BJP JDS Mysore Chalo: ಮೈಸೂರು ಚಲೋ ಬಿಜೆಪಿ- ಜೆಡಿಎಸ್‌ ಸಮಾವೇಶ; ಸಿದ್ದರಾಮಯ್ಯ ಅವರೇ ಬಹುತೇಕರ ಟಾರ್ಗೆಟ್‌, ಹೋರಾಟ ನಿಲ್ಲೋದ ಎಂದು ಘೋಷಣೆ-karnataka politics bjp jds mysore chalo convention in mysore senior leaders target karnataka cm siddaramaiah ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bjp Jds Mysore Chalo: ಮೈಸೂರು ಚಲೋ ಬಿಜೆಪಿ- ಜೆಡಿಎಸ್‌ ಸಮಾವೇಶ; ಸಿದ್ದರಾಮಯ್ಯ ಅವರೇ ಬಹುತೇಕರ ಟಾರ್ಗೆಟ್‌, ಹೋರಾಟ ನಿಲ್ಲೋದ ಎಂದು ಘೋಷಣೆ

BJP JDS Mysore Chalo: ಮೈಸೂರು ಚಲೋ ಬಿಜೆಪಿ- ಜೆಡಿಎಸ್‌ ಸಮಾವೇಶ; ಸಿದ್ದರಾಮಯ್ಯ ಅವರೇ ಬಹುತೇಕರ ಟಾರ್ಗೆಟ್‌, ಹೋರಾಟ ನಿಲ್ಲೋದ ಎಂದು ಘೋಷಣೆ

Karnataka Politics ಕಾಂಗ್ರೆಸ್‌ ವಿರುದ್ದ ಜೆಡಿಎಸ್‌ ಹಾಗೂ ಬಿಜೆಪಿ( Mysore Chalo) ಆರಂಭಿಸಿದ್ದ ಮೈಸೂರು ಚಲೋದ ಕೊನೆಯ ಸಮಾವೇಶ ಮೈಸೂರಿನಲ್ಲಿ ಆರಂಭಗೊಂಡಿತು.

ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಸಮಾವೇಶದಲ್ಲಿ ಕಂಡ ಬಿಜೆಪಿ ಜೆಡಿಎಸ್ ನಾಯಕರ ಐಕ್ಯತೆ
ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಸಮಾವೇಶದಲ್ಲಿ ಕಂಡ ಬಿಜೆಪಿ ಜೆಡಿಎಸ್ ನಾಯಕರ ಐಕ್ಯತೆ

ಮೈಸೂರು: ಕರ್ನಾಟಕದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ, ಮೈಸೂರು ಮುಡಾದಲ್ಲಿ ನಡೆದಿರುವ ಹಗರಣವನ್ನೇ ಕೇಂದ್ರವಾಗಿಟ್ಟುಕೊಂಡು ಕರ್ನಾಟಕ ಸರ್ಕಾರ, ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ತೊಡೆ ತಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್‌ನ ಮೈಸೂರು ಪಾದಯಾತ್ರೆಯ ಕೊನೆಯ ಹಂತದ ಸಮಾವೇಶ ಮೈಸೂರಿನಲ್ಲಿ ಶನಿವಾರ ಆರಂಭಗೊಂಡಿತು. ಸಮಾವೇಶದಲ್ಲಿ ಮಾತನಾಡಿದ ಬಹುತೇಕ ನಾಯಕರ ಮಾತುಗಳು ಕೇಂದ್ರೀಕೃತವಾಗಿದ್ದು ಸಿದ್ದರಾಮಯ್ಯ ಅವರತ್ತಲೇ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಗುರಾಣಿಯನ್ನು ಹಿಡಿದುಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ವಿರುದ್ದದ ಹಗರಣಗಳ ಹೋರಾಟ ಇಲ್ಲಿಗೆ ನಿಲ್ಲೋಲ್ಲ. ಬಿಜೆಪಿ ಹಾಗೂ ಜೆಡಿಎಸ್‌ ಹೋರಾಟವನ್ನು ಮುಂದುವರೆಸುತ್ತೇವೆ ಎನ್ನುವ ಸಂದೇಶವನ್ನು ಸಾರಿದರು. ಕರ್ನಾಟಕ ಸರ್ಕಾರದ ಸಿಎಂ, ಡಿಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು. ಇದೇ ವೇಳೆ ಮುಡಾ ಹಗರಣದ ಹಿನ್ನೆಲೆಯ ದಾಖಲೆಯ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

ಶುಕ್ರವಾರ ಸಂಜೆಗೆ ಮೈಸೂರಿಗೆ ಆಗಮಿಸಿದ್ದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಶನಿವಾರ ಬೆಳಿಗ್ಗೆಯೇ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಆನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿದ್ದರು. ಮೈಸೂರು ಭಾಗದ ಎರಡೂ ಪಕ್ಷಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಯಡಿಯೂರಪ್ಪ ಸವಾಲು

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಅತಿಯಾಗಿ ಹೋಗಿದೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಒಂದೇ ಒಂದು ಕೆಲಸ ನಡೆಯುತ್ತಿಲ್ಲ. ನಾವು ಇದನ್ನು ಪ್ರಶ್ನಿಸಿದರೆ ಸಿಎಂ ಹಾಗೂ ಡಿಸಿಎಂ ಅವರು ನಮ್ಮ ವಿರುದ್ದವೇ ಟೀಕಿಸುತ್ತಾರೆ. ಇದನ್ನು ಸಹಿಸಿಕೊಂಡು ನಾವು ಕೂರಲು ಸಾಧ್ಯವೇ ಇಲ್ಲ. ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವುದರೊಳಗೆ ನಾವು ವಿಶ್ರಮಿಸುವುದಿಲ್ಲ. ಸಿದ್ದರಾಮಯ್ಯ ಅವರ ಹಗರಣಗಳನ್ನು ಜನರಿಗೆ ತಿಳಿಸುತ್ತೇವೆ. ರಾಜ್ಯದ ಉದ್ದಗಲಕ್ಕೂ ಸುತ್ತುತ್ತೇವೆ. ಮನೆ ಸೇರುವುದಿಲ್ಲ. ನಾನು ರಾಜಕೀಯವಾಗಿ ನಿವೃತ್ತರಾಗಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವವರೆಗೂ ಸುಮ್ಮನೇ ಕೂರುವುದಿಲ್ಲ ಎಂದು ಹೇಳಿದರು.

ಪ್ರಲ್ಹಾದ ಜೋಶಿ ಆರೋಪ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕರ್ನಾಟಕದಲ್ಲಿ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದೆ. ಹಗರಣಗಳ ಕಪ್ಪು ಚುಕ್ಕೆಗಳಿಂದ ತುಂಬಿ ಹೋಗಿದೆ. ಹಗರಣಗಳಲ್ಲಿ ಸಿಲುಕಿದೆ. ಇದನ್ನು ಪ್ರಶ್ನಿಸಿ ನಾವು ಹೋರಾಟಕ್ಕೆ ಇಳಿದರೆ ಅದನ್ನು ಪ್ರಶ್ನಿಸುತ್ತಾರೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಗುರಾಣಿ ಹಿಡಿದು ಬರುತ್ತಾರೆ. ಅವರಂತೆಯೇ ಹಿಂದುಳಿದ ನಾಯಕರಾದ ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಮರೆಯಬಾರದು. ಕರ್ನಾಟಕ ಸರ್ಕಾರವನ್ನು ಕಿತ್ತು ಹಾಕಲು ನಾವು ಹಿಂಜರಿಯುವುದಿಲ್ಲ ಎಂದು ಹೇಳಿದರು.

ರಾಜೀನಾಮೆ ನೀಡಲಿ

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಗಣಿ ಹಗರಣದ ಮುಂದೆ ಇಟ್ಟುಕೊಂಡು ಬೆಂಗಳೂರಿನಿಂದ ಬಳ್ಳಾರಿಗೆ 14 ವರ್ಷದ ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ನಡೆಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಮರೆಯಲಾಗದು. ಇಂದು ಕಾಲ ಬದಲಾಗಿದ್ದು, ಅಂದು ಹೋರಾಟ ಮಾಡಿದ್ದ ಸಿದ್ದರಾಮಯ್ಯ ಅವರೇ ಈಗ ಹಗರಣಗಳಲ್ಲಿ ಸಿಲುಕಿದ್ದಾರೆ. ಎಲ್ಲಿಯವರೆಗೆ ಅವರು ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿಯವರೆಗೂ ಬಿಜೆಪಿ ಹಾಗೂ ಜೆಡಿಎಸ್‌ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ

ಮಾಜಿ ಸಚಿವ, ಜೆಡಿಎಸ್‌ ನಾಯಕ ಬಂಡೆಪ್ಪ ಕಾಶೆಂಪೂರ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ವಿರುದ್ದ ನಮ್ಮ ಹೋರಾಟ ಜಂಟಿಯಾಗಿ ನಡೆದಿದೆ. ಭ್ರಷ್ಟಾಚಾರಗಳ ವಿರುದ್ದ ದನಿ ಎತ್ತಿದ್ದೇವೆ. ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಹೋರಾಟ ನಿಲ್ಲೋಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನಿಮ್ಮ ಹಗರಣ ಬಿಚ್ಚಿಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆಗ ಪ್ರತಿಪಕ್ಷ ನಾಯಕರಾಗಿದ್ದ ನೀವು ಏನು ಮಾಡುತ್ತಿದ್ದಿರಿ ಎನ್ನುವುದನ್ನು ಮೊದಲು ಹೇಳಿದೆ. ಜೆಡಿಎಸ್‌ ಈಗ ಕಡಿಮೆ ಸ್ಥಾನ ಗೆದ್ದಿರಬಹುದು. ಪಕ್ಷದ ಬಲ ಕುಗ್ಗಿಲ್ಲ. ಕೇಂದ್ರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಜಂಟಿಯಾಗಿಯೇ ನಾವು ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಸಿದ್ದರಿದ್ದೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ,ಕೇಂದ್ರ ಸಚಿವರಾದ ಎಚ್.ಡಿ.‌ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಡಿ.ವಿ.‌ ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ‌ ನಾರಾಯಣ ಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ‌ ಸುರೇಶ್ ಬಾಬು, , ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ‌ ಜಿ.ಟಿ. ದೇವೇಗೌಡ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ, ಜನಾರ್ದನ ರೆಡ್ಡಿ, ಸಾ.ರಾ.ಮಹೇಶ್‌, ಎನ್‌.ಮಹೇಶ್‌ ಮತ್ತಿತರರು ಹಾಜರಿದ್ದರು.