Republic Day 2025: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು, ಕರ್ನಾಟಕ ಅಭಿವೃದ್ದಿಯ ಹಾದಿ, ಗಣರಾಜ್ಯೋತ್ಸವ ಭಾಷಣದ ಪ್ರಮುಖ ಅಂಶಗಳು
Republic Day 2025: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಭಾಷಣ ಮಾಡಿದರು.

ಬೆಂಗಳೂರು: ಕರ್ನಾಟಕ ರಾಜ್ಯವು ಸಂವಿಧಾನದ ಆಶಯಗಳಿಗನುಗುಣವಾಗಿ ಒಕ್ಕೂಟ ಧರ್ಮದ ನೀತಿರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನ ವಿಧಿಸಿದ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ಸಂಬಂಧ ಮುಂದುವರಿಯಬೇಕು ಎಂದು ಹೇಳಿರುವ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕರ್ನಾಟಕ ಸರ್ಕಾರವು ಅಭಿವೃದ್ದಿ ಪಥದಲ್ಲಿ ಮುನ್ನಡೆ ಸಾಧಿಸಿದ್ದು, ಗ್ಯಾರಂಟಿ ಯೋಜನೆಗಳ ಜತೆಯಲ್ಲಿಯೆ ಇತರೆ ವಲಯಗಳ ಅಭಿವೃದ್ದಿಗೆ ಒತ್ತು ನೀಡಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಮಾನಿಕ್ ಶಾ ಮೈದಾನದಲ್ಲಿ ಭಾನುವಾರ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಭಾಷಣ ಮಾಡಿದರು.
ಸಂವಿಧಾನ ರಕ್ಷಣೆ ಹೊಣೆ
ಜನವರಿ 26 ಭಾರತದಲ್ಲಿ ಪ್ರಜಾಪ್ರಭುತ್ವ ಉದಯವಾದ ಐತಿಹಾಸಿಕ ದಿನ. ಎಪ್ಪತ್ತಾರು ವರ್ಷಗಳ ಹಿಂದೆ ಈ ದಿನದಂದು ಭಾರತೀಯರಾದ ನಾವು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಮೂಲಕ ಈ ದೇಶದಲ್ಲಿ ರಾಜಶಾಹಿ ಮತ್ತು ವಸಾಹತುಶಾಹಿ ಆಡಳಿತಕ್ಕೆ ಇತಿಶ್ರೀ ಹಾಡಿ ಜನಾಡಳಿತದ ಹೊಸ ಪರ್ವವನ್ನು ಪ್ರಾರಂಭಿಸಿದ ದಿನ. ಸಾಮ್ರಾಜ್ಯಶಾಹಿಗಳು ತಮ್ಮ ಸ್ವ-ಹಿತಕ್ಕಾಗಿ ಮಾಡಿಕೊಂಡಿದ್ದ ಕಾನೂನುಗಳನ್ನು ಕಿತ್ತೆಸೆದು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಸಹೋದರತೆಯನ್ನೂ ಎತ್ತಿಹಿಡಿಯುವ ದೇಶದ ಸರ್ವೋಚ್ಛ ಕಾನೂನಾದ ಸಂವಿಧಾನವನ್ನು ಅಳವಡಿಸಿಕೊಂಡ ದಿನ. ನಮ್ಮ ಸಂವಿಧಾನವು ಅಂದಿನಿಂದ ಇಂದಿನವರೆಗೆ ಈ ದೇಶದ ಚರಿತ್ರೆಯನ್ನು ರೂಪಿಸಿದೆ, ಮುಂದಿನ ಭವಿಷ್ಯವನ್ನೂ ರೂಪಿಸಲಿದೆ. ಆದ್ದರಿಂದ ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ಅರಿವು ಜನರಲ್ಲಿ ಮೂಡಿಸಬೇಕಾಗಿದೆ.
ನಮ್ಮ ಸಂವಿಧಾನದ ಉದಾತ್ತ ಆಶಯಗಳು ನಮ್ಮ ಶ್ರೀಮಂತ ಪರಂಪರೆಯನ್ನು ನೆನಪಿಸುತ್ತವೆ. ನಮ್ಮ ಸಂವಿಧಾನವು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ. ನಮ್ಮ ಸಂವಿಧಾನವು ಸರ್ವರ ಪಾಲ್ಗೊಳ್ಳುವಿಕೆಯ ಮೂಲಕ ದೇಶವನ್ನು ಬೆಳೆಸುವ ಮತ್ತು ಎಲ್ಲಾ ನಾಗರಿಕರ ಸಮೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಂಕಣಬದ್ಧವಾಗಿದೆ ಮತ್ತು ಪ್ರತಿಯೊಬ್ಬರೂ ಹೊರಬೇಕಾದ ಜವಾಬ್ದಾರಿಗಳನ್ನು ಸಹ ಅದು ನೆನಪಿಸುತ್ತದೆ. ಗಣತಂತ್ರ ದಿನದ ಈ ವಿಶೇಷ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಘನ ಸಂವಿಧಾನದ ಮೂಲಕ ದೇಶ ಸಾಧಿಸಿರುವ ಪ್ರಗತಿಯನ್ನು ಗೌರವಿಸೋಣ. ಅದೇ ರೀತಿ ಇಂತಹದ್ದೊಂದು ಮಹೋನ್ನತ ಸಂವಿಧಾನವನ್ನು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲು ಕಾರಣರಾದ ಎಲ್ಲಾ ಮಹನೀಯರಿಗೆ ಮನಸಾ ನಮಿಸೋಣ.
ಸಂವಿಧಾನವು ತನ್ನ ಮೊದಲ ಪರಿಚ್ಛೇದದಲ್ಲೇ ಭಾರತವನ್ನು ಒಂದು ರಾಜ್ಯಗಳ ಒಕ್ಕೂಟ ಎಂದು ಘೋಷಿಸುತ್ತದೆ. ನಮ್ಮ ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಒಕ್ಕೂಟ ಅಥವಾ ಯೂನಿಯನ್ ಮತ್ತು ರಾಜ್ಯಗಳ ನಡುವೆ ಹಂಚಿದೆ. ದೇಶದ ಅಖಂಡತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಒಕ್ಕೂಟ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವಾಗಲೂ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಗುರುತಿಸಿ ಗೌರವಿಸಿದೆ. ಆ ಮೂಲಕ ದೇಶದ ವೈವಿಧ್ಯತೆಯನ್ನು ಎತ್ತಿ ಹಿಡಿದಿದೆ. ವೈವಿಧ್ಯಮಯವಾದ ಈ ದೇಶವನ್ನು ಈ ರೀತಿಯ ಅಧಿಕಾರ ಹಂಚಿಕೆಯ ಸೂತ್ರದಲ್ಲೇ ನಡೆಸಬೇಕೆಂಬ ತತ್ವವೊಂದನ್ನು ಅಳವಡಿಸಿಕೊಂಡು ಈ ದೇಶದ ಆಡಳಿತ ವ್ಯವಸ್ಥೆಯನ್ನು ಈ ಮೂಲಕ ಸಂವಿಧಾನದ ನಿರ್ಮಾತೃಗಳು ನಮಗೆ ನೀಡಿದರು. ಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತವನ್ನು ನಿರ್ಮಿಸಬೇಕೆಂಬುದು ನಮ್ಮ ಸಂವಿಧಾನ ನಿರ್ಮಾತೃಗಳ ಕನಸಾಗಿತ್ತು. ಅವರ ಆ ಕನಸಿಗೆ ಕುಂದುಂಟಾಗದಂತೆ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮೆಲ್ಲರ ಮೇಲೂ ಇದೆ.
ಕರ್ನಾಟಕ ರಾಜ್ಯವು ಸಂವಿಧಾನದ ಆಶಯಗಳಿಗನುಗುಣವಾಗಿ ಒಕ್ಕೂಟ ಧರ್ಮದ ನೀತಿರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನ ವಿಧಿಸಿದ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ಸಂಬಂಧ ಮುಂದುವರಿಯಬೇಕುಎಂದು ಕರ್ನಾಟಕವು ಬಯಸುತ್ತದೆ ಎನ್ನುವುದು ಥಾವರ್ ಚಂದ್ ಗೆಹ್ಲೋಟ್ ಅವರ ಆಶಯ.
ಗ್ಯಾರಂಟಿಗಳ ಜಾರಿ
ಕರ್ನಾಟಕವು ಸಂವಿಧಾನದ ಮಹತ್ತರ ಆಶಯವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ನೆಲೆಗೊಳಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಗಳಿಗೆ ಆಗುತ್ತಿರುವ ಹಿನ್ನಡೆಯನ್ನು ಮತ್ತು ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತುಕೊಂಡು ಜಾರಿಗೆ ತಂದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ. ಈ ಯೋಜನೆಗಳಿದಾಗಿ ಆರ್ಥಿಕ ಬಿಕ್ಕಟ್ಟು ಉಂಟಾದೀತು, ಅಭಿವೃದ್ಧಿ ಕುಂಠಿತವಾದೀತು ಎಂಬ ನಿರಾಶಾವಾದೀ ಭವಿಷ್ಯ ಸುಳ್ಳಾಗಿದೆ. ಕರ್ನಾಟಕ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾದ “ಗೃಹಲಕ್ಷ್ಮಿ” ಯೋಜನೆಯಡಿ, ಆಗಸ್ಟ್ 2023 ರಿಂದ ಪ್ರತಿ ಕುಟುಂಬದ ಯಜಮಾನಿಯರಿಗೆ ಮಾಸಿಕ ರೂ.2000 ದರದಲ್ಲಿ ಒಟ್ಟು ರೂ.35,180.20 ಕೋಟಿ ಆರ್ಥಿಕ ನೆರವು ನೀಡಲಾಗಿದೆ.
“ಗೃಹ ಜ್ಯೋತಿ” ಯೋಜನೆಯಡಿ, ಪ್ರಸ್ತುತ 1.62 ಕೋಟಿ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರವು ಆಗಸ್ಟ್ 2023 ರಿಂದ ಈ ವರೆಗೆ (18 ತಿಂಗಳುಗಳು) ವಿದ್ಯುತ್ ಸರಬರಾಜು ಕಂಪನಿಗಳಿಗೆ ರೂ.13,409 ಕೋಟಿ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಿದೆ.
ಕರ್ನಾಟ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ “ಶಕ್ತಿ” ಯೋಜನೆ - ಮಹಿಳೆಯರಿಗೆ ಉಚಿತ ಪ್ರಯಾಣವನ್ನು ದಿನಾಂಕ: 11.06.2023 ರಂದು ಜಾರಿಗೊಳಿಸಿದ್ದು, ಇದು ಮಹಿಳಾ ಸಬಲೀಕರಣವನ್ನು ಬಲಪಡಿಸುವತ್ತ ಸರ್ಕಾರದ ಒಂದು ಹೆಜ್ಜೆಯಾಗಿದೆ. ಯೋಜನೆಯ ಆರಂಭದಿಂದ 17-01-2025 ರವರೆಗೆ ರಾಜ್ಯದಲ್ಲಿ ಒಟ್ಟು 373.27 ಕೋಟಿ ಟ್ರಿಪ್ಪುಗಳಲ್ಲಿ ಫಲಾನುಭವಿಗಳು ಶಕ್ತಿ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ಇದಕ್ಕಾಗಿ ಸರ್ಕಾರವು 9,051 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ.
“ಯುವನಿಧಿ” ಯೋಜನೆಯಡಿಯಲ್ಲಿ 1,94,986 ಅಭ್ಯರ್ಥಿಗಳನ್ನು ನೋಂದಾಯಿಸಲಾಗಿದೆ ಮತ್ತು 1,24,176 ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಯುವನಿಧಿ ಪ್ಲಸ್ ಉಪಕ್ರಮದಡಿಯಲ್ಲಿ, 25,000 ಯುವನಿಧಿ ಫಲಾನುಭವಿಗಳಿಗೆ ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳ ಅಡಿಯಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು. 12,000 ಅಭ್ಯರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಕೋಶ ಮತ್ತು ಭವಿಷ್ಯದ ಕೌಶಲ್ಯಗಳ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ.
ಜನರ ಹಸಿವನ್ನು ನೀಗಿಸುವುದರ ದೃಷ್ಟಿಯಿಂದ “ಅನ್ನಭಾಗ್ಯ” ಯೋಜನೆಯನ್ನು ಜಾರಿಗೆ ತರಲಾಯಿತು. ಬಿಪಿಎಲ್ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ನೀಡುವ ಜೊತೆಗೆ, ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ ರೂ.170/- ರಂತೆ ಅವರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ-2023 ರಿಂದ ಇಲ್ಲಿಯವರೆಗೆ 4,48,12,382 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲು ರೂ.9,775.51 ಕೋಟಿ ಬಿಡುಗಡೆ ಮಾಡಲಾಗಿದೆ ಎನ್ನುವುದು ರಾಜ್ಯಪಾಲರು ನೀಡಿದ ವಿವರಣೆ.
ಬೆಂಗಳೂರು ಮೆಟ್ರೋ
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2A ರಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೃಷ್ಣರಾಜಪುರದವರೆಗೆ 19.75ಕಿ.ಮೀ. ಮತ್ತು ಹಂತ-2B ರಲ್ಲಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ. ಉದ್ದದ ಒಟ್ಟು ರೂ.14,788 ಕೋಟಿ ಅಂದಾಜು ವೆಚ್ಚದ ಕಾಮಗಾರಿಯು ಪ್ರಗತಿಯಲ್ಲಿದೆ. ಹಂತ-3 ರಲ್ಲಿ 32.15 ಕಿ.ಮೀ ಉದ್ದದ ಕೆಂಪಾಪುರದಿಂದ ಜೆ.ಪಿ.ನಗರದವರೆಗೆ ಕಾರಿಡಾರ್-1, ಹಂತ-4 ರಲ್ಲಿ 12.50 ಕಿ.ಮೀ. ಉದ್ದದ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಕಾರಿಡಾರ್-2 ಒಟ್ಟು 44.65 ಕಿ.ಮೀ. ಉದ್ದದ ರೂ.15,611 ಕೋಟಿ ಅಂದಾಜು ವೆಚ್ಚದ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಡಿಸೆಂಬರ್-2029 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದಾದ್ಯಂತ 34 ಸ್ಥಳಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ ಸುಮಾರು 30,000 ವಸತಿ ಘಟಕಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, 25 ಯೋಜನೆಗಳಲ್ಲಿ ಒಟ್ಟು 14,909 ಫ್ಲಾಟ್‌ಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ ಮತ್ತು 10,615 ಫ್ಲಾಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಡಾ|| ಕೆ.ಶಿವರಾಮ ಕಾರಂತ್ (ಹಂತ-1) ಬಡಾವಣೆಯ ರಚನೆಯ ಕಾರ್ಯ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೆ ನಿವೇಶನಗಳ ಹಂಚಿಕೆ ಕಾರ್ಯವನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂಬುದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅಂಶ.
