ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಧ್ಯಕ್ಷರು, ಅವರ ಅಧ್ಯಕ್ಷಗಿರಿಯ ಸಮಸ್ಯೆಗಳು; ಬಹಿರಂಗವಾಗಿದೆ ಕರ್ನಾಟಕ ರಾಜಕೀಯ ಪಕ್ಷಗಳ ಒಳಗುಟ್ಟು
ಕರ್ನಾಟಕ ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧ್ಯಕ್ಷಗಿರಿಗಾಗಿ ಬೀದಿಜಗಳ ಮಾಡಲು ಆರಂಭಿಸಿವೆ. ಮೂರು ಪಕ್ಷಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. ಆರಂಭದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಒಳಜಗಳಗಳು ಇದೀಗ ಬೀದಿರಂಪವಾಗಿದೆ. ಈ ಕುರಿತ ಒಂದು ವಿಶ್ಲೇಷಣೆ. (ವರದಿ: ಎಚ್.ಮಾರುತಿ).

ಬೆಂಗಳೂರು: ಕರ್ನಾಟಕದ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ರಾಜ್ಯ ಅಧ್ಯಕ್ಷ ಸ್ಥಾನ ಕುರಿತು ಬಹಿರಂಗವಾಗಿಯೇ ಚರ್ಚೆ ನಡೆಯುತ್ತದೆ. ಅದರಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಈ ಸ್ಥಾನಕ್ಕಾಗಿ ಅಥವಾ ಈ ಸ್ಥಾನದಲ್ಲಿ ಕುಳಿತಿರುವವವರನ್ನು ಕೆಳಗಿಳಿಸಲು ಹುನ್ನಾರ ಆರಂಭವಾಗಿದೆ. ಮುಗುಮ್ಮಾಗಿ ನಡೆಯುತ್ತಿದ್ದ ಈ ವಿದ್ಯಮಾನ ಬಹಿರಂಗವಾಗಿದ್ದು ಆಯಾ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಮುಜುಗರವನ್ನುಂಟು ಮಾಡಿದೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಲಿ ಅಧ್ಯಕ್ಷರನ್ನು ಕೆಳಗಿಳಿಸಲು ಬಹಿರಂಗ ಚರ್ಚೆಗಳು ನಡೆಯುತ್ತಿವೆ. ಪಕ್ಷಗಳ ಅಧ್ಯಕ್ಷರನ್ನು ಎದುರಾಳಿ ಪಕ್ಷಗಳು ಟೀಕಿಸುವುದು ವಾಡಿಕೆ. ತಮ್ಮ ಪಕ್ಷದ ಅಧ್ಯಕ್ಷರನ್ನು ಸಮರ್ಥಿಸಿಕೊಳ್ಳುವುದು ಆ ಪಕ್ಷದ ಮುಖಂಡರ ಕರ್ತವ್ಯವಾಗಿರುವುದೂ ಸಂಪ್ರದಾಯ. ಆದರೆ ಕರ್ನಾಟಕದ ಮಟ್ಟಿಗೆ ಇದು ಉಲ್ಟಾಪಲ್ಟಾ ಆಗಿದೆ. ಬೆಳಗಾವಿಯ ಜಾರಕಿಹೊಳಿ ಸಹೋದರರು ತಮ್ಮ ತಮ್ಮ ಪಕ್ಷಗಳ ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿರುವುದು ಮತ್ತೂ ಒಂದು ವಿಶೇಷ. ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರನ್ನು ಮತ್ತು ರಮೇಶ್ ಜಾರಕಿಹೊಳಿ ಬಿಜೆಪಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್‌ನಲ್ಲಿ ಏನು ನಡೆದಿದೆ?
ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಜಾರಕಿಹೊಳಿ, ಕೆ ಎನ್ ರಾಜಣ್ಣ ಮತ್ತು ಡಾ.ಜಿ. ಪರಮೇಶ್ವರ್ ಬಹಿರಂಗವಾಗಿಯೇ ಮಾತನಾಡಲು ಆರಂಭಿಸಿದ್ದಾರೆ. ಇವರಿಗೆ ಸಿದ್ದರಾಮಯ್ಯ ಬೆಂಬಲಿಗ ಅನೇಕ ಶಾಸಕರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಕೆರಳಿದ ಡಿಕೆ ಶಿವಕುಮಾರ್ ಒಂದು ಹಂತದಲ್ಲಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ದೊರೆಯುವುದಿಲ್ಲ ಅಥವಾ ಮಾಧ್ಯಮಗಳು ಕೊಡಿಸುವುದಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದರು.
ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಿಂದ ಮೌನವಾಗಿದ್ದ ಈ ಸಚಿವರು ಇದೀಗ ‘ಒಬ್ಬ ವ್ಯಕ್ತಿ ಒಂದು ಹುದ್ದೆ‘ ಕುರಿತು ಮಾತನಾಡಲು ಆರಂಭಿಸಿದ್ದಾರೆ. ಶಿವಕುಮಾರ್ ಅವರು ಎರಡು ಪ್ರಮುಖ ಖಾತೆಗಳನ್ನು ಹೊಂದಿದ್ದು, ಪಕ್ಷದ ಸಂಘಟನೆಗೆ ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತರನ್ನಾಗಿ ಮಾಡಿ ಸಚಿವರಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂಬ ವಾದ ಸರಣಿಯನ್ನು ಮುಂದಿಟ್ಟಿದ್ದಾರೆ.
ಶಿವಕುಮಾರ್ ಅವರು 2020 ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅವಧಿ ಪೂರ್ಣಗೊಂಡಿದೆ. ಮುಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗುತ್ತಿದ್ದು, ಪೂರ್ಣ ಪ್ರಮಾಣದ ಅಧ್ಯಕ್ಷರ ಅವಶ್ಯಕತೆ ಇದೆ ಎನ್ನುವುದು ಇವರ ವಾದ. ಈ ವಾದ ಪ್ರತಿವಾದ ಹೇಳಿಕೆ ಪ್ರತಿ ಹೇಳಿಕೆ ಯಾವ ಮಟ್ಟ ತಲುಪಿತು ಎಂದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳಬೇಕಾಯಿತು.
ಹಾದಿ ಬೀದಿರಂಪವಾದ ಬಿಜೆಪಿ ಅಧ್ಯಕ್ಷಗಿರಿ ಹೋರಾಟ
ಬಿಜೆಪಿ ಪರಿಸ್ಥಿತಿ ಮತ್ತಷ್ಟು ವಿಕೋಪ ತಲುಪಿದೆ. ಪಕ್ಷದ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಬಣ ಬಹಿರಂಗವಾಗಿಯೇ ಸಮರ ಸಾರಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ರಾಜ್ಯ ಅಧ್ಯಕ್ಷರಾಗಿ 2023ರ ನವಂಬರ್‌ನಲ್ಲಿ ಪದಗ್ರಹಣ ಮಾಡಿದ್ದಾರೆ. ಅಂದಿನಿಂದಲೂ ಈ ಬಣ ಅವರನ್ನು ಬಹಿರಂಗವಾಗಿಯೇ ವಿರೋಧಿಸುತ್ತಾ ಬಂದಿದೆ. ಪಕ್ಷದ ಅಧ್ಯಕ್ಷ ಸ್ಥಾನದ ಜತೆಗೆ ಜಾರಕಿಹೊಳಿ ಮತ್ತು ಯತ್ನಾಳ್, ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸುತ್ತಾ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಾ ಬಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ಸಿದ್ದಾಂತಗಳನ್ನು ಬದಿಗಿಟ್ಟು ಆಡಳಿತಾರೂಢ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ ಎಂದೂ ಟೀಕಿಸುತ್ತಿದ್ದಾರೆ. ವಿಜಯೇಂದ್ರ ಅವರ ಯಾವುದೇ ಹೋರಾಟಕ್ಕೂ ಈ ಬಣ ಅಡ್ಡಿ ಒಡ್ಡುತ್ತಲೇ ಬಂದಿದೆ.
ಪರಸ್ಪರ ಒಗ್ಗಟ್ಟಿನ ಕೊರತೆ, ಅನುಭವಿ ನಾಯಕರ ಕೊರತೆಯಿಂದಾಗಿ ಸದನದಲ್ಲೂ ಬಿಜೆಪಿ ದುರ್ಬಲ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಅಧ್ಯಕ್ಷರಿಗೂ ವಿಪಕ್ಷ ನಾಯಕರಿಗೂ ತಾಳಮೇಳವೇ ಹೊಂದಾಣಿಕೆಯಾಗುತ್ತಿಲ್ಲ. ಇದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ವಿಜಯೇಂದ್ರ ವಿರೋಧಿ ಬಣ ಯಾರನ್ನು ʼಸಂತೋಷ‘ಪಡಿಸಲು ಯಡಿಯೂರಪ್ಪ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಮೂರು ವರ್ಷಗಳ ಅವಧಿಗಾದರೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ. ವಿಜಯೇಂದ್ರ ಬದಲಾಗಲಿದ್ದಾರೆಯೇ ಅಥವಾ ಅವರೇ ಮುಂದುವರೆಯಲಿದ್ದಾರೆಯೇ ಎನ್ನವುದು ನಿಗೂಢವಾಗಿದೆ.
ಜೆಡಿಎಸ್ ಇಬ್ಭಾಗ ಖಚಿತ
ಪಕ್ಷ ಹೋಳಾಗುವ ಸಾಧ್ಯತೆಗಳು ದಟ್ಟವಾಗಿದ್ದರೂ ಪಕ್ಷದ ರಾಜ್ಯ ಅಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟ ಕಟ್ಟಲು ನಿರ್ಧರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸತತ ಮೂರು ಸೋಲುಗಳನ್ನು ಕಂಡಿದ್ದಾರೆ. ಅವರ ನಿರಾಸಕ್ತಿಯಿಂದಾಗಿಯೇ ಇದುವರೆಗೂ ಪಟ್ಟಾಭಿಷೇಕ ನಡೆದಿಲ್ಲ. ಆದರೂ ಏಪ್ರಿಲ್ ಒಳಗಾಗಿ ನೂತನ ಅಧ್ಯಕ್ಷರು ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಕ್ಕಷ್ಟೇ ಸರ್ಕಾರ ಸೀಮಿತವಾಗಿದೆ. ಅಲ್ಲಿಂದೀಚೆಗೆ ಸಿದ್ದರಾಮಯ್ಯ ಸರ್ಕಾರ ಮುಂದೆ ಸಾಗಿಲ್ಲ. ಕೇಳಬೇಕಾದ ಬಿಜೆಪಿ ಅಧ್ಯಕ್ಷರು ಮತ್ತು ಎರಡೂ ಸದನಗಳ ನಾಯಕರು ಪ್ರಬಲರಾಗಿಲ್ಲ. ಇನ್ನು ಇತರ ನಾಯಕರು ಜಾಗೃತರಾಗಲು ಹಿಂದೂ ಮುಸ್ಲಿಂ ಗಲಾಟೆಗಳೇ ಆಗಬೇಕು. ಕುಮಾರಸ್ವಾಮಿ ಅವರಿಗೆ ಇರುವ 19 ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಕಾಗಿದೆ. ಇನ್ನು ಆರು ಕೋಟಿ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರಾದರೂ ಯಾರು?
