ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶೇ. 6ಕ್ಕೆ ಕುಸಿತ, ಲಿಂಗನಮಕ್ಕಿ ನೀರ ಪ್ರಮಾಣ ಶೇ.30ಕ್ಕೆ ಇಳಿಕೆ, ಬೇಸಿಗೆವರೆಗೂ ಹೇಗಿರಲಿದೆ ಸ್ಥಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶೇ. 6ಕ್ಕೆ ಕುಸಿತ, ಲಿಂಗನಮಕ್ಕಿ ನೀರ ಪ್ರಮಾಣ ಶೇ.30ಕ್ಕೆ ಇಳಿಕೆ, ಬೇಸಿಗೆವರೆಗೂ ಹೇಗಿರಲಿದೆ ಸ್ಥಿತಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶೇ. 6ಕ್ಕೆ ಕುಸಿತ, ಲಿಂಗನಮಕ್ಕಿ ನೀರ ಪ್ರಮಾಣ ಶೇ.30ಕ್ಕೆ ಇಳಿಕೆ, ಬೇಸಿಗೆವರೆಗೂ ಹೇಗಿರಲಿದೆ ಸ್ಥಿತಿ

ಬೇಸಿಗೆ ಪ್ರಮಾಣ ಏರುತ್ತಿರುವ ನಡುವೆ ಅಲ್ಲಲ್ಲಿ ಮಳೆಯಾದರೂ ಕರ್ನಾಟಕದ ಜಲಾಶಯದ ನೀರಿನ ಮಟ್ಟದಲ್ಲಿ ಕುಸಿತವೇ ಕಾಣುತ್ತಿದೆ. ಕುಡಿಯುವ ಜತೆಗೆ ನೀರಾವರಿಗೂ ನೀರು ಹರಿಸುತ್ತಿರುವುದರಿಂದ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ.

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ.
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ.

ಬೆಂಗಳೂರು: ಕರ್ನಾಟಕದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಅದರಲ್ಲೂ ಈ ಬಾರಿ ಗೇಟ್‌ ಮುರಿದು ತೊಂದರೆಗೆ ಒಳಗಾದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಬೇಸಿಗೆ ಮುಗಿಯಲು ಇನ್ನೂ ಒಂದು ತಿಂಗಳ ಇರುವಾಗಲೇ ಶೇ. 6 ಕ್ಕೆ ಕುಸಿತ ಕಂಡಿದೆ. ಮಲೆನಾಡು ಭಾಗದ ಅತೀ ದೊಡ್ಡ ಜಲಾಶಯವಾದ ಶಿವಮೊಗ್ಗದ ಲಿಂಗನಮಕ್ಕಿ ನೀರಿನ ಮಟ್ಟವೂ ಶೇ. 30ಕ್ಕೆ ಇಳಿಕೆ ಕಂಡಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮುಖ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಬೇಸಿಗೆ ಮುಗಿಯುವವರೆಗೂ ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ, ವಿಜಯಪುರ ಸಹಿತ ಪ್ರಮುಖ ನಗರಗಳು, ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸುವ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.

ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಕಳೆದ ವರ್ಷ ಜಲಾಶಯಗಳು ಶೇ. 50 ರಷ್ಟು ಭರ್ತಿಯಾಗುವುದಲ್ಲಿ ಹೆಚ್ಚಾಗಿ ಹೋಗಿತ್ತು. ಕೆಲವು ಜಲಾಶಯಗಳಿಗೆ ಮಾತ್ರ ಹೆಚ್ಚಿನ ನೀರು ಹರಿದು ಬಂದರೂ ತುಂಬಲು ಆಗಲೇ ಇಲ್ಲ ಈ ಬಾರಿ ಪರಿಸ್ಥಿತಿ ಹಾಗಿಲ್ಲ.ಕರ್ನಾಟಕ ಒಟ್ಟು 14 ಪ್ರಮುಖ ಜಲಾಶಯಗಳಿಗೂ ಹೆಚ್ಚಿನ ನೀರು ಮಳೆಗಾಲದಲ್ಲಿ ಹರಿದು ಬಂದಿತ್ತು. ಆದರೆ ಈ ಬಾರಿ ಕುಡಿಯುವ ನೀರಿನ ಜತೆಗೆ ಕೃಷಿಗೂ ನೀರನ್ನು ಎಲ್ಲಾ ಜಲಾಶಯಗಳಿಂದ ಹರಿಸಲಾಗಿದೆ. ತುಂಗಭದ್ರಾ ಜಲಾಶಯದಿಂದ ಆಂಧ್ರ ಹಾಗೂ ತೆಲಂಗಾಣಕ್ಕೆ, ಕೆಆರ್‌ಎಸ್‌ ಹಾಗೂ ಕಬಿನಿಯಿಂದ ತಮಿಳುನಾಡಿಗೂ ನೀರು ಹರಿಸಲಾಗಿದೆ. ಇದರ ನಡುವೆಯೂ ಜಲಾಶಯದಲ್ಲಿ ನೀರು ಲಭ್ಯವಿದೆ. ಸದ್ಯ ಶೇ.34 ರಷ್ಟು ನೀರು ಜಲಾಶಯಗಳಲ್ಲಿ ಲಭ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕರ್ನಾಟಕದ ಎಲ್ಲಾ ಜಲಾಶಯಗಳಲ್ಲಿ ಶೇ. 20ರಷ್ಟು ನೀರು ಸಂಗ್ರಹವಿತ್ತು.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಿಸಿಡಬಹುದಾದ ಟಿಎಂಸಿ ಪ್ರಮಾಣ 895.62 . ಈವರೆಗೂ ಉಳಿದಿರುವುದು 304.09 ಟಿಎಂಸಿ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಟಿಎಂಸಿ ಪ್ರಮಾಣ 214.44 ಟಿಎಂಸಿ.

ಯಾವ ಜಲಾಶಯದಲ್ಲಿ ಎಷ್ಟು?

ಕರ್ನಾಟಕದಲ್ಲಿ ಆಲಮಟ್ಟಿ, ಕೃಷ್ಣರಾಜಸಾಗರ, ತುಂಗಭದ್ರಾ, ಲಿಂಗನಮಕ್ಕಿ, ಭದ್ರಾ, ಕಬಿನಿ, ನಾರಾಯಣಪುರ, ಹೇಮಾವತಿ, ವಾಣಿ ವಿಲಾಸ ಸಾಗರ, ಹಾರಂಗಿ, ಸೂಪಾ, ಮಲಪ್ರಭಾ, ವರಾಹಿ, ಘಟಪ್ರಭಾ ಪ್ರಮುಖ ಜಲಾಶಯಗಳು. ಅದರಲ್ಲೂ ಲಿಂಗನಮಕ್ಕಿ, ಆಲಮಟ್ಟಿ, ಸೂಪಾ, ತುಂಗಭದ್ರಾ, ಭದ್ರಾ, ಕೆಆರ್‌ಎಸ್‌, ಘಟಪ್ರಭಾ ಹೆಚ್ಚು ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಜಲಾಶಯಗಳು.

ಇದರಲ್ಲಿ ಅತಿ ದೊಡ್ಡದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 45.09 ಟಿಎಂಸಿ ಇದೆ.

ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದಲ್ಲಿ 123.08 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಇರುವುದು 25.92 ಟಿಎಂಸಿ ನೀರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸೂಪಾ ಜಲಾಶಯದಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 54.53 ಟಿಎಂಸಿ ಸಂಗ್ರಹವಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯದಲ್ಲಿ 105.79 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 6.87 ಟಿಎಂಸಿ ಸಂಗ್ರಹವಿದೆ.

ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಇರುವ ನೀರಿನ ಪ್ರಮಾಣ 20.51 ಟಿಎಂಸಿ

ಬೆಳಗಾವಿ ಜಿಲ್ಲೆ ತಾಲ್ಲೂಕಿನ ಘಟಪ್ರಭಾ ಜಲಾಶಯದಲ್ಲಿ 51 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ 17.35 ಟಿಎಂಸಿ ನೀರು ಸಂಗ್ರಹವಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೇಮಾವತಿ ಜಲಾಶಯದಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 19.26 ಸಂಗ್ರಹವಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯದ ಮಟ್ಟಿಗೆ 31.16 ಟಿಎಂಸಿ ನೀರಿದೆ.

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ 9.47 ಟಿಎಂಸಿ ಇದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ವರಾಹಿ ಜಲಾಶಯದಲ್ಲಿ 31.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗ ಇರುವ ನೀರಿನ ಪ್ರಮಾಣ 10.31 ಟಿಎಂಸಿ

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 3.45 ಟಿಎಂಸಿ ನೀರು ಜಲಾಶಯದಲ್ಲಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈವರೆಗೂ 27.82 ಟಿಎಂಸಿ ಸಂಗ್ರಹವಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ನವಿಲುತೀರ್ಥ ಜಲಾಶಯದಲ್ಲಿ 37.73 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಈಗಿರುವ ನೀರಿನ ಪ್ರಮಾಣ 13.38 ಟಿಎಂಸಿ

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಪುರ ಜಲಾಶಯದಲ್ಲಿ33.31 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 18.98 ಟಿಎಂಸಿ ನೀರು ಇದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.