ವಿಜಯೇಂದ್ರ–ಯತ್ನಾಳ್ ಬಣಗಳ ನಡುವೆ ಹೆಚ್ಚಿದ ಭಿನ್ನಮತ; ಸಮಸ್ಯೆ ಬಗೆಹರಿಸಲು ಬಿಜೆಪಿ ತಟಸ್ಥ ಬಣ ಆಗ್ರಹ, ಹೊಸ ಬೆಳವಣಿಗೆಯ ನಿರೀಕ್ಷೆ
ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ–ಯತ್ನಾಳ್ ಬಣಗಳ ನಡುವೆ ಹೆಚ್ಚುತ್ತಿರುವ ಭಿನ್ನಮತವು ಪಕ್ಷದ ತಟಸ್ಥ ಬಣಕ್ಕೆ ಸಮಸ್ಯೆ ತಂದೊಡ್ಡಿದೆ. ಭಿನ್ನಮತ ಬಗೆಹರಿಸುವಂತೆ ತಟಸ್ಥ ಬಣವು ರಾಜ್ಯ ಮತ್ತು ದೆಹಲಿಯ ವರಿಷ್ಠರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. (ವರದಿ: ಎಚ್.ಮಾರುತಿ)
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಎರಡು ಬಣಗಳು ಸಕ್ರಿಯವಾಗಿರುವುದು ಪಕ್ಷದ ಹೈಕಮಾಂಡ್‌ಗಿಂತ ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಳ್ಳದ ತಟಸ್ಥ ಬಣಕ್ಕೆ ಆತಂಕ ಮೂಡಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ರೆಬೆಲ್ ಗುಂಪಿನ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಇದರಿಂದ ಪಕ್ಷಕ್ಕೆ ರಾಜ್ಯದಾದ್ಯಂತ ಹಿನ್ನೆಡೆಯಾಗುತ್ತಿದೆ ಎನ್ನುವುದು ತಳಸ್ಪರ್ಷಿ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.
ಈ ಎರಡೂ ಬಣಗಳ ಆಂತರಿಕ ಮತ್ತು ಬಹಿರಂಗ ಕಚ್ಚಾಟ ತಿಕ್ಕಾಟಗಳಿಂದ ಬೇಸತ್ತ ತಟಸ್ಥ ಬಣದ ಮುಖಂಡರು ರಾಜ್ಯ ಮತ್ತು ದೆಹಲಿಯ ವರಿಷ್ಠರ ಗಮನ ಸೆಳೆಯುತ್ತಲೇ ಇದ್ದರೂ ಪ್ರಯೋಜನವಾಗಿಲ್ಲ. ಈ ಬಣ ರಾಜಕೀಯಕ್ಕೆ ಇತಿಶ್ರೀ ಹಾಡುವಂತೆ ನಿರಂತರವಾಗಿ ಗಮನಕ್ಕೆ ತರುತ್ತಿದ್ದರೂ ವರಿಷ್ಠರು ತಲೆ ಕೆಡೆಸಿಕೊಂಡಿಲ್ಲ. ಈ ಎರಡೂ ಬಣಗಳಿಗೆ ನೀರೆರದು ಪೋಷಣೆ ಮಾಡುತ್ತಿರುವವರು ದೆಹಲಿಯ ವರಿಷ್ಠರೇ ಆಗಿದ್ದು ನಮ್ಮ ಕಾಳಜಿ ಅರಣ್ಯರೋಧನವಾಗಿದೆ ಎಂದು ತಟಸ್ಥ ಬಣದ ನಾಯಕರೊಬ್ಬರು ಅಲವತ್ತುಕೊಳ್ಳುತ್ತಾರೆ. ಸರಿದಾರಿಗೆ ತರಬೇಕಾದವರೇ ಎರಡೂ ಬಣಗಳ ಮುಖಂಡರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವಾಗ ಯಾರಲ್ಲಿ ಹೇಳಿಕೊಳ್ಳುವುದು ಎನ್ನುವುದು ಇವರ ಪ್ರಶ್ನೆಯಾಗಿದೆ.
ಈ ಎರಡೂ ಬಣಗಳ ಪರಸ್ಪರ ಟೀಕೆ–ಟಿಪ್ಪಣಿಗಳಿಂದ ಪ್ರಮುಖ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಾದ ಬಿಜೆಪಿ ದುರ್ಬಲವಾಗಿದೆ. ಸರ್ಕಾರದ ಭ್ರಷ್ಟಾಚಾರ, ಸಚಿವರೇ ಭಾಗಿಯಾಗಿರುವ ಹಗರಣಗಳು, ದುರಾಡಳಿತ, ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಮೊದಲಾದ ಆಂತರಿಕ ಬಡಿದಾಟದಂತಹ ಮಹತ್ವದ ವಿದ್ಯಮಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. ಯಾವುದೇ ಹಂತದಲ್ಲಿಯೂ ಪಕ್ಷದ ಅಧ್ಯಕ್ಷರು ಅಥವಾ ವಿಧಾನಮಂಡಲದ ವಿಪಕ್ಷ ನಾಯಕರು ವಿಫಲವಾಗುತ್ತಲೇ ಬಂದಿದ್ದಾರೆ.
ಸುಮ್ಮನೆ ಊಹಿಸಿಕೊಳ್ಳಿ, ವಕ್ಫ್ ಆಸ್ತಿ ಹೆಸರಿನಲ್ಲಿ ರೈತರಿಗೆ ನೋಟಿಸ್ ಕೊಡುತ್ತಿರುವ ಸಂದರ್ಭದಲ್ಲಿ ಒಂದು ವೇಳೆ ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದರೆ ಜಮೀರ್ ಅಹಮದ್ ರಾಜೀನಾಮೆ ಕೊಡಿಸದೇ ಇರುತ್ತಿರಲಿಲ್ಲ. ಪ್ರಬಲ ವಿಪಕ್ಷ ನಾಯಕ ಅಥವಾ ಪಕ್ಷದ ಅಧ್ಯಕ್ಷನೊಬ್ಬನಿದ್ದರೆ ಈ ಹೊತ್ತಿಗೆ ಸರ್ಕಾರದ ವಿರುದ್ಧ ಒಂದು ಅಲೆಯನ್ನೇ ಸೃಷ್ಟಿ ಮಾಡಿರುತ್ತಿದ್ದರು. ಆದರೆ ವಿಜಯೇಂದ್ರ ಮತ್ತು ಯತ್ನಾಳ್ ಪ್ರತ್ಯೇಕವಾಗಿ ನಡೆಸುತ್ತಿರುವ ಹೋರಾಟ ಆಡಳಿತಾರೂಢ ಕಾಂಗ್ರೆಸ್‌ಗೆ ತಮಾಷೆಯಾಗಿ ಕಾಣಿಸಿತೇ ಹೊರತು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಪಕ್ಷದ ಮುಖಂಡರೊಬ್ಬರ ಪ್ರಕಾರ ಎರಡೂ ಬಣಗಳಲ್ಲಿ ಹೆಚ್ಚೆಂದರೆ ಶೇ 10ರಷ್ಟು ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಮಾತ್ರ ಎರಡೂ ಬಣಗಳಲ್ಲಿ ಗುರುತಿಸಿಕೊಂಡಿರಬಹುದು. ಉಳಿದ ಶೇ 90ರಷ್ಟು ಮಂದಿ ತಟಸ್ಥ ಬಣದಲ್ಲೇ ಉಳಿದುಕೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಾರೆ. ಇವರೆಲ್ಲರೂ ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆಗೆ ಆದ್ಯತೆ ನೀಡಿದ್ದಾರೆ. ಉಭಯ ಬಣಗಳ ಆಂತರಿಕ ಹೋರಾಟಕ್ಕೆ ಈ ಬಹುಸಂಖ್ಯಾತ ಗುಂಪು ಎಲ್ಲ ಚಟುವಟಿಕೆಗಳಿಂದ ದೂರ ಉಳಿದಿದೆ. ವ್ಯಕ್ತಿ ಪ್ರತಿಷ್ಠೆಗಾಗಿ ಹುಟ್ಟಿಕೊಂಡಿರುವ ಎರಡೂ ಗುಂಪುಗಳನ್ನು ಪೋಷಿಸುವ ಬದಲು ಸಂಘಟನೆಗೆ ಒತ್ತು ನೀಡಬೇಕು ಎಂದೂ ಆಗ್ರಹಪಡಿಸುತ್ತಾರೆ.
ಈ ತಟಸ್ಥ ಬಣದ ಸಮಸ್ಯೆ ಏನೆಂದರೆ ಬಹಿರಂಗವಾಗಿ ಯಾವುದನ್ನೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ನಮ್ಮ ಅಭಿಪ್ರಾಯಗಳು ಒಂದೋ ಎರಡರಲ್ಲಿ ಒಂದು ಬಣಕ್ಕೆ ಅಪಥ್ಯವಾಗಬಹುದು ಇಲ್ಲವೇ ಮೂರನೇ ಬಣವನ್ನು ಹುಟ್ಟು ಹಾಕಲು ಪ್ರೇರೇಪಣೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಬಣದ ವಿರುದ್ಧ ನಿಯೋಗವೂ ತೆರಳುವ ಹಾಗಿಲ್ಲ. ಹಾಗೆಂದು ಇನ್ನು ಸುಮ್ಮನೆ ಕೂರುವುದಿಲ್ಲ. ಸೂಕ್ತ ವೇದಿಕೆಯಲ್ಲಿ ವಿಷಯ ಪ್ರಸ್ತಾಪಿಸಿ ಪಕ್ಷಕ್ಕೆ ಮತ್ತಷ್ಟು ಹಾನಿಯಾಗುವುದುನ್ನು ನಿಯಂತ್ರಿಸಬೇಕು ಎಂದು ಆಗ್ರಹಪಡಿಸುತ್ತೇವೆ ಎನ್ನುತ್ತಾರೆ.
ವರಿಷ್ಠರು ರಾಜ್ಯಕ್ಕೆ ಆಗಮಿಸಿದಾಗ ಅವರ ಮುಂದೆ ವಿಷಯ ಪ್ರಸ್ತಾಪಿಸುತ್ತೇವೆ. ಎರಡು ಗುಂಪುಗಳ ನಡುವಿನ ಭಿನ್ನಮತ ಎಂದು ಸುಮ್ಮನೆ ಕೂರುವ ಹಾಗಿಲ್ಲ. ಇದನ್ನೇ ಮುಂದುವರೆಯಲು ಬಿಟ್ಟರೆ ದೇಹವನ್ನು ಕಾಡುವ ಹುಣ್ಣಿನಂತೆ ಬೆಳೆಯುತ್ತದೆ ಎನ್ನುವುದು ಇವರ ಅಭಿಪ್ರಾಯವಾಗಿದೆ.
ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದು ಮುಖ್ಯ ಅಲ್ಲ. ಎರಡೂ ಬಣಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಸಮರ್ಥನೆ ಮಾಡಿಕೊಳ್ಳುತ್ತಾರೆಯಾದರೂ ನೋಡುವವರಿಗೆ ಪರಸ್ಪರ ಮುಖಕ್ಕೆ ರಾಡಿ ಎರಚಿಕೊಳ್ಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡ ಕಾರ್ಯಕರ್ತ ಇರಲಿಕ್ಕಿಲ್ಲ. ಗಂಭೀರವಾಗಿ ಪರಿಗಣಿಸಬೇಕಾದ ನಮ್ಮ ಹೋರಾಟ ನಗೆಪಾಟಲಿಗೀಡಾಗುತ್ತಿದೆ. ಸನಿಹದಲ್ಲಿ ಯಾವುದೇ ಚುನಾವಣೆ ಇಲ್ಲ ಎಂದು ಉದಾಸೀನ ಮಾಡದೇ, ಎರಡೂ ಬಣಗಳನ್ನು ನಿಯಂತ್ರಿಸದಿದ್ದರೆ ಪಕ್ಷಕ್ಕೆ ಹಾನಿ ಕಟ್ಟಿಟ್ಟ ಬುತ್ತಿ ಎಂದು ನಿಷ್ಠಾವಂತ ಬಣದ ಮುಖಂಡರು ಮತ್ತು ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.
ಹೊಷ ವರ್ಷದಲ್ಲಿಯಾದರೂ ಹೈಕಮಾಂಡ್ ಬಣ ರಾಜಕೀಯಕ್ಕೆ ಇತಿಶ್ರೀ ಹಾಡಲಿದೆಯೇ ಎಂದು ಕಾದು ನೋಡಬೇಕಿದೆ.