Karnataka Dams: ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ, ಎಲ್ಲಿ ಎಷ್ಟು ನೀರು ಸಂಗ್ರಹವಿದೆ?
Water level ಕರ್ನಾಟಕದ ಜಲಾಶಯಗಳಿಗೆ(Karnataka Reservoirs) ನೀರು ಹರಿದುಬರುತ್ತಿದೆ. ಆಲಮಟ್ಟಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ ಕೆಆರ್‌ಎಸ್ , ಕಬಿನಿಗೂ ನೀರು ಬರುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ( Karnataka Dam levels) ಒಳಹರಿವು ಪ್ರಮಾಣ ಮುಂದುವರಿದಿದೆ. ಇನ್ನು ಮುಂಗಾರು ಚುರುಕುಗೊಳ್ಳಲು ಹಲವು ಜಿಲ್ಲೆಗಳಲ್ಲಿ ಕಾಯಲಾಗುತ್ತಿದೆ. ವಿಶೇಷವಾಗಿ ಕಾವೇರಿ ಕೊಳ್ಳ( Cauvery Basin) ಹಾಗೂ ಮಲೆನಾಡು ಭಾಗದಲ್ಲಿ( Malnad area) ಇನ್ನೂ ಉತ್ತಮ ಮಳೆಯಾದರೆ ಹತ್ತಕ್ಕೂ ಹೆಚ್ಚು ಜಲಾಶಯಗಳಿಗೆ ನೀರಿನ ಪ್ರಮಾಣ ಹೆಚ್ಚಾಗಲಿದೆ. ಈಗಾಗಲೇ ಶಿವಮೊಗ್ಗದ ತುಂಗಾ ನದಿ ಭರ್ತಿಯಾಗಿ ನೀರು ಹೊರ ಬಿಡಲಾಗುತ್ತಿದೆ. ಕೆಆರ್‌ಎಸ್, ಕಬಿನಿಗೂ ನೀರು ಹರಿದು ಬರುತ್ತಿದೆ. ಆಲಮಟ್ಟಿಗೆ ಒಳಹರಿವಿನ ಪ್ರಮಾಣವೂ ಅಧಿಕವಾಗಿದ್ದು. ಜಲಾಶಯ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಹೇಮಾವತಿ, ಹಾರಂಗಿ, ಭದ್ರಾ, ತುಂಗಭದ್ರಾ ಸಹಿತ ಹಲವು ಜಲಾಶಯಗಳಿಗೆ ಹೆಚ್ಚಿನ ನೀರು ನಿರೀಕ್ಷೆ ಮಾಡಲಾಗುತ್ತಿದೆ.
ಆಲಮಟ್ಟಿ ಮಟ್ಟ ಏರಿಕೆ
ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 13335 ಕ್ಯುಸೆಕ್ ಇದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರುವುದರಿಂದ ಒಂದು ವಾರದಿಂದಲೇ ಆಲಮಟ್ಟಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಇನ್ನಷ್ಟು ಹೆಚ್ಚುವ ನಿರೀಕ್ಷೆಯು ಇದೆ. ಜಲಾಶಯದ ಗರಿಷ್ಟ ಮಟ್ಟ 519. 60 ಅಡಿ. ಸದ್ಯಕ್ಕೆ ಜಲಾಶಯದಲ್ಲಿ 509. 19 ಅಡಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 123 ಟಿಎಂಸಿ ಸಂಗ್ರಹಿಸುವ ಸಾಮರ್ಥ್ಯವಿದೆ. ಸದ್ಯ ಜಲಾಶಯದಲ್ಲಿ 26 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.
ಕೆಆರ್‌ಎಸ್‌ಗೂ ನೀರು
ಕೊಡಗಿನಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಈಗಾಗಲೇ 20 ದಿನದಲ್ಲಿ 10 ಅಡಿಯಷ್ಟು ನೀರು ಹರಿದು ಬಂದಿದೆ. ಪ್ರತಿ ನಿತ್ಯ ಎರಡು ಸಾವಿರ ಕ್ಯುಸೆಕ್ ನೀರು ಕಾವೇರಿ ನದಿ ಮೂಲಕ ಜಲಾಶಯ ಸೇರುತ್ತಿದೆ. ಭಾನುವಾರವೂ ಕೆಆರ್‌ಎಸ್‌ಗೆ 2117 ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯದ ಭಾನುವಾರದ ನೀರಿನ ಮಟ್ಟ 86.75 ಅಡಿ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದೆ. ಈವರೆಗೂ 14.09 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕೆಂದು ನದಿ ಮೂಲಕ 458 ಕ್ಯುಸೆಕ್ ನೀರನ್ನು ಹರಿ ಬಿಡಲಾಗುತ್ತಿದೆ.
ಕೆಆರ್‌ಎಸ್ ಜಲಾಶಯಕ್ಕೆ ಜೂನ್ ನಂತರವೇ ನೀರು ಹರಿದು ಬರುತ್ತದೆ. ಈ ಬಾರಿ ಪೂರ್ವ ಮುಂಗಾರು ಕೊಡಗಿನಲ್ಲಿ ಚುರುಕಾಗಿದ್ದರಿಂದ ಹೆಚ್ಚಿನ ನೀರು ಜೂನ್‌ನಲ್ಲಿಯೇ ಹರಿದು ಬಂದಿದೆ. ಜೂನ್ ಹಾಗೂ ಜುಲೈನಲ್ಲಿ ಕೊಡಗು ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯ ತುಂಬಬಹುದು. ಕಳೆದ ವರ್ಷ ಮಳೆ ಕೊರತೆಯಿಂದ ಕೆಆರ್‌ಎಸ್ ಜಲಾಶಯ ತುಂಬಲೇ ಇಲ್ಲ. ಇದರೊಟ್ಟಿಗೆ ತಮಿಳುನಾಡಿಗೂ ನೀರು ಹರಿಸಿದ್ದರಿಂದ ಈ ಭಾಗದಲ್ಲಿ ತೊಂದರೆಯಾಯಿತು. ಈ ಬಾರಿ ಉತ್ತಮ ಮಳೆ ನಿರೀಕ್ಷೆ ಇರುವುದರಿಂದ ಜಲಾಶಯವೂ ಭರ್ತಿಯಾಗುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಬಿನಿಗೂ ನೀರು
ಕೇರಳದ ವಯನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಇದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ನೀರು ಬರುತ್ತಿದೆ. ಕೇರಳದಲ್ಲಿ ಮಳೆ ಚುರುಕಾಗುವ ಲಕ್ಷಣಗಳಿದ್ದು, ಈ ವಾರ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರುವ ನಿರೀಕ್ಷೆಗಳಿವೆ.
ಕಬಿನಿ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 1037 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ2263.74 ಅಡಿಯಷ್ಟಿದೆ, ಕಳೆದ ವರ್ಷಕ್ಕಿಂತ 13 ಅಡಿ ನೀರು ಕಬಿನಿ ಜಲಾಶಯದಲ್ಲಿ ಹೆಚ್ಚಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು. ಈವರೆಗೂ 8.82 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿ ಸಣ್ಣ ಜಲಾಶಯ. ಕೇರಳದಲ್ಲಿ ಸತತ ಒಂದು ವಾರ ಮಳೆಯಾದರೂ ತುಂಬಲಿದೆ. ಈ ಬಾರಿ ಇನ್ನೂ ಮುಂಗಾರು ಚುರುಕುಗೊಳ್ಳಬೇಕಿದೆ. ಮಳೆಯಾದರೆ ಕಬಿನಿ ಜಲಾಶಯ ತುಂಬಲಿದೆ. ಕಳೆದ ವರ್ಷವೂ ತುಂಬಿತ್ತು. ಭಾರೀ ಮಳೆಯಾಗಿ ಜಲಾಶಯ ತುಂಬಿದಾಗ ಹೆಚ್ಚಿನ ನೀರನ್ನು ಇಲ್ಲಿಂದ ಹರಿಸುವುದು ಮೊದಲಿನಿಂದಲೂ ನಡೆದು ಬಂದಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ತುಂಗಭದ್ರಕ್ಕೆ ಬರಬೇಕು ನೀರು
ಕಳೆದ ಬಾರಿ ತುಂಬದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಇನ್ನೂ ನೀರಿನ ಒಳ ಹರಿವು ಹೆಚ್ಚಿಲ್ಲ.ಸದ್ಯ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 1676 ಕ್ಯೂಸೆಕ್ ಮಾತ್ರ. ಜಲಾಶಯದಲ್ಲಿ ಸದ್ಯ 482.44 ಅಡಿ ನೀರಿದೆ. ಗರಿಷ್ಠ ಮಟ್ಟ 497.71 ಅಡಿ. ಮಲೆನಾಡು ಭಾಗದಲ್ಲಿ ಮಳೆಯಾಗಿ ತುಂಗ, ಭದ್ರಾ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಂದರೆ ತುಂಗಭದ್ರಾ ಜಲಾಶಯವೂ ತುಂಬಲಿದೆ.
ಹಾರಂಗಿಗೆ ಸದ್ಯ 408, ಹೇಮಾವತಿಗೆ 905 ಕ್ಯುಸೆಕ್ ನೀರು ಒಳ ಬರುತ್ತಿದೆ. ಮಲಪ್ರಭಾ ಹಾಗೂ ಘಟಪ್ರಭಾ ಜಲಾಶಯಕ್ಕೆ ಒಳಹರಿವು ಶೂನ್ಯ ಪ್ರಮಾಣದಲ್ಲಿದೆ. ಭದ್ರಾ ಜಲಾಶಯಕ್ಕೆ 967 ಕ್ಯುಸೆಕ್, ಲಿಂಗನಮಕ್ಕಿಗೆ 314, ಸೂಪಾಕ್ಕೆ 650 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಜಲಾಶಯಗಳಿಗೆ ನೀರಿನ ಪ್ರಮಾಣ ಏರಿಕೆಯಾಗಬೇಕಿದೆ.
