Puc Results 2025: 76 ಕೇಂದ್ರಗಳಲ್ಲಿ ಪಿಯುಸಿ ಉತ್ತರಪತ್ರಿಕೆ 31 ಸಾವಿರ ಉಪನ್ಯಾಸಕರಿಂದ ಮೌಲ್ಯಮಾಪನ; ಏಪ್ರಿಲ್ 2ನೇ ವಾರ ಫಲಿತಾಂಶ ನಿರೀಕ್ಷೆ
Puc Results 2025: ಈಗಾಗಲೇ ಮುಗಿದಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತ್ವರಿತವಾಗಿ ನಡೆದಿದ್ದು, ಮುಗಿಯುವ ಹಂತಕ್ಕೆ ಬಂದಿದೆ.ವರದಿ: ಎಚ್.ಮಾರುತಿ.ಬೆಂಗಳೂರು

Puc Results 2025: ಕರ್ನಾಟಕದಲ್ಲಿ 2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ಣಗೊಂಡಿದ್ದು, ಮೌಲ್ಯಮಾಪನ ಕಾರ್ಯ ಆರಂಭಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯು ಪಿಯುಸಿ ಪರೀಕ್ಷೆಯನ್ನು ಮಾರ್ಚ್ 1 ರಿಂದ ಮಾರ್ಚ್ 20ರವೆರೆಗೆ ನಡೆದಿತ್ತು. ಮಾರ್ಚ್ 21 ರಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ 76 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಈಗಾಗಲೇ ಬಹುತೇಕ ವಿಷಯಗಳ ಮೌಲ್ಯಮಾಪನ ಕೊನೆಯ ಘಟ್ಟ ತಲುಪಿದೆ. ಕೆಲವು ವಿಷಯಗಳ ಮೌಲ್ಯಮಾಪನ ಈ ಮಾಸಾಂತ್ಯಕ್ಕೆ ಮುಗಿಯಲಿದೆ. ಹೆಚ್ಚೆಂದರೆ ಏಪ್ರಿಲ್ 5ರ ವೇಳೆಗೆ ಎಲ್ಲ ವಿಷಯಗಳ ಮೌಲ್ಯಮಾಪನ ಮುಗಿಯಲಿದೆ. 31 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಮಾಡುತ್ತಿದ್ದಾರೆ. ಏಪ್ರಿಲ್ 2 ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. 2024ರಲ್ಲಿ ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿತ್ತು.
ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶುರು ಮಾಡಲಾಗಿದೆ.ಇನ್ನು ಒಂದೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಯುಗಾದಿ ನಂತರ ಅಂತಿಮ ಚಟುವಟಿಕೆಗಳನ್ನು ರೂಪಿಸಿ ಏಪ್ರಿಲ್ ಎರಡನೇ ವಾರದಲ್ಲಿ ಫಲಿತಾಂಶ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.
ಐದಾರು ದಿನದಿಂದ ಮೌಲ್ಯಮಾಪನ ನಡೆದಿದೆ. ದಿನಕ್ಕೆ ಇಂತಿಷ್ಟು ಉತ್ತರ ಪತ್ರಿಕೆಗಳನ್ನು ನೀಡಿ ಮೌಲ್ಯಮಾಪನ ಮುಗಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಸೇವಾ ನಿರತರಾಗಿದ್ದ ಉಪನ್ಯಾಸಕರೊಬ್ಬರು ಮಾಹಿತಿ ನೀಡಿದರು.
ಈ ವರ್ಷ 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 6,61,474 ಹೊಸ ವಿದ್ಯಾರ್ಥಿಗಳು, 34,071 ಪುನರಾವರ್ತಿತ ಮತ್ತು 18,317 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷಾ ಅಕ್ರಮ ತಡೆಗೆ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಕಣ್ಗಾವಲು ಇರಿಸಲಾಗಿತ್ತು. ಪರೀಕ್ಷಾ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮೊಬೈಲ್, ಎಲೆಕ್ಟ್ರಾನಿಕ್ ವಾಚ್, ಕ್ಯಾಲುಕೇಟರ್ ನಿಷೇಧಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಇತ್ತೀಚೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ (ಕೆಎಸ್ ಇ ಎಬಿ) ಎರಡನೇ ಪಿಯುಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು ಪ್ರಕಟಿಸಿತ್ತು.
ಒಮ್ಮೆ ಫಲಿತಾಂಶ ಪ್ರಕಟವಾದರೆ ವಿದ್ಯಾರ್ಥಿಗಳುಆನ್ ಲೈನ್ ನಲ್ಲೇ ಫಲಿತಾಂಶವನ್ನು ನೋಡಬಹುದಾಗಿದೆ. ಕೆಎಸ್ ಇ ಎಬಿ ಅಧಿಕೃತ ವೆಬ್ ಸೈಟ್ kseeb.karnataka.gov.in. ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟವಾದ ನಂತರ ಪಿಯುಸಿಯ ಎರಡು ಮತ್ತು ಮೂರನೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಳಿಯು ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ಮೂರು ಪ್ರಯತ್ನಗಳಲ್ಲಿ ಅತ್ಯುತ್ತಮವಾದ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
2024 ರ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 6.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯು ಮಾರ್ಚ್ 1 ರಿಂದ ಮಾ.22 ರವರೆಗೆ ನಡೆದಿತ್ತು. ಇವರಲ್ಲಿಶೇ.81.15 ರಷ್ಟು ಫಲಿತಾಂಶ ಪ್ರಕಟವಾಗಿತ್ತು. ಒಟ್ಟು 5,26,858 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಮೊದಲನೇ ಪರೀಕ್ಷೆ ಫಲಿತಾಂಶದ ಬಳಿಕ ಪಿಯುಸಿಗೆ ಇನ್ನೂ ಎರಡು ಪರೀಕ್ಷೆಗಳು ಇರಲಿವೆ. ಅವುಗಳ ದಿನಾಂಕವನ್ನು ಫಲಿತಾಂಶ ಪ್ರಕಟಿಸಿದ ದಿನದಲ್ಲೇ ಘೋಷಿಸಬಹುದು ಎನ್ನುವ ಮಾಹಿತಿ ಇದೆ.
ವರದಿ: ಎಚ್. ಮಾರುತಿ,ಬೆಂಗಳೂರು
