KRS Dam Level: ಕೆಆರ್‌ಎಸ್ ತುಂಬಲು ಒಂದೇ ಅಡಿ ಬಾಕಿ, ವಾರದಲ್ಲೇ ಬಂತು 19 ಅಡಿ ನೀರು, ಹೊರ ಹರಿವು 50 ಸಾವಿರ ಕ್ಯೂಸೆಕ್‌ಗೆ ಏರಿಕೆ
Mandya News ಕಳೆದ ಬಾರಿ ತುಂಬದೇ ಸೊರಗಿದ್ದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯವು ಭಾರೀ ಮಳೆಯ ಪರಿಣಾಮವಾಗಿ ಒಂದೇ ವಾರದಲ್ಲಿ ಹೆಚ್ಚಿನ ಒಳ ಹರಿವಿನಿಂದ ತುಂಬುವ ಹಂತಕ್ಕೆ ಬಂದಿದೆ.
ಮಂಡ್ಯ: ಕೊಡಗು ಜಿಲ್ಲೆಯಲ್ಲಿ( Kodagu Rain) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ( KRS Dam Level) ವಾರದಲ್ಲಿಯೇ ಬರೋಬ್ಬರಿ 19 ಅಡಿ ನೀರು ಸಂಗ್ರಹಿಸಿದೆ. ಇದರಿಂದ ಕೃಷ್ಣರಾಜಸಾಗರ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟವು 123 ಅಡಿ ತಲುಪಿದೆ. ತುಂಬಲು ಇನ್ನು ಒಂದು ಅಡಿ ನೀರು ಬಂದರೆ ಸಾಕು. ಆದರೆ ಜಲಾಶಯಕ್ಕೆ ಈಗಲೂ ಒಳ ಹರಿವಿನ ಪ್ರಮಾಣ ಅಧಿಕವಾಗಿದ್ದು, ಈಗಿನ ಒಳ ಹರಿವಿನ ಲೆಕ್ಕದಲ್ಲಿ ಜಲಾಶಯ ಭಾನುವಾರ ಸಂಜೆ ಹೊತ್ತಿಗೆ ತುಂಬಲಿದೆ. ಆದರೆ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವಿನ ಪ್ರಮಾಣವನ್ನು ಏರಿಸಲಾಗಿದೆ. ಭಾನುವಾರ ಬೆಳಿಗ್ಗೆಯೇ 50,000 ಕ್ಯೂಸೆಕ್ ನೀರನ್ನು ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೊರ ಬಿಡಲಾಗುತ್ತಿದ್ದು, ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಕೃಷ್ಣರಾಜ ಸಾಗರ ಜಲಾಶಯ ಕಳೆದ ವರ್ಷ ತುಂಬಲು ಆಗಿರಲಿಲ್ಲ. ಈ ಬಾರಿಯೂ ಕೊಡಗಿನಲ್ಲಿ ಭಾರೀ ಮಳೆ ಬಂದರೂ ಮತ್ತೆ ಮಳೆ ಪ್ರಮಾಣ ಕಡಿಮೆಯಾಗಿತ್ತು. ಈ ಕಾರಣದಿಂದ ಜಲಾಶಯ ತುಂಬುವುದು ವಿಳಂಬವಾಗಬಹುದು ಎನ್ನುವ ಆತಂಕವಿತ್ತು. ಆದರೆ ನಾಲ್ಕೈದು ದಿನಗಳಿಂದ ಕೊಡಗು ಮಾತ್ರವಲ್ಲದೇ,. ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಸುರಿದ ಮಳೆಯಿಂದ ಕೃಷ್ಣರಾಜಸಾಗರ ತುಂಬಿದೆ. ಏಕೆಂದರೆ ಕೊಡಗಿನ ಹಾರಂಗಿಯಿಂದ ಮಾತ್ರವಲ್ಲದೇ ಹಾಸನದ ಹೇಮಾವತಿ ಜಲಾಶಯದಿಂದಲೂ ಕೆಆರ್‌ಎಸ್‌ಗೆ ಭಾರೀ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದ ನೀರಿನ ಮಟ್ಟ ಏಕಾಏಕಿ ಏರಿಕೆ ಕಂಡಿತು. ಅದೂ 2024 ರ ಜುಲೈ 14ರ ಕಳೆದ ಭಾನುವಾರ 2898 ಕ್ಯೂಸೆಕ್ ಒಳಹರಿವಿನೊಂದಿಗೆ 104.65 ಅಡಿಯಿದ್ದ ಜಲಾಶಯದ ನೀರಿನ ಮಟ್ಟವು ಇದೇ ಭಾನುವಾರ ಅಂದರೆ 2024ತ ಜುಲೈ 21ಕ್ಕೆ 122.70 ಅಡಿ ತಲುಪಿದ್ದು 69617 ಕ್ಯೂಸೆಕ್ ಒಳ ಹರಿವು ಇದೆ.
ಇತ್ತೀಚಿನ ವರ್ಷಗಳಲ್ಲಿ ಕೆಆರ್‌ಎಸ್ ಜಲಾಶಯ ಕೆಲವು ವರ್ಷ ತುಂಬಿಲ್ಲ. ಮತ್ತೆ ಕೆಲವು ವರ್ಷ ತುಂಬಿದೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ತುಂಬಿರುವುದು ಇದೇ ಮೊದಲು ಎನ್ನಿಸುತ್ತದೆ. ಕಾವೇರಿ ಪಾತ್ರದಲ್ಲಿ ಆದ ಮಳೆಯಿಂದ ಇದು ಸಾಧ್ಯವಾಗಿದೆ. ಇನ್ನೂ ಕೊಡಗು, ಹಾಸನ ಭಾಗದಲ್ಲಿ ಮಳೆ ಇರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ. ತಾಂತ್ರಿಕವಾಗಿ ಜಲಾಶಯ ತುಂಬಿದರೂ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವನ್ನು ಏರಿಕೆ ಮಾಡಿದ್ದೇವೆ. ಇದು ಈಗಾಗಲೇ ಐವತ್ತು ಸಾವಿರ ಕ್ಯೂಸೆಕ್‌ಗೆ ತಲುಪಿದೆ. ಇನ್ನೂ ಏರಬಹುದು ಎನ್ನುವುದು ಕೃಷ್ಣರಾಜಸಾಗರ ಜಲಾಶಯದ ಅಧಿಕಾರಿಗಳ ವಿವರಣೆ.
ವಾರದ ಕೆಆರ್‌ಎಸ್ ನೀರಿನ ಅಡಿ ಹಾಗೂ ಒಳ ಹರಿವಿನ ಲೆಕ್ಕ
2024 ಜುಲೈ 14- 104.65 (2898 ಒಳಹರಿವು)
2024 ಜುಲೈ 15-105.40 (10121)
2024 ಜುಲೈ 16-107.60(25933)
2024 ಜುಲೈ 17-110.60(36674)
2024 ಜುಲೈ 18-113.40(36772)
2024 ಜುಲೈ 19-116.60 (44617)
2024 ಜುಲೈ 20-119.90 (51375)
2024 ಜುಲೈ 21 -122.70(69617)
ಹೊರ ಹರಿವು ಏರಿಕೆ ಸೂಚನೆ
ಕೆ.ಆರ್.ಎಸ್ ಜಲಾಶಯಕ್ಕೆ ಒಳ ಹರಿವು ಏರಿಕೆಯಾಗಿ ಜಲಾಶಯದ ಮಟ್ಟ ಹೆಚ್ಚಿರುವುದರಿಂದ ಸುಮಾರು 50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ.
ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಾನಗಳಿಗೆ ತೆರಳಲು ಕಾವೇರಿ ನೀರವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.
ಪ್ರವಾಹ ಭೀತಿ
ಕಾವೇರಿ ನದಿಯಿಂದ ಹೆಚ್ಚಿನ ನೀರು ಹೊರ ಬಿಡುವ ಸೂಚನೆ ಇರುವುದರಿಂದ ಮಂಡ್ಯ ಜಿಲ್ಲಾಡಳಿತ ಎರಡು ದಿನದಿಂದ ಕಾವೇರಿ ನದಿ ಪಾತ್ರದ ಜನರಲ್ಲಿ ಜಾಗೃತಿ ಮೂಡಿಸಿದೆ. ಆದರೂ ಈಗ ಹೆಚ್ಚಿನ ನೀರು ಹೊರ ಹೋಗುತ್ತಿರುವುದರಿಂದ ಅಲ್ಲಲ್ಲಿ ಪ್ರವಾಹ ಭೀತಿ ಎದುರಾಗುವ ಲಕ್ಷಣಗಳಿವೆ. ಕಾವೇರಿ ಜತೆಗೆ ಕಬಿನಿ ಜಲಾಶಯದಿಂದಲೂ ನೀರು ಹೊರ ಹೋಗುತ್ತಿರುವುದರಿಂದ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಾವೇರಿ ತೀರದ ಹಲವು ಕಡೆ ಪ್ರವಾಹ ಭೀತಿ ಇದೆ.