ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ, ಕರ್ನಾಟಕ ಹವಾಮಾನ ಹೀಗಿದೆ
ನಾಡಿನ ಉದ್ದಗಲಕ್ಕೂ ದೀಪಾವಳಿ ಸಂಭ್ರಮ. ಮತ್ತೆ ಮಳೆ ಶುರುವಾಗಿರುವ ಕಾರಣ, ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬಿತ್ಯಾದಿ ಸಂದೇಹಗಳು ಕಾಡತೊಡಗಿವೆ. ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಕರ್ನಾಟಕ ಹವಾಮಾನದ ವಿವರ ಹೀಗಿದೆ.

ಬೆಂಗಳೂರು: ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಇಂದು (ನವೆಂಬರ್ 1) ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಇನ್ನೂ ಎರಡು ಅಥವಾ ಮೂರು ದಿನ ಮಳೆಯ ಪ್ರಭಾವ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ ಎಂಬ ಅನುಮಾನ ಎಲ್ಲರಲ್ಲೂ ಇದೆ. ನಿನ್ನೆ (ಅಕ್ಟೋಬರ್ 31) ಅಪರಾಹ್ನ ಪ್ರಕಟವಾಗಿರುವ ಕರ್ನಾಟಕ ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರು ಮಳೆ ಇಂದು ಕೂಡ ಕಾಡಲಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ಇಂದು (ನವೆಂಬರ್ 1) ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಇನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎನ್. ಪುವಿಯರಸನ್ ಅವರ ಪ್ರಕಾರ, ದಕ್ಷಿಣ ಆಂಧ್ರಪ್ರದೇಶಕ್ಕೆ ಸಮೀಪವಾಗಿ ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿದೆ. ಉಳಿದಂತೆ ಮನ್ನಾರ್ ಕೊಲ್ಲಿ ಮತ್ತು ನೆರೆಹೊರೆಯಲ್ಲಿ ಇನ್ನೊಂದು ಚಂಡಮಾರುತದೆ ಪರಿಚಲನೆಯು ಮುಂದುವರಿದಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 900 ಮೀಟರ್ ಎತ್ತರದಲ್ಲಿದೆ. ಹೀಗಾಗಿ ಒಳನಾಡಿನಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿದ್ದು, ಕರಾವಳಿಯಲ್ಲಿ ದುರ್ಬಲವಾಗುತ್ತಿದೆ. ಬುಧವಾರದಿಂದ ಎರಡು ದಿನ ರಾಜ್ಯದ ಹಲವು ಕಡೆ ಮಳೆಯಾಗಲಿದೆ.
ಕರ್ನಾಟಕ ಹವಾಮಾನ ಇಂದು; 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿರುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಹವಾಮಾನ; ಇಂದು ಮಳೆ ಬರುತ್ತಾ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿದ ಬೆಂಗಳೂರು ಹವಾಮಾನ ಮುನ್ಸೂಚನೆ ಪ್ರಕಾರ, ನಾಳೆ (ನವೆಂಬರ್ 2) ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಇರಲಿದೆ.
ಬೆಂಗಳೂರಿನ ಕೆಲವು ಭಾಗದಲ್ಲಿ ಗುರುವಾರ (ಅಕ್ಟೋಬರ್ 31) ಧಾರಾಕಾರ ಮಳೆಯಾಗಿದೆ. ವಿಶೇಷವಾಗಿ ಶಾಂತಿನಗರ, ರಿಡ್ಕಂಡ್ ಸರ್ಕಲ್, ಕೆಆರ್‌ಮಾರ್ಕೆಟ್, ಕಾರ್ಪೊರೇಷನ್, ಮೆಜೆಸ್ಟಿಕ್, ಮಲ್ಲೇ ಶ್ವರ, ಬಸವೇಶ್ವರ ನಗರ ಸೇರಿ ಹಲವಡೆ ಮಳೆಯಾಗಿದೆ. ಮಹದೇವಪುರ, ಕೆ. ಆರ್.ಪುರ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಗುರುವಾರ ಕಾಡುಗೂಡಿಯಲ್ಲಿ ಅತಿ ಹೆಚ್ಚು 1.7ಸೆಂ.ಮೀ ಮಳೆಯಾಗಿದೆ. ಉಳಿದಂತೆ ದೊಡ್ಡಾನೆಕುಂದಿ 1.6, ಹೂಡಿ 1.5, ನಂದಿಲೇಔಟ್, ಎಚ್‌ಎಎಲ್, ವಿದ್ಯಾರಣ್ಯಪುರದಲ್ಲಿ ತಲಾ 1.3, ಮಾರತ್ ಹಳ್ಳಿ, ಬಸವೇಶ್ವರ ನಗರ, ಶೆಟ್ಟಿಹಳ್ಳಿ, ನಾಗಪುರದಲ್ಲಿ ತಲಾ 1.2 ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯ ಪ್ರಮಾಣಕ್ಕೆ ಬಂದರೆ ನಿನ್ನೆ (ಅಕ್ಟೋಬರ್ 31) ಹರಪನಹಳ್ಳಿ (ವಿಜಯನಗರ ಜಿಲ್ಲೆ) 5 ಸೆಂ.ಮೀ, ಹಾವೇರಿ ಪಿಟಿಒ (ಜಿಲ್ಲೆ ಹಾವೇರಿ) 4, ಧಾರವಾಡ (ಜಿಲ್ಲೆ) (ಧಾರವಾಡ ಜಿಲ್ಲೆ) 3, ತರೀಕೆರೆ (ಜಿಲ್ಲೆ ಚಿಕ್ಕಮಗಳೂರು) 3, ತಿಪಟೂರು (ಜಿಲ್ಲೆ ತುಮಕೂರು) 2, ಭದ್ರಾವತಿ (ಜಿಲ್ಲೆ ಶಿವಮೊಗ್ಗ) 2, ಹದದಹಳ್ಳಿ (ಶಿವಮೊಗ್ಗೂರು ಜಿಲ್ಲೆ) ವಿಜಯನಗರ) 2, ಬೆಳಗಾವಿ ವಿಮಾನ ನಿಲ್ದಾಣ ವೀಕ್ಷಣಾಲಯ (ಬೆಳಗಾವಿ ಜಿಲ್ಲೆ) 2, ಚಿಂಚೋಳಿ (ಕಲಬುರ್ಗಿ ಜಿಲ್ಲೆ) 1, ಧಾರವಾಡ ಜಿಲ್ಲೆ (ಧಾರವಾಡ ಜಿಲ್ಲೆ) 1, ಲೋಂಡಾ (ಬೆಳಗಾವಿ ಜಿಲ್ಲೆ) 1, ಹೊನ್ನಾಳಿ (ಜಿಲ್ಲೆ ದಾವಣಗೆರೆ) 1, ಕೊಪ್ಪ (ಜಿಲ್ಲೆ ಚಿಕ್ಕಮಗಳೂರು) 1, ಕಡೂರು (ಜಿಲ್ಲೆ ಚಿಕ್ಕಮಗಳೂರು) 1, ಗುಬ್ಬಿ (ಜಿಲ್ಲೆ), ಬೇಲೂರು (ಹಾಸನ ಜಿಲ್ಲೆ) 1, ವೈ ಎನ್ ಹೊಸಕೋಟೆ (ತುಮಕೂರು ಜಿಲ್ಲೆ) 1, ಗೌರಿಬಿದನೂರು (ಚಿಕ್ಕಬಳ್ಳಾಪುರ ಜಿಲ್ಲೆ) 1, ಎನ್‌ಆರ್ ಪುರ (ಚಿಕ್ಕಮಗಳೂರು ಜಿಲ್ಲೆ) 1, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ವೀಕ್ಷಣಾಲಯ (ಬೆಂಗಳೂರು ನಗರ ಜಿಲ್ಲೆ) 1ಸೆಂ.ಮೀ ಮಳೆಯಾಗಿದೆ ಎಂದು ವರದಿ ಹೇಳಿದೆ. ಕರ್ನಾಟಕದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 34.6 ಡಿ.ಸೆ ಕಲಬುರಗಿಯಲ್ಲಿ ಮತ್ತು ಸಮತಟ್ಟು ಪ್ರದೇಶಗಳ ಪೈಕಿ ಅತೀ ಕಡಿಮೆ ಉಷ್ಣಾಂಶ 18.8 ಡಿ.ಸೆ. ಶಿರಾಲಿಯಲ್ಲಿ ದಾಖಲಾಗಿದೆ ಎಂದು ಕರ್ನಾಟಕ ಹವಾಮಾನ ಮುನ್ಸೂಚನೆಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ.
