ಉತ್ತರ ಕರ್ನಾಟಕ, ಮಲೆನಾಡಿನಲ್ಲಿಲ್ಲ ಮಳೆ, ಕರಾವಳಿಯ ಈ ಜಿಲ್ಲೆಯಲ್ಲಿ ಮಾತ್ರ ವರುಣನ ಆರ್ಭಟ - ಕರ್ನಾಟಕದ ಹವಾಮಾನ ವರದಿ
Karnataka Rain Updates: ಹಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಪ್ರಮಾಣ ಇದೀಗ ಕಡಿಮೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜೋರು ಮಳೆಯ ಸಾಧ್ಯತೆ ಇದೆ.
ಬೆಂಗಳೂರು: ಉತ್ತರ ಕರ್ನಾಟಕ ಜಿಲ್ಲೆಗಳು, ಕರಾವಳಿ ಕರ್ನಾಟಕ, ಮಲೆನಾಡು ಸೇರಿದಂತೆ ಹಲವೆಡೆ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿಸಿದ್ದ ಮಳೆ ಈಗ ತಗ್ಗಿದೆ. ಆದರೆ ಇಂದು (ಸೆಪ್ಟೆಂಬರ್ 4) ಕರಾವಳಿ ಭಾಗದ ಒಂದು ಜಿಲ್ಲೆಯಲ್ಲಿ ಮಾತ್ರ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ದೊಡ್ಡ ಪ್ರಮಾಣದ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಅಲ್ಲದೆ, ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದ ಮಾಹಿತಿ ಪ್ರಕಾರ, ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿ, ರಾಯಚೂರು, ಬೀದರ್ ಸೇರಿದಂತೆ ಸೆಪ್ಟೆಂಬರ್ 3ರಂದು ಭಾರಿ ಮಳೆ ಆಗಿತ್ತು. ಆದರೆ ಇಂದು (ಸೆ.4) ಅದರ ಪ್ರಮಾಣ ಸಂಪೂರ್ಣ ಕುಸಿತ ಕಾಣಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರುಪೇರು ಇರಲಿದೆ. ಉಷ್ಣಾಂಶ ಇಳಿಕೆ ಕಂಡ ಕಾರಣ ಚಳಿಯ ಪ್ರಮಾಣ ಏರುತ್ತಿದೆ. ಉತ್ತರ ಕನ್ನಡದ ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನ ಹವಾಮಾನ
ಬೆಂಗಳೂರಿನಲ್ಲಿ ನಿನ್ನೆ (ಸೆಪ್ಟೆಂಬರ್ 3) ಸಾಧಾರಣ ಮಳೆಯಾಗಿತ್ತು. ಬಿಸಿಲು ಆಗಾಗ್ಗೆ ಕಂಡು ಬಂದರೂ, ಹೆಚ್ಚಿನದಾಗಿ ಮೋಡ ಕವಿದ ವಾತಾವರಣವೇ ಇತ್ತು. ಮತ್ತೊಂದೆಡೆ ಮಳೆ ಜೋರಾಗಿ ಸುರಿದರೂ ಕೆಲವೇ ಹೊತ್ತು ಮಾತ್ರ ಇತ್ತು. ಆದರೆ ಆ ಮಳೆಯಿಂದ ಕೆಲವೆಡೆ ನೀರು ಕೂಡ ನಿಂತಿತ್ತು. ಇನ್ನು ಮುಂದಿನ 48 ದಿನಗಳಲ್ಲೂ ಮೋಡ ಕವಿದ ವಾತಾವರಣವೇ ಇರಲಿದ್ದು, ಸಾಧಾರಣ ಮಳೆಯಾಗಲಿದೆ. ಗರಿಷ್ಠ-ಕನಿಷ್ಠ ತಾಪಮಾನ ಕ್ರಮವಾಗಿ 28° C ಮತ್ತು 20° C ಆಗಿರಬಹುದು. ಆದರೂ ಎಚ್ಚರ ವಹಿಸುವಂತೆ ಹವಾಮಾನ ಕೇಂದ್ರ ಸೂಚಿಸಿದೆ.
ಮಂಗಳವಾರ ಎಲ್ಲೆಲ್ಲಿ ಮಳೆಯಾಗಿತ್ತು?
ಕರಾವಳಿಯ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ ಒಳನಾಡಿಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್ನಲ್ಲಿ 18 ಸೆಂ.ಮೀ ಮಳೆ ಸುರಿದಿದೆ. ಇದು ಇತ್ತೀಚಿನಗಳಲ್ಲಿ ದಾಖಲಾದ ಭಾರಿ ಮಳೆ ದಾಖಲೆಯ ಪ್ರಮಾಣವಾಗಿದೆ. ಅದರಂತೆ, ಚಿಕ್ಕಮಗಳೂರಿನ ಕಮ್ಮರಡಿ, ಶಿವಮೊಗ್ಗದ ಆಗುಂಬೆಯಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ 9 ಸೆ.ಮೀ, ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಸೆಂ.ಮೀ ಮಳೆ ಸುರಿದಿದೆ. ಸಿದ್ದಾಪುರ, ಜಗಲಬೆಟ್, ಔರಾದ್, ಝಲ್ಕಿ, ಗೇರುಸೊಪ್ಪ, ಧರ್ಮಸ್ಥಳ ಸೇರಿದಂತೆ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಉಷ್ಣಾಂಶ ಎಷ್ಟಿತ್ತು?
ಹೊನ್ನಾವರ ಮತ್ತು ಕಾರವಾರದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಆ ಮೂಲಕ ಮಂಗಳವಾರ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿತ್ತು. ಶಿರಾಯಲ್ಲಿ 31.5, ಮಂಗಳೂರು ವಿಮಾನದಲ್ಲಿ ನಿಲ್ದಾಣದಲ್ಲಿ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬೆಳಗಾವಿಯಲ್ಲಿ 28, ಬೆಂಗಳೂರು 28.3, ಚಾಮರಾಜನಗರ 31.4, ಬಾಗಲಕೋಟೆ 30.9, ಕೊಪ್ಪಳದಲ್ಲಿ 30.6, ಮಂಡ್ಯದಲ್ಲಿ 32.2, ಮೈಸೂರು ಮತ್ತು ಚಿಂತಾಮಣಿಯಲ್ಲಿ 30.5 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ದಾಖಲಾಗಿತ್ತು.