Karnataka Reservoirs: ಮಳೆ ಚುರುಕಿನಿಂದ ಜಲಾಶಯ ಮಟ್ಟದಲ್ಲಿ ಏರಿಕೆ, ಕೆಆರ್‌ಎಸ್‌ ಒಳ ಹರಿವಿನಲ್ಲಿ ಹೆಚ್ಚಳ, ಜಲಾಶಯ ಪ್ರದೇಶಗಳಲ್ಲಿ ಎಚ್ಚರಿಕೆ-karnataka reservoir levels today august 16 alamatti krs harangi bhadra tungabhadra hemavati kabini reservoirs level kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಮಳೆ ಚುರುಕಿನಿಂದ ಜಲಾಶಯ ಮಟ್ಟದಲ್ಲಿ ಏರಿಕೆ, ಕೆಆರ್‌ಎಸ್‌ ಒಳ ಹರಿವಿನಲ್ಲಿ ಹೆಚ್ಚಳ, ಜಲಾಶಯ ಪ್ರದೇಶಗಳಲ್ಲಿ ಎಚ್ಚರಿಕೆ

Karnataka Reservoirs: ಮಳೆ ಚುರುಕಿನಿಂದ ಜಲಾಶಯ ಮಟ್ಟದಲ್ಲಿ ಏರಿಕೆ, ಕೆಆರ್‌ಎಸ್‌ ಒಳ ಹರಿವಿನಲ್ಲಿ ಹೆಚ್ಚಳ, ಜಲಾಶಯ ಪ್ರದೇಶಗಳಲ್ಲಿ ಎಚ್ಚರಿಕೆ

Dams of Karnataka ಕರ್ನಾಟಕದ ಜಲಾಶಯಗಳು( Karnataka Reservoirs) ಈಗಾಗಲೇ ಭರ್ತಿಯಾಗಿದ್ದರೂ ಮಳೆ ಕಡಿಮೆಯಾಗಿ ಒಳಹರಿವು ಕಡಿಮೆಯಾಗಿತ್ತು. ಈಗ ಮಳೆ ಚುರುಕಾಗಿ ಜಲಾಶಯಗಳಿಗೂ ಮತ್ತೆ ಒಳ ಹರಿವು ಹೆಚ್ಚುತ್ತಿದೆ.

KRS Dam ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿದ್ದು,ಹೊರ ಹರಿವಿನ ಪ್ರಮಾಣವನ್ನೂ ಕೊಂಚ ಹೆಚ್ಚಿಸಲಾಗಿದೆ.
KRS Dam ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿದ್ದು,ಹೊರ ಹರಿವಿನ ಪ್ರಮಾಣವನ್ನೂ ಕೊಂಚ ಹೆಚ್ಚಿಸಲಾಗಿದೆ.

ಬೆಂಗಳೂರು: ಒಂದು ವಾರದ ಬಿಡುವಿನ ನಂತರ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕಾಗಿದೆ. ಇದರಿಂದ ಬಹುತೇಕ ಜಲಾಶಯಗಳಲ್ಲಿ ಇಳಿಕೆಯಾಗಿದ್ದ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಕೊಡಗಿನಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗಿದೆ. ಅದೇ ರೀತಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಪ್ರಮಾಣದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೂ ನೀರಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ. ಈ ವಾರಾಂತ್ಯದವರೆಗೂ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಭಾರೀ ಮಳೆ ಸೂಚನೆಯಿದೆ. ಕೇರಳದ ವಯನಾಡು ಭಾಗದಲ್ಲೂ ಮಳೆ ಮುನ್ಸೂಚನೆ ಇರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಲೆಕ್ಕಾಚಾರಗಳಿವೆ.

ಕೃಷ್ಣರಾಜಸಾಗರ ಜಲಾಶಯ

ಕೊಡಗಿನಲ್ಲಿ ಕೆಲವು ದಿನಗಳ ಭಾರೀ ಮಳೆ ನಂತರ ಬಿಡುವು ದೊರೆತಿತ್ತು. ಇದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕ ಒಳ ಹರಿವು ತಗ್ಗಿತ್ತು. ಈಗ ನಿಧಾನವಾಗಿ ಮಳೆ ಏರುತ್ತಿದೆ. ಇದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಕೊಂಚ ಹೆಚ್ಚಳವಾಗಿದೆ. ಶುಕ್ರವಾರ ಬೆಳಿಗ್ಗೆ ಜಲಾಶಯಕ್ಕೆ 20961 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಾಣವನ್ನೂ ನಾಲೆ, ಬೆಂಗಳೂರು, ಮೈಸೂರಿನ ಕುಡಿಯುವ ನೀರು ಸೇರಿ 20755 ಕ್ಯೂಸೆಕ್‌ ಗೆ ಏರಿಕೆ ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟವು 123.08 ಅಡಿಯಷ್ಟಿದೆ. ಗರಿಷ್ಠಮಟ್ಟವು 124.80 ಅಡಿಯಿದೆ. ಜಲಾಶಯದಲ್ಲಿ 47.078 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಬಹುದು.

ಈ ಬಾರಿ ಕೆಆರ್‌ಎಸ್‌ ಜಲಾಶಯ ಬೇಗನೇ ತುಂಬಿತು. ಈಗಲೂ ಕೊಡಗಿನಲ್ಲಿ ಮಳೆಯಾಗಿ ನೀರು ಹರಿದು ಬರುತ್ತಿದೆ. ಜಲಾಶಯ ಬಹುತೇಕ ತುಂಬಿದ್ದು. ಸುರಕ್ಷತೆ ದೃಷ್ಟಿಯಿಂದ ಒಳ ಹರಿವಿನಷ್ಟೇ ಹೊರ ಹರಿವು ನಿಗದಿಪಡಿಸಲಾಗಿದೆ. ಇನ್ನೂ ಒಂದು ತಿಂಗಳು ಜಲಾಶಯಕ್ಕೆ ಹೆಚ್ಚಿನ ನೀರು ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಬಿನಿ ಜಲಾಶಯ

ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಈಗ ಮತ್ತೆ ನೈರುತ್ಯ ಮುಂಗಾರು ಚುರುಕಾಗಿದೆ. ಇದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳ ಹರಿವು ನಿಧಾನವಾಗಿ ಏರಿಕೆಯಾಗುತ್ತಿದೆ. ಶುಕ್ರವಾರದಂದು ಕಬಿನಿ ಜಲಾಶಯಕ್ಕೆ 6177 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವನ್ನು 6350 ಕ್ಯೂಸೆಕ್‌ಗೆ ಏರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 2282.54 ಅಡಿಯಿದೆ. ಜಲಾಶಯದಲ್ಲಿ 18.57 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯವು 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ಒಳ ಹರಿವು ಯಥಾರೀತಿ ಇದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ತಗ್ಗಿರುವುದರಿಂದ ಕೃಷ್ಣಾ ನದಿ ಮೂಲಕ ಕಡಿಮೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಶುಕ್ರವಾರ ಬೆಳಿಗ್ಗೆ ಆಲಮಟ್ಟಿ ಜಲಾಶಯಕ್ಕೆ 22,655 ಕ್ಯುಸೆಕ್ ನೀರು ಬರುತ್ತಿದ್ದು. ಹೊರ ಹರಿವು 16,556 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟ ಬಹುತೇಕ ತುಂಬಿದೆ. 519.58 ಮೀಟರ್‌ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟವು 519.60 ಮೀಟರ್‌. ಜಲಾಶಯದಲ್ಲಿ ಈಗ 122.659 ಟಿಎಂಸಿ ನೀರು ಸಂಗ್ರಹವಿದೆ.

ಭದ್ರಾ ಜಲಾಶಯ

ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಪರಿಣಾಮವಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ತಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಇವತ್ತಿನ ನೀರಿನ ಮಟ್ಟ 180.2 ಅಡಿ ಇದೆ. ಜಲಾಶಯದ ಗರಿಷ್ಟ ಮಟ್ಟ 186 ಅಡಿ. ಭದ್ರಾ ಜಲಾಶಯದ ಒಳ ಹರಿವು 8419 ಕ್ಯೂಸೆಕ್ ನಷ್ಟಿದೆ. ಹೊರ ಹರಿವಿನ ಪ್ರಮಾಣವು 7841ಕ್ಯೂಸೆಕ್‌ ಇದೆ. ಜಲಾಶಯದಲ್ಲಿ ಈಗ 64.37 ಟಿಎಂಸಿ ನೀರಿದ್ದು, ಗರಿಷ್ಠ ಪ್ರಮಾಣವು 71.5 ಟಿಎಂಸಿ.

ಮುನ್ನೆಚ್ಚರಿಕೆ

ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಗುಡುಗು ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಇಂದು ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಆರೆಂಜ್ಅಲರ್ಟ್ ನೀಡಲಾಗಿದೆ. ಈ ಕಾರಣದಿಂದ ಜಲಾಶಯ ಪ್ರದೇಶದಲ್ಲೂ ಪ್ರವಾಹ ಎಚ್ಚರಿಕೆ ನೀಡಲಗಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಹಾಗೂ ಅತೀ ಭಾರಿ ಮಳೆಯಾಗುವುದರಿಂದ ಎರಡು ದಿನಗಳಕಾಲ ಭದ್ರಾ, ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ, ಲಿಂಗನಮಕ್ಕಿ ಜಲಾಶಯಗಳಿಗೆ ಮಿತಿಗಿಂತ ಹೆಚ್ಚಿ ಒಳಹರಿವು ನಿರೀಕ್ಷಿಸಲಾಗಿದೆ. ಆದ್ದರಿಂದ ನದಿ ತೀರದ ಪ್ರದೇಶದ ಜನವಸತಿಗಳು ಜಾಗ್ರತೆ ವಹಿಸಬೇಕು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ( Karnataka State Natural Disaster Monitoring Centre) ಮುನ್ನೆಚ್ಚರಿಕೆ ನೀಡಿದೆ.