ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್, ಸಿದ್ದರಾಮಯ್ಯ ಅರ್ಜಿ ವಜಾ: ಮುಡಾ ನಿವೇಶನ ಹಗರಣದಲ್ಲಿ ಕರ್ನಾಟಕ ಸಿಎಂಗೆ ಎದುರಾಯಿತು ಸಂಕಷ್ಟ
ಮುಡಾ ಹಗರಣ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿದ್ದ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿ ವಜಾ ಆಗಿದೆ.
Siddaramaiah MUDA Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (Mysore Urban Development Authority - MUDA) ಮುಡಾದಲ್ಲಿ 14 ನಿವೇಶನ ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ತನಿಖಗೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಈಗ ಸಿಎಂ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆತಿರುವುದು ಅಧಿಕೃತವಾಗಿದ್ದು, ಪ್ರಕರಣ ದಾಖಲಾಗುವುದು ಖಚಿತವಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕುವುದು ಖಚಿತವಾಗಿದೆ. ರಾಜ್ಯಪಾಲರು ನೀಡಿರುವ ಆದೇಶ ಸರಿಯಾಗಿದೆ. ಯಾವುದೇ ಖಾಸಗಿ ವ್ಯಕ್ತಿ ಸಿಎಂ ವಿರುದ್ದ ತನಿಖೆಗೆ ಕೋರಲು ಅವಕಾಶವಿದೆ ಎನ್ನುವ ಮೂಲಕ ಹೈಕೋರ್ಟ್ ದೂರುದಾರರ ಮನವಿಗಳನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ಕರ್ನಾಟಕದಲ್ಲಿ ಆಗುವ ಸಾಧ್ಯತೆಗಳಿವೆ.
ಮುಡಾ ನಿವೇಶನ ಹಂಚಿಕೆ ಹಗರಣದಿಂದ ಸಿದ್ದರಾಮಯ್ಯ ಕುಟುಂಬಕ್ಕೆ ಲಾಭ ಆಗಿದೆ. ಹಾಗಾಗಿ ತನಿಖೆ ಅಗತ್ಯವಿದೆ ಎಂದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. 17(ಎ) ಅಡಿಯಲ್ಲಿ ತನಿಖೆ ನಡೆಸಲು ನ್ಯಾಯಾಲಯದ ಆದೇಶ ನೀಡಿದ್ದು ರಾಜ್ಯಪಾಲರು ತರಾತುರಿಯ ನಿರ್ಣಯ ಕೈಗೊಂಡಿಲ್ಲ. ರಾಜ್ಯಪಾಲರ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಪೀಠವು ಸ್ಪಷ್ಟವಾಗಿ ಹೇಳಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕ್ರಿಯೆ ಮುಂದುವರೆಸಲು ಹೈಕೋರ್ಟ್ ಅನುಮತಿ ನೀಡಿದ್ದು. ಇದಕ್ಕೆ ಇದ್ದ ತಡೆಯಾಜ್ಞೆ ತೆರವುಗೊಂಡಂತಾಗಿದೆ.
ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿದ್ದ ಮುಡಾ ನಿವೇಶನ ಹಂಚಿಕೆ ಹಗರಣದ ವಿಚಾರದಲ್ಲಿ ಕಳೆದ ತಿಂಗಳು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ದೂರುಗಳನ್ನಾಧರಿಸಿ ರಾಜ್ಯಪಾಲರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತಾಗಿ ಒಂದು ತಿಂಗಳಿನಿಂದಲೂ ವಿಚಾರಣೆ ನಡೆದಿತ್ತು. ಅರ್ಜಿ ಸಲ್ಲಿಸಿದವರ ವಕೀಲರು, ಸಿದ್ದರಾಮಯ್ಯ ಪರ ವಕೀಲರು ಹಾಗೂ ರಾಜ್ಯಪಾಲರ ಪರ ವಕೀಲರ ವಾದವನ್ನು ನ್ಯಾಯಾಲಯ ಆಲಿಸಿತ್ತು. ಕಳೆದ ವಾರವೇ ವಾದ ಪ್ರತಿವಾದ ಅಂತಿಮಗೊಳಿಸಿ ತೀರ್ಪು ಕಾಯ್ದಿರಿಸಲಾಗಿತ್ತು.
ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಈ ಕುರಿತು ಮಂಗಳವಾರ ಮಧ್ಯಾಹ್ನ (ಸೆ 24) ತೀರ್ಪು ಪ್ರಕಟಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಸಿಎಂ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾಗೊಳಿಸಿತು. ಈ ಮೂಲಕ ರಾಜ್ಯಪಾಲರು ಕೈಗೊಂಡ ಕ್ರಮ ಸರಿಯಾಗಿದೆ ಎನ್ನುವುದನ್ನು ಸಮರ್ಥಿಸಿಕೊಂಡಿತು.
ತೀರ್ಪು ಪ್ರಕಟಗೊಂಡ ನಂತರ ಮಾತನಾಡಿದ ದೂರುದಾರರಾದ ಟಿ.ಜೆ.ಅಬ್ರಾಹಂ, ಸ್ನೇಹಮಯಿ ಕೃಷ್ಣ, ನಾವು ಯಾವ ಕಾಯಿದೆ ಅಡಿ ದೂರು ನೀಡಿದ್ದೆವೋ ಅದನ್ನೆಲ್ಲಾ ಪೀಠವು ಪರಿಶೀಲಿಸಿದೆ. ಅಲ್ಲದೇ ಆ ಪ್ರಕಾರವೇ ನಮ್ಮ ದೂರು ಪುರಸ್ಕರಿಸಿದೆ. ಆ ಮೂಲಕ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಂಡಿದೆ. ನಾವು ನೀಡಿದ ದೂರಿನ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಟ್ಟ ಅನುಮತಿ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದೆ ಎಂದು ಹೇಳಿದರು.
ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಸಿದ್ಧತೆ
ಹೈಕೋರ್ಟ್‌ನಲ್ಲಿ ತಮ್ಮ ವಿರುದ್ಧದ ತೀರ್ಪು ಬಂದ ವಿಷಯ ತಿಳಿದು ಬೆಂಗಳೂರು ಹೊರ ವಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿದ್ದ ಸಿಎಂ ಸಿದ್ದರಾಮಯ್ಯ ಅಲ್ಲಿಂದ ತರಾತುರಿಯಲ್ಲಿಯೇ ಹೊರಟರು. ಮುಂದಿನ ಕಾನೂನು ಹೋರಾಟಗಳನ್ನು ಕೈಗೊಳ್ಳುವ ಕುರಿತು ನ್ಯಾಯವಾದಿಗಳೊಂದಿಗೆ ಚರ್ಚಿಸಲು ಮುಂದಾದರು. ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜೀನಾಮೆಗೆ ಅಶೋಕ್ ಆಗ್ರಹ
ಘನತೆವೆತ್ತ ರಾಜ್ಯಪಾಲರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಕಾನೂನುಬದ್ಧವಾಗಿದೆ ಎಂದು ಮಾನ್ಯ ಹೈಕೋರ್ಟ್ ರಾಜ್ಯಪಾಲರ ನಿರ್ಧಾರವನ್ನ ಎತ್ತಿಹಿಡಿದಿದ್ದು, ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗಿನಿಂದ ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಕಳೆದ ಅನೇಕ ದಿನಗಳಿಂದ ರಾಜ್ಯಪಾಲರನ್ನ, ರಾಜಭವನವನ್ನ ನಿಂದಿಸುತ್ತಾ ಬಂದಿದ್ದು, ಮಾನ್ಯ ಹೈಕೋರ್ಟ್ ನ ತೀರ್ಪು ಇಡೀ @INCKarnataka ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ.ಇನ್ನಾದರೂ ಅನಗತ್ಯವಾಗಿ ರಾಜ್ಯಪಾಲರನ್ನ ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕೆ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.