PM Modi Security Breach: ಮೋದಿ ಹುಬ್ಬಳ್ಳಿ ರೋಡ್ ಶೋನಲ್ಲಿ ಭದ್ರತಾ ಲೋಪ?: ಹು-ಧಾ ಪೊಲೀಸರ ಸ್ಪಷ್ಟನೆ ಏನು?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಬ್ಬಳ್ಳಿ ರೋಡ್ ಶೋ ವೇಳೆ, ಬಾಲಕನೋರ್ವ ಅವರಿಗೆ ಹೂಮಾಲೆ ಹಾಕಲು ಪ್ರಯತ್ನಿಸಿದ್ದು, ಭದ್ರತಾ ಲೋಪದ ಪ್ರಶ್ನೆಗಳನ್ನು ಎತ್ತಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಹು-ಧಾ ಪೊಲೀಸರು, ಇದು ಭದ್ರತಾ ಲೋಪವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ..
ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಬಾಲಕನೋರ್ವ ಭದ್ರತಾ ಸರಪಳಿಯನ್ನು ಮುರಿದು ಪ್ರಧಾನಿ ಮೋದಿ ಅವರಿಗೆ ಹೂಮಾಲೆ ಹಾಕಲು ಮುನ್ನುಗ್ಗಿ, ಗೊಂದಲ ಸೃಷ್ಟಿಯಾದ ಘಟನೆಯೂ ನಡೆದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಪ್ರಧಾನಿ ಅವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ. ರೋಡ್ ಶೋ ಸಂದರ್ಭದಲ್ಲಿ ಬಾಲಕನೋರ್ವ ಪ್ರಧಾನಿ ಮೋದಿ ಅವರಿಗೆ ಹೂಮಾಲೆ ಹಾಕಲು ಪ್ರಯತ್ನಸಿದ್ದಾನೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ..' ಎಂದು ಹುಬ್ಬಳ್ಳಿ-ಧಾರವಾಡ ಅಪರಾಧ ವಿಭಾಗದ ಡಿಸಿಪಿ ಗೋಪಾಲ್ ಬ್ಯಾಕೋಡ್ ಸ್ಪಷ್ಟನೆ ನೀಡಿದ್ದಾರೆ.
'ಇದು ಗಂಭೀರ ಲೋಪವಲ್ಲ, ಆದರೆ ಭದ್ರತಾ ಸರಪಳಿಯನ್ನು ಬೇಧಿಸಿ ಬಾಲಕ ಒಳ ನುಗ್ಗಿದ್ದು ಹೇಗೆ ಎಂಬುದರ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಅಲ್ಲದೇ ಬಾಲಕ ಯಾವ ಸ್ಥಳದಿಂದ ರೋಡ್ ಶೋ ಒಳಗೆ ನುಗ್ಗಿದ್ದನೋ, ಆ ಸ್ಥಳದಲ್ಲಿ ನೆರೆದಿದ್ದ ಎಲ್ಲಾ ಜನರನ್ನು ಎಸ್‌ಪಿಜಿ ಪರಿಶೀಲನೆ ನಡೆಸಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿಲ್ಲ..' ಎಂದು ಡಿಸಿಪಿ ಗೋಪಾಲ್ ಬ್ಯಾಕೋಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗಾಗಿ ಕರ್ನಾಟಕದ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಲಕ್ಷಾಂತರ ಜನರು ಪ್ರಧಾನಿ ಮೋದಿ ಅವರತ್ತ ಹೂಮಳೆ ಸುರಿಸಿ, ಕೈಬೀಸಿ ಅವರನ್ನು ಸ್ವಾಗತಿಸಿದರು.
26ನೇ ರಾಷ್ಟ್ರೀಯ ಯುವಜನೋತ್ಸವವನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ, ಜನವರಿ 12 ರಿಂದ 16ರವರೆಗೆ ಕೇಂದ್ರ ಕ್ರೀಡಾ ಸಚಿವಾಲಯವು ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಿದೆ. 'ವಿಕಿಸತ ಯುವ, ವಿಕಸಿತ ಭಾರತ' ಎಂಬುದು ಈ ಬಾರಿಯ ರಾಷ್ಟ್ರೀಯ ಯುವಜನೋತ್ಸವದ ಥೀಮ್ ಆಗಿದೆ.
ಅಮೃತ್ ಕಾಲ್ ಸಮಯದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಹೆಚ್ಚಿಸುವ ಗುರಿಯನ್ನು ಈ ಉತ್ಸವ ಹೊಂದಿದೆ. ಪ್ರಧಾನಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರತಿಪಾದಿಸಿದ ‘ಪಂಚ ಪ್ರಾಣ’ದ ಸಂದೇಶವನ್ನು ಪ್ರಸಾರ ಮಾಡುವ ಉದ್ದೇಶವನ್ನೂ ಹೊಂದಲಾಗಿದೆ.
ಈ ಯುವಜನೋತ್ಸವದಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ ಕಲಾ ತಂಡಗಳು, ತಮ್ಮ ಪ್ರದರ್ಶನ ನೀಡಲಿವೆ.
ಸಂಬಂಧಿತ ಸುದ್ದಿಗಳು
Modi Road Show: ಹುಬ್ಬಳ್ಳಿಯಲ್ಲಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ: ಪ್ರಧಾನಿಗೆ ಹೂಮಾಲೆ ಹಾಕಲು ಬಂದ ಯುವಕ!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಬ್ಬಳ್ಳಿಯ ರೋಡ್ ಶೋ ವೇಳೆ ಭದ್ರತಾ ಲೋಪ ಕಂಡುಬಂದಿದ್ದು, ಯುವಕನೋರ್ವ ಪ್ರಧಾನಿ ಮೋದಿ ಅವರಿಗೆ ಹೂಮಾಲೆ ಹಾಕಲು ಭದ್ರತಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
Unknown vehicle found in hubli: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆ
ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚರಿಸಲಿರುವ ಮಾರ್ಗದಲ್ಲಿ ಭದ್ರತಾ ಸಿಬ್ಬಂದಿ ನಡೆಸುತ್ತಿದ್ದ ತಪಾಸಣೆ ವೇಳೆ ಅಪರಿಚಿತ ವಾಹನವೊಂದು ಪತ್ತೆಯಾಗಿದ್ದು, ಕೆಲಕಾಲ ಆತಂಕವನ್ನು ಮೂಡಿಸಿತ್ತು. ಹೊಸೂರ್ ಕ್ರಾಸ್ ನಲ್ಲಿ ಅಪರಿಚಿತ ಕಾರು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ