ಸುದ್ದಿ ವಿಶ್ಲೇಷಣೆ: ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ; ಜೆಡಿಎಸ್‌ನಿಂದಲೂ ಭಿನ್ನ ದನಿ, ಮೈಸೂರು ಪಾದಯಾತ್ರೆಗೆ ನೂರೆಂಟು ಅಡ್ಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಸುದ್ದಿ ವಿಶ್ಲೇಷಣೆ: ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ; ಜೆಡಿಎಸ್‌ನಿಂದಲೂ ಭಿನ್ನ ದನಿ, ಮೈಸೂರು ಪಾದಯಾತ್ರೆಗೆ ನೂರೆಂಟು ಅಡ್ಡಿ

ಸುದ್ದಿ ವಿಶ್ಲೇಷಣೆ: ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲೇ ಅಸಮಾಧಾನ; ಜೆಡಿಎಸ್‌ನಿಂದಲೂ ಭಿನ್ನ ದನಿ, ಮೈಸೂರು ಪಾದಯಾತ್ರೆಗೆ ನೂರೆಂಟು ಅಡ್ಡಿ

ಬೆಂಗಳೂರು-ಮೈಸೂರು ಪಾದಯಾತ್ರೆಗೆ ಪರ್ಯಾಯ, ಬಳ್ಳಾರಿ-ಬೆಂಗಳೂರು ಪಾದಯಾತ್ರೆಗೆ ಸಜ್ಜಾದ ಜಾರಕಿಹೊಳಿ, ಯತ್ನಾಳ ಟೀಂ, ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿದ್ದರೆ, ಜೆಡಿಎಸ್‌ ಎಚ್ಚರಿಕೆ ನಡೆ ಇಟ್ಟಿದೆ.

ಕರ್ನಾಟಕ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಜೆಡಿಎಸ್‌ ಕೂಡ ಅಸಮಾಧಾನ ವ್ಯಕತಪಡಿಸಿರುವುದು ಚರ್ಚೆ ಹುಟ್ಟು ಹಾಕಿದೆ.
ಕರ್ನಾಟಕ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಜೆಡಿಎಸ್‌ ಕೂಡ ಅಸಮಾಧಾನ ವ್ಯಕತಪಡಿಸಿರುವುದು ಚರ್ಚೆ ಹುಟ್ಟು ಹಾಕಿದೆ.

ಬೆಂಗಳೂರು: ಮೈಸೂರಿನ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣಗಳ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಆಗಸ್ಟ್‌ 3 ರಿಂದ ಒಂದು ವಾರ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಘೋಷಣೆ ಮಾಡಿದ್ದವು. ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಬಿಜೆಪಿಯ ಮುಖಂಡರು ಒಮ್ಮನಸ್ಸಿನಿಂದ ಪಾದಯಾತ್ರೆ ನಡೆಸಬೇಕಿತ್ತು. ಆದರೆ ಮುಖಂಡರು ಮತ್ತು ಶಾಸಕರೊಳಗಿನ ಭಿನ್ನಾಭಿಪ್ರಾಯಗಳು ಮನೆಯೊಂದು ಹತ್ತಾರು ಬಾಗಿಲು ಎನ್ನುವಂತೆ ಮಾಡಿವೆ. ಮತ್ತೊಂದು ಕಡೆ ಎನ್‌ಡಿಎ ಮಿತ್ರ ಪಕ್ಷವಾದ ಜೆಡಿಎಸ್‌ ಕೂಡ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ವಿಶೇಷ ಎಂದರೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕರಾದ ರಮೇಶ್‌ ಜಾರಕಿಹೊಳಿ ಮತ್ತು ಬಿ.ಶ್ರೀರಾಮುಲು ಈ ಪಾದಯಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

ಬಳ್ಳಾರಿಯಿಂದ ಬೆಂಗಳೂರುವರೆಗೆ ಪರ್ಯಾಯ ಯಾತ್ರೆ ನಡೆಸಲು ಮುಂದಾಗಿದ್ದಾರೆ.ಮತ್ತೊಂದು ಕಡೆ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೂ ಮುನಿಸಿಕೊಂಡಿದ್ದಾರೆ. ಹಿರಿಯ ಮುಖಂಡರನ್ನು ವಿಜಯೇಂದ್ರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದೂ ಜಾರಕಿಹೊಳಿ ಆಪಾದಿಸಿದ್ದಾರೆ. ನಾವು ನಮ್ಮದೇ ಆದ ರೀತಿಯಲ್ಲಿ ಈ ಹಗರಣದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದು ಹೈಕಮಾಂಡ್‌ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ಬಲವಂತಕ್ಕೆ ಕಟ್ಟುಬಿದ್ದು ಕಳೆದ ವರ್ಷ ವಿಜಯೆಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಮುಖಂಡರೊಳಗೆ ಕಂದಕ ಹೆಚ್ಚುತ್ತಿದೆಯೇ ಹೊರತು ಸರಿ ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಕ್ಷದ ವರಿಷ್ಠರೂ ತೇಪೆ ಹಾಕುವ ಗೋಜಿಗೆ ಹೋಗಿಲ್ಲ. ವಿಜಯೇಂದ್ರ ಅವರಿಗೆ ಸಹಕಾರಕ್ಕಿಂತ ಅಸಹಕಾರವೇ ಹೆಚ್ಚಾಗುತ್ತಿದೆ. ಪಕ್ಷದೊಳಗಿನ ಹಿತಶತ್ರುಗಳನ್ನು ಎದುರಿಸುವುದು ಕಷ್ಟ ಸಾಧ್ಯ ಎಂಬ ಅರಿವು ಅಧ್ಯಕ್ಷರಿಗೆ ಈಗಾಲೇ ಆಗಿದೆ ಎಂದು ಅವರ ಆಪ್ತರು ಹೇಳುತ್ತಾರೆ.

ಯಡಿಯೂರಪ್ಪ ಕುಟುಂಬದ ಮೇಲೆ ಬಲವಾದ ಆಪಾದನೆಗಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜತೆ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆಪಾದನೆಯೂ ಇದೆ. ವಿಧಾನಮಂಡಲ ಅಧಿವೇಶನ ಮತ್ತು ಹೊರಗೆ ವಿಜಯೆಂದ್ರ ಅವರ ತಂಡಕ್ಕೆ ಪಕ್ಷದಿಂದ ಅಷ್ಟಾಗಿ ಸಹಕಾರ ಸಿಗುತ್ತಿಲ್ಲ. ಪ್ರತಿ ಅಧಿವೇಶನದಲ್ಲೂ ಸದನದೊಳಗೆ ಯಡಿಯೂರಪ್ಪ ಮತ್ತು ವಿಜಯೆಂದ್ರ ಅವರ ವಿರುದ್ಧ ಯತ್ನಾಳ ಗುಡುಗುತ್ತಲೇ ಬಂದಿದ್ದಾರೆ. ವಿಪಕ್ಷ ನಾಯಕ ಆರ್.‌ ಅಶೋಕ ವಿರುದ್ಧವೂ ಟೀಕಾಪ್ರಹಾರ ನಡೆಸುವುದನ್ನು ಬಿಟ್ಟಿಲ್ಲ.

ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಮೇಲೆ ಪಕ್ಷದೊಳಗಿನ ಮುಖಂಡರಿಗೆ ಅಷ್ಟಾಗಿ ನಂಬಿಕೆ ಇಲ್ಲ. ಇವರ ಹೋರಾಟ ಪ್ರಾಮಾಣಿಕತನದಿಂದ ಕೂಡಿಲ್ಲ. ಕಾಂಗ್ರೆಸ್‌ ಮುಖಂಡರೊಂದಿಗೆ ಒಳ ಒಪ್ಪಂದ ಮಾಡಿಕೊಂಡೇ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬ ಕೂಗು ಇದೆ. ವಿಜಯೇಂದ್ರ ಅವರ ರಕ್ತ ಸಂಬಂಧಿಯೂ ಮುಡಾ ಹಗರಣದ ಫಲಾನುಭವಿ ಎಂದು ಯತ್ನಾಳ ನೇರವಾಗಿ ಆಪಾದಿಸಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸದನದಲ್ಲಿ ಮುಖ್ಯಮಂತ್ರಿಗಳನ್ನು ಕಟ್ಟಿ ಹಾಕುವಲ್ಲಿ ಪಕ್ಷ ವಿಫಲವಾಗಿದೆ ಎಂದು ಬಹಿರಂಗವಾಗಿಯೇ ಟೀಕಿಸಿದ್ದಾರೆ.

ಮತ್ತೊಂದು ಕಡೆ ವಿಪಕ್ಷದ ನಾಯಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಮುಂದಿದ್ದು, ಅಶೋಕ್‌ ಮತ್ತು ವಿಜಯೇಂದ್ರ ತೆರೆಮರೆಗೆ ಸರಿಯುತ್ತಿದ್ದಾರೆ ಎಂಬ ನೋವೂ ಇದೆ ಎಂದು ಕೆಲವು ಶಾಸಕರು ಅಸಮಾಧವನ್ನೂ ತೋಡಿಕೊಂಡಿದ್ದಾರೆ.

ಇಡೀ ರಾಜ್ಯದಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿನಿರಂತರವಾಗಿ ಮಳೆ ಎಡಬಿಡದೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಪಾದಯಾತ್ರೆ ಬೇಕಿತ್ತೇ ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ನಾಗರೀಕರು ಪ್ರವಾಹ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಎತ್ತಿಕೊಂಡು ಜನಪರ ಹೋರಾಟಗಳನ್ನು ರೂಪಸಿಸಬೇಕಿತ್ತೇ ಹೊರತು ಇಂತಹ ಹೋರಾಟ ಬೇಕಿರಲಿಲ್ಲ ಎಂದು ಹೆಸರೇಳಿಚ್ಚಿಸದ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.

ಪಾದಯಾತ್ರೆಯ ಜೊತೆಗೆ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಪಕ್ಷ ಆರು ತಂಡಗಳನ್ನು ರಚಿಸಿದೆ. ಈ ತಂಡಗಳು ರಾಜ್ಯದ ಎಲ್ಲ ಭಾಗಗಳಿಗೂ ಭೇಟಿ ನೀಡಲಿದೆ ಎಂದು ಮುಖಂಡರು ಸಮರ್ಥಿಸಿಕೊಡಿದ್ದಾರೆ.

ಇನ್ನೊಂದು ಜೆಡಿಎಸ್‌ ನಾಯಕ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಈ ಪಾದಯಾತ್ರೆಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ನಮ್ಮ ಕುಟುಂಬಕ್ಕೆ ವಿಷವಿಕ್ಕಿದವರ ಜತೆಗೆ ಪಾದಯಾತ್ರೆ ಮಾಡಬೇಕೇ ಎಂದು ಹಾಸನದ ಮಾಜಿ ಶಾಸಕ ಪ್ರೀತಂಗೌಡ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಮೂಲಕ ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳಿದ್ದಾರೆ, ಪಕ್ಷದ ನಾಯಕ ಜಿ.ಟಿ.ದೇವೇಗೌಡ ಕೂಡ ಪಾದಯಾತ್ರೆ ಮುಂದೂಡುವಂತೆ ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ನೋಡಿದರೆ ಪಾದಯಾತ್ರೆ ಆಗಸ್ಟ್‌ 3ರಿಂದ ಆರಂಭ ಕಷ್ಟ ಎನ್ನುವ ಸಂದೇಶವಂತೂ ರವಾನಿಸಿದೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಬಳ್ಳಾರಿ ಪಾದಯಾತ್ರೆ ಅಥವಾ ಶಿವಕುಮಾರ್‌ ಅವರ ಮೇಕೆದಾಟು ಪಾದಯಾತ್ರೆಯನ್ನು ವಿಜಯೇಂದ್ರ ಅವರ ಮೈಸೂರು ಪಾದಯಾತ್ರೆ ಸರಿಗಟ್ಟಬಲ್ಲದೇ ?

ಸುದ್ದಿ ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು)

Whats_app_banner