ಕನ್ನಡ ಸುದ್ದಿ  /  Karnataka  /  Karnataka Politics: If Ut Khader Speaker Who Will Be Minister From Coastal Districts Political Updates In Kannada Pcp

Karnataka Politics: ಯುಟಿ ಖಾದರ್ ಸ್ಪೀಕರ್ ಆದ್ರೆ ಕರಾವಳಿಯಲ್ಲಿ ಮಂತ್ರಿ ಆಗೋರು ಯಾರು?

Karnataka Congress Government: ಹೈಕಮಾಂಡ್ ಯಾವ ಲೆಕ್ಕಾಚಾರ ಮಾಡುತ್ತಿದೆಯೋ ಗೊತ್ತಿಲ್ಲ, ಆದರೆ ಕರಾವಳಿ ಕರ್ನಾಟಕದಲ್ಲಿ ಆಯ್ಕೆಯಾದ ಶಾಸಕರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಖಾದರ್ ಅವರನ್ನು ಸ್ಪೀಕರ್ ಮಾಡಿದರೆ, ಜಿಲ್ಲೆಯಲ್ಲಿ ಅಷ್ಟೇ ಪ್ರಬಲ ನಾಯಕರಿಗೆ ಮಂತ್ರಿ ಸ್ಥಾನ ನಿರೀಕ್ಷೆಯಲ್ಲಿದ್ದಾರೆ ಪಕ್ಷದ ಕಾರ್ಯಕರ್ತರು.

Karnataka Politics: ಯುಟಿ ಖಾದರ್ ಸ್ಪೀಕರ್ ಆದ್ರೆ ಕರಾವಳಿಯಲ್ಲಿ ಮಂತ್ರಿ ಆಗೋರು ಯಾರು?
Karnataka Politics: ಯುಟಿ ಖಾದರ್ ಸ್ಪೀಕರ್ ಆದ್ರೆ ಕರಾವಳಿಯಲ್ಲಿ ಮಂತ್ರಿ ಆಗೋರು ಯಾರು?

ಮಂಗಳೂರು: ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕರ್ನಾಟಕ ಕರಾವಳಿಯ ಯಾವುದೇ ಕಾಂಗ್ರೆಸ್ ಶಾಸಕರೂ ಇರಲಿಲ್ಲ. ಹೋಗಲಿ, ಎರಡನೇ ಕಂತಿನಲ್ಲಿ ಕೊಡುತ್ತಾರೋ ಎಂದರೆ, ಮಂಗಳೂರು ಶಾಸಕ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಲು ಮನವೊಲಿಸಿ, ಉತ್ತರ ಕನ್ನಡ ಜಿಲ್ಲೆಯ ಆರ್.ವಿ.ದೇಶಪಾಂಡೆ ಅವರಿಗೆ ಸಚಿವಪಟ್ಟ ನೀಡುವ ಯೋಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸೋತು ಸುಣ್ಣವಾಗಿರುವ ಪಕ್ಷ ಬಲವರ್ಧನೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಸೀಟ್ ಗಳಿಸಿರುವ ಪಕ್ಷಕ್ಕೆ ಬಲವಾದ ನಾಯಕತ್ವ ಅಗತ್ಯವಿದ್ದು, ಯಾರು ಉಸ್ತುವಾರಿ ಸಚಿವರಾಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಒಂಭತ್ತನೇ ಬಾರಿ ಆಯ್ಕೆಯಾದ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನಿಯುಕ್ತಿಗೊಳಿದಾಗ, ದೇಶಪಾಂಡೆ ಪ್ರಬಲವಾಗಿ ಇದು ಹಂಗಾಮಿಯಷ್ಟೇ, ಪೂರ್ಣಾವಧಿ ನನಗೆ ಬೇಡವೇ ಬೇಡ, ಒಂದು ವೇಳೆ ಮಂತ್ರಿಯಾಗದಿದ್ದರೂ ಚಿಂತೆಯಿಲ್ಲ, ಸ್ಪೀಕರ್ ಬೇಡವೇ ಬೇಡ ಎಂದಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸಿಗರು ಪಕ್ಷದ ವರಿಷ್ಠರು ಹೇಳಿದ್ದಕ್ಕೆ ತಲೆ ಅಲ್ಲಾಡಿಸುವಷ್ಟು ಬಂಡಾಯಗಾರರಲ್ಲದ ಕಾರಣ, ಐದನೇ ಬಾರಿ ಆಯ್ಕೆಯಾದ ಯು.ಟಿ.ಖಾದರ್ ಅವರಿಗೆ ಮೊದಲ ಹಂತದಲ್ಲಿ ಸ್ಥಾನ ಕೊಟ್ಟಿರಲಿಲ್ಲ. ಇದೀಗ ಸ್ಪೀಕರ್ ಪಟ್ಟ ನೀಡಿ, ಮಂತ್ರಿ ಸ್ಥಾನ ವಂಚಿತರಾದರು. ಹೀಗಾಗಿ ದಕ್ಷಿಣ ಕನ್ನಡದಿಂದ 2, ಉತ್ತರ ಕನ್ನಡದಿಂದ 4 ಸೇರಿ ಒಟ್ಟು 6 ಮಂದಿ ಕಾಂಗ್ರೆಸ್ ಶಾಸಕರು ಕರಾವಳಿ ಭಾಗದಿಂದ ಆಯ್ಕೆಗೊಂಡರೂ ದೇಶಪಾಂಡೆ ಒಬ್ಬರೇ ಆಯ್ಕೆಯಾದ ಶಾಸಕರಲ್ಲಿ ಸಚಿವರಾಗುವ ಸಾಧ್ಯತೆ ಇದೆ.

ಈಗ ಯಾರಾಗಿದ್ದಾರೆ?

ಈಗಿನ ಸಂಪುಟದಲ್ಲಿ ಸಿದ್ದು ಬೆಂಬಲಿಗರದ್ದೇ ಪಾರಮ್ಯ. ಒಂದಿಬ್ಬರು ಯಾವುದೇ ಬಣದಲ್ಲೂ ಗುರುತಿಸಿಕೊಳ್ಳದವರು. ಹೀಗಾಗಿಯೇ ಯು.ಟಿ.ಖಾದರ್ ಬದಲಿಗೆ ಸಿದ್ದು ಪರಮಾಪ್ತ ಜಮೀರ್ ಅಹಮದ್ ಖಾನ್ ಅವರಿಗೆ ಮೊದಲ ಪ್ರಾಶಸ್ತ್ಯ ದೊರೆಯಿತು. ಇನ್ನು ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಪೂರ್ಣ ತತ್ವಸಿದ್ಧಾಂತ ಪ್ರತಿಪಾದಕರು. ಎಂ.ಬಿ.ಪಾಟೀಲ್ ಅವರೂ ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿ ಪ್ರಭಾವಿಯಾಗಿದ್ದರೆ, ಕೆ.ಜೆ.ಜಾರ್ಜ್ ಕಳೆದ ಬಾರಿ ಪ್ರಕರಣವೊಂದರಲ್ಲಿ ರಾಜೀನಾಮೆ ನೀಡಿದ್ದರೂ ಮತ್ತೆ ಸಚಿವರಾದವರು. ಅವರಿಗೂ ಮೊದಲ ಪ್ರಾಶಸ್ತ್ಯ ದೊರಕಿದೆ. ರಾಮಲಿಂಗಾರೆಡ್ಡಿ ನಿರೀಕ್ಷಿತ ಸೇರ್ಪಡೆಯಾದರೆ, ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಂಕ್ ಖರ್ಗೆ, ಜಿ.ಪರಮೇಶ್ವರ್ ಮತ್ತು ಕೆ.ಎಚ್.ಮುನಿಯಪ್ಪ ನಾನಾ ಕಾರಣಗಳಿಂದ ಮೊದಲ ಹಂತದಲ್ಲಿ ಸಚಿವರಾದವರು.

ದಕ್ಷಿಣ ಕನ್ನಡದಲ್ಲಿ ಏನು ಪರಿಣಾಮ?

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಪ್ರಭಾವ ಬೀರುತ್ತಿರುವ ಯು.ಟಿ.ಖಾದರ್, ಸ್ಪೀಕರ್ ಆದ ಮೇಲೆ ಅವರು ಪಕ್ಷದ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ಜಿಲ್ಲೆಯ ಮೂಲದ ಪ್ರಭಾವಿ ವಿಧಾನಪರಿಷತ್ ಸದಸ್ಯರನ್ನು ಮಂತ್ರಿಯಾಗಿ ಮಾಡಿ, ಅವರನ್ನು ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿಸುವ ಯೋಜನೆಯೂ ವರಿಷ್ಠರ ಮುಂದಿದ್ದು, ಹಾಗೇನಾದರೂ ಆದರೆ, ಬಿ.ಕೆ.ಹರಿಪ್ರಸಾದ್ ಮತ್ತು ಮಂಜುನಾಥ ಭಂಡಾರಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿಗಳಾಗಬಹುದು. ಈಗಾಗಲೇ ಕಾಂಗ್ರೆಸ್ ನ ದಕ್ಷಿಣ ಕನ್ನಡ ಜಿಲ್ಲಾ ಅನಧಿಕೃತ ಹೈಕಮಾಂಡ್ ಆಗಿರುವ ರಮಾನಾಥ ರೈ ನಾನು ವರಿಷ್ಠರು ಹೇಳಿದ ಯಾವುದೇ ಹುದ್ದೆ ಸ್ವೀಕರಿಸಲು ಸಿದ್ಧ ಎಂದಿದ್ದು, ಯಾವ ನಿರ್ಧಾರವನ್ನು ಸಿದ್ದು-ಡಿಕೆಶಿ ಜೋಡಿ ಕೈಗೆತ್ತಿಕೊಳ್ಳುತ್ತದೋ ಕಾದು ನೋಡಬೇಕು.

ವರದಿ: ಹರೀಶ ಮಾಂಬಾಡಿ, ಮಂಗಳೂರು

 

IPL_Entry_Point