Linganamakki Dam: ಕರ್ನಾಟಕದ ದೊಡ್ಡ ಜಲಾಶಯ ಸಾಗರದ ಲಿಂಗನಮಕ್ಕಿಗೆ ಭಾರೀ ನೀರು, ತುಂಬಲು ಇನ್ನು 17 ಅಡಿ ಬಾಕಿ
ಕನ್ನಡ ಸುದ್ದಿ  /  ಕರ್ನಾಟಕ  /  Linganamakki Dam: ಕರ್ನಾಟಕದ ದೊಡ್ಡ ಜಲಾಶಯ ಸಾಗರದ ಲಿಂಗನಮಕ್ಕಿಗೆ ಭಾರೀ ನೀರು, ತುಂಬಲು ಇನ್ನು 17 ಅಡಿ ಬಾಕಿ

Linganamakki Dam: ಕರ್ನಾಟಕದ ದೊಡ್ಡ ಜಲಾಶಯ ಸಾಗರದ ಲಿಂಗನಮಕ್ಕಿಗೆ ಭಾರೀ ನೀರು, ತುಂಬಲು ಇನ್ನು 17 ಅಡಿ ಬಾಕಿ

Karnataka Reservoir ಮಲೆನಾಡಿನ ಮಳೆಯಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನೀರನ ಮಟ್ಟದಲ್ಲಿ ಏರಿಕೆ ಕಂಡಿದೆ.

ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದ ನೋಟ
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದ ನೋಟ

ಶಿವಮೊಗ್ಗ: ಕರ್ನಾಟಕದ ಅತಿ ದೊಡ್ಡ ಹಾಗೂ ವಿದ್ಯುತ್‌ ಉತ್ಪಾದನೆಯ ಪ್ರಮುಖ ಜಲಾಶಯವಾದ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ಏರಿಕೆಯಾಗಿದೆ. ಇದರಿಂದ ಜಲಾಶಯದ ನೀರಿನ ಮಟ್ಟದಲ್ಲೂ ಗಣನೀಯ ಹೆಚ್ಚಳವಾಗಿರುವುದರಿಂದ ಜಲ ವೈಭವ ಕಂಡು ಬಂದಿದೆ. ಹಲವು ದಿನಗಳಿಂದ ಶರಾವತಿ ಜಲಾನಯನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ‌ (LINGANAMAKKI DAM) 1800 ಅಡಿ ದಾಟಿದ್ದು ಜಲಾಶಯದ ಮಟ್ಟ 1801 ಅಡಿ ತಲುಪಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ನದಿಯ ಜಲಾಶಯವಾದ ಲಿಂಗನಮಕ್ಕಿಗೆ ಕಳೆದ ವರ್ಷ ಕಡಿಮೆ ನೀರು ಬಂದಿತ್ತು. ಈ ಬಾರಿ ಜುಲೈ ಕೊನೆಯ ವಾರದ ಹೊತ್ತಿಗೆ ಜಲಾಶಯ ತುಂಬುವ ಹಂತಕ್ಕೆ ಬಂದಿದೆ.

1819 ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ತುಂಬಲು ಇನ್ನು 17 ಅಡಿ ಬರಬೇಕಾಗಿದೆ. ಲಿಂಗನಮಕ್ಕಿ 151.64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಈವರೆಗೆ 98.40 ಟಿಎಂಸಿ ನೀರು ಸಂಗ್ರಹವಾಗಿದೆ. ಶೇ.64.89 ರಷ್ಟು ನೀರು ತುಂಬಿದೆ.

ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ ಶೇ.30.92 ರಷ್ಟು ಮಾತ್ರ ನೀರು ತುಂಬಿದ್ದು 24 ಜುಲೈ 2023ರ ತನಕ 46.88 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಬಾರಿ ಎಡು ಪಟ್ಟು ಅಧಿಕ ನೀರು ಸಂಗ್ರಹವಾಗಿದೆ. ಈ ಬಾರಿ ಶರಾವತಿ (SHARAVATHI RIVER) ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ಏರಿಕೆ ಕಂಡಿದೆ ಎನ್ನುವುದು ಹೊಸನಗರದ ಪತ್ರಕರ್ತ ರವಿ ಬಿದನೂರು ನೀಡುವ ವಿವರಣೆ.

ಮಳೆ ಮುಂದುವರಿದ ಕಾರಣ ಲಿಂಗನಮಕ್ಕಿಗೆ 58619 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1801 ಅಡಿ ತಲುಪಿದೆ. ಈಗಾಗಲೇ ಜಲಾಶಯದಲ್ಲಿ ಶೇ.65 ರಷ್ಟು ನೀರು ಸಂಗ್ರಹವಾಗಿದ್ದು 60 ಸಾವಿರ ಕ್ಯೂಸೆಕ್ಸ್ ಗಿಂತಲೂ ಹೆಚ್ಚಿನ ನೀರು ಹರಿದು ಸಂಜೆ ಹೊತ್ತಿಗೆ ಹರಿದು ಬರುವ ಸಾಧ್ಯತೆಯಿದೆ, ಇದೇ ರೀತಿ ಮುಂದುವರೆದಲ್ಲಿ ಶೀಘ್ರದಲ್ಲಿ ಜಲಾಶಯ ತುಂಬಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಅಣೇಕಟ್ಟು ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಮಯದಲ್ಲೂ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಗಲ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಮೊದಲ ಮುನ್ನೆಚ್ಚರಿಕೆಯ ಸೂಚನೆ ನೀಡಿದ್ದಾರೆ.ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆಈಗಾಗಲೇ ಸೂಚಿಸಲಾಗಿದೆ.

ಲಿಂಗನಮಕ್ಕಿ ಅಣೆಕಟ್ಟನ್ನು ಕರ್ನಾಟಕ ರಾಜ್ಯ ಸರ್ಕಾರವು 1964 ರಲ್ಲಿ ನಿರ್ಮಾಣ ಮಾಡಿದೆ. ಸಾಗರ ತಾಲ್ಲೂಕಿನ ಕಾರ್ಗಲ್ ಗ್ರಾಮದಲ್ಲಿ ನೆಲೆಗೊಂಡಿರುವ ಈ ಅಣೆಕಟ್ಟು ಶರಾವತಿ ನದಿಗೆ ಅಡ್ಡಲಾಗಿ 2.74 ಕಿಲೋಮೀಟರ್ (1.70 ಮೈಲಿ) ಉದ್ದವನ್ನು ಹೊಂದಿದೆ . ಇದು ಜೋಗ ಜಲಪಾತದಿಂದ ಸುಮಾರು 9 ಕಿ.ಮೀ ದೂರದಲ್ಲಿದೆ . ಇದು 151.52 ಟಿಎಂಸಿ ಅಡಿ ನೀರಿನ ಪರಿಣಾಮಕಾರಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು ರಾಜ್ಯದಲ್ಲಿಯೇ ಹೆಚ್ಚು ನೀರು ಸಂಗ್ರಹಿಸುವ ಸಾಮರ್ಥ್ಯ ಇರುವ ಜಲಾಶಯ ಎನ್ನುವ ಖ್ಯಾತಿ ಪಡೆದಿದೆ.

Whats_app_banner