಜನೆ ಜಾರಿಗೆ ನಿರ್ಣಯ

Karnataka Next CM: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹಾಗೂ ಸಿಎಂ ಆಯ್ಕೆ ನಿರ್ಧಾರವನ್ನ ಕಾಂಗ್ರೆಸ್​ ನೂತನ ಶಾಸಕರು ಹೈಕಮಾಂಡ್‌ಗೆ ಬಿಟ್ಟುಕೊಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಿದ್ದಾರೆ.

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ
ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಕುರಿತು ಇಂದು ( ಮೇ 14, ಭಾನುವಾರ) ಕಾಂಗ್ರೆಸ್​ ಪಕ್ಷ ನಡೆಸಿದ್ದ ಶಾಸಕಾಂಗ ಸಭೆ (CLP meeting) ಅಂತ್ಯಗೊಂಡಿದೆ. ಸಿಎಂ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹಾಗೂ ಸಿಎಂ ಆಯ್ಕೆ (Karnataka CM) ನಿರ್ಧಾರವನ್ನ ಕಾಂಗ್ರೆಸ್​ ನೂತನ ಶಾಸಕರು ಹೈಕಮಾಂಡ್‌ಗೆ ಬಿಟ್ಟುಕೊಡಲು ಒಮ್ಮತದಿಂದ ನಿರ್ಧರಿಸಿದ್ದಾರೆ.

ಸಿಎಲ್‌ಪಿ ಸಭೆಯಲ್ಲಿ ಎಐಸಿಸಿ ನಿಯೋಜಿಸಿದ ಕೇಂದ್ರ ವೀಕ್ಷಕರಾದ ಮ‌ಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಾಬರಿಯಾ ಅವರು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜೀತೇಂದ್ರ ಸಿಂಗ್, ದೀಪಕ್ ಬಾಬರಿಯಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ನಾಯಕರಾದ ಬಿ ಕೆ ಹರಿಪ್ರಸಾದ್, ಎಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ಸಲೀಮ್ ಮೊಹಮ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗರೆಡ್ಡಿ, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

ಶಾಸಕಾಂಗ ಪಕ್ಷದಲ್ಲಿ ಕೈಗೊಂಡ ಇತರ ನಿರ್ಣಯಗಳು ಹೀಗಿವೆ

  • ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ.
  • ಕನ್ನಡ ನಾಡಿನ ಜನರಿಗೆ ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ನೀಡಲು ಪರಿಶ್ರಮ ಹಾಗೂ ಒಗ್ಗಟ್ಟಿನ ಮೂಲಕ ಕೆಲಸ ಮಾಡುವ ನಿರ್ಣಯ
  • ರಾಜ್ಯದ 6.5 ಕೋಟಿ ಕನ್ನಡಿಗರ ಹಿತ ರಕ್ಷಣೆ ಹಾಗೂ ಸೇವೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆ ನಮ್ಮ ಸರ್ಕಾರದ ನೀತಿಗಳ ಮೂಲ ಉದ್ದೇಶವಾಗಿರಲಿದೆ.
  • ಜನರ ಕಲ್ಯಾಣಕ್ಕಾಗಿ ಸರ್ಕಾರವು ಮುಂದಿನ ದಿನಗಳಲ್ಲಿ ರೂಪಿಸುವ ಪ್ರತಿಯೊಂದು ನೀತಿಗಳು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಕುಟುಂಬದ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಳ್ಳಲು ನಿರ್ಣಯಿಸಲಾಗಿದೆ.
  • ಕನ್ನಡ ನಾಡಿನ ಸಂಸ್ಕೃತಿ, ಭಾಷೆ ಹಾಗೂ ಭವ್ಯ ಪರಂಪರೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
  • ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮರು ಸ್ಥಾಪಿಸಲು ಹಾಗೂ ಭಾರತದಲ್ಲಿ ಕರ್ನಾಟಕ ರಾಜ್ಯ ಶಾಂತಿ, ಪ್ರಗತಿ ಹಾಗೂ ಸೌಹಾರ್ದತೆ ವಿಚಾರಗಳಲ್ಲಿ ಅಗ್ರ ರಾಜ್ಯವನ್ನಾಗಿ ಮಾಡುವ ಗುರಿ

ವರದಿ: ಎಚ್​ ಮಾರುತಿ

Whats_app_banner