ಕನ್ನಡ ಸುದ್ದಿ  /  Karnataka  /  Karnataka Politics Bjp Jds Alliance Will May Affect On Karnataka Politics And Ls Election 2024 News In Kannada Arc

Karnataka Politics: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣ ಏರುಪೇರು

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದ್ದು, ಎರಡೂ ಪಕ್ಷಗಳಲ್ಲಿ ನವ ಚೈತನ್ಯ ಉಂಟಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣ ಏರುಪೇರು
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣ ಏರುಪೇರು

ರಾಜಕಾರಣ ನಿಂತ ನೀರಲ್ಲ ಎನ್ನುವುದನ್ನು ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಬೆಳವಣಿಗೆಗಳು ಮತ್ತೆ ಸಾಬೀತು ಮಾಡಿವೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದ್ದು, ಎರಡೂ ಪಕ್ಷಗಳಲ್ಲಿ ನವ ಚೈತನ್ಯ ಉಂಟಾಗಿದೆ. 135 ವಿಧಾನಸಭಾ ಕ್ಷೇತ್ರಗಳ ಭರ್ಜರಿ ಗೆಲುವು ಮತ್ತು ಐದು ಗ್ಯಾರಂಟಿಗಳ ಜಾರಿಯೊಂದಿಗೆ ನಾಗಾಲೋಟದಲ್ಲಿ ಸಾಗುತ್ತಿದ್ದ ಕಾಂಗ್ರೆಸ್ ಸರಕಾರಕ್ಕೆ ಆಂತರಿಕ ಬೆಳವಣಿಗೆಗಳು ಬ್ರೇಕ್ ಹಾಕಿವೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಐದಾರು ವರ್ಷಗಳಿಂದಲೇ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯೊಂದಿಗೆ ಉತ್ತಮ ಸಖ್ಯ ಬೆಳೆಸಿಕೊಳ್ಳುತ್ತಾ ಬಂದಿದ್ದಾರೆ. ಕಷ್ಟಕಾಲದಲ್ಲಿ ಬಿಜೆಪಿ ನೆರವು ಬೇಕಾಗಬಹುದು ಎಂಬ ಅವರ ದೂರಾಲೋಚನೆ ಫಲ ಕೊಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳ ಗುರಿಯೊಂದಿಗೆ ಎಲ್ಲರಿಗಿಂತ ಮೊದಲೇ ಚುನಾವಣಾ ಅಖಾಡಕ್ಕೆ ಧುಮಿಕಿದ್ದ ಅವರಿಗೆ ದಕ್ಕಿದ್ದು ಕೇವಲ 19 ಸ್ಥಾನಗಳು ಮಾತ್ರ! 2024ರ ಮೇ ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗೆ ಏಕಾಂಗಿಯಾಗಿ ಹೋದರೆ ಶೂನ್ಯ ಸಂಪಾದನೆಯಾದೀತು ಎನ್ನುವುದನ್ನು ಅರಿತು ಬಿಜೆಪಿಯೊಂದಿಗೆ ಚುನಾವಣಾ ಹೊಂದಾಣಿಕೆಗೆ ಮುನ್ನುಡಿ ಬರೆದಿದ್ದಾರೆ.

ಜೆಡಿಎಸ್ 6 ಸ್ಥಾನಗಳ ಬೇಡಿಕೆ ಇಟ್ಟಿದ್ದು 4 ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ನೀಡಿದೆ. ಚೌಕಾಸಿ ನಡೆದರೆ 5 ಸೀಟು ಸಿಕ್ಕರೂ ಸಿಗಬಹುದು. ಈ ಹೊಂದಾಣಿಕೆಯಿಂದ ಯಾವ ಪಕ್ಷಕ್ಕೆ ಲಾಭ ಅಥವಾ ನಷ್ಟ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಒಂದು ಪಕ್ಷಕ್ಕೆ ಲಾಭವಾದರೆ ಮತ್ತೊಂದು ಪಕ್ಷಕ್ಕೆ ನಷ್ಟ ಆಗಲೇಬೇಕು ಎನ್ನುವುದು ಸರಳಗಣಿತ.

ಅಧಿಕಾರದಲ್ಲಿದ್ದೂ ಹೀನಾಯವಾಗಿ ಸೋತ ಬಿಜೆಪಿಗೆ ಈ ಹೊಂದಾಣಕೆ ಅನಿವಾರ್ಯವಾಗಿತ್ತು. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಆಸರೆ ಎಂದರೆ ಕರ್ನಾಟಕ ಮಾತ್ರ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿಗೆ ಆಸರೆಯಾಗಿ ಜೆಡಿಎಸ್ ಕಂಡಿದ್ದರೆ ಅಚ್ಚರಿಯೇನಲ್ಲ. ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸಲಾಗಿದ್ದು, ಲಿಂಗಾಯತ ಸಮುದಾಯವನ್ನು ಓಲೈಸುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಪಕ್ಷವನ್ನು ಮುನ್ನೆಡೆಸುವ ಛಾತಿ ಇರುವ ಮುಖಂಡ ಗೋಚರಿಸುತ್ತಿಲ್ಲ.

ಕಾಂಗ್ರೆಸ್ ನ ಆರಂಭದ 50-60 ದಿನಗಳ ಆಡಳಿತ ನೋಡಿದಾಗ ಲೋಕಸಭಾ ಚುನಾವಣೆಯಲ್ಲಿ 18-20 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತಾದರೂ 100 ದಿನಗಳ ನಂತರ ಅದೇ ಭರವಸೆ ಉಳಿದುಕೊಂಡಿಲ್ಲ. ಒಂದು ಕಡೆ ಡಿಸಿಎಂ ಶಿವಕುಮಾರ್ ಆಪ್ತರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಸಿಡಿಸಿರುವ ಬಾಂಬ್ ಸಿದ್ದರಾಮಯ್ಯ ಅವರನ್ನು ಅಧೀರರನ್ನಾಗಿ ಮಾಡಿದೆ. ಜೆಡಿಎಸ್‍ನ ಜಿ.ಟಿ.ದೇವೇಗೌಡ ಅವರೂ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಶಂಕೆಯಿಂದ ನೋಡುವಂತೆ ಮಾಡಿದೆ. ಐದು ಗ್ಯಾರಂಟಿಗಳ ಮಂತ್ರವನ್ನೇ ಮುಂದಿನ ಆರೇಳು ತಿಂಗಳು ಜಪಿಸುತ್ತಾ ಕೂರಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರವನ್ನು ಶೇ.40 ಪರ್ಸೆಂಟ್ ಸರಕಾರ ಎಂಬ ಆರೋಪವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವೂ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿರುವುದು ಸುಳ್ಳಲ್ಲ.

ಜೆಡಿಎಸ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮಂಡ್ಯ, ಹಾಸನ ತುಮಕೂರು ಮೊದಲಾದ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಜೆಡಿಎಸ್ ಮುಗ್ಗರಿಸಿದೆ. ಹೀಗಾಗಿ ಸಿದ್ಧಾಂತವನ್ನೆಲ್ಲಾ ಬದಿಗಿಟ್ಟು ಹೊಂದಾಣ ಕೆಗೆ ಮುಂದಾಗಿದೆ. ಮೋದಿ ವರ್ಚಸ್ಸು ಕುಸಿಯುತ್ತಿರುವಾಗ ಹೊಂದಾಣ ಕೆ ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಒಟ್ಟಿನಲ್ಲಿ ಈ ಮೈತ್ರಿಯಿಂದ ಕಾಂಗ್ರೆಸ್‍ನ ಓಟಕ್ಕೆ ಕಡಿವಾಣ ಬಿದ್ದಂತಾಗಿದ್ದು, ವಿಧಾನಭಾ ಚುನಾವಣಾ ಫಲಿತಾಂಶ ರಿಪೀಟ್ ಆಗುವ ಸಾಧ್ಯತೆಗಳು ಕ್ಷೀಣಿಸಿರುವುದು ಗೋಚರಿಸುತ್ತಿದೆ. 25 ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅಸಾಧ್ಯ. ಆದರೆ ಹೀನಾಯ ಸೋಲಿನ ಸುಳಿಯಿಂದ ಹೊರಬರಬಹುದು. ಇನ್ನು ಒಂದು ವೇಳೆ ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ಧಿಸಿ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗುತ್ತಾರೆ ಎಂಬ ಮುನ್ಸೂಚನೆ ಸಿಕ್ಕಲ್ಲಿ ಜೆಡಿಎಸ್ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿವೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆಯಿಂದ ಒಕ್ಕಲಿಗ ಸಮಾಜ ಕಾಂಗ್ರೆಸ್ ಕೈ ಹಿಡಿದಿತ್ತು. ಲೋಕಸಭಾ ಚುನಾವಣೆಯಲ್ಲಿ ಇದು ಮರುಕಳಿಸುವ ಸಾಧ್ಯತೆಗಳಿಲ್ಲ. ಬದಲಾಗಿ ದೇವೇಗೌಡರ ಕುಟುಂಬದ ಮೇಲೆ ಅನುಕಂಪ ಮೂಡಿದರೂ ಆಶ್ಚರ್ಯವಿಲ್ಲ. ಸನ್ನಿವೇಶಗಳು ಬದಲಾಗುತ್ತಲೇ ಇರುತ್ತವೆ. ಜೆಡಿಎಸ್ ಇಬ್ಬಾಗದವರೆಗೂ ರಾಜಕಾರಣದಲ್ಲಿ ನೀರು ಹರಿದರೆ ಅಚ್ಚರಿಪಡಬೇಕಿಲ್ಲ.

(ವರದಿ: ಮಾರುತಿ)