ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾಗಿತ್ತಾ, ಚಿಂತೆ ಬಿಡಿ, ಜನವರಿ 31ರ ತನಕ ಕಾಲಾವಕಾಶ ಇದೆ ನೋಡಿ
Ration Card Corrections: ಕರ್ನಾಟಕದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ರೇಷನ್ ಕಾರ್ಡ್ ಕರೆಕ್ಷನ್‌ಗೆ ಅವಕಾಶ ನೀಡಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಜನವರಿ 31ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬೆಂಗಳೂರು: ಪಡಿತರ ಚೀಟಿಯಲ್ಲಿ ಲೋಪ ದೋಷಗಳಿವೆಯಾ, ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾಗಿತ್ತಾ, ಹಾಗಾದರೆ ಚಿಂತೆ ಬಿಡಿ, ಆಹಾರ ಇಲಾಖೆ ಪಡಿತರ ಚೀಟಿದಾರರಿಗೆ ಜನವರಿ 31ರ ತನಕ ಕಾಲಾವಕಾಶ ನೀಡಿದೆ. ಹೊಸ ಪಡಿತರ ಚೀಟಿಗೆ ಅವಕಾಶ ನೀಡಿಲ್ಲ. ಆದರೆ, ಈಗಾಗಲೇ ಇರುವ ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಅವಕಾಶ ನೀಡಲಾಗಿದೆ. ಈ ತಿದ್ದುಪಡಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಅವಕಾಶವಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಪಡಿತರ ಚೀಟಿ ತಿದ್ದುಪಡಿ ಕಾಲಾವಕಾಶ ಜನವರಿ 31ರ ತನಕ ವಿಸ್ತರಣೆ
ಕರ್ನಾಟಕದ ಆಹಾರ ಇಲಾಖೆಯು, ಪಡಿತರ ಚೀಟಿ ತಿದ್ದುಪಡಿಗೆ ಈ ಹಿಂದೆ ಡಿಸೆಂಬರ್ 31ರ ವರೆಗೆ ಅವಕಾಶ ನೀಡಿತ್ತು. ಬಳಿಕ ಈ ಅವಧಿಯನ್ನು ಜನವರಿ 31ರ ತನಕ ವಿಸ್ತರಿಸಿರುವುದಾಗಿ ಹೇಳಿತ್ತು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್‌ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಕೂಡ ನೇರವಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇಲ್ಲ.
ಆದರೆ ಹೊಸದಾಗಿ, ಎಪಿಎಲ್ ಕಾರ್ಡ್ ಪಡೆಯುವವರು ಕೂಡ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರೆ ಸದಸ್ಯರ ಸೇರ್ಪಡೆಗೂ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, https://ahara.karnataka.gov.in/ವೆಬ್‌ಸೈಟ್ ಗಮನಿಸಬಹುದಾಗಿದೆ.
ಹೊಸ ಸದಸ್ಯರ ಸೇರ್ಪಡೆಗೆ ಬೇಕಾದ ದಾಖಲೆಗಳಿವು: ಪಡಿತರ ಚೀಟಿಯ ಮೂಲ ದಾಖಲೆ, ಮಗುವಿನ ಜನನ ಪ್ರಮಾಣಪತ್ರ, ಮಗುವಿನ ಪಾಲಕರ ಆಧಾರ್ ಕಾರ್ಡ್, ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಕಾರ್ಡ್, ಗಂಡನ ಮನೆಯ ಪಡಿತರ ಚೀಟಿ ಪ್ರತಿ ಬೇಕಾಗುತ್ತದೆ. ಈ ಎರಡು ದಾಖಲೆಗಳು ಇದ್ದರೆ ನೀವು ನೇರವಾಗಿ ಆನ್‌ಲೈನ್ ಮೂಲಕ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸಬಹುದು.
ಪಡಿತರ ಚೀಟಿಗೆ ಹೊಸ ಸದಸ್ಯರ ಸೇರ್ಪಡೆ ಮಾಡುವುದು ಹೇಗೆ?
1) ಅಧಿಕೃತ ವೆಬ್‌ಸೈಟ್ https://ahara.karnataka.gov.in/ ಭೇಟಿ ನೀಡಬೇಕು.
2) ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಬೆಂಗಳೂರು, ಮೈಸೂರು, ಕಲಬುರಗಿ ವಲಯ ಎಂಬ ವಿಭಾಗವಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳಿವೆ.
3) ಹೊಸ ಪಡಿತರ ಚೀಟಿ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್ ಕಾರ್ಡ್ ಕರೆಕ್ಷನ್ಸ್ ಆಪ್ಶನ್ ಸೆಲೆಕ್ಟ್ ಮಾಡಿ ಮುಂದುವರಿಯಬೇಕು.
4) ಹೊಸ ಪೇಜ್‌ನಲ್ಲಿ ಕಾಣಸಿಕ್ಕುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್‌ಮಿಟ್ ಮಾಡಬೇಕು.
5) ಇದಾದ ಬಳಿಕ ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆಯಾಗುತ್ತದೆ.
ಯಾರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು, ಯಾವೆಲ್ಲ ರೀತಿ ಪಡಿತರ ಚೀಟಿ
ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳು ಮಾತ್ರ ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆನ್ ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಮಾತ್ರವಲ್ಲದೆ ಕರ್ನಾಟಕ ರಾಜ್ಯದ ನಾಗರಿಕರು ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು ಮತ್ತು ಇ-ಪಡಿತರ ಚೀಟಿಯನ್ನು ಡೌನ್ ಲೋಡ್ ಮಾಡಬಹುದು. ಇ-ಪಡಿತರ ಚೀಟಿಯನ್ನೇ ಬಳಕೆ ಮಾಡಬಹುದು. ಅರ್ಜಿದಾರರು ತಮ್ಮ ಮೂಲ ಪಡಿತರ ಚೀಟಿಯನ್ನು ಎಲ್ಲೆಡೆ ಕೊಂಡೊಯ್ಯಬೇಕಾಗಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ಆದ್ಯತಾರಹಿತ ಕುಟುಂಬ ಪಡಿತರ ಚೀಟಿ (ಎನ್‌ಪಿಎಚ್ಎಚ್): ಆದ್ಯತಾರಹಿತ ಕುಟುಂಬ ಪಡಿತರ ಚೀಟಿ (ಎನ್‌ಪಿಎಚ್ಎಚ್) ಯು ಸ್ಥಿರ ಮತ್ತು ಸಾಕಷ್ಟು ವಾರ್ಷಿಕ ಆದಾಯವನ್ನು ಹೊಂದಿರುವ ಕುಟುಂಬಗಳಿಗೆ ಭಾರತ ಸರ್ಕಾರವು ನೀಡುವ ಒಂದು ರೀತಿಯ ಪಡಿತರ ಚೀಟಿಯಾಗಿದೆ. ಈ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳ ಅರ್ಹತಾ ಮಾನದಂಡಗಳನ್ನು ಪೂರೈಸುವುದಿಲ್ಲ. ಇವರು ಮಾರುಕಟ್ಟೆ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿ ಮಾಡಬೇಕಾಗುತ್ತದೆ.
ಅನ್ನಪೂರ್ಣ ಯೋಜನೆ ಪಡಿತರ ಚೀಟಿ: ಅನ್ನಪೂರ್ಣ ಯೋಜನೆ ಪಡಿತರ ಚೀಟಿ ಭಾರತದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಇದು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ದೀನ ನಾಗರಿಕರಿಗೆ ಸಹಾಯವನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಅರ್ಹ ವ್ಯಕ್ತಿಗಳಿಗೆ ಮಾಸಿಕ ಆಧಾರದ ಮೇಲೆ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಕಾರ್ಡುದಾರರು ತಿಂಗಳಿಗೆ 10 ಕಿಲೋ ಆಹಾರ ಧಾನ್ಯ ಪಡೆಯಲು ಅರ್ಹರಾಗಿರುತ್ತಾರೆ.
ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ (ಎಎವೈ): ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಭಾರತ ಸರ್ಕಾರದ ಉಪಕ್ರಮವಾಗಿದ್ದು, ಇದು ದೇಶದ ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಾರ್ಷಿಕ ಆದಾಯ 15,000 ರೂಪಾಯಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ಚೀಟಿ ಸಿಗುತ್ತದೆ.