KRS Reservoir Level: ಅರ್ಧಕ್ಕೆ ಕುಸಿದ ಕೆಆರ್‌ಎಸ್‌ ಜಲಾಶಯ ನೀರಿನ ಮಟ್ಟ; ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರಿಗೆ ನೀರಿನ ಆತಂಕವಿಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Krs Reservoir Level: ಅರ್ಧಕ್ಕೆ ಕುಸಿದ ಕೆಆರ್‌ಎಸ್‌ ಜಲಾಶಯ ನೀರಿನ ಮಟ್ಟ; ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರಿಗೆ ನೀರಿನ ಆತಂಕವಿಲ್ಲ

KRS Reservoir Level: ಅರ್ಧಕ್ಕೆ ಕುಸಿದ ಕೆಆರ್‌ಎಸ್‌ ಜಲಾಶಯ ನೀರಿನ ಮಟ್ಟ; ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರಿಗೆ ನೀರಿನ ಆತಂಕವಿಲ್ಲ

KRS Reservoir Level: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟವು ಅರ್ಧಕ್ಕೆ ಕುಸಿದಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಎರಡು ಪಟ್ಟು ನೀರಿದೆ.

ಮಂಡ್ಯ ಜಿಲ್ಲೆ ಕೆಅರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಕಡಿಮೆಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಚೆನ್ನಾಗಿದೆ.( ಸಂಗ್ರಹ ಚಿತ್ರ)
ಮಂಡ್ಯ ಜಿಲ್ಲೆ ಕೆಅರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಕಡಿಮೆಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಚೆನ್ನಾಗಿದೆ.( ಸಂಗ್ರಹ ಚಿತ್ರ)

KRS Reservoir Level: ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾಗಿರುವ ಕರ್ನಾಟಕದ ಜತೆಗೆ ತಮಿಳುನಾಡಿಗೂ ನೀರು ಹರಿಸುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಜಲಾಶಯದ ನೀರಿನ ಪ್ರಮಾಣ ಆರ್ಧದಷ್ಟು ಕುಸಿತ ಕಂಡಿದೆ. ಬೇಸಿಗೆ ಇನ್ನೂ ಮುಗಿಯಲು ಒಂದೂವರೆ ತಿಂಗಳು ಇರುವಾಗ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ಕೃಷಿಗೆ ಮಾತ್ರವಲ್ಲದೇ ಬೆಂಗಳೂರು, ಮೈಸೂರು ಸಹಿತ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾ ಎನ್ನುವ ಪ್ರಶ್ನೆ ಎದುರಾಗಿದೆ. ಆದರೆ ಹೋದ ವರ್ಷಕ್ಕೆ ಇದೇ ಅವಧಿಯಲ್ಲಿ ಈಗಿದ್ದ ನೀರಿನ ಪ್ರಮಾಣದ ಅರ್ಧದಷ್ಟು ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೇಸಿಗೆವರೆಗೂ ಅಷ್ಟಾಗಿ ಸಮಸ್ಯೆಯಾಗದು ಎನ್ನಲಾಗುತ್ತಿದೆ. ಈ ಬೇಸಿಗೆ ಅವಧಿಯನ್ನು ನಿರ್ವಹಣೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಣಿಯಾಗುತ್ತಿದ್ದಾರೆ.

ಹಿಂದಿನ ವರ್ಷಗಳಲ್ಲಿ ಬೇಸಿಗೆ ಬಂದಾಗ ನೀರಿನ ಮಟ್ಟ ಸಹಜವಾಗಿಯೇ ಕುಸಿತವಾಗುತ್ತದೆ. ನಾಲ್ಕೈದು ವರ್ಷಕ್ಕೆ ಒಮ್ಮೆಯಾದರೂ ಜಲಾಶಯ ತುಂಬದ ಸನ್ನಿವೇಶ ಎದುರಾದಾಗ ಕೊಂಚ ಬೇಗನೇ ನೀರಿನ ಸಮಸ್ಯೆ ಕಾಣಿಸುತ್ತದೆ. ಹಿಂದಿನ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬದೇ ಭಾರೀ ಸಮಸ್ಯೆಯಾಯಿತು. ಈ ಬಾರಿ ಜಲಾಶಯ ತುಂಬಿದ ನಂತರ ಕೃಷಿಗೆ ನೀರು ಹರಿಸಲಾಗಿದೆ. ತಮಿಳುನಾಡಿಗೂ ಆಗಾಗ ನೀರು ಹರಿಸಿದ್ದರೂ ಜಲಾಶಯದಲ್ಲಿ ಭಾರೀ ಕುಸಿತವೇನು ಕಂಡಿತು. ಈಗ ಜಲಾಶಯದ ನೀರಿನ ಮಟ್ಟದ ಅರ್ಧ ಪ್ರಮಾಣಕ್ಕೆ ಬಂದಿದೆ.

ಏಪ್ರಿಲ್‌ 15ರಂದು ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟವು 101.77 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 49.45 ಟಿಎಂಸಿ ನೀರನ್ನು ಸಂಗ್ರಹಿಸಲು ಅವಕಾಶವಿದ್ದು. ಮಂಗಳವಾರದಂದು 24.22 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 15.85 ಟಿಎಂಸಿ ನೀರನ್ನು ಮಾತ್ರ ಬಳಸಲು ( Live) ಅವಕಾಶವಿದೆ. ಜಲಾಶಯದ ಒಳ ಹರಿವಿನ ಪ್ರಮಾಣವು 141 ಕ್ಯೂಸೆಕ್‌ನಷ್ಟಿದ್ದು. ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಸದ್ಯ 3867 ಕ್ಯೂಸೆಕ್‌ ನೀರು ಹೊರ ಹೋಗುತ್ತಿದೆ. ಇದರಲ್ಲಿ ನಾಲೆ ಹಾಗೂ ಕುಡಿಯುವ ನೀರಿನ ವಿತರಣೆಯೂ ಸೇರಿದೆ.

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 83.35 ಅಡಿ ನೀರಿತ್ತು. ಜಲಾಶಯದಲ್ಲಿ 12.35 ಟಿಎಂಸಿ ನೀರು ಸಂಗ್ರಹವಿತ್ತು. ಹೊರ ಹರಿವು 215 ಕ್ಯೂಸೆಕ್‌ ಇದ್ದರೆ, ಒಳ ಹರಿವಿನ ಪ್ರಮಾಣ 231 ಕ್ಯೂಸೆಕ್‌ನಷ್ಟಿತ್ತು.

ಜಲಾಶಯದಲ್ಲಿ ಸದ್ಯ 24.22 ಟಿಎಂಸಿ ನೀರು ಇರುವುದರಿಂದ ಮುಂದಿನ ಬೇಸಿಗೆವರೆಗೂ ಬೆಂಗಳೂರು, ಮೈಸೂರು ಮಾತ್ರವಲ್ಲದೇ ವಿವಿಧ ಪಟ್ಟಣಗಳಿಗೂ ಕಾವೇರಿ ನೀರು ಕೊಡಬಹುದು. ಈಗಾಗಲೇ ಬೇಸಿಗೆ ಬೆಳೆಗೆಂದು ನೀರಾವರಿಗೂ ನೀರು ಹರಿಸಲಾಗಿದ್ದು ಸದ್ಯಕ್ಕೆ ಯಾವುದೇ ಸಮಸ್ಯೆ ಆಗದು. ಬೇಸಿಗೆ ಅವಧಿಗೆ ಬೇಕಾದ ನೀರನ್ನು ಕುಡಿಯಲು ಒದಗಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನವುದು ಅಧಿಕಾರಿಗಳ ವಿವರಣೆ.

ಕಾವೇರಿ ಕೊಳ್ಳದ ಇತರೆ ಜಲಾಶಯಗಳಾದ ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲೂ ಕುಸಿತ ಕಂಡಿದೆ. ಇಲ್ಲೂ ಕೂಡ ಹಿಂದಿನ ವರ್ಷಕ್ಕಿಂತ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಸದ್ಯ ನಾಲ್ಕೂ ಜಲಾಶಯಗಳಿಂದ 57.52 ಟಿಎಂಸಿ ನೀರು ಸಂಗ್ರಹವಿದೆ. ಹೋದ ವರ್ಷ ಇದೇ ಅವಧಿಯಲ್ಲಿ ನಾಲ್ಕೂ ಜಲಾಶಯಗಳಲ್ಲಿ 33. 88 ಟಿಎಂಸಿ ನೀರು ಸಂಗ್ರಹ ಮಾತ್ರ ಇತ್ತು. ಸದ್ಯ ಹೇಮಾವತಿಯಲ್ಲಿ 20 ಟಿಎಂಸಿ, ಕಬಿನಿಯಲ್ಲಿ 10 ಟಿಎಂಸಿ ಹಾಗೂ ಹಾರಂಗಿ ಜಲಾಶಯದಲ್ಲಿ 3.4 ಟಿಎಂಸಿ ನೀರು ಸಂಗ್ರಹವಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner