ಕನ್ನಡ ಸುದ್ದಿ  /  ಕರ್ನಾಟಕ  /  Kabini Reservoir: ಕೇರಳದಲ್ಲಿ ಭಾರೀ ಮಳೆ, ಜುಲೈನಲ್ಲಿಯೇ ತುಂಬಿತು ಕಬಿನಿ ಜಲಾಶಯ, ನಾಳೆಯಿಂದ ನಾಲೆಗೂ ನೀರು

Kabini Reservoir: ಕೇರಳದಲ್ಲಿ ಭಾರೀ ಮಳೆ, ಜುಲೈನಲ್ಲಿಯೇ ತುಂಬಿತು ಕಬಿನಿ ಜಲಾಶಯ, ನಾಳೆಯಿಂದ ನಾಲೆಗೂ ನೀರು

Kerala Rains ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ಈ ಬಾರಿ ಜುಲೈ ಮೊದಲ ವಾರದಲ್ಲಿಯೇ ತುಂಬಿದೆ. ಹೊರ ಹರಿವನ್ನು ನಿಧಾನವಾಗಿ ಏರಿಸಲಾಗುತ್ತಿದೆ.

ಕಬಿನಿ ಜಲಾಶಯವು ಜುಲೈ ಮೊದಲ ವಾರದಲ್ಲೇ ಬಹುತೇಕ ತುಂಬಿದೆ.
ಕಬಿನಿ ಜಲಾಶಯವು ಜುಲೈ ಮೊದಲ ವಾರದಲ್ಲೇ ಬಹುತೇಕ ತುಂಬಿದೆ.

ಮೈಸೂರು: ಕೇರಳದಲ್ಲಿ ಜೂನ್‌ ಕೊನೆಯ ವಾರ ಹಾಗೂ ಜುಲೈ ಮೊದಲ ವಾರ ಸುರಿದ ಭಾರೀ ಮಳೆಗೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಬೇಗನೇ ತುಂಬಿದೆ. ಬಹುತೇಕ ಭರ್ತಿ ಹಂತದಲ್ಲಿಯೇ ಕಬಿನಿ ಜಲಾಶಯ ಮೊದಲ ಬಾರಿಗೆ ಈ ಅವಧಿಗೆ ಇಷ್ಟು ನೀರು ಸಂಗ್ರಹಿಸಿದೆ. ಕೇರಳದ ವಯನಾಡು ಭಾಗದಲ್ಲಿನ ಮಳೆಯೇ ಇದಕ್ಕೆ ಕಾರಣ. ಕಬಿನಿ ಜಲಾಶಯ ತುಂಬಲು ಇನ್ನು ಎರಡು ಅಡಿ ಬೇಕಿದ್ದರೂ ತಾಂತ್ರಿಕ ಕಾರಣಕ್ಕೆ ನೀರು ಇನ್ನು ಎರಡು ಅಡಿ ಇರುವಾಗಲೇ ಹೊರ ಹರಿವನ್ನು ಹೆಚ್ಚಿಸಲಾಗುತ್ತದೆ. ಈ ಕಾರಣದಿಂದ ಪೂರ್ತಿ ತುಂಬುವವರೆಗೂ ಬಿಡದೇ ಜಲಾಶಯ ಸುರಕ್ಷತೆಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಹೊರ ಹರಿವಿನ ಪ್ರಮಾಣವನ್ನೂ ಮೂರು ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಅಲ್ಲದೇ ಜುಲೈ 10 ರಿಂದಲೇ ಕಬಿನಿ ಭಾಗದ ನಾಲೆಗಳಿಗೂ ನೀರು ಹರಿಸಲು ತೀರ್ಮಾನಿಸಲಾಗಿದೆ.

ಕಬಿನಿ ಜಲಾಶಯ ಜಲ ಸಂಗ್ರಹದ ಸಾಮರ್ಥ್ಯದ ಲೆಕ್ಕದಲ್ಲಿ ಸಣ್ಣದೇ. ಬೇಗ ತುಂಬುವ ಜಲಾಶಯಗಳಲ್ಲಿ ಇದೂ ಒಂದು. ಏಕೆಂದರೆ ಕೇರಳದಲ್ಲಿ ಉತ್ತಮ ಮಳೆಯಾದರೆ ಒಳಹರಿವಿನ ಪ್ರಮಾಣ ಹೆಚ್ಚಿ ಜಲಾಶಯ ತುಂಬುತ್ತದೆ. ಹಿಂದಿನ ಹಲವು ವರ್ಷಗಳಲ್ಲಿ ಇದೇ ರೀತಿ ಜುಲೈನಲ್ಲಿಯೇ ಜಲಾಶಯ ತುಂಬಿದ ಉದಾಹರಣೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜುಲೈ ಮೊದಲ ವಾರದಲ್ಲಿ ತುಂಬಿರುವುದು ಮೊದಲು.

ಕಬಿನಿ ಜಲಾಶಯಕ್ಕೆ ಸೋಮವಾರ ಬೆಳಗ್ಗೆ ಹೊತ್ತಿಗೆ ಒಳ ಹರಿವಿನ ಪ್ರಮಾಣವು 4711 ಕ್ಯೂಸೆಕ್‌ ಇತ್ತು. ಜಲಾಶಯದ ನೀರಿನ ಪ್ರಮಾಣವು 2281.89 ಅಡಿಯಷ್ಟಿದೆ. ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಲ್ಲಿ 18.17 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ. ಇಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಜಲಾಶಯದಿಂದ 2292 ಕ್ಯೂಸೆಕ್‌ ನೀರನ್ನು ಈಗಾಗಲೇ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದ ಅವಧಿಯಲ್ಲಿ ಕಬಿನಿ ಜಲಾಶಯದಲ್ಲಿ 2263.88 ಅಡಿ ನೀರು ಸಂಗ್ರಹವಾಗಿತ್ತು. ಒಳ ಹರಿವಿನ ಪ್ರಮಾಣ 16580 ಕ್ಯೂಸೆಕ್‌ನಷ್ಟಿತ್ತು,. ಇದೇ ಅವಧಿಯಲ್ಲಿ 8.88 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೆ ಈ ಬಾರಿ ಮುಂಗಾರು ಪ್ರವೇಶ ಬೇಗನೇ ಆಗಿ ಜೂನ್‌ನಲ್ಲಿಯೇ ಉತ್ತಮ ಮಳೆಯಾದ ಕಾರಣ ಕಬಿನಿ ಜಲಾಶಯ ತುಂಬಿದೆ. ಮುಂದಿನ ಮೂರು ತಿಂಗಳಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು ಸಹಜವಾಗಿಯೇ ನದಿ ಮೂಲಕ ಹೊರ ಹೋಗಲಿದೆ. ನಾಲೆಗಳಿಗೂ ನೀರು ಹರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಕೇರಳದಲ್ಲಿ ಈಗ ಮಳೆ ಪ್ರಮಾಣ ಕಡಿಮೆಯಾಗಿದೆ. ಮತ್ತೆ ಚುರುಕಾಗುವ ವಿಶ್ವಾಸವಿದೆ. ತಾಂತ್ರಿಕೆ ನೆಲೆಯಲ್ಲಿ ಜಲಾಶಯ ತುಂಬಿದೆ. ಸದ್ಯ ಬರುತ್ತಿರುವ ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವಿನ ಪ್ರಮಾಣವನ್ನು ಕಬಿನಿ ತಾಂತ್ರಿಕ ತಂಡ ನಿರ್ಧರಿಸಲಿದೆ. ಹೆಚ್ಚು ನೀರು ಇಟ್ಟುಕೊಳ್ಳುವುದರಿಂದ ಜಲಾಶಯಕ್ಕೆ ತೊಂದರೆಯಾಗಲಿದೆ ಎನ್ನುವ ಉದ್ದೇಶದಿಂದಲೇ ಈ ಹಂತದಲ್ಲಿ ಒಳಹರಿವು ಹಾಗೂ ಹೊರ ಹರಿವಿನ ಪ್ರಮಾಣವನ್ನು ನಿರ್ವಹಿಸಲಾಗುತ್ತದೆ. ಬಹುಬೇಗನೇ ಜಲಾಶಯ ತುಂಬಿದೆ. ಇದರಿಂದ ಕುಡಿಯುವ ನೀರು ಮಾತ್ರವಲ್ಲದೇ ಕೃಷಿಕರಿಗೂ ಸಹಾಯಕವಾಗಲಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಕಬಿನಿ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಇದು ಕೃಷಿ ಚಟುವಟಿಕೆ ಅಲ್ಲ. ಬದಲಿಗೆ ನಾಲೆಗಳಿಗೆ ಹರಿಸುವುದರಿಂದ ಜಾನುವಾರುಗಳಿಗೆ ಸಹಾಯಕವಾಗಲಿದೆ. ಕುಡಿಯುವ ನೀರಿಗೂ ಉಪಯೋಗವಾಗಲಿದೆ . ಈಗ ಹರಿಸುವ ನೀರನ್ನು ಕೃಷಿಗೆ ಬಳಕೆ ಮಾಡಬಾರದು ಎನ್ನುವುದು ಕಬಿನಿ ಅಧಿಕ್ಷಕ ಎಂಜಿನಿಯರ್‌ ಮಹೇಶ್‌ ನುಡಿ.