Karnataka Politics: ಕರ್ನಾಟಕದಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು; ದೆಹಲಿಯಿಂದ ರಾಜ್ಯದತ್ತ ವೀಕ್ಷಕರು
ಇನ್ನೂ ಕೂಡ ಬಿಜೆಪಿಯು ವಿಧಾನಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದೀಗ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡಿದೆ. ದೆಹಲಿಯಿಂದ ವೀಕ್ಷಕರನ್ನು ಬೆಂಗಳೂರಿಗೆ ಕಳುಹಿಸುತ್ತಿದೆ.
ಬೆಂಗಳೂರು: ಕರ್ನಾಟಕದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿ 2 ತಿಂಗಳು ಕಳೆಯುತ್ತಾ ಬಂದಿದೆ. ಅಲ್ಲದೇ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಆದರೆ ಇನ್ನೂ ಕೂಡ ಬಿಜೆಪಿಯು ವಿಧಾನಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಇದೀಗ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶ ಮಾಡಿದೆ. ದೆಹಲಿಯಿಂದ ವೀಕ್ಷಕರನ್ನು ಬೆಂಗಳೂರಿಗೆ ಕಳುಹಿಸುತ್ತಿದೆ.
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಕೇಂದ್ರೀಯ ವೀಕ್ಷಕರಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ನೇಮಿಸಿದ್ದಾರೆ. ಅವರು ಶೀಘ್ರದಲ್ಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಮತ್ತು ರಾಷ್ಟ್ರೀಯ ವಕ್ತಾರ ಅನಿಲ್ ಬಲುನಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರ ಸರ್ಕಾರವನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ನಾಯಕನನ್ನು ಬಿಜೆಪಿ ಆಯ್ಕೆ ಮಾಡಬೇಕಿದೆ. ಜಾತಿ ಲೆಕ್ಕಾಚಾರ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ, ಸಂಘ ಪರಿವಾರದ ಮೂಲ ಸೇರಿದಂತೆ ಹಲವು ಆಯಾಮಗಳಿಂದ ಪರಿಶೀಲನೆ ನಡೆಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಆಯ್ಕೆ ಮಾಡುವ ಹೊಣೆಗಾರಿಕೆ ಇದೆ. ಸಂಘ ಪರಿವಾರದ ಮೂಲ ಪರಿಗಣನೆಗೆ ತೆಗೆದುಕೊಂಡರೆ ಎಸ್.ಸುರೇಶ್ ಕುಮಾರ್ ಇಲ್ಲವೇ ವಿ. ಸುನೀಲ್ ಕುಮಾರ್ ಅವರನ್ನು ಆಯ್ಕೆ ಮಾಡಬಹುದು. ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವುದಾದರೆ ಆರ್. ಅಶೋಕ್ ಅಥವಾ ಡಾ. ಅಶ್ವತ್ ನಾರಾಯಣ್ ಪರಿಗಣಿಸಬಹುದು. ಆದರೆ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ.
ಲಿಂಗಾಯತ ಸಮುದಾಯಕ್ಕೆ ಆದ್ಯತೆ ಕೊಡುವುದಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪ್ರಖರ ಹಿಂದುತ್ವವಾದಿ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಅರವಿಂದ್ ಬೆಲ್ಲದ ಪರಿಗಣಿಸಬಹುದು. ಆದರೆ ಕೆಲವು ಮಾಜಿ ಸಚಿವರನ್ನು ಆಯ್ಕೆ ಮಾಡಲು ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ. ಅವರ ಮೇಲೆ ಗಂಭೀರ ಭ್ರಷ್ಟಾಚಾರದ ಆಪಾದನೆಗಳಿರುವುದು ಮುಖ್ಯ ಕಾರಣ. ಮತ್ತೆ ಈ ಆಪಾದನೆಗಳು ಮುನ್ನೆಲೆಗೆ ಬಂದರೆ ಪಕ್ಷ ಇಕ್ಕಟ್ಟಿಗೆ ಸಿಲುಕುವ ಭಯ ಮುಖಂಡರದ್ದು.
ಇವರಾರಿಗೂ ಸಿದ್ದರಾಮಯ್ಯ ಅವರಿಗೆ ಸರಿ ಸಮಾನವಾಗಿ ನಿಲ್ಲುವ ಚಾಕಚಕ್ಯತೆ ಇಲ್ಲ ಎಂಬ ಮಾತಿದೆ. ಪ್ರತಿಪಕ್ಷ ನಾಯಕನ ಸ್ಥಾನವನ್ನು ನಿಭಾಯಿಸಿದ್ದ ಯಡಿಯೂರಪ್ಪ ಮತ್ತು ಅನುಭವದ ಆಧಾರದ ಮೇಲೆ ಅರ್ಹತೆ ಹೊಂದಿದ್ದ ಕೆ. ಎಸ್.ಈಶ್ವರಪ್ಪ ವಿಧಾನಸಭೆಗೆ ಆಯ್ಕೆಯಾಗಿಲ್ಲ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷದಲ್ಲಿ ಇಲ್ಲ. ಇದೀಗ ಕೇಂದ್ರವೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು ಶೀಘ್ರದಲ್ಲಿಯೇ ವಿರೋಧ ಪಕ್ಷದ ನಾಯಕನನ್ನು ಆಯ್ಕೆಮಾಡುವ ಸಾಧ್ಯತೆಯಿದೆ.