ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರಾ: ವೈರಲ್ ಆಗಿರುವ ಪತ್ರದಲ್ಲಿ ಏನಿದೆ
ಪರಿಷತ್ ನ ಹಿರಿಯ ನಾಯಕರಾಗಿರುವ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ. ಆದರೆ ರಾಜೀನಾಮೆ ಪತ್ರದಲ್ಲಿ ಹೊರಟ್ಟಿ ಅವರು ಸಹಿಯೇ ಇಲ್ಲ.

ಸಭಾಪತಿ ಸ್ಥಾನದಲ್ಲಿ ಮುಂದುವರಿವುದರಲ್ಲಿ ಅರ್ಥವಿಲ್ಲ ಎಂದು ನಿನ್ನೆಯಷ್ಟೇ (ಮಾರ್ಚ್ 23, ಭಾನುವಾರ) ಬೇಸರ ವ್ಯಕ್ತಪಡಿಸಿದ್ದ ವಿಧಾನ ಪರಿಷತ್ ಸಭಾಪತಿ ಅವರು ಬರೆಸಿದ್ದಾರೆ ಎನ್ನಲಾದ ರಾಜೀನಾಮೆ ಪತ್ರ ಇಂದು (ಮಾರ್ಚ್ 24, ಸೋಮವಾರ) ವೈರಲ್ ಆಗಿದೆ. ಹೀಗಾಗಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಅವರ ಒಡನಾಡಿಗಳು, ಆಪ್ತರು ದೂರವಾಣಿ ಕರೆ ಮಾಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಸದನದೊಳಗೆ ಸದಸ್ಯರ ನಡವಳಿಕೆಗಳಿಂದ ಬೇಸತ್ತು ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿದ್ದಾರೆ. ಆದರೆ ಹೇಗೋ ಆ ಪತ್ರ ಎಲ್ಲೆಡೆ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ. ದಿನಾಂಕ 1-4-2025 ರಂದು ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ವೈಯಕ್ತಿಕ ಕಾರಣಗಳಿಂದ ಸದರಿ ರಾಜೀನಾಮೆಯನ್ನು ದಿನಾಂಕ 31-3-2025 ರೊಳಗೆ ಸ್ವೀಕರಿಸಿ ದಿನಾಂಕ 1-4-2025 ರಿಂದ ಅನ್ವಯವಾಗುವಂತೆ ಕ್ರಮಕೈಗೊಂಡು ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಉಪ ಸಭಾಪತಿ ಎಂಕೆ ಪ್ರಾಣೇಶ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ ಹೊರಟ್ಟಿ ಅವರ ಸಹಿ ಇಲ್ಲ.
