ಕರ್ನಾಟಕದ 19 ಸಾವಿರ ಮೆಗಾ ವ್ಯಾಟ್‌ ವಿದ್ಯುತ್ ಬೇಡಿಕೆ ಪೂರೈಕೆ, ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಜಾರ್ಜ್ ಸ್ಪಷ್ಟೋಕ್ತಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 19 ಸಾವಿರ ಮೆಗಾ ವ್ಯಾಟ್‌ ವಿದ್ಯುತ್ ಬೇಡಿಕೆ ಪೂರೈಕೆ, ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಜಾರ್ಜ್ ಸ್ಪಷ್ಟೋಕ್ತಿ

ಕರ್ನಾಟಕದ 19 ಸಾವಿರ ಮೆಗಾ ವ್ಯಾಟ್‌ ವಿದ್ಯುತ್ ಬೇಡಿಕೆ ಪೂರೈಕೆ, ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಜಾರ್ಜ್ ಸ್ಪಷ್ಟೋಕ್ತಿ

ಕರ್ನಾಟಕದಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ. ಅಗತ್ಯ ಬಿದ್ದರೆ ಖರೀದಿ ಮಾಡಲಾಗುವುದು.ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಅಂತೂ ಇರುವುದರಿಲ್ಲ ಎಂದು ಇಂಧನ ಸಚಿವರು ಹೇಳಿದ್ದಾರೆ.

ಬೇಸಿಗೆಯಲ್ಲಿ ಕರ್ನಾಟಕದಲ್ಲಿ ಲೋಡ್‌ ಶೆಡ್ಡಿಂಗ್‌ ಇರೋಲ್ಲ ಎಂದು ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ.
ಬೇಸಿಗೆಯಲ್ಲಿ ಕರ್ನಾಟಕದಲ್ಲಿ ಲೋಡ್‌ ಶೆಡ್ಡಿಂಗ್‌ ಇರೋಲ್ಲ ಎಂದು ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ 19,000 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ದಿನ 7 ಗಂಟೆ ಮತ್ತು ಇತರ ಉದ್ದೇಶಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವ ವಾಗ್ಧಾನವನ್ನು ಈಡೇರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಬೇಡಿಕೆ ಇರುವಷ್ಟು ವಿದ್ಯುತ್ ಲಭ್ಯವಿದೆ. ಸ್ಥಳೀಯವಾಗಿ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಬಹುದೇ ಹೊರತು ಲೋಡ್ ಶೆಡ್ಡಿಂಗ್ ಮಾಡುವ ಸಂದರ್ಭ ಉದ್ಭವವಾಗುವುದಿಲ್ಲ.ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ ಎಂದರೆ, ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುಂದುವರಿಯುತ್ತಿದೆ. ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಅರ್ಥ..

ಇದು ಕರ್ನಾಟಕದ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರು ನೀಡುವ ವಿವರಣೆ.

ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಎಸ್ಕಾಂಗಳ ಅಧ್ಯಕ್ಷರು ಸೇರಿದಂತೆ ಇಂಧನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ಬಳಿಕ ಸುದ್ದಿಗಾರರೊಂದಿಗೆ ಸಚಿವರು ವಿವರವಾಗಿಯೇ ಮಾತನಾಡಿದರು.

ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆ ಆದರೂ, ಸಂಗ್ರಹಣೆಗೆ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಮೂಲಕ 2000 ಮೆ.ವ್ಯಾ. ವಾರಾಹಿ ಪಂಪ್ಡ್‌ ಸ್ಟೋರೇಜ್‌ ಮೂಲಕ 1600 ಮೆ.ವ್ಯಾ. ಪಾವಗಡದಲ್ಲಿ 1000 ಮೆ.ವ್ಯಾ.ಸಾಮರ್ಥ್ಯ ಹಾಗೂ ರ‍್ಯಾಪ್ಟೆಯಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್‌ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್‌ ಕೊರತೆಯಾಗದಂತೆ ನೋಡಿಕೊಳ್ಳಬಹುದು ಎನ್ನುವುದು ಸಚಿವ ವಿವರಣೆ.

ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದ್ದರೂ ಅದರ ಪ್ರಸರಣ ಮತ್ತು ವಿತರಣೆಯೇ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು ಸಬ್ ಸ್ಟೇಷನ್ ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 100 ಹೊಸ ಸಬ್ ಸ್ಟೇಷನ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಪ್ರಸರಣ ಮತ್ತು ವಿತರಣೆಯಲ್ಲಿ ಇರುವ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ", ಎಂದು ತಿಳಿಸಿದರು.

ಫೆಬ್ರವರಿ 27ರ ಮಾಹಿತಿ ಪ್ರಕಾರ, ಕೆಪಿಸಿಎಲ್ ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 3,300 ಮೆ.ವ್ಯಾ., ಜಲ ವಿದ್ಯುತ್ ಘಟಕಗಳಲ್ಲಿ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿದೆ. ಅದೇ ರೀತಿ ಯುಪಿಸಿಎಲ್ ನಿಂದ 1,26 ಮೆ.ವ್ಯಾ., ಸೋಲಾರ್ ಮೂಲಕ 6,655 ಮೆ.ವ್ಯಾ., ಪವನ ಮೂಲಕ 1940 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದಲ್ಲದೆ, ಸಿಜಿಎಸ್ (ಸೆಂಟ್ರಲ್ ಜೆನರೇಟಿಂಗ್ ಸ್ಟೇಷನ್ಸ್)ನಿಂದ 6,183 ಮೆ.ವ್ಯಾ. ವಿದ್ಯುತ್ ಬಂದಿದ್ದರೆ,ಕೇಂದ್ರ ಗ್ರಿಡ್ ನಿಂದ 600 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗಿದೆ. ಪಂಜಾಬ್ ಮತ್ತು ಉತ್ತರಪ್ರದೇಶದಿಂದ ವಿನಿಮಯ ಆಧಾರದ ಮೇಲೆ 700 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗಿದೆ ಎನ್ನುತ್ತಾರೆ ಇಂಧನ ಸಚಿವರು

ಇದಲ್ಲದೆ, ವಿದ್ಯುತ್ ಬೇಡಿಕೆ ಪೂರೈಸಲು ಶನಿವಾರ (ಮಾ. 1) ವಿಜಯಪುರ ಜಿಲ್ಲೆಯ ಕೂಡಗಿಯಿಂದ ಹೆಚ್ಚುವರಿಯಾಗಿ 310 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತದೆ. ಜತೆಗೆ ಬೇಡಿಕೆ ಆಧರಿಸಿ ವಿನಿಮಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ದಿನಕ್ಕೆ 100ರಿಂದ 1,275 ಮೆ.ವ್ಯಾ. ಮತ್ತು ಪಂಜಾಬ್‌ನಿಂದ 300 ಮೆ.ವ್ಯಾ. ವಿದ್ಯುತ್ ತೆಗೆದುಕೊಳ್ಳಲಾಗುವುದು. ಅಲ್ಲದೆ, ಜೂನ್ ಮೊದಲ ವಾರದವರೆಗೆ ಪ್ರತಿನಿತ್ಯ 1000 ಮೆ.ವ್ಯಾ. ವಿದ್ಯುತ್ ಖರೀದಿಸಲಾಗುವುದು", ಎಂದು ಮಾಹಿತಿ ನೀಡಿದರು.

ಲಿಂಕ್‌ಲೈನ್ ಮೂಲಕ ಬೇಡಿಕೆ ಈಡೇರಿಕೆ

ಕರ್ನಾಟಕದ ಕೆಲವು ಸಬ್ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಓವರ್ ಲೋಡ್ ಆಗುತ್ತಿದೆ. ಇನ್ನು ಕೆಲವು ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಅಂಡರ್ ಲೋಡ್ ಆಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಅಂಡರ್ ಲೋಡ್ ಇರುವ ಉಪಕೇಂದ್ರಗಳಿಂದ ಓವರ್ ಲೋಡ್ ಇರುವ ಉಪಕೇಂದ್ರಗಳಿಗೆ ವಿದ್ಯುತ್ ಒದಗಿಸಲು ಲಿಂಕ್ ಲೈನ್ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಕೆಲವು ಕಡೆ ಲಿಂಕ್ ಲೈನ್ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ", ಎಂದು ಹೇಳಿದರು.

ಸಿಂಗಲ್ ಫೇಸ್ ನಲ್ಲಿ ಐಪಿ ಸೆಟ್ ಹಾಕಬೇಡಿ

ಗೃಹ ಬಳಕೆಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಬೇಕು ಎಂಬ ಉದ್ದೇಶದಿಂದ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ನಿರಂತರ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ಅಲ್ಲದೆ, ತೋಟದ ಮನೆಗಳಲ್ಲಿ ವಾಸಿಸುವವರು ಅನುಕೂಲಕ್ಕಾಗಿ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ ಸಂದರ್ಭದಲ್ಲಿ ರೈತರು ಕನ್ವರ್ಟರ್‌ಗಳನ್ನು ಬಳಸಿ ಕೃಷಿ ಪಂಪ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಟ್ರಿಪ್ ಆಗಿ ಇಡೀ ಪ್ರದೇಶದಲ್ಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನರು ತೊಂದರೆಗೊಳಗಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಕನ್ವರ್ಟರ್ ಅಳವಡಿಸಿ ಐಪಿ ಸೆಟ್ ಗಳನ್ನು ಬಳಸಬಾರದು ಎಂಬುದು ಕೆ.ಜೆ.ಜಾರ್ಜ್ ಮನವಿ.

ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷದ ಫೆ. 27ರಂದು 16,214 ಮೆ.ವ್ಯಾ. ಬೇಡಿಕೆ ಇದ್ದರೆ ಈ ವರ್ಷ ಅದೇ ದಿನ 17,874 ಮೆ.ವ್ಯಾ. ಬೇಡಿಕೆ ಬಂದಿತ್ತು. ಈ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲಾಗಿದೆ. ಜೂನ್ ಮೊದಲ ವಾರದವರೆಗೆ ಯಾವುದೇ ಸಮಸ್ಯೆ ಇಲ್ಲದಂತೆ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಹೇಳುತ್ತಾರೆ.

 

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.