ಪಂಚಾಯಿತಿ ಚುನಾವಣೆಗೆ ನಾವು ರೆಡಿ; ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರದ ಅಫಿಡವಿಟ್, ಮೇನಲ್ಲಿ ಮೀಸಲು, ಜೂನ್ - ಜುಲೈನಲ್ಲಿ ಎಲೆಕ್ಷನ್- 5 ಅಂಶಗಳು
Karnataka Panchayat Polls: ಪಂಚಾಯಿತಿ ಚುನಾವಣೆ ಸಂಬಂಧಿಸಿ ಕಾನೂನು ಹೋರಾಟ 2020ರಿಂದಲೂ ನಿರಂತರ ಮುಂದುವರಿದಿದೆ. ಇದೀಗ ಸೋಮವಾರ (ಫೆ17) ಪಂಚಾಯಿತಿ ಚುನಾವಣೆಗೆ ನಾವು ರೆಡಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಈ ಸಂಬಂಧ 5 ಮುಖ್ಯ ಅಂಶಗಳ ವಿವರ ಇಲ್ಲಿದೆ

Karnataka Panchayat Polls : ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಕರ್ನಾಟಕ ಸರ್ಕಾರವು ಸೋಮವಾರ (ಫೆ 17) ಕರ್ನಾಟಕ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಮೇ ತಿಂಗಳಲ್ಲಿ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಿ, ಜೂನ್ - ಜುಲೈನಲ್ಲಿ ಸಾಧ್ಯವಾದಷ್ಟೂ ಆಗಸ್ಟ್ ಒಳಗೆಯೇ ಚುನಾವಣೆ ನಡೆಸುವುದಾಗಿ ಕೋರ್ಟ್‌ಗೆ ಕರ್ನಾಟಕ ಸರ್ಕಾರ ಹೇಳಿದೆ.
ಪಂಚಾಯಿತಿ ಚುನಾವಣೆ; ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೊಳಿಸಿ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ಪಂಚಾಯಿತಿ ಚುನಾವಣೆ ಸಂಬಂಧ ದಾಖಲಾಗಿದ್ದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಆಗ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ.
ಪಂಚಾಯಿತಿ ಚುನಾವಣೆ ಕೋರ್ಟ್ ವಿಚಾರಣೆ - 5 ಮುಖ್ಯ ಅಂಶಗಳಿವು
1) ಸರ್ಕಾರದ ಪರ ವಾದ: ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಮೇ ಅಂತ್ಯದೊಳಗೆ ಒದಗಿಸಲಾಗುವುದು’ ಎಂದು ತಿಳಿಸಿದರು.
2) ಚುನಾವಣಾ ಆಯೋಗದ ಪ್ರತಿವಾದ: ಕರ್ನಾಟಕ ಸರ್ಕಾರ ತನ್ನ ವಾಗ್ದಾನಕ್ಕೆ ತಕ್ಕಂಥೆ ನಡೆಯಬೇಕು. ಇಲ್ಲದೇ ಇದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಚುನಾವಣಾ ಆಯೋಗದ ಪರ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಮನವಿ ಮಾಡಿದರು.
3) ಹೈಕೋರ್ಟ್ ನ್ಯಾಯಪೀಠ: ಕರ್ನಾಟಕ ಸರ್ಕಾರವು ಈಗಾಗಲೇ ನೀಡಿರುವ ಮೌಖಿಕ ಹೇಳಿಕೆ, ಮುಚ್ಚಳಿಕೆ ಪ್ರಕಾರ ನಡೆದಯದೇ ಇದ್ದರೆ, ಅಂತಹ ಸನ್ನಿವೇಶದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಚುನಾವಣಾ ಆಯೋಗಕ್ಕೆ ಇದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿ ಎರಡೂ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ವಿಲೇವಾರಿ ಮಾಡಿತು.
4) ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ: ಕರ್ನಾಟಕ ಸರ್ಕಾರ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. 2023ರ ಇನ್ನೊಂದು ಅರ್ಜಿಯಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠದ ಆದೇಶ ಪಾಲಿಸುವಲ್ಲಿಯೂ ಕರ್ನಾಟಕ ಸರ್ಕಾರ ವಿಫಲವಾಗಿದೆ’ ಎಂದು ಆಯೋಗ ಹೇಳಿತ್ತು.
5) ಸರ್ಕಾರಕ್ಕೆ 5 ಲಕ್ಷ ರೂ ದಂಡ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದಕ್ಕೆ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿ ಪಡಿಸಲು ವಿಫಲವಾಗಿದೆ’ ಎಂದು ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು.
ಪಂಚಾಯಿತಿ ಚುನಾವಣೆ; ಕಾನೂನು ಹೋರಾಟದ ಹಾದಿ
ಕರ್ನಾಟಕದ ಪಂಚಾಯಿತಿ ಚುನಾವಣೆ ಸಂಬಂಧ 2020ರಿಂದಲೂ ಕಾನೂನು ಹೋರಾಟ ನಡೆಯುತ್ತಿದೆ. 2020ರಲ್ಲಿ ಸರ್ಕಾರಕ್ಕೆ ಕೋರ್ಟ್ ದಂಡ ವಿಧಿಸಿದ ಬಳಿಕ, 2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಪಂ ಮತ್ತು ತಾಪಂಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದ್ದ ಕರ್ನಾಟಕ ಚುನಾವಣಾ ಆಯೋಗ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಸಹ ಪ್ರಕಟಿಸಿತ್ತು. ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು. ದಿನಾಂಕ ಘೋಷಣೆ ಮಾಡುವ ಹೊತ್ತಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಸರ್ಕಾರ ಹಿಂಪಡೆದುಕೊಂಡಿತ್ತು. ನಂತರ ಚುನಾವಣೆ ವಿಳಂಬವಾಗುತ್ತ ಹೋಯಿತು.
