ಎಚ್‌ಡಿಕೆ ಸವಾಲು: ಸಿದ್ದರಾಮಯ್ಯ, ಡಿಕೆಶಿವಕುಮಾರ್‌ ಅವರೇ ನಿಮ್ಮ ಭ್ರಷ್ಟಾಚಾರದ ಬ್ರಹ್ಮಾಂಡ ಬಿಡಿಸಿಡುವೆ, ನೋಡುತ್ತಾ ಇರಿ
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್‌ಡಿಕೆ ಸವಾಲು: ಸಿದ್ದರಾಮಯ್ಯ, ಡಿಕೆಶಿವಕುಮಾರ್‌ ಅವರೇ ನಿಮ್ಮ ಭ್ರಷ್ಟಾಚಾರದ ಬ್ರಹ್ಮಾಂಡ ಬಿಡಿಸಿಡುವೆ, ನೋಡುತ್ತಾ ಇರಿ

ಎಚ್‌ಡಿಕೆ ಸವಾಲು: ಸಿದ್ದರಾಮಯ್ಯ, ಡಿಕೆಶಿವಕುಮಾರ್‌ ಅವರೇ ನಿಮ್ಮ ಭ್ರಷ್ಟಾಚಾರದ ಬ್ರಹ್ಮಾಂಡ ಬಿಡಿಸಿಡುವೆ, ನೋಡುತ್ತಾ ಇರಿ

Bjp Jds Mysore Chalo ಕಾಂಗ್ರೆಸ್‌ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್‌ ಹಮ್ಮಿಕೊಂಡಿದ್ದ ಮೈಸೂರು ಚಲೋ ಸಮಾವೇಶದಲ್ಲಿ ಎಚ್‌ಡಿಕುಮಾರಸ್ವಾಮಿ( HD Kumaraswamy) ಸುಧೀರ್ಘವಾಗಿಯೇ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌  ವಿರುದ್ದ ಕೇಂದ್ರ ಸಚಿವ ಎಚ್.ಡಿಕುಮಾರಸ್ವಾಮಿ ಮೈಸೂರು ಚಲೋ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ದ ಕೇಂದ್ರ ಸಚಿವ ಎಚ್.ಡಿಕುಮಾರಸ್ವಾಮಿ ಮೈಸೂರು ಚಲೋ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.

ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಮೈಸೂರಿನ ಕಾಂಗ್ರೆಸ್‌ ಸಮಾವೇಶದ ವೇಳೇ ನನ್ನ ಗಣಿ ಹಗರಣ ಬಿಚ್ಚಿಡುವೆ ಎಂದು ಹೇಳಿದ್ದೀರಿ. ಅದನ್ನು ಬೇಗನೇ ಮಾಡಿ. ನಿಮ್ಮ ಭ್ರಷ್ಟಾಚಾರದ ಬ್ರಹ್ಮಾಂಡ ದೊಡ್ಡದಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯಲ್ಲಿ ಸಿದ್ದರಾಮಯ್ಯ ಅವರು ಮಾಡಿದ್ದೇನು ಎನ್ನುವುದು ಬಿಡಿಸಿ ಹೇಳಲೇ, ಕನಕಪುರದಲ್ಲಿ ಹೆಣ್ಣು ಮಕ್ಕಳು ಹಾಗೂ ಬಡಕುಟುಂಬಗಳನ್ನು ಬೆದರಿಸಿ ಜಮೀನು ವಶಪಡಿಸಿಕೊಂಡ ಡಿಕೆ ಶಿವಕುಮಾರ್‌ ಅವರ ಮುಖವಾಡ ಜನರಿಗೆ ಗೊತ್ತಿದೆ. ನಿಮ್ಮ ಭ್ರಷ್ಟ ಆಡಳಿತದ ದಾಖಲೆಗಳನ್ನು ಒಂದೊಂದಾಗಿ ಬಿಡಿಸಿ ಇಡುತ್ತೇನೆ. ಕಾಯುತ್ತಾ ಇರಿ. ನಿಮ್ಮ ವಿರುದ್ದದ ನಮ್ಮ ಬಿಜೆಪಿ ಹಾಗೂ ಜೆಡಿಎಸ್‌ ಹೋರಾಟ ಯಾವುದೇ ಕಾರಣಕ್ಕೂ ಇಲ್ಲಿಗೆ ನಿಲ್ಲುವುದಿಲ್ಲ. ನಿಮ್ಮ ಬಣ್ಣ ಬಯಲು ಮಾಡುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇವೆ.

ಇದು ಕಾಂಗ್ರೆಸ್‌ ಸರ್ಕಾರದ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಹಾಗೂ ಮೈಸೂರು ಮುಡಾ ಹಗರಣದ ಕುರಿತು ಬಿಜೆಪಿ ಹಾಗೂ ಜೆಡಿಎಸ್‌ ಜಂಟಿಯಾಗಿ ಆಯೋಜಿಸಿದ್ದ ಬೆಂಗಳೂರಿನಿಂದ ಮೈಸೂರುವರೆಗಿನ ಪಾದಯಾತ್ರೆಯ ಕೊನೆ ದಿನ ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ನಡೆದ ಹಗರಣದಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್‌ಡಿಕೆ ಕುಮಾರಸ್ವಾಮಿ ಅವರು ತಮ್ಮದೇ ಶೈಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಹಾಕಿದ ಸವಾಲು.

ಅರ್ಕಾವತಿ ಕರ್ಮಕಾಂಡದ ಚರಿತ್ರೆಯನ್ನು ಹೇಳಲು ಸಿದ್ದನಿದ್ದೇನೆ. ಡಿಕೆ ಶಿವಕುಮಾರ್‌ ನಡೆಸಿದ ಎಲ್ಲಾ ಅಕ್ರಮಗಳನ್ನು ತಿಳಿದಿದ್ದೇನೆ. ಬೆಂಗಳೂರು ಮೈಸೂರು ರಸ್ತೆ ಹೆಸರಲ್ಲಿ ಲೂಟಿಗೆ ನಿಂತಿರುವ ಡಿಕೆ ಶಿವಕುಮಾರ್‌ ಅವರು ನನ್ನ ಬಗ್ಗೆ ಮಾತನಾಡುತ್ತೀರಿ. ನನ್ನ ಮೇಲೆ ಸವಾಲು ಹಾಕಿದ್ದೀರಿ. ಅದನ್ನೂ ಸ್ವೀಕರಿಸಿದ್ದೇನೆ. ಎಲ್ಲೂ ಹೋಗದೇ ಎಲ್ಲವನ್ನೂ ಎದುರಿಸುತ್ತೇನೆ. ತಕ್ಕ ಉತ್ತರವನ್ನು ಈ ಇಬ್ಬರ ಟೀಕೆಗಳಿಗೆ ನೀಡುತ್ತೇನೆ. ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಸರ್ಕಾರದ ನಡವಳಿಕೆ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಲಿ. ಲೂಟಿ ಸರ್ಕಾರವನ್ನು ತೆಗೆಯಲು ನೀವು ಮುಂದಾಗಿ ಎಂದು ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಶುದ್ದಹಸ್ತ, ಒಂದೇ ಭ್ರಷ್ಟಾಚಾರ ಮಾಡಿಲ್ಲ. ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅರ್ಕಾವತಿ ಬಡಾವಣೆಯಲ್ಲಿ ನಡೆಸಿದ ಅಕ್ರಮಗಳನ್ನು ಬಯಲು ಮಾಡಬೇಕೆ. ಕೆಂಪಣ್ಣ ಆಯೋಗ ನೀಡಿದ ವರದಿ ತೆಗೆದರೆ ಅದರ ಸತ್ಯ ಬಯಲಾಗುತ್ತದೆ. ಈಗ ಮೈಸೂರಲ್ಲಿ ಸರ್ಕಾರಿ ಭೂಮಿಯನ್ನ ಲಪಾಟಿಯಿಸಿದ್ದೀರಿ. ನಿವೇಶನ ಪಡೆದಿದ್ದೀರಿ. ಒಂದೂವರೆ ವರ್ಷದಲ್ಲಿ ಕರ್ನಾಟಕ್ಕಕೆ ನಿಮ್ಮ ಕೊಡುಗೆ ಏನು. ರೈತರು ಆತ್ಮಹತ್ಯೆ ಮಾಡಿಕೊಂಡರೂ ಅವರ ಪರವಾಗಿ ನಿಂತಿಲ್ಲ. ಶಿರೂರು ಭೂಕುಸಿತವಾಗಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಬಿಜೆಪಿ ವಿರುದ್ದ ಭ್ರಷ್ಟಚಾರದ ಆರೋಪ ಮಾಡಿಕೊಂಡು ಅಧಿಕಾರಕ್ಕೆ ಬಂದು ಹದಿನೈದು ತಿಂಗಳೇ ಆಯಿತು. ಈವರೆಗೂ ಒಂದೇ ಒಂದು ದಾಖಲೆಯನ್ನು ನೀವು ಬಿಡುಗಡೆ ಮಾಡಲಿಲ್ಲ. ಇದೇ ನಿಮ್ಮ ಆಡಳಿತವಾ ಎಂದು ಟೀಕಾ ಪ್ರಹಾರ ನಡೆಸಿದರು.

ನಾನು ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲಿಲ್ಲ ಎಂದು ಟೀಕಿಸುತ್ತೀರಿ. ಆಗ ರಾಜಕೀಯ ಬೆಳವಣಿಗೆ ಆಗಿದ್ದು ನಿಜ. ಆದರೆ ಯಡಿಯೂರಪ್ಪ ಅವರಿಗೆ ಅಗೌರವ ತೋರಲಿಲ್ಲ. ನಿಮ್ಮೊಂದಿಗೆ ಸೇರಿದರೆ ಅಧಿಕಾರ ನಡೆಸದಂತೆ ಕಿರುಕುಳ ಕೊಟ್ಟಿರಿ. ನಿಮಗೆ ರಾಜಕೀಯವಾಗಿ ಶಕ್ತಿ ತುಂಬಿದವರು, ಆರ್ಥಿಕವಾಗಿ ನೆರವಾದವರ ಹೆಸರನ್ನು ಹೇಳಲಿಲ್ಲ. ನಾನೊಬ್ಬನೇ ಎನ್ನುವ ರೀತಿ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಜನ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಟೀಕಿಸಿದರು.

ಡಿಸಿಎಂ ಡಿಕೆ ಶಿವಕುಮಾರ್‌ ನನ್ನ ಗಣಿ ಹಗರಣದ ದಾಖಲೆ ನೀಡುತ್ತೇನೆ ಎಂದು ಹೇಳಿದ್ದಾರೆ. ಜಂತಕಲ್‌ ಮೈನಿಂಗ್‌, ಸಾಯಿ ವೆಂಕಟೇಶ್ವರ ಗಣಿ ವಿಚಾರ ಹೇಳುತ್ತೀರಿ. ಆದರೆ ಯಾವುದೋ ಐಎಎಸ್‌ ಅಧಿಕಾರಿ ಮಾಡಿದ ತಪ್ಪಿಗೆ ನನ್ನ ಹೆಸರನ್ನು ತಂದರು. ಆ ಅಧಿಕಾರಿಗೆ ಈಗಾಗಲೇ ಶಿಕ್ಷೆಯೂ ಆಗಿದೆ. ಈಗ ಈ ವಿಚಾರ ಹೇಳಲಾಗುತ್ತಿದೆ. ಎಲ್ಲಾ ದಾಖಲೆ ಕೊಡಲಿ. ಅದಕ್ಕೆ ಉತ್ತರ ಕೊಡುವೆ. ದೇವೇಗೌಡರ ಕುಟುಂಬದ ಆಸ್ತಿ ಬಗ್ಗೆ ಮಾತನಾಡುತ್ತಾರೆ. ಯಾರನ್ನೋ ಬೆದರಿಸಿ ನಮ್ಮ ಕುಟುಂಬ ಆಸ್ತಿ ಮಾಡಿಲ್ಲ. ಡಿಕೆ ಶಿವಕುಮಾರ್‌ ರೀತಿ ಎಂದೂ ನಡೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

Whats_app_banner