Karnataka Politics: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ; ಸಿದ್ದರಾಮಯ್ಯ, ಡಿಕೆಶಿ ಸಹಿತ ಪ್ರಮುಖ ನಾಯಕರ ಹೇಳಿಕೆಗಳೇನು
Karnataka Politics: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ ಪ್ರಬಲವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಾಗೂ ಬೆಂಬಲಗರ ಹೇಳಿಕೆಗಳು ಮುನ್ನಲೆಗೆ ಬಂದಿವೆ. ಇದರ ವಿವರ ಇಲ್ಲಿದೆ.

Karnataka Politics: ಕರ್ನಾಟಕದಲ್ಲಿ ಆರೇಳು ತಿಂಗಳಿನಿಂದ ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಅದು ಒಂದು ತಿಂಗಳಿನಿಂದ ಬಿರುಸುಗೊಂಡಿದೆ. ಸಿಎಂ ಸಿದ್ದರಾಮಯ್ಯ ಬದಲಾಗೋಲ್ಲ ಎಂದು ಅವರ ಬಣದವರು ಹೇಳಿಕೆ ನೀಡಿದರೆ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣದವರು ಅವರು ಸಿಎಂ ಆಗಿಯೇ ತೀರುತ್ತಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಬಜೆಟ್‌ಗೆ ಸಿದ್ದವಾಗುತ್ತಿರುವ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಈಗ ಬಣ ರಾಜಕಾರಣ ಬಿರುಸುಗೊಂಡಿದೆ. ನಾಯಕರ ಹೇಳಿಕೆಗಳ ಸಾರ ಇಲ್ಲಿದೆ.
ಹೈಕಮಾಂಡ್ ತೀರ್ಮಾನ ಅಂತಿಮ: ಸಿಎಂ ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳಾಗುವ ಸಾಧ್ಯತೆ ಬಗ್ಗೆ ವೀರಪ್ಪ ಮೊಯಿಲಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ''ಈಗ ಮೊಯ್ಲಿಯೊಬ್ಬರು ಹೇಳುವುದು, ಅಥವಾ ಇನ್ನೊಬ್ಬರು ಹೇಳುವುದು ಮುಖ್ಯವಲ್ಲ. ಹೈಕಮಾಂಡ್ ಹೇಳಿದಂತೆ ತೀರ್ಮಾನ ಮಾಡಲಾಗುವುದು. ಹೈಕಮಾಂಡ್ ನಿರ್ದೇಶನದಂತೆ ಮುನ್ನಡೆಯುತ್ತೇನೆ.
ಖರ್ಗೆ ಹೇಳಿದ್ದಾರೆ, ನಾನೇನು ಮಾತನಾಡೋಲ್ಲ: ಡಿ.ಕೆ.ಶಿವಕುಮಾರ್
ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ಚರ್ಚೆಯನ್ನು ಮಾಡಬಾರದು. ಮಾತನಾಡಬಾರದು ಎಂದು ಎಐಸಿಸಿ ಅಧ್ಯಕ್ಷರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರೇ ಸೂಚನೆ ನೀಡಿದ್ದಾರೆ. ನಾನು ಅವರ ಮಾತಿಗೆ ಬದ್ದನಾಗಿದ್ದೇನೆ. ಆದರೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದನ್ನು ಯಾರಿಂದರೂ ತಪ್ಪಿಸಲು ಆಗದು ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಈಗ ಅದರ ಅಗತ್ಯವೂ ಇಲ್ಲ.
ಡಿಕೆಶಿ ಸಿಎಂ ಆಗೋದು ತಪ್ಪಿಸಲಾಗದು: ವೀರಪ್ಪ ಮೊಯಿಲಿ
ಡಿಕೆ ಶಿವಕುಮಾರ್ ಉತ್ತಮ ನಾಯಕತ್ವ ನೀಡಿದ್ದೀರಿ, ಪಕ್ಷವನ್ನು ಕಟ್ಟಿದ್ದೀರಿ, ನೀವು ಸಿಎಂ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆ ಸಿಗುವುದು ಉಡುಗೊರೆಯಾಗಿ ಅಲ್ಲ. ಅದು ಅವರು ಕಷ್ಟಪಟ್ಟು ಗಳಿಸಿದ್ದುನೀವು ಸಿಎಂ ಆಗಬೇಕು ಎಂದು ಜನರು ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಆದರೆ, ಅದಕ್ಕೆ ಆತಂಕಗೊಳ್ಳುವ ಅಗತ್ಯವಿಲ್ಲ.
ಮೊಯಿಲಿ ಅವರದ್ದು ವೈಯಕ್ತಿಕ ಹೇಳಿಕೆ: ಸಚಿವ ಕೆಎನ್ ರಾಜಣ್ಣ
ವೀರಪ್ಪ ಮೊಯ್ಲಿಯವರು ನಮ್ಮ ಕಾಂಗ್ರೆಸ್ಸಿನ ಹಿರಿಯ ನಾಯಕರು. ಮಾಜಿ ಮುಖ್ಯಮಂತ್ರಿಯೂ ಆಗಿರುವ ವೀರಪ್ಪ ಮೊಯಿಲಿ ಸಂಸದರಾಗಿಯೂ ಕೆಲಸ ನಿರ್ವಹಿಸಿದವರು. ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಅವರು ನೀಡಿರುವ ಹೇಳಿಕೆ, ಅವರ ವೈಯಕ್ತಿಕವಾದದ್ದು.
ಹೈಕಮಾಂಡ್ ತೀರ್ಮಾನಿಸುತ್ತೆ: ಸಚಿವ ಪ್ರಿಯಾಂಕ್ ಖರ್ಗೆ
ಡಿಕೆ ಶಿವಕುಮಾರ್ ಇವತ್ತು ಅಥವಾ ನಾಳೆ ಸಿಎಂ ಆಗುತ್ತಾರೆ ಎಂದು ಮೊಯ್ಲಿ ಆಗಲಿ, ಬೇರೆಯವರಾಗಲಿ ಹೇಳಿಲ್ಲ. ಮುಂದೊಂದು ದಿನ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ನಾನು ಕೂಡ ಮಾಧ್ಯಮಗಳ ಮುಂದೆ ಹೇಳಿದರೆ ಆಗುತ್ತಾ? ನಮ್ಮ ಜವಾಬ್ದಾರಿ ಏನೆಂಬುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದು, ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಮುಂದೊಂದು ದಿನ ಯಾರಾದರೂ ಸಿಎಂ ಆಗಬೇಕೆಂದು ನಾನು ಬಯಸಬಹುದು. ಅವರು ಕಷ್ಟಪಟ್ಟರೆ, ಅವರಿಗೂ ನಾಳೆ ಪ್ರತಿಫಲ ಸಿಗುತ್ತದೆ. ಅವರು ಏನೇ ಹೇಳಿದರೂ ಅದು ಅವರ ಅಭಿಪ್ರಾಯ
ಹೈಕಮಾಂಡ್ ತೀರ್ಮಾನಕ್ಕೆ ಬದ್ದ: ಸಚಿವ ಸಂತೋಷ್ ಲಾಡ್
ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರ ಹೇಳಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಗಳಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಮೊಯ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದರೆ, ಅವರನ್ನೇ ಕೇಳಬೇಕು. ಏಕೆಂದರೆ, ನಾವು ಯಾವಾಗಲೂ ಹೈಕಮಾಂಡ್ ಆದೇಶವನ್ನು ಅನುಸರಿಸುತ್ತೇವೆ. ಹೈಕಮಾಂಡ್ ಏನೇ ಹೇಳಿದರೂ ಅದು ನಮಗೆ ಅಂತಿಮ. ಅದು ಅವರ ಅಭಿಪ್ರಾಯವೇ ಹೊರತು ಹೈಕಮಾಂಡ್ ಅಭಿಪ್ರಾಯವಲ್ಲ.
ಡಿಕೆಶಿ ಸಿಎಂ ರಕ್ತದಲ್ಲಿ ಬರೆದುಕೊಡುವೆ: ಶಾಸಕ ಬಸವರಾಜು ಶಿವಗಂಗಾ
ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ಸಾಕಷ್ಟು ದುಡಿದಿದ್ದಾರೆ. 80 ಶಾಸಕರು ಗೆಲ್ಲಲು ಡಿ. ಕೆ. ಶಿವಕುಮಾರ್ ಅವರ ಪಾತ್ರ ಇದೆ. 80 ಶಾಸಕ ಸ್ಥಾನಗಳಿಗೆ ಕುಸಿದಿದ್ದ ಕಾಂಗ್ರೆಸ್ ಪಕ್ಷದ ಬಲವನ್ನು 140 ಸ್ಥಾನಕ್ಕೆ ತರಲು ಸಾಕಷ್ಟು ಕಷ್ಟು ಪಟ್ಟಿದ್ದಾರೆ. ಅವರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಈ ಡಿಸೆಂಬರ್‌ನಿಂದ ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅಂದರೆ ಏಳೂವರೆ ವರ್ಷ ಅವರೇ ಸಿಎಂ ಆಗಿರುತ್ತಾರೆ. ರಕ್ತದಲ್ಲಿ ಬೇಕಾದರೆ ಬರೆದು ಕೊಡ್ತೀನಿ, ಡಿಸೆಂಬರ್ ಒಳಗೆ ಡಿ. ಕೆ. ಶಿವಕುಮಾರ್ ಸಿಎಂ ಆಗುತ್ತಾರೆ.


