ಕರ್ನಾಟಕವೋ ಪಾಕಿಸ್ತಾನವೋ: ಡೆಲಿವರಿ ಏಜೆಂಟ್‌ಗೆ ಕನ್ನಡ ಗೊತ್ತಿಲ್ಲ ಎಂದು ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಬೆಂಗಳೂರು ಮಹಿಳೆ
Bengaluru Swiggy News: ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ? ಕನ್ನಡ ಬಾರದ ಡೆಲಿವರಿ ಬಾಯ್ ನಿಯೋಜಿಸಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಹಿಳಾ ಟೆಕ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ-ಎಚ್.ಮಾರುತಿ)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷಿಕರು ಮತ್ತು ಕನ್ನಡೇತರರ ನಡುವೆ ಘರ್ಷಣೆ ಹೊಸದೇನಲ್ಲ. ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕೆಂಪೇಗೌಡ ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಅಪಾಯ ಕುರಿತು ಕನ್ನಡ ಹೋರಾಟಗಾರರು ಪದೆ ಪದೇ ಎಚ್ಚರಿಸುತ್ತಲೇ ಬಂದಿದ್ದಾರೆ. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೊರ ರಾಜ್ಯಗಳಿಂದ ಇಲ್ಲಿಗೆ ಆಗಮಿಸುವವರು ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕೆಂದು ಆಗ್ರಹಪಡಿಸುತ್ತಾ ಬಂದಿದ್ದರೂ ಅಷ್ಟಾಗಿ ಫಲಶ್ರುತಿ ಕಂಡು ಬಂದಿಲ್ಲ. ಇತ್ತೀಚೆಗೆ ಮಹಿಳಾ ಟೆಕ್ಕಿಯೊಬ್ಬರು ಆಹಾರ ಪೂರೈಕೆ ಮಾಡುವ ಸ್ವಿಗ್ಗಿ ವಿರುದ್ಧ ಎಕ್ಸ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಕನ್ನಡಿಗರನ್ನು ಕೆಲಸಕ್ಕೆ ನಿಯೋಜಿಸದೆ ಉತ್ತರ ಭಾರತದ ಹಿಂದಿ ಭಾಷಿಕರನ್ನು ನಿಯೋಜಿಸುತ್ತಿದೆ. ಸ್ಥಳೀಯರು ಅರ್ಥಾತ್ ಕರ್ನಾಟಕ ಮೂಲದವರು ಬೇರೆ ರಾಜ್ಯಗಳ ಭಾಷೆಯನ್ನು ಕಲಿಯಬೇಕೇ ಎಂದು ಕಿಡಿ ಕಾರಿದ್ದಾರೆ.
ಮಹಿಳೆ ಹಂಚಿಕೊಂಡ ಪೋಸ್ಟ್ನಲ್ಲಿ ಏನಿದೆ?
ಅವರು ಸ್ವಿಗ್ಗಿಯೊಂದಿಗೆ ನಡೆದ ಸಂಭಾಷಣೆ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಕರ್ನಾಟಕದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿ ಇದೆಯೇ ಎಂದು ಹೇಳು ಸ್ವಿಗ್ಗಿ. ನಿಮ್ಮ ಡೆಲಿವರಿ ಹುಡುಗ ಕನ್ನಡವನ್ನು ಮಾತನಾಡುವುದಿಲ್ಲ, ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇಂಗ್ಲೀಷ್ ಕೂಡಾ ಬರುವುದಿಲ್ಲ. ನಾವು ಹಿಂದಿ ಅಥವಾ ಬೇರೆ ರಾಜ್ಯದ ಭಾಷೆಯನ್ನು ಕಲಿಯಬೇಕು ಎಂದು ನಿರೀಕ್ಷೆ ಮಾಡುತ್ತೀರಾ? ನಿಮ್ಮ ಡೆಲಿವರಿ ಹುಡುಗರು ಕನ್ನಡವನ್ನು ಮಾತನಾಡುವಂತೆ ನೋಡಿಕೊಳ್ಳಿ. ವೃಥಾ ಬೇರೆ ಭಾಷೆಯನ್ನು ಕಲಿಯಿರಿ ಎಂಬ ಆಗ್ರಹವನ್ನು ನಮ್ಮ ಮೇಲೆ ಹೇರಬೇಡಿ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಿಶ್ರ ಪ್ರತಿಕ್ರಿಯೆ ವ್ಯಕ್ತ
ಮಹಿಳಾ ಟೆಕ್ಕಿಯ ಈ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾಷಾ ವಿವಾದದಿಂದ 13 ಬಹು ರಾಷ್ಟ್ರೀಯ ಕಂಪನಿಗಳೂ ಸೇರಿದಂತೆ 53 ಕಂಪನಿಗಳು ಸೂರತ್, ಲಕ್ನೋ ಮತ್ತು ಇಂದೋರ್ಗೆ ಸ್ಥಳಾಂತರಗೊಳ್ಳಲು ಚಿಂತನೆ ನಡೆಸಿವೆ. ಬೆಂಗಳೂರು ಟೆಕ್ ಹಬ್ ಎಂಬ ವಿಶೇಷಣ ಉಳಿದುಕೊಳ್ಳಲಿದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಸರಿಯದ ಸಮಯಕ್ಕೆ ಡೆಲಿವರಿ ಮಾಡಿದರೆ ಡೆಲಿವರಿ ಬಾಯ್ನ ಭಾಷಾ ಪರಿಣಿತಿ ಸಮಸ್ಯೆಯೇ ಉದ್ಭವಿಸದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಕರ್ನಾಟಕದಲ್ಲಿದೆಯೇ ಅಥವಾ ಇಂಗ್ಲೆಂಡ್ನಲ್ಲಿದೆಯೇ? ನನಗೆ ತಿಳಿದ ಪ್ರಕಾರ ಬೆಂಗಳೂರಿನಲ್ಲಿ ಇಂಗ್ಲೀಷ್ ಮೂಲಭೂತವಾಗಿ ಸಾಂಸ್ಕೃತಿಕ ಭಾಷೆ ಅಲ್ಲ ಎಂದು ಮತ್ತೊಬ್ಬರು ಆ ಮಹಿಳಾ ಟೆಕ್ಕಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಎಕ್ಸ್ನ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಡೆಲಿವರಿಗೆ ಇಷ್ಟೊಂದು ಕಠಿಣವಾಗಿ ಪ್ರತಿಕ್ರಿಯಿಸಬೇಕೇ ಎಂದು ಬಹುತೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೆಲವರು ಮಹಿಳಾ ಟೆಕ್ಕಿಯನ್ನು ಟೀಕಿಸಿದರೆ ಇನ್ನೂ ಕೆಲವರು ಬೆಂಬಲಿಸಿದ್ದಾರೆ. ಬಹುತೇಕ ಮಂದಿ ತಾವು ಯಾವ ರಾಜ್ಯದಲ್ಲಿ ಕೆಲಸ ಮಾಡುತ್ತೇವೆಯೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕಾದ್ದು ನಮ್ಮ ಧರ್ಮ. ಕರ್ನಾಟಕದಲ್ಲಿದ್ದಾಗ ಕನ್ನಡ ಭಾಷೆ ಕಲಿಯಲೇಬೇಕು ಎಂದು ಅವರನ್ನು ಬೆಂಬಲಿಸಿದ್ದಾರೆ.