Karnataka Politics: ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಡಿಕೆಶಿ
ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಶಿವಕುಮಾರ್, ಇಷ್ಟಕ್ಕೂ ಆ ಪಟ್ಟಿಯಲ್ಲಿ ಯಾರೆಲ್ಲಾ ಸಚಿವರಿದ್ದಾರೆ ? ಇಲ್ಲಿದೆ ಮಾಹಿತಿ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಒಂದು ಕಡೆ ಮುಖ್ಯಮಂತ್ರಿಗಳ ಆಪ್ತ ಸಚಿವರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾಣೆ ಮತ್ತು ಉಳಿದ ಅವಧಿಗೂ ಸಿದ್ದರಾಮಯ್ಯ ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಸಬೇಕು ಎಂದು ಲಾಬಿ ನಡೆಸುತ್ತಿದ್ದರೆ ಇತ್ತ ಡಿಕೆಶಿವಕುಮಾರ್ ಸಿಎಂ ಆಪ್ತ ಸಚಿವರಿಗೆ ಠಕ್ಕರ್ ಕೊಡಲು ಮಂದಾಗಿದ್ದಾರೆ. ರಾಜ್ಯ ಸಚಿವ ಸಂಪುಟವನ್ನು ಪುನಾರಚಿಸಬೇಕು ಎಂಬ ಹೊಸ ಬೇಡಿಕೆಯನ್ನು ಶಿವಕುಮಾರ್ ಹೈಮಾಂಡ್ ಮುಂದಿಟ್ಟಿದ್ದು, ಈ ಮೂಲಕ ಸಿಎಂ ಪಾಳಯದ ಸಚಿವರನ್ನು ಮಾಜಿ ಮಾಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಹತ್ತು ಸಚಿವರನ್ನು ಕೆಳಗಿಳಿಸಲು ಪಟ್ಟು ಹಿಡಿದಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವಕುಮಾರ್ ಈ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ಅವರ ಆಪ್ತರು ಖಚಿತಪಡಿಸಿದ್ದಾರೆ.
ಅಸಮರ್ಥ ಸಚಿವರ ಪಟ್ಟಿಯನ್ನು ಹೈಕಮಾಂಡ್ ಗೆ ಸಲ್ಲಿಸಿರುವ ಡಿಕೆಶಿ ಶತಾಯಗತಾಯ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇವರಲ್ಲಿ ಬಹುತೇಕ ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರೇ ಇದ್ದಾರೆ ಎನ್ನುವುದು ಗಮನಾರ್ಹ. ಕೊಟ್ಟ ಖಾತೆಯನ್ನು ನಿರ್ವಹಿಸದೆ ಸದಾ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದೂ ಇವರು ದಾಖಲೆಗಳ ಸಹಿತ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಡಿಕೆ ಶಿವಕಮಾರ್ ನೀಡಿರುವ ಪಟ್ಟಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್, ಅಬಕಾರಿ ಸಚಿವ ಆರ್. ಬಿ.ತಿಮ್ಮಾಪುರ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಹೆಸರಿದೆ. ಇವರೆಲ್ಲರೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಸಚಿವರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಕಳೆದ ಒಂದು ವಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಸಚಿವರು ದೆಹಲಿಗೆ ಒಬ್ಬರಾದ ಮೇಲೊಬ್ಬರು ಬೇಟಿ ನೀಡಿ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಬೇಕು. ಬೆಂಗಳೂರು ಉಸ್ತುವಾರಿ ಅಥವಾ ಜಲಸಂಪನ್ಮೂಲ ಎರಡರಲ್ಲಿ ಒಂದು ಜವಬ್ದಾರಿಯನ್ನು ಕೈಬಿಡಬೇಕು ಎಂದೂ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಇವರಲ್ಲಿ ಅನೇಕ ಸಚಿವರು ಉದ್ದೇಶಪೂರ್ವಕವಾಗಿ ಉಪ ಮುಖ್ಯಮಂತ್ರಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚುತ್ತಿದೆ. ಪ್ರಮುಖ ಖಾತೆಗಳ ಜವಬ್ದಾರಿ ಹೊತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನೂ ಸಂಘಟಿಸಬೇಕಿದೆ. ಆದ್ದರಿಂದ ಕನಿಷ್ಠ ಜಲಸಂಪನ್ಮೂಲ ಖಾತೆಯನ್ನು ಬೇರೆ ಸಚಿವರ ಹೆಗಲಿಗೆ ವರ್ಗಾಯಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು.
ಒಂದು ವೇಳೆ ಸಿಎಂ ಬೆಂಬಲಿಗ ಸಚಿವರನ್ನು ಅಸಮರ್ಥರು ಎಂದು ಕೈ ಬಿಡುವುದಾದರೆ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಸಚಿವರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರನ್ನೂ ಕೈಬಿಡಬೇಕು ಎಂಬ ಹೊಸ ತಂತ್ರವನ್ನು ಹೂಡಿದ್ದಾರೆ.
ಸಿಎಂ ಬೆಂಬಲಿಗ ಸಚಿವರ ಪರವಾಗಿ ಸತೀಶ್ ಜಾರಕಿಹೊಳಿ ಮತ್ತು ಕೆ. ಎನ್. ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಎಂ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಮಂಡಿಸಿದ್ದಾರೆ. ಒಂದೆರಡು ದಿನಗಳಲ್ಲಿ ಮಹದೇವಪ್ಪ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್ ಅವರೂ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿ ಡಿ.ಕೆ. ಶಿವಕುಮಾರ್ ವಿರುದ್ಧ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಮೂಲಗಳ ಪ್ರಕಾರ ಈ ಹಂತದಲ್ಲಿ ಸಚಿವರ ಮೌಲ್ಯಮಾಪನ ಮಾಡುವ ಗೋಜಿಗೆ ಹೋಗುವುದಿಲ್ಲ. ಏನಿದ್ದರೂ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆಯಾಗಿ ಅಧಿವೇಶನ ಮುಗಿದ ನಂತರ ಭಿನ್ನಮತ ಶಮನಕ್ಕೆ ಕೈ ಹಾಕಲಿದೆ ಎಂದು ಹೇಳಲಾಗುತ್ತಿದೆ.
ವರದಿ: ಎಚ್. ಮಾರುತಿ,ಬೆಂಗಳೂರು
