ಕರ್ನಾಟಕದ ಒಂದು ಲಕ್ಷ ಮನೆಗಳಲ್ಲಿ ಬರಲಿವೆ ಓದುವ ಮನೆ: ಪುಸ್ತಕ ಪ್ರಾಧಿಕಾರ ರೂಪಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ವಿಶೇಷವೇನು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಒಂದು ಲಕ್ಷ ಮನೆಗಳಲ್ಲಿ ಬರಲಿವೆ ಓದುವ ಮನೆ: ಪುಸ್ತಕ ಪ್ರಾಧಿಕಾರ ರೂಪಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ವಿಶೇಷವೇನು

ಕರ್ನಾಟಕದ ಒಂದು ಲಕ್ಷ ಮನೆಗಳಲ್ಲಿ ಬರಲಿವೆ ಓದುವ ಮನೆ: ಪುಸ್ತಕ ಪ್ರಾಧಿಕಾರ ರೂಪಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ವಿಶೇಷವೇನು

ಕರ್ನಾಟಕದಲ್ಲಿ ಓದುವ ಹವ್ಯಾಸ ವೃದ್ದಿಸುವ ಭಾಗವಾಗಿ ಕರ್ನಾಟಕ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಎನ್ನುವ ಯೋಜನೆಯನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಾಹಿತಿ ಹಂಪನಾ, ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹಾಜರಿದ್ದರು,
ಬೆಂಗಳೂರಿನಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಾಹಿತಿ ಹಂಪನಾ, ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹಾಜರಿದ್ದರು,

ಬೆಂಗಳೂರು: ಕರ್ನಾಟಕದಲ್ಲಿ ಈಗ ಪ್ರತೀ ಊರಿನಲ್ಲಿ ಒಂದಾದರೂ ಗ್ರಂಥಾಲಯ ಇರಬಹುದು. ಇಲ್ಲದೇ ಇದ್ದರೂ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಪ್ರತೀ ಹಳ್ಳಿಯಲ್ಲೂ ಓದುವ ಮನೆ ಇರಬೇಕು ಎನ್ನುವುದು ಕರ್ನಾಟಕ ಸರ್ಕಾರದ ಪರಿಕಲ್ಪನೆ. ಇದಕ್ಕಾಗಿ ಕರ್ನಾಟಕ ಪುಸ್ತಕ ಪ್ರಾಧಿಕಾರವು ಮೊದಲ ಬಾರಿಗೆ ಮನೆಗೊಂದು ಗ್ರಂಥಾಲಯ ಎನ್ನುವ ಯೋಜನೆ ಆರಂಭಿಸಿದೆ. 'ಮನೆಗೊಂದು ಗ್ರಂಥಾಲಯ'ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ ಪ ನಾಗರಾಜಯ್ಯ ಚಾಲನೆ ನೀಡಿದರು. ಹಂತ ಹಂತವಾಗಿ ಕರ್ನಾಟಕದ ಮನೆಗಳಲ್ಲಿ ಗ್ರಂಥಾಲಯ ರೂಪಿಸಲಾಗುತ್ತದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ 'ಮನೆಗೊಂದು ಗ್ರಂಥಾಲಯ' ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕವನ್ನು ಅನಾವರಣಗೊಳಿಸಿದರು.

ಉದ್ದೇಶ ಏನು

ಈ ಯೋಜನೆಯು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸು.

ಪ್ರಾಧಿಕಾರ ತಮ್ಮ ಮನೆಗಳಲ್ಲಿ ಗ್ರಂಥಾಲಯ ಆರಂಭಿಸುವ ಇಚ್ಛೆ ಉಳ್ಳವರನ್ನು ಸಂಪರ್ಕಿಸಿ ಆ ಭಾಗದ ಸಾಹಿತಿ ಬರಹಗಾರರನ್ನು ಅವರ ಮನೆಗೆ ಕರೆದೊಯ್ದು, ಅಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿ ಪ್ರಾಧಿಕಾರದ ಪರವಾಗಿ ಅವರಿಗೊಂದು ಪ್ರಮಾಣ ಪತ್ರ ನೀಡಲಾಗುತ್ತದೆ.

ಮನೆಗೊಂದು ಗ್ರಂಥಾಲಯ ಹೇಗೆ

ಈ ಯೋಜನೆಯ ಪೂರ್ವಾಪರ ಹೀಗಿದೆ. ಮನೆ ಮನೆಯಲ್ಲಿ, ಸಂಘ ಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ. ಮನೆಯ ಒಡೆಯರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು. ಪುಸ್ತಕಗಳ ಖರೀದಿ ಹಾಗೂ ಅವುಗಳನ್ನು ಸುಸಜ್ಜಿತವಾಗಿ ಇಡುವ ಜವಾಬ್ದಾರಿ ಮನೆಯ ಒಡೆಯರದು. ಸದರಿ ಗ್ರಂಥಾಲಯವನ್ನು ಗಣ್ಯರಿಂದ/ ವಿದ್ವಾಂಸರುಗಳಿಂದ / ಕಲಾವಿದರುಗಳಿಂದ ಉದ್ಘಾಟನೆಯನ್ನು ಮಾಡಿಸುವ ಜವಾಬ್ದಾರಿ ಪ್ರಾಧಿಕಾರದ್ದು.

ಪ್ರಚಾರದ ಜವಾಬ್ದಾರಿ ಪ್ರಾಧಿಕಾರದ್ದು. ತಾಲ್ಲೂಕು / ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚನೆ ಮಾಡಿ ಗ್ರಂಥಾಲಯ ಸ್ಥಾಪಿಸಲು ಪ್ರೋತ್ಸಾಹ ನೀಡುವುದು, ಅದರ ಜೊತೆ ನಿಕಟ ಸಂಪರ್ಕ ಸಮಿತಿಯ ಜವಾಬ್ದಾರಿಯಾಗಿರುತ್ತದೆ ಎನ್ನುವುದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರ ವಿವರಣೆ.

ಕುಮಾರವ್ಯಾಸಭಾರತ ಕೃತಿ ಲೋಕಾರ್ಪಣೆ

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಕೃತಿಯ ಸಂಪುಟಗಳನ್ನು ಲೋಕಾರ್ಪಣೆ ಮಾಡಿದರು.

ಆಡು ಭಾಷೆಯಲ್ಲಿ ಮಹಾ ಕಾವ್ಯ ಕಟ್ಟಿಕೊಟ್ಟ ಹಿರಿಮೆ ಗದುಗಿನ ನಾರಾಣಪ್ಪ ಅವರದ್ದು. ಕುಮಾರವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಾಣಪ್ಪ ರಚಿಸಿದ ಕರ್ಣಾಟಭಾರತಕಥಾಮಂಜರಿ' ಕುಮಾರವ್ಯಾಸಭಾರತ ಎಂದೇ ಪ್ರಖ್ಯಾತವಾಗಿದೆ.

ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸಭಾರತವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಕಳೆದ ವರ್ಷ ಗದಗಿನಲ್ಲಿ ಆಚರಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಘೋಷಿಸಿದ್ದರು. ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸಭಾರತದ ಕೃತಿಯ ಹಕ್ಕುಗಳನ್ನು ಪುಸ್ತಕ ಪ್ರಾಧಿಕಾರ ಪಡೆದುಕೊಂಡು ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಕುಮಾರವ್ಯಾಸಭಾರತವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳು ಸೇರಿ ಒಟ್ಟು ರೂ.500 ಗಳ ಬೆಲೆ ನಿಗದಿಪಡಿಸಲಾಗಿದೆ.

Whats_app_banner