ಕನ್ನಡ ಸುದ್ದಿ  /  Karnataka  /  Karnataka Operation Congress Bjp Leader St Somashekhar And Many Ready To Join Congress Political News In Kannada Arc

Karnataka Politics: ಬಿರುಸುಗೊಂಡ ಆಪರೇಷನ್ ಹಸ್ತ; ಘರ್ ವಾಪ್ಸಿಯತ್ತ ಮುಖ ಮಾಡಿದ ಬಿಜೆಪಿ ಶಾಸಕರು

ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದು, ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಬಿರುಸುಗೊಂಡ ಆಪರೇಷನ್ ಹಸ್ತ; ಘರ್ ವಾಪ್ಸಿಯತ್ತ ಮುಖ ಮಾಡಿದ ಬಿಜೆಪಿ ಶಾಸಕರು
ಬಿರುಸುಗೊಂಡ ಆಪರೇಷನ್ ಹಸ್ತ; ಘರ್ ವಾಪ್ಸಿಯತ್ತ ಮುಖ ಮಾಡಿದ ಬಿಜೆಪಿ ಶಾಸಕರು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಿವರ್ಸ್ ಆಪರೇಷನ್, ಬಿರುಸುಗೊಂಡ ಆಪರೇಷನ್ ಹಸ್ತ, ಘರ್ ವಾಪ್ಸಿಯತ್ತ ಮುಖ ಮಾಡಿದ ಬಿಜೆಪಿ ಶಾಸಕರು, ನೆಲೆ ಕಂಡುಕೊಳ್ಳಲು ಕಾಂಗ್ರೆಸ್‍ನತ್ತ ಮುಖ ಮಾಡಿದ ಬಿಜೆಪಿ ಮುಖಂಡರು. ನಾಯಕನಿಲ್ಲದೆ ಸೊರಗಿದ ಕಮಲ ಪಾಳಯ.

ಟ್ರೆಂಡಿಂಗ್​ ಸುದ್ದಿ

ತಾನು ಆರಂಭಿಸಿದ ‘ಆಪರೇಷನ್ ಕಮಲ’ ಇಂದು ‘ಆಪರೇಷನ್ ಹಸ್ತ’ವಾಗಿ ಮಾರ್ಪಟ್ಟು ತನ್ನನ್ನೇ ಆಪೋಷನ ತೆಗೆದುಕೊಳ್ಳುವ ಭೀತಿ ಬಿಜೆಪಿಯನ್ನು ಕಾಡಲು ಆರಂಭಿಸಿದೆ. ರಾಜ್ಯದ ಉದ್ದಗಲಕ್ಕೂ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದು, ಒಬ್ಬೊಬ್ಬರಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಆಪರೇಷನ್ ಹಸ್ತದ ಉಸ್ತುವಾರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿರುವುದು ಮತ್ತೊಂದು ವಿಶೇಷ. ಅವರು ಪ್ರತಿನಿಧಿಸುವ ಬೆಂಗಳೂರು ಸೇರಿದಂತೆ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಬ್ಬೊಬ್ಬರನ್ನಾಗಿ ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ. ಇವರಲ್ಲಿ ಬಿಜೆಪಿ ಮಾತ್ರವಲ್ಲದೆ ಜೆಡಿಎಸ್ ಮುಖಂಡರೂ ಸೇರಿದ್ದಾರೆ.

ಯಶವಂತಪುರದ ಬಿಜೆಪಿ ಶಾಸಕ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಭಾನುವಾರ ಕ್ಷೇತ್ರದ ಅಭಿವೃದ್ಧಿ ನೆಪದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸುಮಾರು ಹೊತ್ತು ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳೂ ಖಚಿಪಡಿಸಿವೆ. ಸೋಮಶೇಖರ್ ಅವರೇ ಈ ಭೇಟಿಯ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಚಿತ್ತ ಕಾಂಗ್ರೆಸ್‍ನತ್ತ ಎನ್ನುವುದರ ಸುಳಿವು ನೀಡಿದ್ದಾರೆ.

ಮೇಲಾಗಿ ಯಶವಂತಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಹಾಡಿಹೊಗಳಿದ್ದಾರೆ. ಈಗಾಗಲೇ ಅವರ ಬೆಂಬಲಿಗ ಮಾಜಿ ಪಾಲಿಕೆ ಸದಸ್ಯರು ಶಿವಕುಮಾರ್ ನೇತೃತ್ವದಲ್ಲಿ ಹಸ್ತದ ಪಾಳಯವನ್ನು ಸೇರಿದ್ದಾರೆ. ಸೋಮಶೇಖರ್ ಈ ಹಿಂದೆ ಆಪರೇಷನ್ ಕಮಲದಡಿಯಲ್ಲಿ ಬಿಜೆಪಿ ಸೇರಿ ಸಹಕಾರ ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬ ಊಹಾಪೋಹವಿದೆ.

ಈ ಕ್ಷೇತ್ರದ ಪಕ್ಕದಲ್ಲೇ ಇರುವ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರೂ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ ಸಚಿವ ಹುದ್ದೆ ಅನುಭವಿಸಿದವರು. ಈ ಕ್ಷೇತ್ರದ ಮಾಜಿ ಪಾಲಿಕೆ ಸದಸ್ಯರು ಚುನಾವಣೆಗೂ ಮುನ್ನ ಮೂವರು ಮತ್ತು ಚುನಾವಣೆ ನಂತರ ಮೂವರು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿ ಅವರು ಈಗ ಏಕಾಂಗಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಪರಮಾಪ್ತರಾದ ಮುನಿರತ್ನ ಅವರಿಗೆ ಕಾಂಗ್ರೆಸ್ ಸೇರುವ ಇಚ್ಛೆಯಿದ್ದರೂ ಡಿಕೆಎಸ್ ಸಹೋದರರರು ಅಡ್ಡಗಾಲಾಗಿದ್ದಾರೆ. ಬದಲಾಗಿ ಕ್ಷೇತ್ರದಲ್ಲಿ ನಡೆಸಿರುವ ಅವ್ಯವಹಾರಗಳ ತನಿಖೆ ನಡೆಸುವ ಮೂಲಕ ಅವರನ್ನು ನಿಷ್ಕ್ರಿಯಗೊಳಿಸುವ ತಂತ್ರ ಹೆಣೆದಿದ್ದಾರೆ.

ಸಿದ್ದರಾಮಯ್ಯ ಅವರ ನಿಕಟವರ್ತಿಗಳಾಗಿರುವ ಮಹಾಲಕ್ಷ್ಮೀಪುರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಮತ್ತು ಕೆ.ಆರ್.ಪುರ ಕ್ಷೇತ್ರದ ಭೈರತಿ ಬಸವರಾಜ್ ಅವರೂ ಮಾನಸಿಕವಾಗಿ ಕಾಂಗ್ರೆಸ್ ಸೇರಲು ಮಾನಸಿಕವಾಗಿ ಸಿದ್ದರಾಗಿದ್ದು ಲೋಕಸಭಾ ಚುನಾವಣೆ ವೇಳೆಗೆ ಮಹತ್ತರ ಬೆಳವಣ ಗೆಗಳು ಸಂಭವಿಸಲಿವೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕುಮಾರಸ್ವಾಮಿ ಅವರ ಬೆಂಬಲಿಗ ಅಶ್ವಥ್ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದು ಅವರ ಸೇರ್ಪಡೆ ಖಚಿತವಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ನಾರಾಯಣಗೌಡ ಅವರೂ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಕಾಂಗ್ರೆಸ್ ಸೇರಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಮಾಜಿ ಸಚಿವ ಡಿ.ಸುಧಾಕರ್ ಅವರೂ ಕಾಂಗ್ರೆಸ್ ಸೇರುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲಿ ಅವರು ಕಾಣ ಸಿಕೊಳ್ಳುತ್ತಿಲ್ಲ. ಯಲ್ಲಾಪುರ ಕ್ಷೇತ್ರದ ಶಾಸಕ ಮಾಜಿ ಸಚಿವ ಶಿವರಾಂ ಹೆಬ್ಬಾರ್ ಅವರೂ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತಾಗಿದ್ದು ಬಿಜೆಪಿ ಮುಖಂಡರೇ ನನ್ನ ಸೋಲಿಗೆ ಪ್ರಯತ್ನ ನಡೆಸಿದ್ದರು ಎಂದು ಬಹಿರಂಗವಾಗಿಯೇ ಹೇಳೀಕೆ ನೀಡುವ ಮೂಲಕ ಮುಜುಗರವನ್ನುಂಟು ಮಾಡಿದ್ದಾರೆ. ಚುನಾವಣೆಗೆ ಮುನ್ನ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿ ಶಿವಮೊಗ್ಗ ಕ್ಷೇತ್ರದಿಂದ ಸೋಲು ಕಂಡಿದ್ದ ಅಯನೂರು ಮಂಜುನಾಥ್ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ.

ಅತ್ತ ಉತ್ತರ ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹುನಗುಂದ ಕ್ಷೇತ್ರದ ಮಾಜಿ ಶಾಸಕ ಯಡಿಯೂರಪ್ಪ ಅವರ ಬೀಗರಾದ ಎಸ್.ಐ. ಚಿಕ್ಕನಗೌಡರ ಅವರೂ ಕಾಂಗ್ರೆಸ್ ಸೇರಿಲಿದ್ದು ಜಗದೀಶ ಶೆಟ್ಟರ್ ಇವರ ಮನವೊಲಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೂ ಕಾಂಗ್ರಸ್ ಸೇರುವುದು ಖಚಿತವಾಗಿದ್ದು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಎಂಟಿಬಿ ನಾಗರಾಜ್ ಮತ್ತು ಸಿ.ಎಸ್.ಪುಟ್ಟರಾಜು ಅವರೂ ಕಂಗ್ರೆಸ್ ಸೇರುವ ಸಂಭವವಿದೆ. ಪುಟ್ಟರಾಜು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲೂಬಹುದು.

ಇನ್ನು ಜೆಡಿಎಸ್ ನಲ್ಲಿ ಇರುವುದು 19 ಶಾಸಕರು. ಅವರಲ್ಲಿ ಮೂರನೇ ಎರಡರಷ್ಟು ಶಾಸಕರು ಬೇರೊಂದು ಪಕ್ಷದಲ್ಲಿ ವಿಲೀನವಾದರೆ ಅಥವಾ ಪ್ರತ್ಯೇಕ ಗುಂಪು ರಚಿಸಿಕೊಂಡರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ. ಈ ಭಯ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಒಂದು ವೇಳೆ ಇಂತಹುದೊಂದು ವಿದ್ಯಾಮಾನ ಸಂಭವಿಸಿದರೂ ಅಚ್ಚರಿಯೇನಿಲ್ಲ.

ವ್ಯರ್ಥ ಪ್ರಲಾಪ

ಹೊಸ ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಾದರೂ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಯಾರಿಗೆ ಯಾರು ನಾಯಕರು ಎಂದು ಅರ್ಥವೇ ಆಗುತ್ತಿಲ್ಲ. ಒಬ್ಬ ನಾಯಕನೂ ಇಲ್ಲ. ಸಾಮೂಹಿಕ ನಾಯಕತ್ವವೂ ಇಲ್ಲದ ಘಟಕವಾಗಿದೆ. ನಳೀನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಇವರ ಮಾತುಗಳನ್ನು ಕೇಳಿಕೊಂಡು ಯಾರೂ ಪಕ್ಷದಲ್ಲಿ ಉಳಿಯುವುದಿಲ್ಲ. ಹೋಗುವವರು ಹೋಗಿಯೇ ಹೋಗುತ್ತಾರೆ. ಯಡಿಯೂರಪ್ಪ ಅವರ ಶಕ್ತಿ ಮತ್ತು ಸಾಮಥ್ರ್ಯ ಇವರಲ್ಲಿ ಕಾಣುವುದು ಸಾಧ್ಯವೇ ಇಲ್ಲ. ಹಳೆಯ ಗಂಡನ ಪಾದವೇ ಗತಿ ಎಮದು ಬಿಜೆಪಿ ಮತ್ತೆ ಯಡಿಯೂರಪ್ಪ ಅವರಿಗೆ ಶರಣಾಗಿದ್ದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ. ಅಧಿಕಾರದಿಂದ ಇಳಿಸಿದ್ದನ್ನು ಯಡಿಯೂರಪ್ಪ ಅಷ್ಟೊಂದು ಸುಲಭವಾಗಿ ಮರೆಯುವವರಲ್ಲ.

(ವರದಿ: ಎಚ್. ಮಾರುತಿ)