Karnataka Reservoirs: ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ, ತಗ್ಗಿದ ಒಳ ಹರಿವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ?
Karnataka Dam levels ಮಳೆ ತಗ್ಗಿರುವ ನಡುವೆ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಎಷ್ಟು ನೀರು ಹರಿದು ಬರುತ್ತಿದೆ. ಇಲ್ಲಿದೆ ವಿವರ.
ಬೆಂಗಳೂರು: ಕರ್ನಾಟಕದ ಬಹುತೇಕ ಜಲಾಶಗಳಿಗೆ( Karnataka Reservoirs water level) ಬರುತ್ತಿರುವ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಹೊರ ಹರವಿನ ಪ್ರಮಾಣವನ್ನೂ ನಿಧಾನವಾಗಿ ತಗ್ಗಿಸಲಾಗಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಿಂದ ಹೊರ ಹೋಗುತ್ತಿದ್ದ ನೀರಿನ ಪ್ರಮಾನ ಕಡಿಮೆ ಮಾಡಲಾಗಿದ್ದರೆ, ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯದಿಂದ( Almatti Dam) ಈಗಲೂ 2 ಲಕ್ಷ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ತುಂಗಭದ್ರಾ ಜಲಾಶಯದಿಂದಲೂ( Tunga Bhadra Dam) ನೀರು ಹರಿಸಲಾಗುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳು ಬಹುತೇಕ ತುಂಬಿರುವುದರಿಂದ ನಾಲೆಗಳ ಮೂಲಕ ಕೃಷಿ ಚಟುವಟಿಕೆಗೆ ನೀರು ಹರಿ ಬಿಡಲಾಗುತ್ತಿದೆ. ಈ ವಾರಾಂತ್ಯಕ್ಕೆ ಮಳೆ ಮತ್ತೆ ಚುರುಕಾಗಲಿದ್ದು, ಆನಂತರ ಜಲಾಶಯದ ಒಳ ಹರಿವು ಹೆಚ್ಚುವ ನಿರೀಕ್ಷೆ ಹೊಂದಲಾಗಿದೆ.
ಆಲಮಟ್ಟಿ ಜಲಾಶಯ
ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಮಂಗಳವಾರ ಬೆಳಿಗ್ಗೆಯೂ 3,02,660 ಕ್ಯುಸೆಕ್ ನೀರು ಜಲಾಶಯ ಸೇರುತ್ತಿದೆ. ಜಲಾಶಯದಿಂದ ಕೃಷ್ಣಾ ನದಿ ಮೂಲಕ 2,06,607ಕ್ಯುಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ ಜಲಾಶಯದಲ್ಲಿ 517.15 ಮೀಟರ್ ಇದೆ. ಜಲಾಶಯದಲ್ಲಿ ಈಗ 86.335 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಬಹುದು.
ತುಂಗಭದ್ರಾ ಜಲಾಶಯ
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ ಬೆಳಿಗ್ಗೆ 84696 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 55227ಕ್ಕೆ ಇಳಿಕೆಯಾಗಿದೆ. ಜಲಾಶಯದ ನೀರಿನ ಮಟ್ಟವು 1632.14 ಅಡಿ ಇದೆ. ಗರಿಷ್ಠ ಮಟ್ಟ 1633 ಅಡಿ. ಜಲಾಶಯದಲ್ಲಿ ಸದ್ಯ 102.335 ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.
ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಸದ್ಯ 16400 ಕ್ಯೂಸೆಕ್ ನೀರು ಮಾತ್ರ ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ 6547ಕ್ಕೆ ಇಳಿಕೆಯಾಗಿದೆ. ಜಲಾಶಯದಲ್ಲಿ 123.75 ಅಡಿ ನೀರಿದ್ದು. 47.99 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿಯಾಗಿದ್ದು, ಇಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಬಹುದು.
ಕಬಿನಿ ಜಲಾಶಯ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ 2283.04 ಅಡಿ ನೀರು ಇದ್ದು, ಒಳ ಹರಿವು 8547 ಕ್ಯೂಸೆಕ್ ಇದೆ. ಜಲಾಶಯದಿಂದ 2063 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ 18.89 ಟಿಎಂಸಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ ಹಾಗೂ ಸಂಗ್ರಹದ ಸಾಮರ್ಥ್ಯವು 19.52 ಟಿಎಂಸಿ.
ಭದ್ರಾ ಜಲಾಶಯ
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯಕ್ಕೆ ಮಂಗಳವಾರದಂದು 7,531 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. ಅಷ್ಟೇ ಪ್ರಮಾಣದಲ್ಲಿ ಹೊರ ಹರಿವು ಇದೆ. ಜಲಾಶಯದಲ್ಲಿ ಸದ್ಯ 64.229 ಟಿಎಂಸಿ ನೀರಿದೆ. ಇಲ್ಲಿ 71.5 ಟಿಎಂಸಿ ನೀರು ಸಂಗ್ರಹಿಸಬಹುದು. ಭದ್ರಾ ಜಲಾಶಯವೂ ಎರಡು ವರ್ಷದ ನಂತರ ತುಂಬಿದ್ದು. ಶಿವಮೊಗ್ಗ, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಭಾಗದವರಿಗೆ ನೆರವಾಗಲಿದೆ.
ನಾರಾಯಣಪುರ ಜಲಾಶಯ
ಯಾದಗಿರಿ ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯಕ್ಕೂ ಮೂರು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 1,89,700 ಕ್ಯೂಸೆಕ್ ನೀರನ್ನು ಕೃಷ್ಣಾ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ 50 ಕಿ.ಮಿ ದೂರದಲ್ಲಿರುವ ನಾರಾಯಣಪುರ ಜಲಾಶಯವೂ ಈಗಾಗಲೇ ತುಂಬಿದೆ. ಈ ಜಲಾಶಯದಿಂದ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ನೀರಾವರಿಗೆ ನೀರು ಹರಿಸಲಾಗುತ್ತಿದೆ.