Karnataka Rains: ಕರ್ನಾಟಕದಲ್ಲಿ ಎರಡೂವರೆ ತಿಂಗಳಿನಿಂದ 20 ಜಿಲ್ಲೆಗಳಲ್ಲಿ ಭಾರೀ ಮಳೆ, ಈ 2 ಜಿಲ್ಲೆಗಳಲ್ಲಿ ಈಗಲೂ ಮಳೆ ಕೊರತೆ-karnataka rain update bengaluru mysore kodagu shimoga receive good rains in 2 months kalburgi kolar in shortfall list ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರ್ನಾಟಕದಲ್ಲಿ ಎರಡೂವರೆ ತಿಂಗಳಿನಿಂದ 20 ಜಿಲ್ಲೆಗಳಲ್ಲಿ ಭಾರೀ ಮಳೆ, ಈ 2 ಜಿಲ್ಲೆಗಳಲ್ಲಿ ಈಗಲೂ ಮಳೆ ಕೊರತೆ

Karnataka Rains: ಕರ್ನಾಟಕದಲ್ಲಿ ಎರಡೂವರೆ ತಿಂಗಳಿನಿಂದ 20 ಜಿಲ್ಲೆಗಳಲ್ಲಿ ಭಾರೀ ಮಳೆ, ಈ 2 ಜಿಲ್ಲೆಗಳಲ್ಲಿ ಈಗಲೂ ಮಳೆ ಕೊರತೆ

Rain Updates ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ ಎರಡು ಜಿಲ್ಲೆಗಳಲ್ಲಿ ಮಾತ್ರ ಕೊರತೆಯಿದೆ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಲೂ ಮಳೆ ಕೊರತೆಯಾಗಿದೆ.
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಲೂ ಮಳೆ ಕೊರತೆಯಾಗಿದೆ.

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿ ಈಗಾಗಲೇ ಎರಡೂವರೆ ತಿಂಗಳು ಮುಗಿದಿದೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯೂ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿದ್ದರೆ, ಇನ್ನಷ್ಟು ಜಿಲ್ಲೆಗಳಲ್ಲಿ ಅಧಿಕ ಮಳೆಯೂ ಸುರಿದಿದೆ. ಇನ್ನಷ್ಟು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾದ ಮಾಹಿತಿಯಿದೆ. ಆದರೆ ಕರ್ನಾಟಕದ ಉತ್ತರ ಭಾಗದ ಕಲಬುರಗಿ ಹಾಗೂ ದಕ್ಷಿಣ ಭಾಗದ ಕೋಲಾರ ಭಾಗದಲ್ಲಿ ಮಾತ್ರ ಮಳೆ ಕೊರತೆ ಕಂಡು ಬಂದಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿರುವ ವಾರದ ವರದಿಯಲ್ಲಿ ಮಳೆ ಮಾಹಿತಿಯನ್ನು ನೀಡಲಾಗಿದೆ. ಒಂದು ಸಮಾಧಾನಕರ ಸಂಗತಿಯೆಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಅತೀ ಮಳೆ ಕೊರತೆಯ ಜಿಲ್ಲೆಗಳ ಪ್ರಮಾಣವೇ ಹೆಚ್ಚಿತ್ತು. ಈ ಬಾರಿ ಅತೀ ಮಳೆ ಕೊರತೆಯಾದ ಒಂದೇ ಒಂದು ಜಿಲ್ಲೆಯೂ ಇಲ್ಲ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಕೊರತೆ ಏಕೆ

2024 ರ ಜೂನ್‌ 01ರಿಂದ ಆಗಸ್ಟ್‌ 07ರವರೆಗೆ ದಾಖಲಾದ ಮಳೆಯ ಪ್ರಕಾರ ಕರ್ನಾಟಕದ ಕಲಬುರಗಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಆಗಾಗ ಈ ಜಿಲ್ಲೆಗಳಲ್ಲಿ ಮಳೆಯಾದರೂ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆಂದರೆ ಎರಡೂವರೆ ತಿಂಗಳ ಸರಾಸರಿ ಮಳೆಯ ಪ್ರಕಾರ ಕೊರತೆಯಿದೆ. ಈ ಭಾಗದಲ್ಲಿ ನಿರೀಕ್ಷೆಯಷ್ಟು ಮಳೆಯಾಗದೇ ಇರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ ಶೇ 22 ಹಾಗೂ ಕೋಲಾರ ಜಿಲ್ಲೆಯಲ್ಲಿ ಶೇ 33 ರಷ್ಟು ಮಳೆ ಕೊರತೆಯಾಗಿದೆ. ಕೋಲಾರ ಭಾಗವನ್ನು ಬರದ ನಾಡು ಎಂದೇ ಕರೆಯಲಾಗುತ್ತದೆ. ಯಾವುದೇ ಜಲಾಶಯವೂ ಈ ಭಾಗದಲ್ಲಿ ಇಲ್ಲ. ಹಿಂದಿನ ವರ್ಷವೂ ಮಳೆಯಾಗಿರಲಿಲ್ಲ. ಈ ಬಾರಿಯೂ ಕೊರತೆ ಕಂಡು ಬಂದಿದೆ ಎಂದು ಮಾಹಿತಿ ನೀಡಲಾಗಿದೆ.

ಅತೀ ಹೆಚ್ಚಿನ ಮಳೆ ಎಲ್ಲೆಲ್ಲಿ

ಕರ್ನಾಟಕದ ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಚಿತ್ರ ದುರ್ಗ ಜಿಲ್ಲೆಗಳಲ್ಲಿ ಇದೇ ಅವಧಿಯಲ್ಲಿ ಅತೀ ಹೆಚ್ಚಿನ ಮಳೆಯಾಗಿದೆ. ವಿಜಯಪುರದಲ್ಲಿ ಶೇ.62 ರಷ್ಟು ಹೆಚ್ಚಿನ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.72 , ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ 67 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಶೇ.62 ರಷ್ಟು ಅತೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನ ಭಾಗವಾಗಿರುವುದರಿಂದ ಇಲ್ಲಿ ಮಳೆ ಪ್ರಮಾಣ ಅಧಿಕ. ಬಯಲು ಪ್ರದೇಶವಾಗಿರುವ ಚಾಮರಾಜನಗರ ಹಾಗೂ ಚಿತ್ರದುರ್ಗದಲ್ಲೂ ಮಳೆಯಾಗಿದ್ದು, ಉತ್ತರ ಕರ್ನಾಟಕದ ಪಂಚ ನದಿಗಳ ಬೀಡು ವಿಜಯಪುರವೂ ಈ ಬಾರಿ ಉತ್ತಮ ಮಳೆ ಜಿಲ್ಲೆಗಳ ಪಟ್ಟಿಗೆ ಸೇರಿದೆ.

ಅಧಿಕ ಮಳೆಯಾದ ಜಿಲ್ಲೆ

ಕರ್ನಾಟಕ ಹದಿನಾರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಈ ಪಟ್ಟಿಯಲ್ಲಿ ಉಡುಪಿ, ಉತ್ತರ ಕನ್ನಡ, ಬಾಗಲಕೋಎ, ಬೆಳಗಾವಿ, ಗದಗ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಜಿಲ್ಲೆಗಳು ಸೇರಿಕೊಂಡಿವೆ.

ಬೆಂಗಳೂರು ನಗರದಲ್ಲಿ ಶೇ. 36, ಬೆಂಗಳೂರು ಗ್ರಾಮಾಂತರದಲ್ಲಿ ಶೇ.50 , ಮೈಸೂರಲ್ಲಿ ಶೇ. 55, ರಾಮನಗರದಲ್ಲಿ ಶೇ.48 , ಮಂಡ್ಯದಲ್ಲಿ ಶೇ 47 , ಕೊಡಗಲ್ಲಿ ಶೇ. 24 , ದಾವಣಗೆರೆ ಜಿಲ್ಲೆಯಲ್ಲಿ ಶೇ. 49, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 50, ಉಡುಪಿ ಜಿಲ್ಲೆಯಲ್ಲಿ ಶೇ.33 , ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.22, ಕೊಪ್ಪಳ ಜಿಲ್ಲೆಯಲ್ಲಿ ಶೇ. 32, ಬಳ್ಳಾರಿ ಜಿಲ್ಲೆಯಲ್ಲಿ ಶೇ.52 , ಗದಗ ಜಿಲ್ಲೆಯಲ್ಲಿ ಶೇ.21 , ಬೆಳಗಾವಿ ಜಿಲ್ಲೆಯಲ್ಲಿ ಶೇ. 36, ಬಾಗಲಕೋಟೆ ಜಿಲ್ಲೆಯಲ್ಲಿ ಶೇ. 44 ರಷ್ಟು ಅಧಿಕ ಮಳೆಯಾಗಿದೆ.

ಸಾಮಾನ್ಯ ಮಳೆಯಾದ ಜಿಲ್ಲೆಗಳು

ದಕ್ಷಿಣ ಕನ್ನಡ, ಬೀದರ್‌, ಧಾರವಾಡ, ಹಾವೇರಿ, ರಾಯಚೂರು, ಯಾದಗಿರಿ, ಹಾಸನ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಾಗಿದೆ.

ಬೀದರ್‌ನಲ್ಲಿ ಶೇ.13, ಯಾದಗಿರಿಯಲ್ಲಿ ಶೇ. 15, ರಾಯಚೂರಿನಲ್ಲಿ ಶೇ. 4, ಧಾರವಾಡದಲ್ಲಿ ಶೇ. 13, ಹಾವೇರಿಯಲ್ಲಿ ಶೇ. 8, ಶಿವಮೊಗ್ಗದಲ್ಲಿ ಶೇ. 5 , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.10 ಹಾಗೂ ತುಮಕೂರು ಜಿಲ್ಲೆಯಲ್ಲಿ ಶೇ. 1ರಷ್ಟು ಹೆಚ್ಚು ಮಳೆಯಾಗಿರುವ ವರದಿಯಾಗಿದೆ.